ಪರಿಸರ ಸ್ನೇಹಿ ನಿರ್ಮಾಣದ ಪ್ರೇರಕ ಶಕ್ತಿ ಡಾ. ಪ್ರೇಮ್ ಸಿ. ಜೈನ್ ನಿಧನ

Update: 2018-09-20 16:29 GMT

ಹೊಸದಿಲ್ಲಿ, ಸೆ. 20 : ಖ್ಯಾತ ಉದ್ಯಮಿ, ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ ನ ಅಧ್ಯಕ್ಷ , ಭಾರತದಲ್ಲಿ ಪರಿಸರ ಸ್ನೇಹಿ ಕಟ್ಟಡ ನಿರ್ಮಾಣಕ್ಕೆ ನಾಂದಿ ಹಾಡಿದ ಪ್ರೇರಕ ಶಕ್ತಿ ಎಂದೇ ಖ್ಯಾತರಾದ ಡಾ. ಪ್ರೇಮ್ ಸಿ ಜೈನ್ (82)ಗುರುವಾರ ಮುಂಜಾನೆ ನಿಧನರಾಗಿದ್ದಾರೆ. 

ಐಐಟಿ ಕಾನ್ಪುರದಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಾಗು ಅಮೇರಿಕಾದಲ್ಲಿ ಅದೇ ಕ್ಷೇತ್ರದಲ್ಲಿ ಉನ್ನತ ಅಧ್ಯಯನ ನಡೆಸಿದ್ದ ಡಾ. ಪ್ರೇಮ್ ಜೈನ್ ಹವಾನಿಯಂತ್ರಣ ತಂತ್ರಜ್ಞಾನದಲ್ಲಿ ಆಳವಾದ ಅಧ್ಯಯನ ನಡೆಸಿದವರು. ಉನ್ನತ ವಿದ್ಯಾಭ್ಯಾಸದ ಬಳಿಕ ಅಮೆರಿಕದಿಂದ ಭಾರತಕ್ಕೆ ಮರಳಿದ ಡಾ. ಪ್ರೇಮ್ ಜೈನ್ ಅವರು ಐಐಟಿ ಕಾನ್ಪುರದಲ್ಲಿ ಅತಿಥಿ ಅಧ್ಯಾಪಕರಾಗಿ ಸೇವೆ ಪ್ರಾರಂಭಿಸಿ ಅಲ್ಲೇ ದೇಶದ ಪ್ರಪ್ರಥಮ ಪರಿಸರ ಇಂಜಿನಿಯರಿಂಗ್ ಪ್ರಯೋಗಾಲಯವನ್ನು ಸ್ಥಾಪಿಸಿದರು. ಇಂಡಿಯನ್ ಸೊಸೈಟಿ ಆಫ್ ಹೀಟಿಂಗ್, ರೆಫ್ರಿಜರೇಟಿಂಗ್ ಎಂಡ್ ಏರ್ ಕಂಡೀಷನಿಂಗ್ ಎಂಜಿನಿಯರ್ಸ್ ಸಂಸ್ಥೆಯನ್ನು ದೇಶದಲ್ಲಿ ಪ್ರಾರಂಭಿಸಿದ್ದು ಅವರೇ. 

ಉದ್ಯಮಿಯಾಗಿಯೂ ಭಾರೀ ಯಶಸ್ಸು ಪಡೆದಿದ್ದ ಅವರು ಭಾರತದ ರಾಷ್ಟ್ರಪತಿ ಹಾಗು ಪ್ರಧಾನ ಮಂತ್ರಿಗಳಿಗೆ ಸಲಹೆಗಾರರಾಗಿ, ದೇಶ ವಿದೇಶಗಳ ಹಲವಾರು ವಿಶ್ವವಿದ್ಯಾಲಯಗಳಿಗೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಅತ್ಯುತ್ತಮ ಶಿಕ್ಷಕ ಎಂದೂ ಖ್ಯಾತಿ ಪಡೆದಿದ್ದರು.

ಶೀತಲೀಕರಣ, ಹವಾನಿಯಂತ್ರಣ ಇತ್ಯಾದಿ ಕ್ಷೇತ್ರದಲ್ಲಿ ಆಳವಾದ ಸಂಶೋಧನೆ ಮಾಡಿ ಅವುಗಳಲ್ಲಿ ಕ್ರಾಂತಿಕಾರಿ ಪರಿಸರಪ್ರೇಮಿ  ಪ್ರಯೋಗಗಳನ್ನು ಮಾಡಿದ್ದ ಅವರು ದೇಶದ ಕಟ್ಟಡ ನಿರ್ಮಾಣ ನೀತಿಯಲ್ಲಿ ಈ ವಿಷಯಗಳ ಕುರಿತಂತೆ ಇದ್ದ ನೀತಿಯನ್ನು ಪುನರ್ರಚಿಸಿ ಅವುಗಳನ್ನು ಅಂತರ್ ರಾಷ್ಟ್ರೀಯ ಮಟ್ಟಕ್ಕೆ ತಂದಿದ್ದರು. 

ಭಾರತದಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಪಾಶ್ಚಿಮಾತ್ಯ ಶೈಲಿಯ ವಿನ್ಯಾಸಕ್ಕೆ ಜೋತು ಬೀಳದೆ ಮೆಕ್ಯಾನಿಕಲ್ , ಇಲೆಕ್ಟ್ರಿಕಲ್ ಮತ್ತು ಪ್ಲಮ್ಬಿಂಗ್ ಕೆಲಸಗಳಲ್ಲಿ ದೇಶದ ಪಾರಂಪರಿಕ ಶೈಲಿಯನ್ನು ಆಧುನಿಕ ಹಾಗು ವೈಜ್ಞಾನಿಕತೆಯ ಆಧಾರದಲ್ಲಿ ಅಳವಡಿಸಿಕೊಳ್ಳುವ ಮೂಲಕ ಪರಿಸರ ಪ್ರೇಮಿ , ಮಿತವ್ಯಯದ ಕಟ್ಟಡಗಳನ್ನು ನಿರ್ಮಿಸುವುದು ಅವರ ಗುರಿಯಾಗಿತ್ತು. ಮತ್ತು ಆ ನಿಟ್ಟಿನಲ್ಲಿ ಹಲವಾರು ಸಂಸ್ಥೆಗಳು, ಅಧ್ಯಯನ ಕೇಂದ್ರಗಳು ಹಾಗು ಉದ್ಯಮಗಳನ್ನು ಸ್ಥಾಪಿಸಿ ಭಾರೀ ಯಶಸ್ಸು ಗಳಿಸಿ ದೊಡ್ಡ ಸಂಖ್ಯೆಯಲ್ಲಿ ಇತರ ಇಂಜಿನಿಯರ್ ಗಳು ಹಾಗು ಉದ್ಯನಿಗಳಿಗೆ ಸ್ಫೂರ್ತಿ ನೀಡಿದ ಕೀರ್ತಿ ಡಾ.ಪ್ರೇಮ್ ಜೈನ್ ಅವರದ್ದು . 

ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಪಾತ್ರರಾಗಿದ್ದ  ಡಾ. ಪ್ರೇಮ್ ಜೈನ್ ಅವರಿಗೆ 1967 ರಲ್ಲಿ ಅಮೇರಿಕಾದ ಮಿನೆಸೊಟ್ಟ ವಿವಿ ಅವರಿಗೆ ಡಾಕ್ಟರೇಟ್ ಪದವಿ ನೀಡಿತ್ತು. ಏಷ್ಯಾದ ಪ್ರಭಾವಿ ನಾಯಕರ ಪೈಕಿ ಒಬ್ಬರು ಎಂಬ ಕೀರ್ತಿಯೂ ಅವರಿಗೆ ಲಭಿಸಿತ್ತು. 

ಡಾ. ಪ್ರೇಮ್ ಜೈನ್ ಅವರ ನಿಧಾನಕ್ಕೆ ಐಜಿಬಿಸಿ ಬೆಂಗಳೂರು ಘಟಕ ಹಾಗು ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಡಾ. ಪ್ರೇಮ್ ಅವರ ನಿಧನದಿಂದ ದೇಶ ಹಸಿರು ನಿರ್ಮಾಣದ ಜನಕನನ್ನು ಕಳೆದುಕೊಂಡಿದೆ. ಪರಿಸರ ಸ್ನೇಹಿ ನಿರ್ಮಾಣದ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಅವರ ಅಗಲಿಕೆ ಬಹುದೊಡ್ಡ ನಷ್ಟ. ಅವರು  ತೋರಿಸಿದ್ದ ದಾರಿಯಲ್ಲಿ ಮುಂದುವರಿದು ಭಾರತವನ್ನು ಪರಿಸರ ಸ್ನೇಹಿ ನಿರ್ಮಾಣದಲ್ಲಿ ಜಗತ್ತಿನಲ್ಲೇ ಮುಂಚೂಣಿ ರಾಷ್ಟ್ರ ಮಾಡುವ ಮೂಲಕ ನಾವು ಅವರಿಗೆ ಶೃದ್ಧಾಂಜಲಿ ಸಲ್ಲಿಸಬೇಕಾಗಿದೆ ಎಂದು ಸಯ್ಯದ್ ಬ್ಯಾರಿ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News