ರಫೇಲ್ ಒಪ್ಪಂದದಲ್ಲಿ ಅಂಬಾನಿಗೆ ಅನುಕೂಲ ಮಾಡಿಕೊಟ್ಟಿದ್ದೇಕೆ ?

Update: 2018-09-19 15:20 GMT

ಹೊಸದಿಲ್ಲಿ, ಸೆ.19: ಜೆಎನ್‌ಯು ಆವರಣದೊಳಗಿರುವ ಕೆಲವು ಶಕ್ತಿಗಳು ಭಾರತದ ವಿರುದ್ಧ ಯುದ್ಧ ಸಾರುತ್ತಿವೆ ಎಂಬ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಯನ್ನು ಟೀಕಿಸಿರುವ ಜೆಎನ್‌ಯು ವಿದ್ಯಾರ್ಥಿಸಂಘದ ಅಧ್ಯಕ್ಷ ಎನ್. ಸಾಯಿಬಾಲಾಜಿ , ಮೊದಲು ಸಚಿವರು ರಫೇಲ್ ಒಪ್ಪಂದದ ಬಗ್ಗೆ ಎತ್ತಲಾಗಿರುವ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ .

ಜೆನ್‌ಯುವಿನಲ್ಲಿ ಕಳೆದ ಕೆಲ ವರ್ಷಗಳಿಂದ ನಡೆಯುತ್ತಿರುವ ವಿದ್ಯಮಾನಗಳು ಆಶಾಜನಕವಾಗಿಲ್ಲ. ಇಲ್ಲಿರುವ ಪಕ್ಷದ ಸಿದ್ಧಾಂತವನ್ನು ಈ ದೇಶದ ಜನತೆ ಒಪ್ಪಿಕೊಳ್ಳಲಾರರು. ಇಲ್ಲಿರುವ ಶಕ್ತಿಗಳು ಭಾರತದ ವಿರುದ್ಧ ಯುದ್ಧ ಸಾರುತ್ತಿವೆ ಮತ್ತು ಇಂತವರ ಜೊತೆ ವಿದ್ಯಾರ್ಥಿ ಸಂಘದ ಚುನಾಯಿತ ಪ್ರತಿನಿಧಿಗಳು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ನಿರ್ಮಲಾ ಹೇಳಿಕೆ ನೀಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಬಾಲಾಜಿ, ಸರಕಾರ ದೇಶದಲ್ಲಿ ರಾಷ್ಟ್ರವಾದಿ ಮತ್ತು ರಾಷ್ಟ್ರವಿರೋಧಿ ಎಂಬ ಚರ್ಚೆ ನಡೆಯಬೇಕೆಂದು ಬಯಸುತ್ತಿದೆ. ವಾಸ್ತವ ವಿಷಯಗಳಾದ ರಫೇಲ್ ಒಪ್ಪಂದ, ಜಿಯೊ ವಿವಿ, ನಿರುದ್ಯೋಗ ಸಮಸ್ಯೆ ಇತ್ಯಾದಿಗಳಿಂದ ಬೇರೆಡೆ ಗಮನ ಸೆಳೆಯಲು ಅವರು ಬಯಸಿದ್ದಾರೆ. ಸ್ವತಃ ಜೆಎನ್‌ಯು ವಿದ್ಯಾರ್ಥಿನಿಯಾಗಿರುವ ಸೀತಾರಾಮನ್ , ಅಂಬಾನಿಗೆ ರಫೇಲ್ ಒಪ್ಪಂದದಲ್ಲಿ ಯಾಕೆ ಅನುಕೂಲ ಮಾಡಿಕೊಡಲಾಗಿದೆ ಎಂಬುದಕ್ಕೆ ಉತ್ತರಿಸಿಲ್ಲ. ಸರಕಾರ ಸರಕಾರಿ ಶಿಕ್ಷಣ ವ್ಯವಸ್ಥೆಯನ್ನು ಕೊನೆಗೊಳಿಸಿ ಕಾರ್ಪೊರೇಟ್ ಶೈಲಿಯ ಶಿಕ್ಷಣ ವ್ಯವಸ್ಥೆಗೆ ಪ್ರೋತ್ಸಾಹ ನೀಡಲು ಉದ್ದೇಶಿಸಿದೆ ಎಂದು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News