ಈಗಿನ ಶಿಕ್ಷಣದಿಂದ ನಿರುದ್ಯೋಗ ನಿರ್ಮೂಲ ಸಾಧ್ಯವೇ?

Update: 2018-09-17 18:32 GMT

ಮಾನ್ಯರೇ,

ಭಾರತ ಆರ್ಥಿಕವಾಗಿ ಹಿಂದುಳಿಯಲು ಕಾರಣವೇನು ಎಂಬ ಪ್ರಶ್ನೆ ಬಂದಾಗ, ಉತ್ತರವಾಗಿ ಎದುರಿಗಿರುವುದು ಜನಸಂಖ್ಯೆ, ಬಡತನ, ನಿರುದ್ಯೋಗ. ಜನಸಂಖ್ಯೆ ಕಡಿವಾಣಕ್ಕೆ ಸರಕಾರದ ಯೋಜನೆಗಳ ಮೂಲಕ ಪ್ರಯತ್ನಿಸುತ್ತಿದೆ. ಆದರೆ ಬಡತನ ಮತ್ತು ನಿರುದ್ಯೋಗ ನಿರ್ಮೂಲ ನಮಗೆ ಈಗ ದೊರಕುತ್ತಿರುವ ಶಿಕ್ಷಣದಿಂದ ಸಾಧ್ಯವೇ ಎಂಬ ಸಂದೇಹ ಕಾಡುತ್ತಿದೆ.

ಇಂದು ಉದ್ಯೋಗಕ್ಕೆ ಪೂರಕವಾದ ಶಿಕ್ಷಣ ಸಿಗುತ್ತಿಲ್ಲ. ಎಷ್ಟೇ ಪದವಿಗಳನ್ನು ಪಡೆದರೂ ಉದ್ಯೋಗಕ್ಕೆ ಮತ್ತೊಂದು ವಿಶೇಷ ಕೋರ್ಸ್ ಪಡೆಯುವ ಅನಿವಾರ್ಯದಲ್ಲಿ ವಿದ್ಯಾರ್ಥಿಗಳಿದ್ದಾರೆ. ಐಎಎಸ್, ಐಪಿಎಸ್, ಬ್ಯಾಂಕಿಂಗ್ ಅಥವಾ ಯಾವುದೇ ಸರಕಾರಿ ಹುದ್ದೆೆಗಳನ್ನು ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಅರ್ಹತೆ ನಾವು ಪಡೆಯುವ ಪದವಿ ಶಿಕ್ಷಣದಲ್ಲೇ ಸಿಗುತ್ತಿದ್ದರೆ ಸಾಕಷ್ಟು ಮಂದಿ ಉದ್ಯೋಗ ಪಡೆಯುತ್ತಿದ್ದರು. ಆದರೆ ಈಗ ಪದವಿಗಳಲ್ಲಿ ಅಥವಾ ಸ್ನಾತಕೋತ್ತರ ಪದವಿಗಳಲ್ಲಿ ಸಿಗುತ್ತಿರುವ ಶಿಕ್ಷಣ ಉದ್ಯೋಗಕ್ಕೆ ಸಹಕರಿಸುತ್ತಿಲ್ಲ. ವಾಸ್ತವ ಹೀಗಿದ್ದರೂ ಪದವಿ ಪಠ್ಯಗಳನ್ನೇಕೆ ಇನ್ನೂ ಬದಲಾಯಿಸಲಾಗುತ್ತಿಲ್ಲ?.

ಕೇವಲ ಪಠ್ಯ ಪುಸ್ತಕದ ಬದಲಾವಣೆ ಮಾತ್ರವಲ್ಲ, ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾದ ಆಪ್ಟಿಟ್ಯೂಡ್ ಟೆಸ್ಟ್‌ಗೂ ಸಿದ್ಧತೆಗಳು ಪದವಿಯಿಂದಲೇ ಆರಂಭವಾಗಬೇಕು. ಬರೀ ಅಂಕಗಳಿಗೆ ಸೀಮಿತವಾದ ಶಿಕ್ಷಣದಿಂದ ಬದುಕು ಹಸನಾಗಲು ಸಾಧ್ಯವಿಲ್ಲ. ಕೆಲವೊಮ್ಮೆ ನಿರುದ್ಯೋಗ ಮತ್ತು ಬಡತನ ನಿರ್ಮೂಲನೆಗೆ ಶಿಕ್ಷಣದ ಅಗತ್ಯವೂ ಇರುವುದಿಲ್ಲ. ಏಕೆಂದರೆ ಅವಿದ್ಯಾವಂತರಾದರೂ ಹಿರಿಯರು ಮಾಡಿಟ್ಟ ಆಸ್ತಿ ಇದ್ದರೆ ಅವರೇ ಉದ್ಯೋಗ ಸೃಷ್ಟಿಸಿಕೊಂಡು ಅನುಭವದಿಂದ ತಮ್ಮ ಕ್ಷೇತ್ರದಲ್ಲಿ ಮೇಲೆ ಬರುತ್ತಾರೆ. ಆದರೆ ಬಡವರು ಕಷ್ಟಪಟ್ಟು ಪದವಿಗಳಿಸಿದರೂ ಯಾವುದೇ ಉಪಯೋಗವಿಲ್ಲದಂತಾಗುತ್ತದೆ. ಹೀಗಾಗಿ ಇನ್ನಾದರೂ ಸರಕಾರಗಳು ನಮ್ಮ ಶಿಕ್ಷಣ ಪದ್ಧತಿಯನ್ನು ಆಮೂಲಾಗ್ರ ಬದಲಾವಣೆ ಮಾಡಬೇಕು, ಸಂವಿಧಾನದ ಆಶಯದಂತೆ ಸರ್ವರಿಗೂ ಉದ್ಯೋಗ ದೊರೆತರೆ ಮಾತ್ರ ಭಾರತದ ಬಡತನ ನಿರ್ಮೂಲನೆ ಸಾಧ್ಯ.

Writer - -ಯೋಗಿನಿ, ಮಂಗಳೂರು

contributor

Editor - -ಯೋಗಿನಿ, ಮಂಗಳೂರು

contributor

Similar News