ರಾಮಮಂದಿರ ವಿವಾದ ಮತ್ತೆ ಕೆದಕಿದ ಅಮಿತ್ ಶಾ

Update: 2018-09-21 04:56 GMT

ಹೊಸದಿಲ್ಲಿ, ಸೆ.21: ರಾಮಮಂದಿರ ವಿವಾದವನ್ನು ಮತ್ತೆ ಕೆದಕಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಅಯೋಧ್ಯೆಯಲ್ಲಿ ರಾಮಮಂದಿರ ಕೆಡವಿದ್ದು ನಿಜ. ಇಲ್ಲಿನ ಜಾಗದ ಒಡೆತನದ ಬಗೆಗಿನ ವಿವಾದದ ನಡುವೆ ಅದನ್ನು ಮರೆ ಮಾಚಲಾಗದು ಎಂದು ಹೇಳಿದ್ದಾರೆ.

 "ರಾಮಮಂದಿರ ಕೆಡವಿದ್ದನ್ನು ಇಡೀ ವಿವಾದದಿಂದ ಪ್ರತ್ಯೇಕಿಸಲಾಗದು. ನಾವು ಚರ್ಚಿಸುವಾಗ, 600 ವರ್ಷಗಳ ಹಿಂದೆ ಈ ಸ್ಥಳದಲ್ಲಿ ನಡೆದ ಘಟನೆಯನ್ನು ಮರೆಯಲಾಗದು ಎಂದು ಹೇಳಿದ್ದಾರೆ. ಇಲ್ಲಿನ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಪತ್ರಕರ್ತ ಹೇಮಂತ್ ಶರ್ಮಾ ಅವರ "ಅಯೋಧ್ಯಾ ಕೆ ಚಷ್ಮಡೀಡ್" ಮತ್ತು "ಯುದ್ಧ್ ಮೇ ಅಯೋಧ್ಯಾ" ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹಾಗೂ ಗೃಹಸಚಿವ ರಾಜನಾಥ್ ಸಿಂಗ್ ಕೂಡಾ ಈ ಸಂದರ್ಭ ಹಾಜರಿದ್ದರು.

ಅಯೋಧ್ಯೆ ವಿವಾದವನ್ನು ಐವರು ನ್ಯಾಯಾಧೀಶರ ಪೂರ್ಣಪೀಠಕ್ಕೆ ವರ್ಗಾಯಿಸಬೇಕೇ ಎಂಬ ಬಗ್ಗೆ ಸುಪ್ರೀಂಕೋರ್ಟ್ ಚಿಂತನೆ ನಡೆಸುತ್ತಿರುವ ನಡುವೆಯೇ ಶಾ ಈ ಹೇಳಿಕೆ ನೀಡಿದ್ದಾರೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಅಕ್ಟೋಬರ್ 2ರಂದು ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಆದೇಶವನ್ನು ನಿರೀಕ್ಷಿಸಲಾಗಿದೆ.

''ಅಗತ್ಯವಾದ ಎಲ್ಲ ಸಾಂವಿಧಾನಿಕ ವಿಧಾನಗಳ ಮೂಲಕ ಈ ಜಾಗದಲ್ಲಿ ರಾಮಮಂದಿರ ನಿರ್ಮಿಸಬೇಕು ಎನ್ನುವುದು ಬಿಜೆಪಿ ನಿಲುವಾಗಿದೆ. ಇಡೀ ವಿವಾದದ ಮೂಲ ಕಾರಣ ಅಲ್ಲಿ ದೇವಾಲಯ ಇತ್ತು ಎನ್ನುವುದು. ಇದನ್ನು 16ನೇ ಶತಮಾನದಲ್ಲಿ ಕೆಡವಲಾಗಿದೆ. ಹಿಂದೂಗಳಲ್ಲಿ ರಾಮ ಅತ್ಯಂತ ಪೂಜನೀಯ ದೇವರಾಗಿದ್ದು, ಪ್ರತಿ ಗ್ರಾಮಗಳಲ್ಲೂ ರಾಮಭಕ್ತರಿದ್ದಾರೆ. ಅಯೋಧ್ಯೆಯಲ್ಲಿ ದೇಗುಲ ಧ್ವಂಸಗೊಳಿಸಿದ ಬಳಿಕ ಇವರೆಲ್ಲರೂ ತಾಳ್ಮೆಯಿಂದ ನೂರಾರು ವರ್ಷ ಇದ್ದರು'' ಎಂದು ಶಾ ಹೇಳಿದ್ದಾರೆ.

"ಆದರೆ ಜನ ತಮ್ಮ ತಾಳ್ಮೆ ಕಳೆದುಕೊಂಡ ಕ್ಷಣ, ರಾಮ ಜನ್ಮಭೂಮಿಯಲ್ಲಿ ಭವ್ಯ ದೇಗುಲು ನಿರ್ಮಾಣಕ್ಕಾಗಿ ಸ್ವಾತಂತ್ರ್ಯೋತ್ತರ ಭಾರತದ ಅತಿದೊಡ್ಡ ಚಳವಳಿ ಭುಗಿಲೆದ್ದಿದೆ" ಎಂದು ಷಾ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News