ಅಮೆರಿಕದ ಎಲ್ಲರ ಮೊಬೈಲ್‌ಗಳಿಗೆ ‘ಎಚ್ಚರಿಕೆ’ ಸಂದೇಶ ಕಳುಹಿಸಲಿದ್ದಾರೆ ಟ್ರಂಪ್!

Update: 2018-09-16 16:58 GMT

ವಾಶಿಂಗ್ಟನ್,ಸೆ.16: ರಾಷ್ಟ್ರೀಯ ತುರ್ತುಸ್ಥಿತಿಯ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆಯನ್ನು ನೀಡುವ ಉದ್ದೇಶದಿಂದ ಈವರೆಗೆ ಬಳಸಲ್ಪಡದಿರುವ ಮುನ್ನೆಚ್ಚರಿಕಾ ವ್ಯವಸ್ಥೆ (ಅಲರ್ಟ್ ಸಿಸ್ಟಮ್)ಯೊಂದನ್ನು ಪ್ರಾಯೋಗಿಕವಾಗಿ ಪರೀಕ್ಷಿಸುವಂತೆ ಟ್ರಂಪ್ ಆಡಳಿತವು ಅಮೆರಿಕದ ಎಲ್ಲಾ ಸೆಲ್‌ಫೋನ್ ಕಂಪೆನಿಗಳಿಗೆ ಗುರುವಾರ ಸಂದೇಶವೊಂದನ್ನು ರವಾನಿಸಲಿದೆ.

  ಈ ಸಂದೇಶಗಳು, ‘‘ಅಧ್ಯಕ್ಷೀಯ ಮುನ್ನೆಚ್ಚರಿಕೆ’’(ಪ್ರೆಸಿಡೆನ್ಶಿಯಲ್ ಅಲರ್ಟ್) ಎಂಬ ಶೀರ್ಷಿಕೆಯೊಂದಿಗೆ ಅಮೆರಿಕದ ಎಲ್ಲಾ ಸೆಲ್‌ಫೋನ್ ಕಂಪೆನಿಗಳಿಗೆ ರವಾನೆಯಾಗಲಿದೆ. ಈ ಸಂದೇಶವನ್ನು ಸ್ವೀಕರಿಸಿದಾಗ ಸೆಲ್‌ಫೋನ್‌ಗಳು ಜೋರಾದ ಧ್ವನಿಯನ್ನು ಹೊರಡಿಸಲಿವೆ ಹಾಗೂ ವಿಶಿಷ್ಟವಾದ ರೀತಿಯಲ್ಲಿ ಕಂಪಿಸಲಿವೆಯೆಂದು, ಈ ಅಲರ್ಟ್ ವ್ಯವಸ್ಥೆಯನ್ನು ರವಾನಿಸಲಿರುವ ಫೆಡರಲ್ ತುರ್ತುಸ್ಥಿತಿ ನಿರ್ವಹಣಾ ಏಜೆನ್ಸಿ (ಫೆಮಾ)ಯು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಸಾರ್ವಜನಿಕರ ಸುರಕ್ಷತಾ ತುರ್ತುಸ್ಥಿತಿಗಳಿಗೆ ಸಂಬಂಧಿಸಿ ಅಮೆರಿಕದ ನಾಗರಿಕರಿಗೆ ಸೆಲೆಫೋನ್ ಮುನ್ನೆಚ್ಚರಿಕಾ ಸಂದೇಶಗಳನ್ನು ಅಧ್ಯಕ್ಷರಿಗೆ ಕಳುಹಿಸಲು ಸಾಧ್ಯವಾಗುವಂತಹ ವ್ಯವಸ್ಥೆಯೊಂದನ್ನು ಸೃಷ್ಟಿಸಲು ಫೆಮಾಗೆ ಅವಕಾಶ ಮಾಡಿಕೊಡುವ ಕಾನೂನಿಗೆ 2016ರಲ್ಲಿ ಆಗಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಸಹಿ ಹಾಕಿದ್ದರು.

   ನಿಸ್ತಂತು (ವಯರ್‌ಲೆಸ್) ತುರ್ತುಸ್ಥಿತಿ ಮುನ್ನೆಚ್ಚರಿಕಾ ವ್ಯವಸ್ಥೆಯು 2012ರಲ್ಲಿ ಆರಂಭವಾದಾಗಿನಿಂದಲೂ, ಮಕ್ಕಳ ನಾಪತ್ತೆ ಪ್ರಕರಣಗಳು, ಪ್ರತಿಕೂಲ ಹವಾಮಾನ ಹಾಗೂ ಪ್ರಾಕೃತಿಕ ವಿಪತ್ತುಗಳಂತಹ ಸನ್ನಿವೇಶಗಳ ಸಂದರ್ಭದಲ್ಲಿ 36 ಸಾವಿರಕ್ಕೂ ಅಧಿಕ ಮುನ್ನೆಚ್ಚರಿಕಾ ಸಂದೇಶಗಳನ್ನು ರವಾನಿಸಿತ್ತು. ಆದರೆ ತುರ್ತುಸ್ಥಿತಿಯ ಸನ್ನಿವೇಶಗಳಿಗೆ ಸಂಬಂಧಿಸಿ ಅಮೆರಿಕದ ಅಧ್ಯಕ್ಷರ ಆದೇಶವನ್ನು ಅದು ಈವರೆಗೆ ಕಳುಹಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News