ಸಿಟ್ರಸ್ ಹಣ್ಣುಗಳ ಸಿಪ್ಪೆಗಳು ನೀಡುವ ಅದ್ಭುತ ಆರೋಗ್ಯಲಾಭಗಳು ನಿಮಗೆ ಗೊತ್ತೇ?

Update: 2018-09-18 10:22 GMT

ಸಿಟ್ರಸ್ ಕುಟುಂಬಕ್ಕೆ ಸೇರಿದ ಹಣ್ಣುಗಳಾದ ಮೂಸುಂಬಿ,ಕಿತ್ತಳೆ,ಲಿಂಬೆ ಇತ್ಯಾದಿಗಳನ್ನು ಆಹಾರವಾಗಿ ಬಳಸುವ ನಾವು ಸಾಮಾನ್ಯವಾಗಿ ಅವುಗಳ ಸಿಪ್ಪೆಗಳನ್ನು ಎಸೆದುಬಿಡುತ್ತೇವೆ. ಆದರೆ ಈ ಸಿಪ್ಪೆಗಳು ಹಲವಾರು ಆರೋಗ್ಯಲಾಭಗಳನ್ನು ನೀಡುತ್ತವೆ ಎನ್ನುವುದು ನಿಮಗೆ ಗೊತ್ತೇ? ಈ ಹಣ್ಣುಗಳ ಸಿಪ್ಪೆಗಳು ಲೈಮೊನಿನ್,ಬಯೊಫ್ಲಾವನಾಯ್ಡಾಗಳು,ವಿಟಾಮಿನ್ ಸಿ ಇತ್ಯಾದಿ ವಿವಿಧ ಫೈಟೊಕೆಮಿಕಲ್‌ಗಳು ಮತ್ತು ಪೊಟ್ಯಾಷಿಯಂ ಅನ್ನು ಒಳಗೊಂಡಿವೆ. ಹೀಗಾಗಿ ಹಣ್ಣುಗಳಿಗಿಂತ ಸಿಪ್ಪೆಗಳೇ ಹೆಚ್ಚು ಪೌಷ್ಟಿಕ ಮತ್ತು ಆರೋಗ್ಯಕರವಾಗಿವೆ.

ಫೈಟೊಕೆಮಿಕಲ್‌ಗಳು ಕ್ಯಾನ್ಸರ್ ವಿರುದ್ಧ ಹೋರಾಡುವ ಮತ್ತು ಉರಿಯೂತ ನಿರೋಧಕ ಗುಣಗಳನ್ನು ಹೊಂದಿದ್ದರೆ,ಪೊಟ್ಯಾಷಿಯಂ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ನೆರವಾಗುತ್ತದೆ. ಸಿಟ್ರಸ್ ಹಣ್ಣುಗಳ ಸಿಪ್ಪೆಗಳನ್ನು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವ ಮೂಲಕ ಅದರ ವಿವಿಧ ಆರೋಗ್ಯಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ. ಆದರೆ, ವಿಶೇಷವಾಗಿ ನಿಮ್ಮಲ್ಲಿ ಕ್ಯಾಲ್ಸಿಯಂ ಕೊರತೆಯಿದ್ದರೆ ಅಥವಾ ಕ್ಯಾಲ್ಸಿಯಂ ಆಕ್ಸಲೇಟ್ ಮೂತ್ರಪಿಂಡ ಕಲ್ಲುಗಳ ಇತಿಹಾಸವನ್ನು ಹೊಂದಿದ್ದರೆ ಯಾವುದೇ ಸಂಭಾವ್ಯ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಇವುಗಳನ್ನು ಸೇವಿಸುವ ಮುನ್ನ ತಜ್ಞರ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು.

►ಕ್ಯಾನ್ಸರ್ ವಿರುದ್ಧ ರಕ್ಷಣೆಯನ್ನು ನೀಡುತ್ತವೆ

 ಸಿಟ್ರಸ್ ಹಣ್ಣುಗಳ ಸಿಪ್ಪೆಗಳಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾ ಗಿರುವುದರಿಂದ ಅವು ಕ್ಯಾನ್ಸರ್ ವಿರುದ್ಧ ನಮ್ಮ ಶರೀರಕ್ಕೆ ರಕ್ಷಣೆ ನೀಡುತ್ತವೆ. ಅಲ್ಲದೆ ಲಿಂಬೆ,ಕಿತ್ತಳೆ ಮತ್ತು ದ್ರಾಕ್ಷಿಯಂತಹ ಹಣ್ಣುಗಳ ಸಿಪ್ಪೆಗಳು ವಿಕಿರಣದಿಂದ ನಮ್ಮ ಜೀವಕೋಶಗಳಿಗೆ ಉಂಟಾಗುವ ಯಾವುದೇ ರೂಪದ ಹಾನಿಯನ್ನು ತಡೆಯುವಲ್ಲಿ ನೆರವಾಗುವ ಸಂಯುಕ್ತಗಳನ್ನು ಒಳಗೊಂಡಿವೆ ಎನ್ನುವುದು ಸಂಶೋಧನೆಗಳಿಂದ ಬೆಳಕಿಗೆ ಬಂದಿದೆ. ಈ ಹಣ್ಣುಗಳಲ್ಲಿ ಅಧಿಕ ಪ್ರಮಾಣದಲ್ಲಿರುವ ವಿಟಾಮಿನ್ ಸಿ ನಮ್ಮ ಶರೀರದ ಮೇಲೆ ಉತ್ಕರ್ಷಣ ನಿರೋಧಕಗಳ ಪರಿಣಾಮವನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ.

►ಮಧುಮೇಹ ತಡೆಯುವಲ್ಲಿ ನೆರವಾಗಬಹುದು

ಜರ್ನಲ್ ಆಫ್ ಲೈಫ್ ಸೈನ್ಸಸ್‌ನಲ್ಲಿ ಪ್ರಕಟಗೊಂಡಿರುವ ಸಂಶೋಧನಾ ವರದಿಯಂತೆ ಪಾಲಿಮೆಥೊಕ್ಸಿಲೇಟೆಡ್ ಫ್ಲಾವೋನ್(ಪಿಎಂಎಫ್) ಗಳನ್ನೊಳಗೊಂಡಿರುವ ಸಿಟ್ರಸ್ ಸಿಪ್ಪೆಗಳು ಮಧುಮೇಹವನ್ನು ತಡೆಯಲು ನೆರವಾಗಬಹುದು. ಈ ಸಿಪ್ಪೆಗಳ ಸಾರದ ಸೇವನೆಯಿಂದ ಟ್ರೈಗ್ಲಿಸರೈಡ್‌ಗಳ ಮತ್ತು ಕೊಲೆಸ್ಟ್ರಾಲ್‌ಮಟ್ಟ ಕಡಿಮೆಯಾಗುತ್ತದೆ ಎನ್ನುವುದು ಈ ಸಂಶೋಧನೆಯಲ್ಲಿ ಬೆಳಕಿಗೆ ಬಂದಿದೆ. ಇವೆರಡೂ ಮಧುಮೇಹ ಮತ್ತು ಬೊಜ್ಜಿಗೆ ಕಾರಣವಾಗುತ್ತವೆ ಎನ್ನುವುದು ತಿಳಿದಿರುವ ವಿಷಯವಾಗಿದೆ. ಸಿಟ್ರಸ್ ಸಿಪ್ಪೆಗಳ ಸಾರವು ಶರೀರದಲ್ಲಿ ಇನ್ಸುಲಿನ್ ಸಂವೇದನಾಶೀಲತೆಯನ್ನು ಉತ್ತಮಗೊಳಿಸಬಹುದು.

►ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಬಹುದು

 ಜರ್ನಲ್ ಆಫ್ ಅಗ್ರಿಕಲ್ಚರ್ ಆ್ಯಂಡ್ ಪುಡ್ ಕೆಮಿಸ್ಟ್ರಿಯಲ್ಲಿ ಪ್ರಕಟಗೊಂಡಿರುವ ಸಂಶೋಧನಾ ವರದಿಯಂತೆ ಸಿಟ್ರಸ್ ಸಿಪ್ಪೆಗಳು ಪಿಎಂಎಫ್‌ಗಳನ್ನು ಒಳಗೊಂಡಿರುವುದರಿಂದ ಕೆಟ್ಟ ಕೊಲೆಸ್ಟ್ರಾಲ್ (ಎಲ್‌ಡಿಎಲ್)ನ ಮಟ್ಟವನ್ನು ಕಡಿಮೆ ಗೊಳಿಸುವಲ್ಲಿ ನೆರವಾಗುತ್ತವೆ. ಸಿಟ್ರಸ್ ಸಿಪ್ಪೆಗಳು ಹೃದಯದ ಆರೋಗ್ಯವನ್ನು ಹೆಚ್ಚಿಸುವ ಜೊತೆಗೆ ಎದೆಯುರಿಗೆ ಚಿಕಿತ್ಸೆ ನೀಡುವಲ್ಲಿಯೂ ನೆರವಾಗುತ್ತವೆ.

►ಜೀರ್ಣಕ್ರಿಯೆಯನ್ನು ಹೆಚ್ಚಿಸಲು ನೆರವಾಗುತ್ತವೆ

ಲಿಂಬೆಹಣ್ಣಿನ ಸಿಪ್ಪೆಯು ಜೀರ್ಣಕ್ರಿಯೆಗೆ ನೆರವಾಗುತ್ತದೆ,ಜೊತೆಗೆ ಆಮ್ಲದ ಹಿಮ್ಮುಖ ಹರಿವು,ಆಮ್ಲೀಯತೆ ಮತ್ತು ಹೊಟ್ಟೆೆನೋವಿನಂತಹ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ. ಸಿಟ್ರಸ್ ಸಿಪ್ಪೆಗಳಲ್ಲಿರುವ ಲೈಮೊನಿನ್ ಎದೆಯುರಿಯನ್ನು ನಿವಾರಿಸಲು ನೆರವಾಗುತ್ತದೆ. ಹೀಗಾಗಿ ನೀವು ಅಜೀರ್ಣ,ಜಠರದುರಿತ ಇತ್ಯಾದಿಗಳಿಂದ ಬಳಲುತ್ತಿದ್ದರೆ ಸಿಟ್ರಸ್ ಸಿಪ್ಪೆಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವ ಮೂಲಕ ಅವುಗಳಿಂದ ಪಾರಾಗಬಹುದು.

►ಸೂಕ್ಷ್ಮಾಣುಜೀವಿಗಳ ವಿರುದ್ಧ ಹೋರಾಡುತ್ತವೆ

ಸಿಟ್ರಸ್ ಹಣ್ಣುಗಳ,ವಿಶೇಷವಾಗಿ ಲಿಂಬೆಹಣ್ಣಿನ ಸಿಪ್ಪೆಯಲ್ಲಿರುವ ತೈಲವು ಪ್ರಬಲ ಸೂಕ್ಷ್ಮಾಣುಜೀವಿ ನಿರೋಧಕ ಗುಣಗಳನ್ನು ಹೊಂದಿದೆ. ಅದು ಬ್ಯಾಕ್ಟೀರಿಯಾ ನಿರೋಧಕ,ವೈರಸ್ ನಿರೋಧಕ ಮತ್ತು ಶಿಲೀಂಧ್ರ ನಿರೋಧಕ ಗುಣಗಳನ್ನು ಒಳಗೊಂಡಿರುವುದನ್ನು ಅಧ್ಯಯನಗಳು ತೋರಿಸಿವೆ. ಶೀತ ಮತ್ತು ಜ್ವರ, ಕರುಳಿನಲ್ಲಿರುವ ಪರಾವಲಂಬಿಗಳು ಮತ್ತು ಬ್ಯಾಕ್ಟೀರಿಯಾಗಳ ಸೋಂಕುಗಳ ವಿರುದ್ಧ ಹೋರಾಡುವಲ್ಲಿಯೂ ಅದು ನೆರವಾಗುತ್ತದೆ. ಸಿಟ್ರಸ್ ಸಿಪ್ಪೆಗಳು ನಮ್ಮ ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

 ಗಮನದಲ್ಲಿಡಿ, ಕೀಟನಾಶಕಗಳ ಸೇವನೆಯ ಸಾಧ್ಯತೆಯಿಂದ ದೂರವಿರಲು ಸಾವಯವ ವಿಧಾನದಲ್ಲಿ ಬೆಳೆಯಲಾದ ಸಿಟ್ರಸ್ ಹಣ್ಣುಗಳ ಸಿಪ್ಪೆಗಳನ್ನು ಸೇವಿಸುವುದು ಒಳ್ಳೆಯದು. ಈ ಸಿಪ್ಪೆಗಳ ಸಾರವನ್ನು ಜಾಮ್‌ಗಳ ತಯಾರಿಕೆಯಲ್ಲಿ ಬಳಸಬಹುದು ಮತ್ತು ಇದು ಜಾಮ್‌ಗೆ ಹೆಚ್ಚಿನ ರುಚಿಯನ್ನು ನೀಡುತ್ತದೆ. ಮೊಸರಿನೊಂದಿಗೆ, ಸಲಾಡ್‌ನೊಂದಿಗೆ ...ಹೀಗೆ ಇನ್ನೂ ಹಲವಾರು ರೀತಿಗಳಲ್ಲಿ ಈ ಸಿಪ್ಪೆಗಳ ಸಾರವನ್ನು ಬಳಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News