ರ‌್ಯಾಂಪ್‌ನಲ್ಲಿ ಮಿಂಚುತ್ತಿರುವ ಡೌನ್ ಸಿಂಡ್ರೋಮ್ ಮಾಡೆಲ್!

Update: 2018-09-20 11:51 GMT

ಜನ್ಮದತ್ತ ಡೌನ್ ಸಿಂಡ್ರೋಮ್ ಅಥವಾ ಬುದ್ಧಿಮಾಂದ್ಯತೆಯಿಂದ ಬಳಲುತ್ತಿರುವ ಆಸ್ಟ್ರೇಲಿಯಾದ ಯುವತಿಯೋರ್ವಳು ಫ್ಯಾಷನ್ ಕ್ಷೇತ್ರದಲ್ಲಿ ಮಿಂಚುವ ಮೂಲಕ ವಿಶ್ವಾದ್ಯಂತ ಹಲವರ ಹುಬ್ಬುಗಳು ಅಚ್ಚರಿಯಿಂದ ಮೇಲಕ್ಕೇರುವಂತೆ ಮಾಡಿದ್ದಾಳೆ. ಸಾಮಾನ್ಯವಾಗಿ ಡೌನ್ ಸಿಂಡ್ರೋಮ್ ಹೊಂದಿರುವ ಮಕ್ಕಳು ಮಾನಸಿಕ ಮತ್ತು ದೈಹಿಕ ವೈಕಲ್ಯಗಳಿಂದ ಬಳಲುತ್ತಿರುತ್ತಾರೆ ಮತ್ತು ಪ್ರತಿಯೊಂದ ಕೆಲಸಕ್ಕೂ ಇತರರ ನೆರವು ಅಗತ್ಯವಾಗಿರುತ್ತದೆ. ಆದರೆ ಇಂತಹ ಮಕ್ಕಳಿಗಾಗಿಯೇ ಅರ್ಪಿತವಾಗಿರುವ ಶಾಲೆಗಳು ಅವರಲ್ಲಿ ಹೊಸ ಚೇತನವನ್ನು ಮೂಡಿಸುತ್ತಿವೆ.

ಅವಳದು ದೃಢ ನಿರ್ಧಾರವಾಗಿತ್ತು

ಆಸ್ಟ್ರೇಲಿಯಾದ ಬ್ರಿಸ್ಬೇನ್ ನಿವಾಸಿ ರೋಸಾನ್ನೆ ಸ್ಟುವರ್ಟ್ 2015ರಲ್ಲಿ ಅದೊಂದು ದಿನ ತನ್ನ ಪುತ್ರಿ ಮ್ಯಾಡೆಲಿನ್ ಜೊತೆ ವಾರ್ಷಿಕ ಫ್ಯಾಷನ್ ಪರೇಡ್ ವೀಕ್ಷಿಸುತ್ತಿದ್ದಳು. ಡೌನ್ ಸಿಂಡ್ರೋಮ್‌ನೊಂದಿಗೆ ಜನಿಸಿದ್ದ ಮ್ಯಾಡೆಲಿನ್‌ಗೆ ಮಾತನಾಡುವುದೂ ಕಷ್ಟವಾಗಿತ್ತು. ಹೀಗಾಗಿ ಒಂದು ಮಿತಿಯಲ್ಲಿಯೇ ಸಂಭಾಷಣೆ ನಡೆಸುತ್ತಿದ್ದಳು. ರ‌್ಯಾಂಪ್‌ನಲ್ಲಿ ಅತ್ಯಾಧುನಿಕ ಉಡುಪುಗಳಲ್ಲಿ ಮಿಂಚುತ್ತಿದ್ದ ಮಾಡೆಲ್‌ಗಳನ್ನು ತದೇಕ ಚಿತ್ತದಿಂದ ನೋಡುತ್ತಿದ್ದ ಆಕೆ ಏಕಾಏಕಿ ತಾಯಿಯತ್ತ ತಿರುಗಿ ತಾನೂ ಮಾಡಲ್ ಆಗುವುದಾಗಿ ಘೋಷಿಸಿದ್ದಳು.

ನಾಲ್ಕು ವರ್ಷಗಳ ಬಳಿಕ

ಅಂದು ತಾಯಿಯೆದುರು ತನ್ನ ದೃಢ ನಿರ್ಧಾರವನ್ನು ಪ್ರಕಟಿಸಿದ್ದಾಗ ಮ್ಯಾಡೆಲಿನ್‌ಗೆ 17 ವರ್ಷ ವಯಸ್ಸಾಗಿದ್ದು,ಈಗ ಆಕೆ 21ನೇ ವಯಸ್ಸಿಗೆ ಹೆಜ್ಜೆಯಿರಿಸಿದ್ದಾಳೆ ಮತ್ತು ನ್ಯೂಯಾರ್ಕ್ ಫ್ಯಾಷನ್ ವೀಕ್‌ನಲ್ಲಿ ರ‌್ಯಾಂಪ್‌ನಲ್ಲಿ ಮಾರ್ಜಾಲ ನಡಿಗೆಯ ಹೆಜ್ಜೆಗಳನ್ನು ಹಾಕಿದ,ಡೌನ್ ಸಿಂಡ್ರೋಮ್ ಹೊಂದಿರುವ ಜಗತ್ತಿನ ಮೊದಲ ಮಾಡೆಲ್ ಎಂಬ ಹೆಗ್ಗಳಿಕೆಯನ್ನು ಮುಡಿಗೇರಿಸಿಕೊಂಡಿದ್ದಾಳೆ.

ಲಂಡನ್,ಪ್ಯಾರಿಸ್ ಮತ್ತು ದುಬೈ ಸೇರಿದಂತೆ ವಿಶ್ವದ ವಿವಿಧ ದೇಶಗಳಲ್ಲಿ ನಡೆದ 60ಕ್ಕೂ ಅಧಿಕ ಫ್ಯಾಷನ್ ಶೋಗಳಲ್ಲಿ ಕ್ಯಾಟ್‌ವಾಕ್ ಮಾಡಿರುವ ಮ್ಯಾಡೆಲಿನ್‌ಗೆ ಆಕೆಯ ವೈಕಲ್ಯ ಸಾಧನೆಗೆಂದಿಗೂ ಅಡ್ಡಿಯಾಗಲಿಲ್ಲ.

ವಿಶ್ವಾದ್ಯಂತ ದಾಪುಗಾಲು

 ಮ್ಯಾಡೆಲಿನ್ ಯಶಸ್ವಿ ಮಾಡೆಲ್ ಆಗಿ ವಿಶ್ವಾದ್ಯಂತ ದಾಪುಗಾಲು ಹಾಕುತ್ತಿದ್ದಾಳೆ. ಇತ್ತೀಚಿಗಷ್ಟೇ 2018ರ ನ್ಯೂಯಾರ್ಕ್ ಫ್ಯಾಷನ್ ವೀಕ್‌ನಲ್ಲಿ ಏಳು ಫ್ಯಾಷನ್ ವಿನ್ಯಾಸಕಾರರ ನೆಚ್ಚಿನ ಮಾಡೆಲ್ ಆಗಿ ಕ್ಯಾಟ್‌ವಾಕ್‌ಗಳನ್ನು ಮಾಡಿದ್ದಾಳೆ. ಫ್ಯಾಷನ್ ಜಗತ್ತಿನಲ್ಲ್ಲಿ ಈಕೆಯ ಯಶಸ್ವಿ ಯಾನ ಮುಂದುವರಿದಿದೆ. 2018ರ ಲಂಡನ್ ಫ್ಯಾಷನ್ ವೀಕ್‌ನಲ್ಲಿಯೂ ಈಕೆ ಇನ್ನೂ ಏಳು ಫ್ಯಾಷನ್ ವಿನ್ಯಾಸಕಾರರ ರಚನೆಗಳನ್ನು ರ್ಯಾಂಪ್‌ನಲ್ಲಿ ಪ್ರದರ್ಶಿಸಲಿದ್ದಾಳೆ.

ಕಾಲದೊಂದಿಗೆ ಬದಲಾದ ಫ್ಯಾಷನ್ ಜಗತ್ತು

ಕಾಲದೊಂದಿಗೆ ಬದಲಾಗಿರುವ ಫ್ಯಾಷನ್ ಜಗತ್ತು ಹಳೆಯ ಸಂಪ್ರದಾಯಗಳಿಂದ ಹೊರಗೆ ಬಂದಿದೆ. ಮಾಡೆಲ್‌ಗಳು ಶ್ವೇತವರ್ಣದವರಾಗಿರಬೇಕು ಮತ್ತು ಕೃಶಕಾಯದವರಾಗಿರಬೇಕು ಎಂಬ ಅಲಿಖಿತ ನಿಯಮಗಳನ್ನು ಅದು ಕೈಬಿಟ್ಟಿದೆ. ಈಗ ವಿವಿಧ ಜನಾಂಗಗಳ,ವಿಭಿನ್ನ ಸಾಮರ್ಥ್ಯಗಳ ಮಹಿಳೆಯರು ಫ್ಯಾಷನ್ ಲೋಕದಲ್ಲಿ ಮಿಂಚುತ್ತಿದ್ದಾರೆ. ಈ ಪೈಕಿ ಮ್ಯಾಡೆಲಿನ್ ಮುಂಚೂಣಿಯಲ್ಲಿದ್ದಾಳೆ.

ಬಾಲ್ಯ ಸುಲಭದ್ದಾಗಿರಲಿಲ್ಲ

ಮ್ಯಾಡೆಲಿನ್‌ಗೆ ಜನ್ಮನೀಡಿದಾಗ ವೈದ್ಯರು ಮಗು ಡೌನ್ ಸಿಂಡ್ರೋಮ್ ಹೊಂದಿದೆ ಮತ್ತು ಏಳು ವರ್ಷದ ಮಗುವಿನ ಬೆಳವಣಿಯಯನ್ನೂ ಹೊಂದುವುದಿಲ್ಲ ಎಂದು ರೋಸಾನ್ನೆಗೆ ತಿಳಿಸಿದ್ದರು. ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿರಿಸುವ ಮುನ್ನ ಮ್ಯಾಡೆಲಿನ್ ಹೆಚ್ಚಿನ ಡೌನ್ ಸಿಂಡ್ರೋಮ್ ಮಕ್ಕಳಂತೆ ಅಧಿಕ ದೇಹತೂಕವನ್ನು ಹೊಂದಿದ್ದಳು. ಆದರೆ ದೃಢ ನಿಶ್ಚಯದಿಂದಾಗಿ ದೇಹತೂಕವನ್ನು ಕಡಿಮೆ ಮಾಡಿಕೊಳ್ಳುವ ಜೊತೆಗೆ ತನ್ನ ಒಟ್ಟಾರೆ ಆರೋಗ್ಯವನ್ನು ಸುಧಾರಿಸಿಕೊಳ್ಳುಲ್ಲಿ ಆಕೆ ಯಶಸ್ವಿಯಾಗಿದ್ದಳು.

ಸೋಷಿಯಲ್ ಮೀಡಿಯಾ ಸ್ಟಾರ್

ರೋಸಾನ್ನೆ 2015ರಲ್ಲಿ ಡೌನ್ ಸಿಂಡ್ರೋಮ್ ಹೊಂದಿರುವ ಇತರ ಮಕ್ಕಳನ್ನು ಉತ್ತೇಜಿಸಲು ತನ್ನ ಮಗಳು ತೂಕವನ್ನು ಇಳಿಸಿಕೊಂಡಿದ್ದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಳು. ಇದು ಕ್ಷಣಾರ್ಧದಲ್ಲಿ ವ್ಯೆರಲ್ ಆಗಿದ್ದು,ಒಂದೇ ವಾರದಲ್ಲಿ 7.2 ಮಿಲಿಯನ್‌ಗೂ ಅಧಿಕ ಜನರು ವೀಕ್ಷಿಸಿದ್ದರು ಮತ್ತು ಸುಮಾರು 150 ದೇಶಗಳ ಮಾಧ್ಯಮಗಳಲ್ಲಿ ಸುದ್ದಿಯಾಗಿ ಮ್ಯಾಡೆಲಿನ್ ಮಿಂಚಿದ್ದಳು.

ಮೊದಲ ಅವಕಾಶ

ಸಾಮಾಜಿಕ ಮಾಧ್ಯಮಗಳಲ್ಲಿ ಮ್ಯಾಡೆಲಿನಾಳ ಚಿತ್ರಗಳು ಪ್ರಕಟಗೊಂಡ ಒಂದೇ ತಿಂಗಳಲ್ಲಿ ದಕ್ಷಿಣ ಆಫ್ರಿಕಾದ ಫ್ಯಾಷನ್ ವಿನ್ಯಾಸಕ ಆಕೆಗೆ ಮಾಡೆಲ್ ಆಗುವಂತೆ ಆಹ್ವಾನಿಸಿದ್ದ. ಅದನ್ನು ಒಪ್ಪಿಕೊಂಡ ಬಳಿಕ ಮ್ಯಾಡೆಲಿನಾ ಹಿಂದೆಂದೂ ತಿರುಗಿ ನೋಡಿಲ್ಲ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News