ಇಬ್ನ್ ಬತೂತಾ ನಡೆದ ಹಾದಿಯ ಹಿಡಿದು...

Update: 2018-09-20 18:30 GMT

ಅಮೆರಿಕದ ಸ್ಯಾನ್‌ಡಿಯಾಗೋ ವಿವಿಯಲ್ಲಿ ಇತಿಹಾಸದ ಗೌರವ ಪ್ರೊಫೆಸರ್ ಆಗಿರುವ ರೋಸ್ ಡ್ಯುನ್, ಬತೂತಾ ತನ್ನ ಪ್ರವಾಸಕಥನದಲ್ಲಿ ಉಲ್ಲೇಖಿಸಿದ ಕೆಲವು ಸ್ಥಳಗಳನ್ನು ಮರುಶೋಧಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಬತೂತಾ ಅವರ ಪ್ರವಾಸದ ವೃತ್ತಾಂತಗಳು, ನಮ್ಮ ಗತಕಾಲವನ್ನು ಪುನರ್‌ಸೃಷ್ಟಿಸಲು ನೆರವಾಗುತ್ತದೆಯೆಂದು ರೋಸ್ ಭಾವಿಸಿದ್ದಾರೆ.

14ನೇ ಶತಮಾನದ ವಿಶ್ವಪ್ರಸಿದ್ಧ ಅರಬ್ ಪ್ರವಾಸಿಗ ಇಬ್ನ್ ಬತೂತಾ ಭೇಟಿ ನೀಡಿದ್ದ ಪ್ರಮುಖ ಪಟ್ಟಣಗಳಲ್ಲೊಂದಾದ ಭಾರತದ ಕೋಝಿಕೋಡ್ (ಕಲ್ಲಿಕೋಟೆ)ಗೆ ಅಮೆರಿಕದ ಇತಿಹಾಸತಜ್ಞ ರೋಸ್ ಡ್ಯುನ್ ಈ ವರ್ಷದ ಫೆಬ್ರವರಿಯಲ್ಲಿ ಸಂದರ್ಶಿಸಿದ್ದರು. ಈ ಭೇಟಿಯು ಅವರಿಗೆ ಪುರಾತನ ಆರಬ್ ಯಾತ್ರಿಕನ ಬದುಕು ಹಾಗೂ ಕಾಲದ ಬಗ್ಗೆ ಪುನರ್‌ಅವಲೋಕನ ನಡೆಸಲು ಪ್ರೇರೇಪಿಸಿತು.

ಈಗ ಮೂರನೇ ಮುದ್ರಣ ಕಾಣುತ್ತಿರುವ ರೋಸ್ ಡ್ಯುನ್ ಬರೆದಿರುವ ‘ದಿ ಆಡ್ವೆಂಚರ್ಸ್ ಆಫ್ ಇಬ್ನ್ ಬತೂತಾ- ಎ ಮುಸ್ಲಿಂ ಟ್ರಾವೆಲರ್ ಆಫ್ ಫೋರ್ಟಿಂತ್ ಸೆಂಚುರಿ’ (ಕ್ಯಾಲಿಫೋರ್ನಿಯಾ ವಿವಿ ಪ್ರೆಸ್ ಪ್ರಕಾಶನ), ಅವರ ಈ ಪ್ರಯತ್ನದ ಫಲವಾಗಿದೆ.
ಇಬ್ನ್ ಬತೂತಾ ತನ್ನ ಪ್ರವಾಸಕಥನದಲ್ಲಿ ಈಗಿನ ಕೇರಳದ ಮಲಬಾರ್ ಪ್ರಾಂತವನ್ನು ಉಲ್ಲೇಖಿಸಿದ್ದರಿಂದ ಪ್ರೇರಿತರಾದ ರೋಸ್ ಡ್ಯುನ್ ಈ ವರ್ಷ ಫೆಬ್ರವರಿಯಲ್ಲಿ ಕಲ್ಲಿಕೋಟೆಗೆ ಭೇಟಿ ನೀಡಿದ್ದರು.
 ಅಮೆರಿಕದ ಸ್ಯಾನ್‌ಡಿಯಾಗೋ ವಿವಿಯಲ್ಲಿ ಇತಿಹಾಸದ ಗೌರವ ಪ್ರೊಫೆಸರ್ ಆಗಿರುವ ರೋಸ್ ಡ್ಯುನ್, ಬತೂತಾ ತನ್ನ ಪ್ರವಾಸಕಥನದಲ್ಲಿ ಉಲ್ಲೇಖಿಸಿದ ಕೆಲವು ಸ್ಥಳಗಳನ್ನು ಮರುಶೋಧಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಬತೂತಾ ಅವರ ಪ್ರವಾಸದ ವೃತ್ತಾಂತಗಳು, ನಮ್ಮ ಗತಕಾಲವನ್ನು ಪುನರ್‌ಸೃಷ್ಟಿಸಲು ನೆರವಾಗುತ್ತದೆಯೆಂದು ರೋಸ್ ಭಾವಿಸಿದ್ದಾರೆ.
ಈ ಬಗ್ಗೆ ಅಲ್ ಅರಬಿಯಾ ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ರೋಸ್ ಡ್ಯುನ್ ಅವರು, ಇಬ್ನ್ ಬತೂತಾ ಬರೆದಿರುವ ರಿಹ್ಲಾ ಕೃತಿಯು, ಒಂದು ಬೃಹತ್ ಆಕರ ಗ್ರಂಥವಾಗಿದೆ.
ಈ ಪ್ರವಾಸಗ್ರಂಥವು ಮುಸ್ಲಿಮರ ಸಂಪ್ರದಾಯಗಳು, ಜೀವನವೌಲ್ಯಗಳನ್ನು ಅತ್ಯಂತ ನೈಜವಾಗಿ ಬಿಂಬಿಸಿರುವುದೇ ಇದಕ್ಕೆ ಕಾರಣವಾಗಿದೆ. ಮುಸ್ಲಿಮೇತರ ಸಮಾಜಗಳ ಬಗ್ಗೆಯೂ ಈ ಕೃತಿಯು ವಿವರಣೆಗಳನ್ನು ನೀಡಿದೆ.
ವಿಸ್ಕನ್‌ಸಿನ್ ವಿವಿಯಲ್ಲಿ ಆಫ್ರಿಕನ್ ಹಾಗೂ ಇಸ್ಲಾಮಿಕ್ ಇತಿಹಾಸದಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ರೋಸ್ ಡ್ಯುನ್ ಅವರು, ಕಲ್ಲಿಕೋಟೆಯ ಅಂತರ್ ಸಂಸ್ಕೃತಿ ಹಾಗೂ ನಾಗರಿಕತೆಗಳ ಅಧ್ಯಯನಕ್ಕಾಗಿನ ಇಬ್ನ್ ಬತೂತಾ ಅಂತರ್‌ರಾಷ್ಟ್ರೀಯ ಕೇಂದ್ರದಲ್ಲಿ 2018ರ ಡಿಸೆಂಬರ್ 4ರಿಂದ 8ರವರೆಗೆ ನಡೆಯಲಿರುವ ಪ್ರವಾಸ, ವಾಣಿಜ್ಯ, ಪರಂಪರೆ ಹಾಗೂ ಪಥ ಸಮಾವೇಶದಲ್ಲಿಯೂ ಕೂಡಾ ಾಲ್ಗೊಳ್ಳುವ ಯೋಚನೆ ಹೊಂದಿದ್ದಾರೆ.
ಬತೂತಾನ ಪ್ರವಾಸಕಥನಗಳ ಬಗ್ಗೆ ಪ್ರಶಂಸೆಗಳ ಸುರಿಮಳೆಗೈಯುವ ರೋಸ್ ಡ್ಯುನ್, ‘‘ಈ ಐತಿಹಾಸಿಕ ಯಾತ್ರಿಕನ ಪ್ರವಾಸಕಥನಗಳು ಧರ್ಮ, ಶಿಕ್ಷಣ, ರಾಜ್ಯ ರಾಜಕೀಯ, ರಾಜಮನೆತನಗಳ ಕಾರ್ಯಕ್ರಮಗಳು,ಕಾನೂನು, ಯುದ್ಧವಿದ್ಯೆ, ಲಿಂಗ ಸಂಬಂಧ, ವಾಣಿಜ್ಯ, ಕೃಷಿ, ಖಾದ್ಯ, ಉತ್ಪಾದನೆ, ಭೂಗೋಳಶಾಸ್ತ್ರ, ಸಾರಿಗೆ ಹಾಗೂ ಅನೇಕ ತೀರ ತೀರ್ಪುಗಾರರು, ಧಾರ್ಮಿಕ ವಿದ್ವಾಂಸರು, ದೊರೆಗಳು ಹಾಗೂ ರಾಜ್ಯಪಾಲರುಗಳ ಸಾಧನೆಗಳು ಹಾಗೂ ವೈಫಲ್ಯಗಳ ಕುರಿತ ಅತ್ಯಂತ ಲವಲವಿಕೆಯ, ಕೆಲವೊಮ್ಮೆ ವಿಮರ್ಶಾತ್ಮಕ ವಿವರಣೆಗಳನ್ನು ಒಳಗೊಂಡಿವೆ.
ರಿಹ್ಲಾ, 14ನೇ ಶತಮಾನದಲ್ಲಿನ ಮಾಲ್ಡೀವ್ಸ್ ದ್ವೀಪಗಳು, ಸುಡಾನ್ ಸೇರಿದಂತೆ ಪಶ್ಚಿಮ ಆಫ್ರಿಕದ ಪ್ರದೇಶಗಳ ಕುರಿತಾದ ಪ್ರತ್ಯಕ್ಷದರ್ಶಿ ವಿವರಣೆಯಿರುವ ಈಗ ಅಸ್ತಿ್ವದಲ್ಲಿರುವ ಏಕೈಕ ಗ್ರಂಥವಾಗಿದೆ.

ಮಲಬಾರ್ ಪ್ರವಾಸಕಥನ
ಇಬ್ನ್ ಬತೂತಾ ಸ್ಪೇನ್, ರಶ್ಯಾ, ಟರ್ಕಿ, ಪರ್ಷಿಯಾ, ಭಾರತ, ಚೀನಾ ಹಾಗೂ ಎಲ್ಲಾ ಅರಬ್ ನಾಡುಗಳನ್ನು ಸಂದರ್ಶಿಸಿದ್ದ. ಆದರೆ ಕಾಳುಮೆಣಸಿನ ಮುಖ್ಯ ಮಾರುಕಟ್ಟೆಯ ಕೇಂದ್ರಗಳಾಗಿದ್ದ ಮಲಬಾರ್ ಕರಾವಳಿಯ ಪಟ್ಟಣಗಳು ತುಂಬಾ ಶ್ರೀಮಂತವಾಗಿದ್ದವೆಂದು ಇಬ್ನ್ ಬತೂತಾ ತನ್ನ ಪ್ರವಾಸಕಥನದಲ್ಲಿ ಪ್ರಸ್ತಾಪಿಸಿದ್ದಾನೆ. ಚೀನಾ, ಅಲೆಕ್ಸಾಂಡ್ರಿಯಾ ಹಾಗೂ ವೆನಿಸ್ ನಗರಗಳ ಮಾರುಕಟ್ಟೆಗಳಲ್ಲಿ ಈ ಕಾಳುಮೆಣಸಿಗೆ ಅಧಿಕ ಬೆಲೆ ದೊರೆಯುತ್ತಿತ್ತು. ಹಡಗು ನಿರ್ಮಾಣಕ್ಕೆ ಬೇಕಾದ ತೇಗ ಕೂಡಾ ಈ ಪ್ರದೇಶದಿಂದ ಪೂರೈಕೆಯಾಗುತ್ತಿತ್ತು.
ಇಬ್ನ್ ಬತೂತಾ ತನ್ನ ಲೇಖನದಲ್ಲಿ ಮಲಬಾರ್ ಬಗ್ಗೆ ಉಲ್ಲೇಖಿಸಿರುವುದರಿಂದ ಸ್ಫೂರ್ತಿ ಪಡೆದ ರೋಸ್ ಡ್ಯುನ್ ಈ ವರ್ಷದ ಫೆಬ್ರವರಿಯಲ್ಲಿ ಕೋಝಿಕ್ಕೋಡ್‌ಗೆ ಭೇಟಿ ನೀಡಿದ್ದರು. ‘‘ನಾನು ಕೋಝಿಕ್ಕೋಡ್‌ನ ಮಿಸ್ಕಲ್ ಹಾಗೂ ಮುಚುಂಡಿ ಮಸೀದಿಗೆ ಭೇಟಿ ನೀಡಿದ್ದೇನೆ. ಮಿಸ್ಕಲ್ ಮಸೀದಿಯ ಬಗ್ಗೆ ನಾನು ವಿಶೇಷವಾದ ಆಸಕ್ತಿ ಹೊಂದಿದ್ದೇನೆ. ಯಾಕೆಂದರೆ ಮಸೀದಿಯ ಪೋಷಕರಾಗಿದ್ದ ನಖುದಾ ಮಿಸ್ಕಲ್ ಅವರು, ಇಬ್ನ್ ಬತೂತಾನ ಕಾಲದಲ್ಲಿ ಜೀವಿಸಿದ್ದರು.’’
  ರಿಹ್ಲಾದಲ್ಲಿ ‘ಮಿತ್ಖಾಲ್’ ಎಂದು ಹೆಸರಿಸಲ್ಪಟ್ಟಿರುವ ನಖುದಾ ಮಿಸ್ಕಲ್ ಅವರು ಹಿಂದೂ ಮಹಾಸಾಗರದ ಮೂಲಕ ದೀರ್ಘದೂರದ ಪ್ರದೇಶಗಳಿಗೆ ಸಮುದ್ರ ವ್ಯಾಪಾರ ಮಾಡುವ ಬೃಹತ್ ಉದ್ಯಮಿಗಳಲ್ಲೊಬ್ಬರಾಗಿದ್ದರು. ಅವರ ಬಗ್ಗೆ ಇಬ್ನ್ ಬತೂತಾ ಅಹ್ಲಾದಲ್ಲಿ ಹೀಗೆ ಬರೆದಿದ್ದಾರೆ. ‘‘ಕೋಝಿಕ್ಕೋಡ್ ನಗರದಲ್ಲಿ ಪ್ರಸಿದ್ಧ ಹಡಗು ಮಾಲಕ ‘ಮಿತ್ಖಾಲ್’ ವಾಸವಾಗಿದ್ದಾರೆ. ಅಪಾರ ಸಂಪತ್ತನ್ನು ಹೊಂದಿರುವ ಅವರ ಬಳಿ ಭಾರತ, ಚೀನಾ, ಅಲ್‌ಯಮನ್ ಹಾಗೂ ಫಾರ್ಸಿ ದೇಶಗಳಲ್ಲಿ ವ್ಯಾಪಾರ ನಡೆಸಲು ಹಲವಾರು ಹಡಗುಗಳಿವೆ’’.
 ಪ್ರಾಯಶಃ ಇಬ್ನ್ ಬತೂತಾ 1342ರಲ್ಲಿ ಕೋಝಿಕ್ಕೋಡ್‌ಗೆ ಭೇಟಿ ನೀಡಿದ್ದಿರಬೇಕು. ಆದರೆ ಆ ಮಸೀದಿಯು ಅವರ ಆಗಮನಕ್ಕೆ ಮೊದಲು ಅಥವಾ ಆನಂತರ ನಿರ್ಮಾಣಗೊಂಡಿದ್ದೇ ಎಂಬ ಬಗ್ಗೆ ತಾನು ಸ್ಪಷ್ಟವಾದ ನಿರ್ಧಾರವನ್ನು ಹೊಂದಿಲ್ಲವೆಂದು ರೋಸ್ ಹೇಳುತ್ತಾರೆ.
 ಇಬ್ನ್ ಬತೂತಾ ಕುರಿತ ರೋಸ್ ಅವರ ಕೃತಿಯು ಈ ತನಕ ಮೂರು ಆವೃತ್ತಿಗಳನ್ನು ಕಂಡಿದೆ. ಇದೀಗ ನಾಲ್ಕನೆಯ ಆವೃತ್ತಿಯನ್ನು ಮುದ್ರಿಸುವ ಯೋಚನೆಯನ್ನು ಅವರು ಹೊಂದಿದ್ದಾರೆ. ಈ ಮಹಾನ್ ಅರಬ್ ಪ್ರವಾಸಿಗ ಸಂದರ್ಶಿಸಿದ ಕೆಲವು ಸ್ಥಳಗಳಿಗೆ ಈ ಇತಿಹಾಸದ ಪ್ರೊಫೆಸರ್ ಭೇಟಿ ನೀಡಲು ಇದು ಕೂಡಾ ಒಂದು ಕಾರಣವಾಗಿದೆ.
 ತುಘಲಕಾಬಾದ್‌ನ ಪಾಳುಬಿದ್ದ ಅವಶೇಷಗಳು
‘‘ಕಳೆದ ಫೆಬ್ರವರಿಯಲ್ಲಿ ನನ್ನ ಪತ್ನಿ ಹಾಗೂ ನಾನು ಹೊಸದಿಲ್ಲಿಗೆ ಸಂಕ್ಷಿಪ್ತ ಭೇಟಿಯನ್ನು ನೀಡಿದೆವು. ದಿಲ್ಲಿಯ ಸುಲ್ತಾನನಾಗಿದ್ದ ಮುಹಮ್ಮದ್ ಬಿನ್ ತುಘಲಕ್‌ನ ಆಳ್ವಿಕೆಯಲ್ಲಿ ನ್ಯಾಯಾಧೀಶ ಹಾಗೂ ಆಡಳಿತಗಾರನಾಗಿ ಇಬ್ನ್ ಬತೂತಾ ಸೇವೆ ಸಲ್ಲಿಸಿದ್ದ ಪ್ರದೇಶವಾದ ದಕ್ಷಿಣ ಗ್ರೇಟರ್ ದಿಲ್ಲಿಯಲ್ಲಿನ ತುಘಲಕಾಬಾದ್‌ನ ಅವಶೇಷಗಳನ್ನು ಅನ್ವೇಷಣೆ ನಡೆಸಲು ನನಗೆ ಹೆಚ್ಚಿನ ಸಮಯ ದೊರೆತಿರಲಿಲ್ಲ’’ವೆಂದು ರೋಸ್ ಹೇಳುತ್ತಾರೆ.
ಆದರೆ ಇಬ್ನ್ ಬತೂತಾನ ಪ್ರವಾಸದ ಅನುಭವಗಳ ಬಗ್ಗೆ ಆಧುನಿಕ ಜಗತ್ತಿಗೆ ಅರಿವು ಮೂಡಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಬೇಕೆಂದು ರೋಸ್ ಪ್ರತಿಪಾದಿಸುತ್ತಾರೆ. ಈ ಮಹಾನ್ ಅರಬ್ ಪ್ರವಾಸಿಗ, ಇತ್ತೀಚಿನ ವರ್ಷಗಳಲ್ಲಿ ಸುಪರಿಚಿತನಾಗಲು ಕಾರಣವಾದ ಕೆಲವು ಅಂಶಗಳನ್ನು ರೋಸ್ ತನ್ನ ‘ದಿ ಅಡ್ವೆಂಚರರ್ಸ್‌’ ಕೃತಿಯ ಮೂರನೇ ಆವೃತ್ತಿಯ ಮುನ್ನುಡಿಯಲ್ಲಿ ವಿವರಿಸಿದ್ದಾರೆ.
  ‘‘ಅಮೆರಿಕದ ಲಕ್ಷಾಂತರ ಶಾಲಾ ಮಕ್ಕಳು ಇಬ್ನ್ ಬತೂತಾ ಬಗ್ಗೆ ತಿಳಿದುಕೊಂಡಿದ್ದಾರೆ. ಯಾಕೆಂದರೆ ಜಗತ್ತಿನ ಎಲ್ಲಾ ಇತಿಹಾಸದ ಪಠ್ಯಪುಸ್ತಕಗಳಲ್ಲಿ ಪ್ರಾಯಶಃ ಅವರ ಹೆಸರು ಸೇರ್ಪಡೆಗೊಂಡಿದೆ. ಇಬ್ನ್ ಬತೂತಾ ಬಗ್ಗೆ ಹಲವಾರು ಅಧ್ಯಯನ ಗ್ರಂಥಗಳು ಪ್ರಕಟವಾಗಿವೆ. ಆತನ ಕುರಿತಾದ ಮಕ್ಕಳ ಪುಸ್ತಕಗಳು ಹಾಗೂ ಕೆಲವು ಚಲನಚಿತ್ರಗಳು ಕೂಡಾ ಬಂದಿವೆ’’ಯೆಂದವರು ಹೇಳುತ್ತಾರೆ.
ಯೆಮನ್‌ನಲ್ಲಿ ನೆಲೆಸಿರುವ ಇಂಗ್ಲಿಷ್ ಪ್ರವಾಸ ಸಾಹಿತಿ ಹಾಗೂ ಅರೇಬಿಯನ್ ಇತಿಹಾಸ ತಜ್ಞ ಮ್ಯಾಕಿಂಟೋಶ್ ಸ್ಮಿತ್ ಅವರು, ಇಬ್ನ್ ಬತೂತಾ ಸಂಚರಿಸಿದ ಸ್ಥಳಗಳನ್ನು ಸಂದರ್ಶಿಸಿದ್ದು, ಅವರು ತನ್ನ ಅನುಭವಗಳನ್ನು ಮೂರು ಸಂಪುಟಗಳಲ್ಲಿ ಬರೆದಿದ್ದಾರೆಂದು ರೋಸ್ ನೆನಪಿಸುತ್ತಾರೆ.
‘‘ದಶಕದ ಹಿಂದೆ, ಇಬ್ನ್ ಬತೂತಾ ಬಗ್ಗೆ ಕಥಾಚಿತ್ರವೊಂದನ್ನು ನಿರ್ಮಿಸುವ ಫ್ರಾನ್ಸ್- ಮೊರಾಕ್ಕೊ ಜಂಟಿ ಯೋಜನೆಗೆ ನಾನು ಸಮಾಲೋಚಕನಾಗಿ ಪಾಲ್ಗೊಂಡಿದ್ದೆ. ಈ ಪ್ರಾಜೆಕ್ಟ್‌ಗಾಗಿ ನಾನು ಮೊರಾಕ್ಕೊಗೆ ಮೂರು ಬಾರಿ ಪ್ರವಾಸ ಕೈಗೊಂಡಿದ್ದೆ. ಆದರೆ ಈ ಯೋಜನೆಗೆ ಭಾರೀ ದೊಡ್ಡ ಮೊತ್ತದ ಹಣಕಾಸಿನ ಅಗತ್ಯವಿರುವುದರಿಂದ ಅದು ಇನ್ನಷ್ಟೇ ಕಾರ್ಯಗತಗೊಳ್ಳಬೇಕಾಗಿದೆ’’ ಎಂದು ರೋಸ್ ತಿಳಿಸಿದ್ದಾರೆ.
ಕೃಪೆ: english.alarabiya.net

Writer - ಅಫ್ತಾಬ್ ಹುಸೈನ್ ಕೋಲಾ

contributor

Editor - ಅಫ್ತಾಬ್ ಹುಸೈನ್ ಕೋಲಾ

contributor

Similar News

ಜಗದಗಲ
ಜಗ ದಗಲ