ಲೆಜಿನಾಯರ್ಸ್ ಕಾಯಿಲೆಯ ಬಗ್ಗೆ ನಿಮಗೆಷ್ಟು ಗೊತ್ತು...?

Update: 2018-09-21 09:42 GMT

ನ್ಯುಮೋನಿಯಾ ತಕ್ಷಣವೇ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯದಿದ್ದರೆ ರೋಗಿಯ ಪ್ರಾಣಕ್ಕೇ ಕುತ್ತು ತರುವ ರೋಗವಾಗಿದೆ. ಲೆಜಿನಾಯರ್ಸ್ ಕಾಯಿಲೆ ನ್ಯುಮೋನಿಯಾದ ಅತ್ಯಂತ ತೀವ್ರ ರೂಪಗಳಲ್ಲೊಂದಾಗಿದೆ. ಇದು ಗಂಭೀರ ಶ್ವಾಸಕೋಶ ಉರಿಯೂತವನ್ನುಂಟು ಮಾಡುವ ಸೋಂಕು ಆಗಿದೆ. ಲೆಜಿನಾಯರ್ಸ್ ಸಾಂಕ್ರಾಮಿಕವಲ್ಲದಿದ್ದರೂ ವ್ಯಕ್ತಿಯು ಈ ಕಾಯಿಲೆಗೆ ತುತ್ತಾದಾಗ ತಕ್ಷಣದ ವೈದ್ಯಕೀಯ ಚಿಕಿತ್ಸೆ ಅಗತ್ಯವಾಗುತ್ತದೆ.

ಲೆಜಿನೆಲ್ಲಾ ಎಂಬ ಬ್ಯಾಕ್ಟೀರಿಯಾ ಈ ಕಾಯಿಲೆಯನ್ನುಂಟು ಮಾಡುತ್ತದೆ. ಜನರು ಸಾಮಾನ್ಯವಾಗಿ ಈ ಬ್ಯಾಕ್ಟೀರಿಯಾವನ್ನು ಉಸಿರಾಡುವ ಮೂಲಕ ಕಾಯಿಲೆಗೆ ತುತ್ತಾಗುತ್ತಾರೆ. ಈ ಬ್ಯಾಕ್ಟೀರಿಯಾ ಫ್ಲೂವನ್ನೇ ಹೋಲುವ ಪಾಂಟಿಯಾಕ್ ಜ್ವರವೆಂದು ಕರೆಯಲ್ಪಡುವ ಸೌಮ್ಯ ಸ್ವರೂಪದ ಅಸ್ವಸ್ಥತೆಗೂ ಕಾರಣವಾಗಬಲ್ಲುದು. ಕೆಲವೊಮ್ಮೆ ಲೆಜಿನಾಯರ್ಸ್ ಕಾಯಿಲೆಯು ಶ್ವಾಸಕೋಶಗಳ ಉರಿಯೂತ ದೊಂದಿಗೆ ಈ ಜ್ವರದ ಲಕ್ಷಣಗಳನ್ನು ಪ್ರಕಟಿಸುತ್ತದೆ. 1977ರಲ್ಲಿ ಪತ್ತೆ ಹಚ್ಚಲಾದ ಈ ಕಾಯಿಲೆಯು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ.

ಈ ಕಾಯಿಲೆಯನ್ನುಂಟು ಮಾಡುವ ಬ್ಯಾಕ್ಟೀರಿಯಾ ಸಾಮಾನ್ಯವಾಗಿ ನದಿ,ಸರೋವರ ಮತ್ತು ತೊರೆಗಳಂತಹ ಸಿಹಿನೀರಿನ ಮೂಲಗಳಲ್ಲಿ ಕಂಡು ಬರುತ್ತದೆ. ಇದು ಬೆಚ್ಚಗಿನ ನೀರಿನಲ್ಲಿ ಹುಲುಸಾಗಿ ಬೆಳೆಯುತ್ತವೆ. ಕಲುಷಿತ ನೀರಿನ ಪೂರೈಕೆಯೊಂದಿಗೆ ಈ ಬ್ಯಾಕ್ಟೀರಿಯಾ ಹರಡುತ್ತದೆ.

ಈ ಸೂಕ್ಷ್ಮಬ್ಯಾಕ್ಟೀರಿಯಾಗಳು ನೀರಿನ ಆವಿಯಲ್ಲಿಯೂ ಸೇರಿಕೊಂಡಿರುತ್ತವೆ ಮತ್ತು ಸೌನಾ ಬಾತ್ ಅಥವಾ ಹಾಟ್ ಟಬ್ ಬಳಕೆಯ ಸಂದರ್ಭದಲ್ಲಿ ಉಸಿರಾಟದ ಮೂಲಕ ನಮ್ಮ ಶ್ವಾಸಕೋಶಗಳನ್ನು ಸೇರಿಕೊಳ್ಳುತ್ತವೆ. ಸೂಕ್ತ ನಿರ್ವಹಣೆಯಿಲ್ಲದ ನೀರಿನ ಕಾರಂಜಿಗಳು,ಈಜುಕೊಳಗಳು, ಪ್ರವಾಸಿ ಹಡಗುಗಳು ಮತ್ತು ಜಿಮ್‌ಗಳಲ್ಲಿಯೂ ಲೆಜಿನೆಲ್ಲಾ ಬ್ಯಾಕ್ಟೀರಿಯಾಗಳು ಇರುತ್ತವೆ. ಮಿಸ್ಟ್ ಸ್ಪ್ರೇಯರ್‌ಗಳು ಮತ್ತು ಏರ್‌ಕಂಡಿಷನ್ ಯಂತ್ರಗಳೂ ಈ ಬ್ಯಾಕ್ಟೀರಿಯಾಗಳಿಂದ ಕಲುಷಿತಗೊಳ್ಳಬಹುದು.

 ಈ ಬ್ಯಾಕ್ಟೀರಿಯಾ ನಮ್ಮ ಶರೀರವನ್ನು ಪ್ರವೇಶಿಸಿದ 2ರಿಂದ 10 ದಿನಗಳಲ್ಲಿ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸ್ನಾಯುಗಳಲ್ಲಿ ನೋವು,ಚಳಿ,ತೀವ್ರ ಜ್ವರ ಮತ್ತು ತಲೆನೋವು ಈ ಕಾಯಿಲೆಯ ಆರಂಭಿಕ ಲಕ್ಷಣಗಳಾಗಿವೆ. ಮೂರನೇ ದಿನದಿಂದ ಗೊಂದಲದಂತಹ ಮಾನಸಿಕ ಬದಲಾವಣೆಗಳು,ವಾಂತಿ,ಅತಿಸಾರ ಮತ್ತು ವಾಕರಿಕೆಯಂತಹ ಜಠರಗರುಳಿನ ಸಮಸ್ಯೆಗಳು,ಎದೆನೋವು,ಕಫದೊಂದಿಗೆ ಕೆಮ್ಮು(ಕೆಲವೊಮ್ಮೆ ರಕ್ತದೊಂದಿಗೆ) ಮತ್ತು ಉಸಿರಾಟದಲ್ಲಿ ತೊಂದರೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಕಾಯಿಲೆಯು ಶರೀರದ ಯಾವುದೇ ಭಾಗದಲ್ಲಿರುವ ಗಾಯಗಳಲ್ಲಿ ಸೋಂಕನ್ನುಂಟು ಮಾಡಬಹುದು.

 ಸಕಾಲದಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ನೀಡುವ ಮೂಲಕ ಈ ಕಾಯಿಲೆಯನ್ನು ಗುಣಪಡಿಸಬಹುದಾಗಿದೆ. ಈ ಕಾಯಿಲೆಯೊಂದಿಗೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಪಾಂಟಿಯಾಕ್ ಜ್ವರದ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ ಮತ್ತು ಅದು ತನ್ನಿಂತಾನೆ ಶಮನಗೊಳ್ಳುವುದರಿಂದ ನಿರ್ದಿಷ್ಟ ಚಿಕಿತ್ಸೆಯೂ ಬೇಕಾಗಿಲ್ಲ. ಈ ಕಾಯಿಲೆಯನ್ನು ಜನರಲ್ ಫಿಜಿಷಿಯನ್‌ಗಳೇ ವಾಸಿ ಮಾಡುತ್ತಾರೆ. ಆದರೆ ರೋಗಿಯ ಸ್ಥಿತಿಯು ಗಂಭೀರವಾಗಿದ್ದರೆ ತಜ್ಞವೈದ್ಯರನ್ನು ಭೇಟಿಯಾಗುವಂತೆ ಅವರು ಸೂಚಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News