ಗೋರಕ್ಷಣೆಯ ನೆಪದಲ್ಲಿ ಗುಂಪು ಹಲ್ಲೆ ಒಪ್ಪಲಾಗದು: ಆರೆಸ್ಸೆಸ್ ಮುಖ್ಯಸ್ಥ ಭಾಗವತ್

Update: 2018-09-19 16:30 GMT

ಹೊಸದಿಲ್ಲಿ, ಸೆ.19: ಗೋ ರಕ್ಷಣೆಯ ಹೆಸರಿನಲ್ಲಿ ಗುಂಪು ಹಲ್ಲೆ ಮತ್ತು ಹತ್ಯೆಯನ್ನು ಒಪ್ಪಲಾಗದು. ಹಸುಗಳನ್ನು ಅಲೆದಾಡಲು ಬಿಡಬಾರದು. ಗೋರಕ್ಷಕರು ತಮ್ಮ ಹಸುಗಳನ್ನು ಮನೆಯಲ್ಲೇ ಇರಿಸಿಕೊಳ್ಳಬೇಕು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುತ್ತಿರುವ ‘ಭವಿಷ್ಯದ ಭಾರತ; ಆರೆಸ್ಸೆಸ್ ದೃಷ್ಟಿಕೋನ’ ಸರಣಿ ಉಪನ್ಯಾಸ ಕಾರ್ಯಕ್ರಮದ ಮೂರನೇ ಹಾಗೂ ಅಂತಿಮ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಭಿವೃದ್ಧಿಯ ಹಾದಿಯಲ್ಲಿ ಸಾಗುವುದನ್ನು ಎದುರುನೋಡುತ್ತಿರುವ ದೇಶದಲ್ಲಿ ಜಾತಿಯ ತಡೆಗೋಡೆ ಇರಬಾರದು ಎಂದರು. ಗುಂಪು ಹಿಂಸಾಚಾರಕ್ಕೆ ಆಸ್ಪದವೇ ನೀಡಬಾರದು. ದೋಷಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡಬಾರದು.

ಆರೆಸ್ಸೆಸ್‌ಗೆ ಜಾತಿವಾದದಲ್ಲಿ ನಂಬಿಕೆಯಿಲ್ಲ. ಈಗಿನ ಆರೆಸ್ಸೆಸ್‌ನಲ್ಲಿ ಎಲ್ಲಾ ಜಾತಿಯವರಿಗೂ ಪ್ರಾತಿನಿಧ್ಯವಿದೆ. ನಾವು ಮುಂದುವರಿಯುತ್ತಿದ್ದೇವೆ ಎಂದರು. ಪ್ರತಿಯೊಬ್ಬರೂ ತನ್ನವರು ಎನ್ನುವುದು ಭಾರತದ ಸಿದ್ಧಾಂತವಾಗಿದ್ದು ಎಲ್ಲರನ್ನೂ ಒಂದು ಸೇರಿಸುವ ಸಿದ್ಧಾಂತ ಈ ದೇಶದ್ದು. ಹಿಂದು ವ್ಯಕ್ತಿಯು ಏಕತೆಯಲ್ಲಿ ವಿಶ್ವಾಸ ಇರಿಸುತ್ತಾನೆ ಎಂದವರು ಹೇಳಿದರು.

ಇಂದಿನ ದಿನದಲ್ಲಿ ಮಹಿಳೆಯರು ಯಾವುದೇ ರೀತಿಯಲ್ಲೂ ಪುರುಷರಿಗಿಂತ ಕಡಿಮೆಯಿಲ್ಲ. ಮಹಿಳೆಯರ ಸುರಕ್ಷತೆಯ ನಿಟ್ಟಿನಲ್ಲಿ ಅವರನ್ನು ಸಬಲೀಕರಣಗೊಳಿಸಬೇಕು. ಮಹಿಳೆಯರ ಕುರಿತ ಪುರುಷರ ನಿಲುವು ಬದಲಾಗಬೇಕಿದೆ. ಮಹಿಳೆಯರನ್ನು ಗೌರವಿಸುವ ಬಗ್ಗೆ ಪುರುಷರಿಗೆ ಹೇಳಿಕೊಡಬೇಕು. ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣವನ್ನು ಹತ್ತಿಕ್ಕಲು ದೇಶದಲ್ಲಿ ಕಠಿಣವಾದ ಕಾನೂನನ್ನು ಜಾರಿಗೊಳಿಸಬೇಕು ಮತ್ತು ಜನತೆ ಇದನ್ನು ಪಾಲಿಸಬೇಕು ಎಂದರು. ಸಲಿಂಗಕಾಮಿಗಳ ಬಗ್ಗೆ ತಾರತಮ್ಯ ಮಾಡಲಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲರೂ ಈ ಸಮಾಜದ ಭಾಗವಾಗಿದ್ದಾರೆ. ಇದೀಗ ಕಾಲ ಬದಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News