ನಕಲಿ ಅಂಕಪಟ್ಟಿ ವಿವಾದ: ಪದವಿಯಲ್ಲಿದ್ದ ವಿಷಯಗಳನ್ನು ನೆನಪಿಸಲು ವಿಫಲವಾದ ಎಬಿವಿಪಿಯ ಅಂಕಿವ್ ಬೈಸೋಯ

Update: 2018-09-19 17:41 GMT

ನಕಲಿ ಅಂಕಪಟ್ಟಿ ವಿವಾದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ದೆಹಲಿ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷ ಅಂಕಿವ್ ಬೈಸೋಯ, ತಮಿಳುನಾಡಿನ ವೆಲ್ಲೂರಿನಲ್ಲಿರುವ ತಿರುವಳ್ಳುವರ್ ವಿಶ್ವವಿದ್ಯಾನಿಲಯದಲ್ಲಿ 2013ರಿಂದ 2016ರ ಅವಧಿಯಲ್ಲಿ ಹಲವು ಬಗೆಯ ವಿಷಯಗಳನ್ನು ಅಧ್ಯಯನ ಮಾಡಿದ್ದಾಗಿ ಹೇಳಿದ್ದಾರೆ. ಆದರೆ ಬ್ಯಾಚುಲರ್ ಆಫ್ ಆರ್ಟ್ಸ್ (ಬಿಎ) ಪದವಿಯಲ್ಲಿ ನಿರ್ದಿಷ್ಟವಾಗಿ ಯಾವ ವಿಷಯಗಳಿದ್ದವು ಎಂದು ನೆನಪಿಸಿಕೊಳ್ಳುವಲ್ಲಿ ಮತ್ತು ಯಾವುದೇ ವಿಭಾಗದ ಮುಖ್ಯಸ್ಥರ ಹೆಸರನ್ನು ನೆನಪಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸದಸ್ಯರಾಗಿರುವ 23 ವರ್ಷ ವಯಸ್ಸಿನ ಬೈಸೋಯ, ಈ ವರ್ಷ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಬೌದ್ಧ ಅಧ್ಯಯನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪ್ರವೇಶ ಪಡೆದಿದ್ದರು. ವೆಲ್ಲೂರಿನ ಸರ್ಕಾರಿ ವಿಶ್ವವಿದ್ಯಾನಿಲಯವಾದ ತಿರುವಳ್ಳುವರ್ ವಿಶ್ವವಿದ್ಯಾನಿಲಯದ ಅಂಕಪಟ್ಟಿಯನ್ನು ದಾಖಲೆಯಾಗಿ ಅವರು ಪ್ರವೇಶಾತಿಯ ಸಂದರ್ಭ ನೀಡಿದ್ದರು. 2016ರಲ್ಲಿ ಈ ವಿವಿಯಲ್ಲಿ ಪದವಿ ಪಡೆದಿದ್ದಾಗಿ ಅಂಕಿವ್ ಹೇಳುತ್ತಾರೆ.

ಆದರೆ ತಮಿಳುನಾಡು ಕಾಂಗ್ರೆಸ್ ಘಟಕ ಮತ್ತು ಅದರ ವಿದ್ಯಾರ್ಥಿ ವಿಭಾಗವಾದ ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ ಈ ದಾಖಲೆಗಳನ್ನು ವಿಶ್ವವಿದ್ಯಾನಿಲಯದಲ್ಲಿ ತೋರಿಸಿದಾಗ, ಪರೀಕ್ಷೆಗಳ ನಿಯಂತ್ರಕರು ಇವುಗಳನ್ನು ನಕಲಿ ಪ್ರಮಾಣಪತ್ರಗಳೆಂದು ಹೇಳಿದ್ದಾರೆ ಎನ್ನಲಾಗಿದೆ. ಮಂಗಳವಾರ ಎನ್‍ಎಸ್‍ಯುಐ, ಪತ್ರ, ಕವರ್ ಮತ್ತು ಅಂಕಪಟ್ಟಿಯ ಜೆರಾಕ್ಸ್ ಪ್ರತಿಗಳನ್ನು ಹಂಚಿದೆ.

ಆದರೆ ವಿರೋಧಿ ಬಣದವರು ಪ್ರಸಾರ ಮಾಡುತ್ತಿರುವ ದಾಖಲೆಗಳು ನಕಲಿ ಎನ್ನುವುದು ಬೈಸೋಯ ಅವರ ಹೇಳಿಕೆ. "ಚುನಾವಣೆಯಲ್ಲಿ ಬಳಸಿದ ಎಲೆಕ್ಟ್ರಾನಿಕ್ ಮತಯಂತ್ರದ ಬಗ್ಗೆ ವಿವಾದ ಹುಟ್ಟುಹಾಕುವ ಅವರ ಪ್ರಯತ್ನ ವಿಫಲವಾಗಿರುವುದರಿಂದ ಇದೀಗ ನನ್ನ ಪದವಿಯನ್ನು ಪ್ರಶ್ನಿಸುತ್ತಿದ್ದಾರೆ. ಯಾವ ದಾಖಲೆಗಳಿದ್ದರೂ ಅದನ್ನು ಪರಿಶೀಲಿಸಬಹುದು. ಈ ಪ್ರಕ್ರಿಯೆಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ" ಎಂದು ಬೈಸೋಯ ಪ್ರತಿಕ್ರಿಯಿಸಿದ್ದಾರೆ. ಆದರೆ ಅಂಕಿವ್ ಬೈಸೋಯ ಎಂಬ ಹೆಸರಿನ ವಿದ್ಯಾರ್ಥಿ ಇಲ್ಲಿ ಅಧ್ಯಯನ ಮಾಡಿಲ್ಲ ಎಂದು ತಿರುವುಳ್ಳವರ್ ವಿಶ್ವವಿದ್ಯಾನಿಲಯದ ಅಧಿಕಾರಿಗಳು ಹೇಳಿದ್ದಾಗಿ ಎನ್‍ ಡಿಟಿವಿ ವರದಿ ಮಾಡಿದೆ.

ಈ ಬಗ್ಗೆ ತನಿಖೆ ನಡೆಸಿ ಅಂಕಿವ್ ಬೈಸೋಯಾ ಅವರ ಪ್ರಮಾಣಪತ್ರಗಳು ನಕಲಿಯಾಗಿದ್ದರೆ ಅವರನ್ನು ವಜಾ ಮಾಡುವುದು ದೆಹಲಿ ವಿವಿ ಅಧಿಕಾರಿಗಳ ಕರ್ತವ್ಯ ಎಂದು ಎನ್‍ಎಸ್‍ಯುಐ ಉಸ್ತುವಾರಿ ಹೊಂದಿರುವ ಕಾಂಗ್ರೆಸ್ ಸದಸ್ಯರಾದ ರುಚಿ ಗುಪ್ತಾ ಹೇಳುತ್ತಾರೆ. "ಆಗ ಅವರು ದೆಹಲಿ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಉಳಿಯುವುದಿಲ್ಲ ಎಂದು ಬೇರೆ ಹೇಳಬೇಕಾಗಿಲ್ಲ" ಎಂದು ವಿರೋಧಿ ಬಣದ ವಿದ್ಯಾರ್ಥಿ ಮುಖಂಡರು ಹೇಳುತ್ತಾರೆ. ಅದರಲ್ಲೂ ಮುಖ್ಯವಾಗಿ ಎಡಪಂಥೀಯ ಸಂಘಟನೆಗಳ ಮುಖಂಡರು, ಪ್ರಧಾನಿ ನರೇಂದ್ರ ಮೋದಿಯವರು ದೆಹಲಿ ವಿವಿಯಿಂದ ರಾಜಕೀಯ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಎನ್ನುವುದು ಕೂಡಾ ಪ್ರಶ್ನಾರ್ಥಕ ಎಂದು ಹೇಳುತ್ತಾರೆ.

ಆದರೆ ಮೋದಿ ಪ್ರಕರಣದಂತೆ, ಬೈಸೋಯ ಪ್ರಕರಣವನ್ನು ಇತ್ಯರ್ಥಪಡಿಸಲು ದೆಹಲಿ ವಿವಿ ಮುಂದಾಗಿಲ್ಲ. "ನಮಗೆ ಬೆಳಗ್ಗೆಯಿಂದಲೂ ಹಲವು ಮಾಧ್ಯಮಗಳಿಂದ ಕರೆ ಬಂದಿದೆ. ಆದರೆ ವಿಶ್ವವಿದ್ಯಾನಿಲಯದಿಂದ ಯಾವ ಕರೆಯೂ ಬಂದಿಲ್ಲ" ಎಂದು ಎಬಿವಿಪಿ ಮುಖಂಡರು ಹೇಳುತ್ತಾರೆ. "ವಿವಿಯಿಂದ ಯಾರೂ ಕರೆ ಮಾಡಿ ನಿಮ್ಮ ಅಂಕಪಟ್ಟಿ ನಕಲಿ ಎಂದು ಹೇಳಿಲ್ಲ"  ಎಂದೂ ಅವರು ಹೇಳುತ್ತಾರೆ.

ಹಲವು ಮಂದಿ ವಿದ್ಯಾರ್ಥಿ ಮುಖಂಡರನ್ನು ಹೊಂದಿರುವ ವಿವಿ ಬೌದ್ಧ ಅಧ್ಯಯನ ವಿಭಾಗದ ಮುಖ್ಯಸ್ಥ ಕೆಟಿಎಸ್ ಸರಾವೊ "ಇಂಡಿಯನ್ ಎಕ್ಸ್‍ಪ್ರೆಸ್"ಗೆ ಹೇಳಿದಂತೆ, "ಯಾವುದೇ ದೂರುಗಳು ಬಂದಾಗ, ಪದವಿಗಳನ್ನು ಪರಿಶೀಲಿಸಲಾಗುತ್ತದೆ. ವಿಶ್ವವಿದ್ಯಾನಿಲಯದಲ್ಲಿರುವ ಒಂದು ವಿಭಾಗ ಅದನ್ನು ಮಾಡುತ್ತದೆ. ಇದುವರೆಗೆ ಯಾವ ದೂರೂ ಬಂದಿಲ್ಲ"

ಆದರೆ ಬೈಸೋಯಾ ವಿರುದ್ಧ ನಕಲಿ ಅಂಕಪಟ್ಟಿ ಪ್ರಸ್ತುತಪಡಿಸಿದ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ಎನ್ ‍ಎಸ್‍ ಯುಐ ಬುಧವಾರ ಮುಂಜಾನೆ ಪ್ರಕಟಿಸಿದೆ.

ವೆಲ್ಲೂರಿನ ಜೀವನ

ಬೈಸೋಯಾ ಅವರ ಫೇಸ್‍ಬುಕ್ ಪುಟದಲ್ಲಿ ದೆಹಲಿ ವಿವಿಯಲ್ಲಿ ನಡೆದ ಚುನಾವಣಾ ಪ್ರಚಾರ ಮತ್ತು ಪ್ರತಿಭಟನೆನೆಗಳ ಚಿತ್ರಗಳು ಸಾಕಷ್ಟು ಇದ್ದರೂ, ವೆಲ್ಲೂರಿನಲ್ಲಿ ಬೈಸೋಯಾ ಇದ್ದರು ಎನ್ನಲಾದ ಅವಧಿಯ ಯಾವ ಉಲ್ಲೇಖವೂ ಅವರ ಫೇಸ್‍ಬುಕ್ ಪುಟದಲ್ಲಿ ಕಾಣಿಸುತ್ತಿಲ್ಲ. ಈ ಚಿತ್ರಗಳು ಬೈಸೋಯಾ ವೆಲ್ಲೂರಿನಲ್ಲಿದ್ದರು ಎಂಬ ಅವಧಿಯದ್ದೇ ಆಗಿವೆ. ಆದ್ದರಿಂದ ಅವರು ಈ ಅವಧಿಯಲ್ಲಿ ದೆಹಲಿಯಲ್ಲಿದ್ದಿರಬೇಕು ಅಥವಾ ಯಾರಾದರೂ ಟ್ಯಾಗ್ ಮಾಡಿರಬೇಕು.

ಉದಾಹರಣೆಗೆ, 2014ರ ಅಕ್ಟೋಬರ್ 17ರಂದು ಅವರಿಗೆ ಟ್ಯಾಗ್ ಮಾಡಲಾದ ಒಂದು ಚಿತ್ರವು ದೆಹಲಿ ವಿವಿಯ ಕಲಾ ವಿಭಾಗದಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದ್ದು ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಪರಿಷತ್‍ನ ರಾಜ್ಯ ಕಾರ್ಯದರ್ಶಿ ಭರತ್ ಖತಾನಾ 2014ರ ನವೆಂಬರ್ 12ರಂದು ನಡೆದ ಮತ್ತೊಂದು ಪ್ರತಿಭಟನೆಯ ಚಿತ್ರವನ್ನು ಪೋಸ್ಟ್ ಮಾಡಿ, ಬೈಸೋಯಾ ಅವರಿಗೂ ಟ್ಯಾಗ್ ಮಾಡಿದ್ದಾರೆ. ಖತಾನಾ ಹಾಗೂ ಆಗ ತೆಳ್ಳಗಿದ್ದ ಬೈಸೋಯಾ ಮೂರನೇ ಫೋಟೊದಲ್ಲಿದ್ದಾರೆ. ಅದನ್ನು ಆರು ದಿನಗಳ ಬಳಿಕ ಪೋಸ್ಟ್ ಮಾಡಲಾಗಿದೆ. ಇಬ್ಬರೂ ಪರಿಷತ್‍ ನ ನೇಮ್‍ ಟ್ಯಾಗ್ ಧರಿಸಿದ್ದರು. ಮುಂದಿನ ಎರಡು ವರ್ಷಗಳಲ್ಲಿ ಹಲವು ಚಿತ್ರಗಳು ಪೋಸ್ಟ್ ಆಗಿವೆ. ಅದರಲ್ಲೂ ಮುಖ್ಯವಾಗಿ 2016ರಲ್ಲಿ ಅವರು ಪರಿಷತ್ ನ ಅಧ್ಯಕ್ಷ ಅಭ್ಯರ್ಥಿ ಸತೇಂದ್ರ ಅವಾನಾ ಅವರ ಪ್ರಚಾರಕ್ಕೆ ಸಹಕರಿಸಿದ ಚಿತ್ರಗಳು ಇವು. ಅವಾನಾ ಈ ಚುನಾವಣೆಯಲ್ಲಿ ಗೆದ್ದಿದ್ದರು.

ದೆಹಲಿ ವಿವಿಯ ಪ್ರಚಾರ ಮತ್ತು ಪ್ರತಿಭಟನೆಗಳ ಚಿತ್ರಗಳನ್ನು ಸಾಕಷ್ಟು ಪೋಸ್ಟ್ ಮಾಡಿದ್ದರೂ, ವೆಲ್ಲೂರು ಜೀವನದ ಬಗೆಗಿನ ಯಾವ ಚಿತ್ರವೂ ಏಕಿಲ್ಲ ಎಂದು ಪ್ರಶ್ನಿಸಿದಾಗ, "ಮೇರಾ ಅಪ್-ಡೌನ್ ಹೋತಾ ರಹ್ತಾ ಥಾ. ನಾನು ದೆಹಲಿ ಮತ್ತು ವೆಲ್ಲೂರು ನಡುವೆ ಓಡಾಡುತ್ತಿದ್ದೆ ಎಂದು ಅಂಕಿವ್ ಪ್ರತಿಕ್ರಿಯಿಸಿದ್ದಾರೆ. "ಪರೀಕ್ಷೆಗೆ, ಕೆಲ ತರಗತಿಗಳಿಗೆ ಅಥವಾ ನನಗೆ ಕೆಲಸಗಳಿದ್ದಾಗ ಅಲ್ಲಿ ಹೋಗುತ್ತಿದ್ದೆ. ಆದರೆ ಬಹುತೇಕ ಸಮಯ ನಾನು ದೆಹಲಿಯಲ್ಲೇ ಇದ್ದೆ" ಎನ್ನುವುದು ಅವರ ಸಮರ್ಥನೆ. ತಿರುವಳ್ಳುವರ್ ವಿವಿಯಲ್ಲಿ ಕಾಯಂ ತರಗತಿಯ ವಿದ್ಯಾರ್ಥಿಯಾಗಿದ್ದೇ ಪದವಿ ಪಡೆದಿದ್ದೇನೆ. ದೂರಶಿಕ್ಷಣ ಅಥವಾ ಕರೆಸ್ಪಾಂಡೆನ್ಸ್ ಕೋರ್ಸ್ ಮೂಲಕ ಅಲ್ಲ ಎಂದ ಅವರು ಸ್ಪಷ್ಟಪಡಿಸಿದ್ದಾರೆ.

ವಿದ್ಯಾರ್ಥಿ ಜೀವನದ ಬಗ್ಗೆ ಕೂಡಾ ಅವರಿಗೆ ಏನೂ ನೆನಪಿದ್ದಂತಿಲ್ಲ. ಕಲಾ ಪದವಿಯಲ್ಲಿ ಯಾವ ವಿಷಯಗಳಿದ್ದವು ಎಂದು ಕೇಳಿದಾಗ, ಇಂಗ್ಲಿಷ್ ಹೊರತುಪಡಿಸಿ ಯಾವ ವಿಷಯವನ್ನೂ ಹೆಸರಿಸಲು ಅವರು ವಿಫಲರಾದರು. "ನಾನು ಹಲವು ಬಗೆಯ ಪರೀಕ್ಷೆ ಬರೆದಿದ್ದೆ. ಇಂಗ್ಲಿಷ್ ಹಾಗೂ ಕೌಶಲ ಆಧರಿತ ವಿಷಯಗಳು" ಇತಿಹಾಸ ಅಥವಾ ಇತರ ವಿಷಯಗಳನ್ನು ಅಧ್ಯಯನ ಮಾಡಿದ್ದೀರಾ ಎಂದು ಕೇಳಿದಾಗ, "ಹಲವು ಬಗೆಯ ವಿಷಯಗಳು. ಕೌಶಲ ಆಧರಿತ ವಿಷಯಗಳು, ಪ್ರಮುಖ ಹಾಗೂ ಸಂಬಂಧಿತ ವಿಷಯಗಳು" ಎಂದಷ್ಟೇ ಹೇಳಿದರು. ಯಾವ ವಿಭಾಗದ ಮುಖ್ಯಸ್ಥರ ಹೆಸರು ನೆನಪಿಸಿಕೊಳ್ಳುವುದೂ ಅವರಿಗೆ ಸಾಧ್ಯವಾಗಲಿಲ್ಲ.

ಈ ಗೊಂದಲ, ಎನ್ ‍ಎಸ್‍ ಯುಐ ಬಹಿರಂಗಪಡಿಸಿರುವ ಒಂದು ಅಂಕಪಟ್ಟಿಯಲ್ಲೂ ಪ್ರತಿಫಲಿತವಾಗಿದೆ. ಅವರ ಮೂರನೇ ಸೆಮಿಸ್ಟರ್‍ನ ಅಂಕ ಪಟ್ಟಿಯಲ್ಲಿ ವಿಷಯದ ಬದಲು, ಕೋರ್ ಥಿಯರಿ ಎಂದು ನಮೂದಿಸಲಾಗಿದೆ. ಜತೆಗೆ ಅಲೈಡ್ 3 ಮತ್ತು ಕೌಶಲ ಆಧರಿತ ವಿಷಯಗಳು ಎಂದು ಉಲ್ಲೇಖಿಸಲಾಗಿದೆ.

ಈ ಸೆಮಿಸ್ಟರ್ 2014ರ ಮೇ ತಿಂಗಳಿನಿಂದ 2015ರ ಜೂನ್ ವರೆಗೆ ಇತ್ತು. ಆದರೆ ವಾಸ್ತವವಾಗಿ ಯಾವ ಸೆಮಿಸ್ಟರ್ ಕೂಡಾ ಒಂದು ವರ್ಷದ ಅವಧಿಯಷ್ಟು ವಿಸ್ತರಿಸಿರುವುದಿಲ್ಲ. ಇದರ ಜತೆಗೆ ಸೆಮಿಸ್ಟರ್ ಪೂರ್ಣಗೊಳ್ಳುವ ಮುನ್ನವೇ ಅಂದರೆ 2014ರ ಡಿಸೆಂಬರ್ 22ರಂದು ಈ ಅಂಕಪಟ್ಟಿ ನೀಡಲಾಗಿದೆ. ಈ ದಾಖಲೆಯಲ್ಲಿ ಬೈಸೋಯಾ ಅವರ ಪೋಷಕರ ಹೆಸರೂ ಇದೆ. ವೆಬ್ ವಿಳಾಸ: www.tvu.edu.in ಎಂಬ ಬದಲಾಗಿ thiruvalluvaruniversity.ac.in ಎಂದಿದೆ. ಕೆಲ ವರದಿಗಳಲ್ಲಿ ಉಲ್ಲೇಖಿಸಿರುವಂತೆ, ಪ್ರಮಾಣಪತ್ರದಲ್ಲಿ ಮುದ್ರಿಸಿರುವ ತಮಿಳು ಹೆಸರಿನಲ್ಲಿ ಕೆಲ ತಪ್ಪುಗಳಿವೆ.

ದೆಹಲಿ ಕಾಲೇಜು

ಇದೇ ವೇಳೆ, ಬೈಸೋಯಿ ದೆಹಲಿ ಕಾಲೇಜಿನ ಜತೆ ಸಂಬಂಧ ಹೊಂದಿದ್ದ ಬಗ್ಗೆ ಕೆಲ ಸುಳಿವುಗಳು ಅವರ ಫೇಸ್‍ ಬುಕ್ ಪೇಜ್‍ ನಲ್ಲಿ ಸಿಗುತ್ತವೆ. 2014ರ ಸೆಪ್ಟೆಂಬರ್‍ನಲ್ಲಿ, ಅವರಿಗೆ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಟ್ಯಾಗ್ ಮಾಡಲಾಗಿದೆ. ಆದರೆ ಅದು ಕಾಲೇಜು ಚುನಾವಣೆಗೆ ಸಂಬಂಧಿಸಿದ್ದು. 2015 ಮತ್ತು 2016ರಲ್ಲಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಟ್ಯುಟೋರಿಯಲ್ ದಾಖಲೆಯಲ್ಲಿ ಅಂಕಿವ್ ಬೈಸೋಯ ಎಂಬ ಹೆಸರು ಇದೆ. ಅದಲ್ಲದೇ ಇತ್ತೀಚೆಗೆ ಅಂದರೆ ಸೆಪ್ಟೆಂಬರ್ 10ರಂದು, ಜನಪ್ರಿಯ ವಿದ್ಯಾರ್ಥಿ ನಿಯತಕಾಲಿಕ "ಡಿಯು ಬೀಟ್"ನಲ್ಲಿ, ಪರಿಷತ್ ವತಿಯಿಂದ ಸ್ಪರ್ಧಿಸಿದ ಎಲ್ಲ ಅಭ್ಯರ್ಥಿಗಳ ವ್ಯಕ್ತಿಚಿತ್ರದಲ್ಲಿ, ವೃತ್ತಿಪರ ಅಧ್ಯಯನ ಕಾಲೇಜಿನ ಅರ್ಥಶಾಸ್ತ್ರ ಪದವೀಧರ ಎಂದು ವಿವರಿಸಲಾಗಿದೆ.

ಆದರೆ ಎಬಿವಿಪಿ ಅಂಕಿವ್ ಅವರನ್ನು ಸಮರ್ಥಿಸಿಕೊಂಡಿದೆ. "ದೆಹಲಿ ವಿವಿ ಅಂಕಿವ್ ಬೈಸೋಯ ಅವರಿಗೆ ದಾಖಲೆಗಳನ್ನು ಪರಿಶೀಲನೆ ಮಾಡಿಯೇ ಪ್ರವೇಶ ನೀಡಿದೆ" ಎಂದು ಸಂಘಟನೆಯ ಮಧ್ಯಮ ಸಂಚಾಲಕ ಹೇಳಿದ್ದಾರೆ. "ಇಷ್ಟಾಗಿಯೂ ವಿಶ್ವವಿದ್ಯಾನಿಲಯದಲ್ಲಿ ನೋಂದಣಿಯಾಗಿರುವ ಯಾವುದೇ ವಿದ್ಯಾರ್ಥಿಯ ದಾಖಲೆಗಳನ್ನು ಪರಿಶೀಲಿಸಲು ದೆಹಲಿ ವಿವಿಗೆ ಅಧಿಕಾರವಿದೆ. ಆದರೆ ಯಾವುದೇ ವ್ಯಕ್ತಿಯ ಪ್ರಮಾಣಪತ್ರವನ್ನು ನೀಡುವುದು ಎನ್‍ಎಸ್‍ಯುಐ ಕೆಲಸವಲ್ಲ" ಎಂದು ಎಬಿವಿಪಿ ಹೇಳಿದೆ.

Writer - ಶ್ರೇಯಾ ರಾಯ್ ಚೌಧರಿ, scroll.in

contributor

Editor - ಶ್ರೇಯಾ ರಾಯ್ ಚೌಧರಿ, scroll.in

contributor

Similar News