ತ್ರಿವಳಿ ತಲಾಖ್ ಶಿಕ್ಷಾರ್ಹ ಅಪರಾಧ: ಆಧ್ಯಾದೇಶಕ್ಕೆ ಸಂಪುಟ ಅಸ್ತು

Update: 2018-09-19 18:17 GMT

ಹೊಸದಿಲ್ಲಿ, ಸೆ.19: ತ್ರಿವಳಿ ತಲಾಖ್ ಶಿಕ್ಷಾರ್ಹ ಅಪರಾಧ ಎಂಬ ಆಧ್ಯಾದೇಶಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಈ ಕುರಿತ ಮಸೂದೆಗೆ ಸಂಸತ್ತಿನ ಉಭಯ ಸದನಗಳ ಒಪ್ಪಿಗೆ ಪಡೆಯಲು ವಿಫಲವಾದ ಬಳಿಕ ಸರಕಾರ ಆಧ್ಯಾದೇಶ ಹೊರಡಿಸಲು ನಿರ್ಧರಿಸಿದೆ.

ಕಳೆದ ಡಿಸೆಂಬರ್‌ನಲ್ಲಿ ತ್ರಿವಳಿ ತಲಾಖ್ ಮಸೂದೆಗೆ ಲೋಕಸಭೆಯಲ್ಲಿ ಒಪ್ಪಿಗೆ ಸಿಕ್ಕಿತ್ತು. ಆದರೆ ರಾಜ್ಯಸಭೆಯಲ್ಲಿ ಮಂಜೂರಾತಿ ದೊರಕಿರಲಿಲ್ಲ. ಮುಂಗಾರು ಅಧಿವೇಶನದಲ್ಲಿ ತಿದ್ದುಪಡಿ ಮಸೂದೆಯ ಕುರಿತು ರಾಜ್ಯಸಭೆಯಲ್ಲಿ ಒಮ್ಮತ ಮೂಡದ ಕಾರಣ ಈ ಮಸೂದೆಯನ್ನು ಮುಂದಿನ ಅಧಿವೇಶನಕ್ಕೆ ಮುಂದೂಡಲಾಗಿತ್ತು. ಈ ಮಸೂದೆಗೆ ಮೂರು ತಿದ್ದುಪಡಿ ಮಾಡಲಾಗಿದೆ. ಪ್ರಥಮ ತಿದ್ದುಪಡಿ ಪ್ರಕಾರ ತ್ರಿವಳಿ ತಲಾಖ್ ನೀಡಿದ ಪತಿಯ ವಿರುದ್ಧ ಮಹಿಳೆ (ಪತ್ನಿ)ಅಥವಾ ಆಕೆಯ ನಿಕಟ ಸಂಬಂಧಿಗಳು ಮಾತ್ರ ಪೊಲೀಸರಿಗೆ ದೂರು ನೀಡಬಹುದಾಗಿದೆ.

ಎರಡನೇ ತಿದ್ದುಪಡಿಯಲ್ಲಿ, ಒಂದು ವೇಳೆ ರಾಜಿಮಾತುಕತೆ ನಡೆದು ಪತಿ ಆಕೆಯನ್ನು ಪತ್ನಿಯೆಂದು ಸ್ವೀಕರಿಸಲು ಸಿದ್ಧನಾದರೆ ಆಗ ಮಹಿಳೆ ಪ್ರಕರಣವನ್ನು ಹಿಂಪಡೆಯಬಹುದಾಗಿದೆ. ಮೂರನೇ ತಿದ್ದುಪಡಿ ಪ್ರಕಾರ, ಪತಿಗೆ ಜಾಮೀನು ನೀಡುವ ಮೊದಲು ನ್ಯಾಯಾಧೀಶರು ಪತ್ನಿಯ ಹೇಳಿಕೆಯನ್ನು ಆಲಿಸಿ ಆ ಬಳಿಕ ನಿರ್ಧಾರ ಕೈಗೊಳ್ಳಬೇಕು. ತ್ರಿವಳಿ ತಲಾಖ್ ಅಕ್ರಮ ಹಾಗೂ ಅಸಾಂವಿಧಾನಿಕ ಕೃತ್ಯ ಎಂದು 2017ರ ಆಗಸ್ಟ್‌ನಲ್ಲಿ ಸುಪ್ರೀಂಕೋರ್ಟ್ ಘೋಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News