ಜೆಎನ್‌ಯುವಿನಲ್ಲಿ ಎಬಿವಿಪಿ-ಎಡ ಸಂಘಟನೆ ಕಾರ್ಯಕರ್ತರ ನಡುವೆ ಹೊಡೆದಾಟ

Update: 2018-09-17 14:42 GMT

ಹೊಸದಿಲ್ಲಿ, ಸೆ.17: ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯ (ಜೆಎನ್‌ಯು)ದಲ್ಲಿ ವಿದ್ಯಾರ್ಥಿ ಸಂಘಟನೆಗಳ ಚುನಾವಣೆಯ ಫಲಿತಾಂಶ ಹೊರಬಿದ್ದ ಕೆಲವೇ ಗಂಟೆಗಳ ನಂತರ ಆರ್‌ಎಸ್‌ಎಸ್ ಬೆಂಬಲಿತ ಎಬಿವಿಪಿ ಮತ್ತು ಎಡಪಕ್ಷ ಬೆಂಬಲಿತ ಎಐಎಸ್‌ಎ (ಐಸ) ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡ ಘಟನೆ ಸೋಮವಾರ ನಡೆದಿದೆ.

ರವಿವಾರ ಹೊರಬಿದ್ದ ಚುನಾವಣಾ ಫಲಿತಾಂಶದಲ್ಲಿ ಎಡಪಂಥೀಯ ಪಕ್ಷಗಳ ವಿದ್ಯಾರ್ಥಿ ಸಂಘಟನೆಗಳ ಮೈತ್ರಿಕೂಟ ಎಲ್ಲ ಪ್ರಮುಖ ನಾಲ್ಕು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಸೋಮವಾರ ನಡೆದ ಘರ್ಷಣೆಗೆ ಎರಡೂ ಸಂಘಟನೆಗಳು ಪರಸ್ಪರರ ಮೇಲೆ ಆರೋಪಗಳನ್ನು ಮಾಡುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಎಬಿವಿಪಿ ಕಾರ್ಯಕರ್ತರು ನೂತನವಾಗಿ ಆಯ್ಕೆಯಾದ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರು ಮತ್ತು ಮಾಜಿ ಅಧ್ಯಕ್ಷರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಐಸ ಕಾರ್ಯಕರ್ತರು ಆರೋಪಿಸಿದರೆ, ಎಡ ಸಂಘಟನೆಯ ಕಾರ್ಯಕರ್ತರು ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ಮೂವರಿಗೆ ಗಾಯಗೊಳಿಸಿದೆ ಎಂದು ಎಬಿವಿಪಿ ಆರೋಪಿಸಿದೆ.

ಮತ ಎಣಿಕೆಯ ಒಂದು ದಿನ ಮೊದಲು ಶನಿವಾರ ಕೂಡಾ ಎರಡು ಸಂಘಟನೆಗಳ ಕಾರ್ಯಕರ್ತರು ಪರಸ್ಪರ ಬಡಿದಾಡಿಕೊಂಡಿದ್ದರು. ಮತ ಪೆಟ್ಟಿಗೆಗಳನ್ನು ಎಳೆದೊಯ್ಯಲು ಯತ್ನಿಸಲಾದ ಮತ್ತು ಮತ ಎಣಿಕೆ ಕೇಂದ್ರಕ್ಕೆ ಕಾರ್ಯಕರ್ತರು ನುಗ್ಗಲು ಯತ್ನಿಸಿದ ಕಾರಣ ಚುನಾವಣಾ ಪ್ರಾಧಿಕಾರ ಮತ ಎಣಿಕೆ ಪ್ರಕ್ರಿಯೆಯನ್ನು ಅಮಾನತುಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News