ಪಂಜಾಬ್‌ನ ಪಾವಿತ್ರ್ಯಭಂಗ ಮಸೂದೆ ಸಮರ್ಥನೀಯವೇ?

Update: 2018-09-20 18:31 GMT

ಪಂಜಾಬ್‌ನ ಕಾಂಗ್ರೆಸ್ ನೇತೃತ್ವದ ಸರಕಾರವು ಪ್ರಸ್ತಾಪಿಸಿದ ಭಾರತೀಯ ದಂಡ ಸಂಹಿತೆ (ಪಂಜಾಬ್ ತಿದ್ದುಪಡಿ)-2018 ಮಸೂದೆಯನ್ನು ಪಂಜಾಬ್‌ನ ಶಾಸನಸಭೆಯು ಅನುಮೋದಿಸಿದೆ. ಈ ಕಾಯ್ದೆಯು ಧರ್ಮಗ್ರಂಥಗಳನ್ನು ಅಪವಿತ್ರಗೊಳಿಸುವ ಅಪರಾಧಕ್ಕೆ ಜೀವಾವಧಿ ಶಿಕ್ಷೆಯನ್ನು ವಿಧಿಸಲು ಅನುವಾಗುವಂತೆ ಭಾರತೀಯ ದಂಡ ಸಂಹಿತೆಯ 295-ಎ ಕಲಮಿಗೆ ತಿದ್ದುಪಡಿ ತಂದಿದೆ. ಈ ಮಸೂದೆಯ ಪ್ರಸ್ತಾಪಕ್ಕಿದ್ದ ತತ್‌ಕ್ಷಣದ ರಾಜಕೀಯ ಸಂದರ್ಭವೆಂದರೆ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿ ದಳದ ನಡುವೆ ನಡೆಯುತ್ತಿದ್ದ ಸಂಘರ್ಷಗಳು. ಕುತೂಹಲಕಾರಿ ಸಂಗತಿಯೆಂದರೆ ಈ ಹಿಂದೆ ಅಕಾಲಿ ದಳದ ಸರಕಾರವಿದ್ದಾಗ ರಾಜ್ಯ ಸರಕಾರವು ಗುರು ಗ್ರಂಥ ಸಾಹಿಬ್ ಅನ್ನು ಅಪವಿತ್ರಗೊಳಿಸುವುದನ್ನು ಶಿಕ್ಷಾರ್ಹ ಅಪರಾಧ ಮಾಡುವ ಶಾಸನವನ್ನು ಜಾರಿಗೆ ತಂದಿತ್ತು. ಆದರೆ ಆ ಶಾಸನದ ಹಲವು ಅಂಶಗಳು ಭಾರತದ ಸಂವಿಧಾನದಲ್ಲಿರುವ ಜಾತ್ಯತೀತ ತತ್ವಗಳನ್ನು ಉಲ್ಲಂಘಿಸುತ್ತದೆಂದು 2017ರಲ್ಲಿ ಕೇಂದ್ರ ಸರಕಾರವು ಆ ಶಾಸನವನ್ನು ಹಿಂದಕ್ಕೆ ಕಳಿಸಿತ್ತು. ಪ್ರಸ್ತುತ ಸರಕಾರವು ತಮ್ಮ ಮಸೂದೆಯು ಎಲ್ಲಾ ಧರ್ಮಗಳ ಧರ್ಮಗ್ರಂಥಗಳನ್ನು ಒಳಗೊಂಡಿರುವುದರಿಂದ ಹೆಚ್ಚು ಸಮರ್ಥನೀಯವೆಂದು ಪ್ರತಿಪಾದಿಸುತ್ತಿದೆ. ‘ಸರ್ವಧರ್ಮ ಸಮಭಾವ’ ಎಂಬ ತತ್ವವನ್ನು ಹೇಗೆ ಈ ಸರಕಾರಗಳು ಧರ್ಮ ನಿರಪೇಕ್ಷ ತತ್ವಕ್ಕೆ ತದ್ವಿರುದ್ಧವಾಗಿ ಬಳಸಿಕೊಳ್ಳುತ್ತವೆ ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆಯಾಗಿದೆ. ವಾಸ್ತವವಾಗಿ ಧರ್ಮ ನಿರಪೇಕ್ಷ ತತ್ವದ ನೈಜ ಅನುಷ್ಠಾನವು ದೇವಪವಿತ್ರವೆಂದು ಮಾನ್ಯವಾದದ್ದು ಹೆಚ್ಚೆಚ್ಚು ಸಾರ್ವಜನಿಕತೆಯ ಅಧೀನಕ್ಕೊಳಪಡುತ್ತಾ ಹೋಗುವುದನ್ನು ಮತ್ತು ಪ್ರಶ್ನಾತೀತ ಪವಿತ್ರವೆಂದು ಭಾವಿಸಿಕೊಂಡಿರುವ ಸಂಗತಿಗಳು ದಿನಗಳೆದಂತೆ ಹೆಚ್ಚೆಚ್ಚು ತರ್ಕದ ಮತ್ತು ವೈಚಾರಿಕತೆಯ ನಿಕಷಕ್ಕೆ ಒಳಪಡುತ್ತಾ ಹೋಗುವುದನ್ನು ಒಳಗೊಂಡಿರುತ್ತದೆ. ಮಸೂದೆಯು ದೈವದೂಷಣೆ ಎಂಬ ಪದವನ್ನು ಬಳಸಿಲ್ಲವಾದರೂ ಅದರ ಅಂತರ್ಯದ ತರ್ಕ ಅದನ್ನೊಂದು ದೈವದೂಷಣಾ ವಿರೋಧಿ ಕಾನೂನನ್ನಾಗಿಯೇ ಮಾಡುತ್ತದೆ. ಇಂತಹ ಒಂದು ದೈವದೂಷಣಾ ಕಾನೂನುಗಳಿಂದ ಉದಾರವಾದಿ ಪ್ರಜಾತಂತ್ರಕ್ಕೆ ಯಾವ ರೀತಿ ಹಾನಿಯಾಗುತ್ತದೆಂಬ ಬಗ್ಗೆ ಮುಖ್ಯವಾಹಿನಿಯಲ್ಲಿ ಮುಂದಿಡಲಾಗುತ್ತಿರುವ ವಾದಗಳು ಧರ್ಮ ನಿರಪೇಕ್ಷ ತತ್ವದ ಬಗ್ಗೆ ಅತ್ಯಂತ ಕನಿಷ್ಠ ತಿಳುವಳಿಕೆಯ ಚೌಕಟ್ಟಿನಲ್ಲಿವೆ. ಧರ್ಮಗ್ರಂಥಗಳ ಪಾವಿತ್ರ್ಯವನ್ನು ಅಥವಾ ಅದರ ಅಲೌಕಿಕತೆಯನ್ನು ಲೌಕಿಕ ಕಾನೂನುಗಳ ಮೂಲಕ ಕಾಪಾಡುವ ಪ್ರಯತ್ನ ಮಾಡುವುದರ ಮೂಲಕ ಅದರ ಪಾವಿತ್ರ್ಯತೆಗೆ ಭಂಗ ತರಲಾಗಿದೆ ಎಂಬುದು ಈ ಕಾನೂನನ್ನು ಟೀಕಿಸುತ್ತಿರುವವರಲ್ಲಿ ಒಂದು ಗುಂಪಿನ ವಾದ ಸರಣಿ. ಈ ಮಸೂದೆಯಲ್ಲಿ ಅಂತರ್ಗತವಾಗಿರುವ ವೈರುಧ್ಯವನ್ನು ಈ ರೀತಿಯಲ್ಲಿ ಬಯಲಿಗೆಳೆಯುವ ಪ್ರಯತ್ನ ಅಪರಿಪೂರ್ಣವಾದದ್ದು. ಏಕೆಂದರೆ ಈ ತರ್ಕವು ದೈವದೂಷಣೆ ಪ್ರತಿಬಂಧಕ ಕಾಯ್ದೆಗಳನ್ನು ಜಾರಿ ಮಾಡುವುದರ ಹಿಂದಿನ ರಾಜಕೀಯ ಉದ್ದೇಶಗಳನ್ನು ಗ್ರಹಿಸುವುದರಲ್ಲಿ ವಿಫಲವಾಗುತ್ತವೆ. ಕೆಲವು ಚಿಂತನೆಗಳು/ಆಲೋಚನೆಗಳು/ರಿವಾಜುಗಳು ಮತ್ತು ಮೌಲ್ಯಗಳು ವಿಮರ್ಶೆಗೆ ಅಥವಾ ಪ್ರಶ್ನೆಗೆ ಅತೀತವಾದದ್ದು ಎಂದು ವಾದಿಸುವುದೆಂದರೆ ಕೆಲವು ಬಗೆಯ ಅಧಿಕಾರಗಳನ್ನೂ ಸಹ ವಿಮರ್ಶೆಗೆ ಮತ್ತು ಪ್ರಶ್ನೆಗೆ ಅತೀತವಾದದ್ದು ಎಂದು ಒಪ್ಪಿಕೊಳ್ಳುತ್ತಿದ್ದೇವೆಂದರ್ಥ. ಪವಿತ್ರವಾದದ್ದರ ಸೃಷ್ಟಿ, ವಿಂಗಡಣೆೆ ಮತ್ತು ವಿಸ್ತರಣೆಗಳು ಕೇವಲ ಒಂದು ಧರ್ಮ ಸಂಬಂಧಿತ ಕ್ರಿಯೆಯಾಗಿರದೇ ಒಂದು ರಾಜಕೀಯ ಪ್ರಕ್ರಿಯೆಯೂ ಆಗಿರುತ್ತದೆ. ಅದು ಅಧಿಕಾರರೂಢ ಶಕ್ತಿಗಳನ್ನು ಉಲ್ಲಂಘಿಸಲಾಗದ ರಾಜಕೀಯ ಅಡೆತಡೆಗಳನ್ನು ಹುಟ್ಟುಹಾಕುವ ರಾಜಕೀಯ ಕಸರತ್ತೇ ಆಗಿರುತ್ತದೆ. ಹೀಗಾಗಿ ಅಂಥಾ ಪವಿತ್ರವಾದದ್ದನ್ನು ರಕ್ಷಿಸಲು ಲೌಕಿಕವಾದ ಅಧಿಕಾರವನ್ನು ಬಳಸುತ್ತಿರುವುದರಲ್ಲಿ ಯಾವುದೇ ವಿಪರ್ಯಾಸವಿಲ್ಲ. ಏಕೆಂದರೆ ಲೌಕಿಕವಾದ ಅಧಿಕಾರ ರಚನೆಗಳನ್ನು ಬಲಗೊಳಿಸಿಕೊಳ್ಳಲೆಂದೇ ಪವಿತ್ರವಾದದ್ದರ ಅಧಿಕಾರ ಬಳಕೆಯಾಗುತ್ತಿರುತ್ತದೆ. ಕಾನೂನಿನ ಬಗ್ಗೆ ಇನ್ನೊಂದು ಟೀಕಾಸರಣಿಯು ಪವಿತ್ರಗ್ರಂಥಗಳ ಸಾಲಿನಲ್ಲಿ ಭಗವದ್ಗೀತೆಯನ್ನೂ ಸೇರಿಸುವ ಮೂಲಕ ದೈವದೂಷಣೆಯೆಂಬ ‘ಯೆಹೂದಿ-ಕ್ರಿಶ್ಚಿಯನ್’ ಪರಿಕಲ್ಪನೆಯೊಳಗೆ ಹಿಂದೂಧರ್ಮವನ್ನು ತಂದು ಸೇರಿಸಿದಂತಾಗಿದೆ ಎಂದು ಟೀಕಿಸುತ್ತದೆ. ಅವರ ಪ್ರಕಾರ ಇದು ಹಿಂದೂ ಸಂಪ್ರದಾಯದೊಳಗಿರುವ ಬಹುತ್ವ ಮತ್ತು ಸಹಿಷ್ಣುತೆಗಳ ನಿರಾಕರಣೆಯಾಗಿದೆ. ಆದರೆ ಈ ದೃಷ್ಟಿಕೋನವು ಇತಿಹಾಸದುದ್ದಕ್ಕೂ ನಾಸ್ತಿಕರ/ಅವೈದಿಕರ/ ಪಾಖಂಡಿಗಳಂಥ ಇನ್ನಿತರ ಧಾರಗಳ ಮೇಲೆ ಮತ್ತು ಅದಕ್ಕೆ ಸಂಬಂಧಪಟ್ಟ ವ್ಯಕ್ತಿಗಳ ಮೇಲೆ ನಡೆಯಲಾದ ದೌರ್ಜನ್ಯಗಳನ್ನು, ವಿಧಿಸಿದ ಸಾಮಾಜಿಕ ಬಹಿಷ್ಕಾರಗಳನ್ನು ಪರಿಗಣಿಸುವುದಿಲ್ಲ. ಪವಿತ್ರಗ್ರಂಥಗಳಿಗೆ ವ್ಯತಿರಿಕ್ತವಾಗಿರುವವರ ಬಗ್ಗೆ ವ್ಯಕ್ತಪಡಿಸಿರಬಹುದಾದ ತೋರಿಕೆಯ ಸಹಿಷ್ಣುತೆಗಳು ಅವನ್ನು ಆಚರಣೆಯ ಪರಿಧಿಗೆ ಅದರಲ್ಲೂ ಜಾತಿ ಗಡಿಗಳನ್ನು ಉಲ್ಲಂಘಿಸುವಂಥ ನಡೆಗಳು ಘಟಿಸಿದ ಕೂಡಲೇ ಆವಿಯಾಗಿ ಕ್ರೂರವಾದ ಮತ್ತು ಹಿಂಸಾತ್ಮಕವಾದ ಪ್ರತಿಕ್ರಿಯೆಗಳಿಗೆ ಗುರಿಯಾಗಿವೆ. ಹೀಗಾಗಿ ಈ ಎರಡನೇ ದೃಷ್ಟಿಕೋನವುಳ್ಳವರು ಭಾರತದ ಸಮಾಜದಲ್ಲಿ ಮತ್ತು ಆ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಇಂತಹ ಪಾವಿತ್ರ್ಯಭಂಗ ನಿಗ್ರಹ ಕಾಯ್ದೆಗಳು ಯಾವ್ಯಾವ ಮೂಲಗಳಿಂದ ಸಾಮಾಜಿಕ ಸಮ್ಮತಿಯನ್ನು ಪಡೆದುಕೊಳ್ಳಬಲ್ಲದು ಎಂಬುದನ್ನು ಗ್ರಹಿಸಲು ವಿಫಲವಾಗುತ್ತದೆ. ಈ ಎರಡೂ ಬಗೆಯ ವಿಮರ್ಶೆಗಳಲ್ಲಿ ಎದ್ದುಕಾಣುವ ಸಾಮ್ಯತೆಯೇನೆಂದರೆ ಯಾವುದನ್ನು ಪವಿತ್ರವೆಂದು ಭಾವಿಸಲಾಗುತ್ತಿದೆಯೋ ಅದನ್ನೇ ವಿಮರ್ಶೆಗೆ ಗುರಿ ಮಾಡುವುದರಲ್ಲಿರುವ ಹಿಂಜರಿಕೆ. ದೈವದೂಷಣೆಯೆಂದು ಪರಿಗಣಿತವಾಗುವ ಅಂತಹ ವಿಮರ್ಶೆಗಳು ಸಮಾಜದಲ್ಲಿ ಧರ್ಮ ನಿರಪೇಕ್ಷತೆಯ ತತ್ವಗಳು ಬೇರಿಳಿಯಲು ಅತ್ಯವಶ್ಯಕವಾಗಿದೆ. ಹೀಗಾಗಿ ಈ ಎರಡೂ ಬಗೆಯ ವಿಮರ್ಶೆಗಳು ಧರ್ಮ ನಿರಪೇಕ್ಷತೆಯ ಬಗ್ಗೆ ಬದ್ಧತೆಯೇ ಕಡಿಮೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ಇಂತಹ ಕಾನೂನು ಯಾವೆಲ್ಲ ರಾಜಕೀಯ ಪರಿಣಾಮಗಳಿಗೆ ಎಡೆಮಾಡಿಕೊಡಬಹುದೆಂಬುದ್ನು ಗ್ರಹಿಸುವಲ್ಲಿ ಅಸಮರ್ಥವಾಗಿವೆ.

ಇತ್ತೀಚಿನ ದಿನಗಳಲ್ಲಿ ಒಂದು ಧರ್ಮದವರ ಧಾರ್ಮಿಕ ಭಾವನೆಗಳಿಗೆ ಹಾನಿಯಾಯಿತೆಂದೋ ಆಥವಾ ಒಂದು ಸಮುದಾಯದ ಭಾವನೆಗಳಿಗೆ ಘಾಸಿಯಾಯಿತೆಂದೋ ನಾಟಕಗಳನ್ನು, ಪುಸ್ತಕಗಳನ್ನು ಮತ್ತು ಕಲಾಕೃತಿಗಳನ್ನು ನಿಷೇಧಿಸಬೇಕೆಂಬ ಕೂಗು ಹೆಚ್ಚುತ್ತಿದೆ ಹಾಗೂ ಯಾವುದೇ ಧಾರ್ಮಿಕ ಗ್ರಂಥಗಳನ್ನು ನ್ಯಾಯಸಮ್ಮತ ವಿಮರ್ಶೆಗಳಿಗೂ ಗುರಿ ಮಾಡದಂತೆ ರಕ್ಷಿಸುವ ಪ್ರಯತ್ನಗಳೂ ಹೆಚ್ಚಾಗುತ್ತಿವೆ. ಕೆಲವು ಹಿಂದುತ್ವವಾದಿ ಸಂಘಟನೆಗಳು ಮುಂಬೈನ ಎರಡು ನಾಟಕ ಪ್ರದರ್ಶನಗಳ ವಿರುದ್ಧ ಮಾಡಿದ ಬಾಂಬ್ ಸ್ಫೋಟಗಳು ಈ ವಿದ್ಯಮಾನವನ್ನು ಸ್ಪಷ್ಟಪಡಿಸುತ್ತವೆ. ಪವಿತ್ರವಾದದ್ದೆಂದು ಭಾವಿಸುವ ಸಂಗತಿಗಳನ್ನು ಲೇವಡಿ ಮಾಡುತ್ತಾ ದೇವಾನುದೇವತೆಗಳನ್ನು ವಿಡಂಬನೆ ಮಾಡುವ ಮರಾಠಿ ಜಾನಪದದ ಶ್ರೀಮಂತ ಪರಂಪರೆಯನ್ನು ಆಧರಿಸಿ ಪ್ರದರ್ಶಿತವಾಗುತ್ತಿದ್ದ ಮರಾಠಿ ನಾಟಕಗಳ ವಿರುದ್ಧ ಈ ಬಾಂಬ್ ಸ್ಫೋಟಗಳು ನಡೆದವು. ಬಹುತ್ವವನ್ನು ಹೀಗೆ ಜನಪ್ರಿಯಗೊಳಿಸುವ ಪ್ರಯತ್ನವು ಸಂಪ್ರದಾಯಗಳ ಈ ಸ್ವಘೋಷಿತ ರಕ್ಷಕರ ಕಣ್ಣನ್ನು ಕೆಂಪಾಗಿಸಿತ್ತು. ವಿವಿಧ ಸಮುದಾಯಗಳು ಮತ್ತು ಗುಂಪುಗಳ ಆಗ್ರಹವನ್ನು ಎದುರಿಸುತ್ತಿರುವ ಇತರ ರಾಜ್ಯಗಳಿಗೆ ಪಂಜಾಬ್ ಈಗ ಮಾದರಿಯಾಗಿಬಿಡಬಹುದು. ಪಂಜಾಬ್ ಸರಕಾರ ತರುತ್ತಿರುವ ಕಾನೂನಿನ ಪ್ರಕಾರ ಯಾವುದೇ ಧರ್ಮದ/ಸಮುದಾಯದ ಆಚರಣೆ, ನಂಬಿಕೆ, ರಿವಾಜುಗಳ ಬಗ್ಗೆ ಮಾಡಬಹುದಾದ ಯಾವುದೇ ಟೀಕೆಗಳನ್ನು ನಿರ್ಬಂಧಿಸಬಹುದು. ಏಕೆಂದರೆ ಇಂತಹ ದೈವದೂಷಣೆ ಪ್ರತಿಬಂಧಕ ಕಾನೂನುಗಳು ಆಯಾ ಸಮುದಾಯದ ಪ್ರಬಲರು ಮಾಡುವ ವ್ಯಾಖ್ಯಾನವನ್ನೇ ಅಧಿಕೃತವಾದದ್ದೆಂದು ಸ್ವೀಕರಿಸಿ ಉಳಿದದ್ದೆಲ್ಲವನ್ನು ದೈವದೂಷಣೆಯೆಂದು ವರ್ಗೀಕರಿಸಿಬಿಡುತ್ತದೆ. ಇದೆಲ್ಲಕ್ಕಿಂತ ಹೆಚ್ಚಿನ ಅಪಾಯಕಾರಿ ಸಾಧ್ಯತೆಯೇನೆಂದರೆ ಇಂತಹ ಕಾನೂನುಗಳು ಪ್ರಬಲ ಸಮುದಾಯದ ತೀವ್ರಗಾಮಿ ಮತ್ತು ದೊಂಬಿಕೋರ ಗುಂಪುಗಳ ಹಲ್ಲೆಕೋರ ಚಟುವಟಿಕೆಗಳಿಗೆ ಕಾನೂನಿನ ಪ್ರತ್ಯಕ್ಷ ಅಥವಾ ಪರೋಕ್ಷ ರಕ್ಷೆಯನ್ನು ಸೂಚಿಸುವುದು. ಹೀಗಾಗಿ ಈ ಕಾಯ್ದೆಯನ್ನು ಸಮಾಜದಲ್ಲಿ ದೊಂಬಿ ಮತ್ತು ಹಲ್ಲೆಗಳನ್ನು ಪರೋಕ್ಷವಾಗಿ ಶಾಸನಬದ್ಧಗೊಳಿಸುವ ದೊಂಬಿಕೋರ ಕಾಯ್ದೆಯೆಂದೇ ಪರಿಗಣಿಸಬೇಕಿದೆ. ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆಯು ಯಾವ ರೀತಿ ಗೋ ರಕ್ಷಕರ ಪ್ರಾಣಾಂತಿಕ ಪುಂಡಾಟಿಕೆಗೆ ದಾರಿ ಮಾಡಿಕೊಟ್ಟಿತೆಂಬುದನ್ನು ನಾವು ಗಮನಿಸಿದ್ದೇವೆ. ವ್ಯಕ್ತಿಗಳ ವಿರುದ್ಧ ಮತ್ತು ಸಮುದಾಯಗಳ ವಿರುದ್ಧ ಸಮಾಜದಲ್ಲಿ ಎಡೆಬಿಡದೆ ನಡೆಯುತ್ತಿರುವ ದ್ವೇಷ ಪೂರಿತ ಅಪರಾಧಗಳು ಮತ್ತು ಪ್ರಚಾರಗಳು ಎಗ್ಗುಸಿಗ್ಗಿಲ್ಲದೆ ಮುಂದುವರಿದಿದ್ದರೂ ಪವಿತ್ರ ಗ್ರಂಥಗಳಿಗೆ ಮಾತ್ರ ಶಾಸನಬದ್ಧ ರಕ್ಷಣೆಯನ್ನು ಒದಗಿಸಲು ನಡೆದಿರುವ ಈ ಪ್ರಯತ್ನಗಳು ಯಾವ ವೇಗದಲ್ಲಿ ಸಮಾಜದಲ್ಲಿ ಮತ್ತು ರಾಜಕಾರಣದಲ್ಲಿ ಧರ್ಮನಿರಪೇಕ್ಷತೆಯ ತತ್ವಗಳು ಕಣ್ಮರೆಯಾುತ್ತಿವೆಯೆಂಬುದನ್ನು ಸೂಚಿಸುತ್ತದೆ.

ಕೃಪೆ: Economic and Political Weekly

Writer - ಕನ್ನಡಕ್ಕೆ: ಶಿವಸುಂದರ್

contributor

Editor - ಕನ್ನಡಕ್ಕೆ: ಶಿವಸುಂದರ್

contributor

Similar News

ಜಗದಗಲ
ಜಗ ದಗಲ