ಇಸ್ರೇಲ್‌ನಿಂದ ಡಮಾಸ್ಕಸ್ ಮೇಲೆ ಕ್ಷಿಪಣಿ ದಾಳಿ: ವಿಫಲಗೊಳಿಸಿದ ಸಿರಿಯ

Update: 2018-09-16 17:20 GMT

ಡಮಾಸ್ಕಸ್,ಸೆ.16: ಸಿರಿಯದ ರಾಜಧಾನಿ ಡಮಾಸ್ಕಸ್‌ನ ವಿಮಾನನಿಲ್ದಾಣವನ್ನು ಗುರಿಯಿರಿಸಿ, ಇಸ್ರೇಲ್ ಶನಿವಾರ ತಡರಾತ್ರಿ ಕ್ಷಿಪಣಿ ದಾಳಿಯೊಂದನ್ನು ನಡೆಸಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ. ಆದರೆ ಸಿರಿಯದ ವಾಯುರಕ್ಷಣಾ ವ್ಯವಸ್ಥೆಯು, ಈ ಕ್ಷಿಪಣಿಯನ್ನು ಹೊಡೆದುರುಳಿಸಿದೆಯಂದು ಡಮಾಸ್ಕಸ್‌ನ ಅಧಿಕೃತ ಸುದ್ದಿಸಂಸ್ಥೆ ಸಾನಾ ವರದಿ ಮಾಡಿದೆ.

‘‘ಡಮಾಸ್ಕಸ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಮೇಲೆ ಇಸ್ರೇಲ್‌ನ ಕ್ಷಿಪಣಿ ದಾಳಿಗೆ ನಮ್ಮ ವಾಯುರಕ್ಷಣಾ ವ್ಯವಸ್ಥೆಯು ಪ್ರತಿಕ್ರಿಯಿಸಿದೆ ಹಾಗೂ ಹಲವಾರು ವಿರೋಧಿ ಕ್ಷಿಪಣಿಗಳನ್ನು ಹೊಡೆದುರುಳಿಸಿದೆ’’ ಎಂದು ಸಿರಿಯದ ಸೇನಾ ಮೂಲವೊಂದರ ಹೇಳಿಕೆಯನ್ನು ಉಲ್ಲೇಖಿಸಿ ಸಾನಾ ವರದಿ ಮಾಡಿದೆ.

  ಕ್ಷಿಪಣಿ ದಾಳಿಯಲ್ಲಿ ಯಾವುದೇ ಸಾವು,ನೋವು ಅಥವಾ ಹಾನಿ ಸಂಭವಿಸಿರುವ ಬಗ್ಗೆ ಯಾವುದೇ ಮಾಹಿತಿಯನ್ನು ಸಿರಿಯ ನೀಡಿಲ್ಲ. ಆದರೆ ಸಿರಿಯವು ತನ್ನ ವಾಯುರಕ್ಷಣಾ ವ್ಯವಸ್ಥೆಯು ಸಕ್ರಿಯಗೊಳಿಸುವ ದೃಶ್ಯಗಳ ವಿಡಿಯೋ ಹಾಗೂ ಛಾಯಾಚಿತ್ರಗಳನ್ನು ಸಾನಾ ಬಿಡುಗಡೆ ಮಾಡಿದೆ.

 ಶನಿವಾರ ಶಂಕಿತ ಇಸ್ರೇಲ್ ಸೇನೆಯು ಎಸೆದಿರುವ ಕ್ಷಿಪಣಿಯು ವಿಮಾನನಿಲ್ದಾಣದ ಹೊರಭಾಗದಲ್ಲಿರುವ ಶಸ್ತ್ರಾಗಾರವೊಂದರ ಮೇಲೆ ಅಪ್ಪಳಿಸಿದೆಯೆಂದು ಬ್ರಿಟನ್‌ನಿಂದ ಕಾರ್ಯಾಚರಿಸುತ್ತಿರುವ ಸಿರಿಯದಲ್ಲಿ ಮಾನವಹಕ್ಕುಗಳಿಗಾಗಿನ ಕಣ್ಗಾವಲು ಸಮಿತಿ ತಿಳಿಸಿದೆ.

 ತನ್ನ ಬದ್ಧವೈರಿಯಾಗಿರುವ ಇರಾನ್ ಸಿರಿಯ ಸರಕಾರಕ್ಕೆ ಬೆಂಬಲ ನೀಡುತ್ತಿರುವುದು ಇಸ್ರೇಲ್‌ನ ಕೆಂಗಣ್ಣಿಗೆ ಕಾರಣವಾಗಿದೆ. ಯುದ್ಧಗ್ರಸ್ತ ಸಿರಿಯದಲ್ಲಿ ಇರಾನ್‌ನ ಪ್ರಭಾವವು ಹೆಚ್ಚದಂತೆ ತಡೆಯುವುದಾಗಿ ಇಸ್ರೇಲ್ ಈ ಹಿಂದೆ ಘೋಷಿಸಿತ್ತು.

  ಸಿರಿಯದ ಸರಕಾರಿ ಪಡೆಗಳ ಜೊತೆ ಕೈಜೋಡಿಸಿರುವ ಲೆಬನಾನ್‌ನ ಹಿಜ್ಬುಲ್ಲಾ ಹೋರಾಟಗಾರರಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸುವುದನ್ನು ತಡೆಯಲು ಸಿರಿಯದ ನೆಲೆಗಳ ಮೇಲೆ ದಾಳಿ ನಡೆಸುವುದಾಗಿಯೂ ಇಸ್ರೇಲ್ ಹೇಳಿತ್ತು.

ಸೆಪ್ಟೆಂಬರ್ 4ರಂದು ಇಸ್ರೇಲ್ ಪಡೆಗಳು, ಸಿರಿಯದ ಕರಾವಳಿ ಪ್ರಾಂತದ ನಗರಗಳಾದ ಟಾರ್ಟಸ್ ಹಾಗೂ ಮಧ್ಯ ಹಾಮಾ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದವು. ಆದರೆ ಸಿರಿಯವು ತನ್ನ ವಾಯುರಕ್ಷಣಾ ವ್ಯವಸ್ಥೆಯ ಮೂಲಕ ಆ ಕ್ಷಿಪಣಿಗಳನ್ನು ಹೊಡೆದುರುಳಿಸಿದ್ದಾಗಿ ಸಾನಾ ಆಗ ವರದಿ ಮಾಡಿತ್ತು. ಸಿರಿಯದಲ್ಲಿ 2011ರಲ್ಲಿ ಭುಗಿಲೆದ್ದ ಭೀಕರ ಅಂತರ್ಯುದ್ಧದಲ್ಲಿ 3.60 ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಲಕ್ಷಾಂತರ ಮಂದಿ ನಿರಾಶ್ರಿತರಾಗಿ ನೆರೆಹೊರೆಯ ದೇಶಗಳಲ್ಲಿ ಅಶ್ರಯಪಡೆದುಕೊಂಡಿದ್ದಾರೆ.

  ಬಂಡುಕೋರ ಗುಂಪುಗಳೊಂದಿಗೆ ನಡೆಸಿದ ಸಮರಗಳಲ್ಲಿ ಹಲವಾರು ಪ್ರಾಂತಗಳನ್ನು ಕಳೆದುಕೊಂಡಿರುವ ಸಿರಿಯದ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ನೇತೃತ್ವದ ಸರಕಾರಿ ಪಡೆಗಳು ಈಗ ಮೇಲುಗೈ ಸಾಧಿಸಲಾರಂಭಿಸಿದ್ದು, ಈ ಯುದ್ಧಗ್ರಸ್ತ ರಾಷ್ಟ್ರದ ಮೂರನೆ ಎರಡರಷ್ಟು ಭಾಗದ ಪ್ರದೇಶಗಳ ಮೇಲೆ ನಿಯಂತ್ರಣ ಹೊಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News