ಜಮ್ಮು ಕಾಶ್ಮೀರ ಪೊಲೀಸರು ರಾಜೀನಾಮೆ ನೀಡಿದ್ದಾರೆಂಬ ಸುದ್ದಿ ಸುಳ್ಳು ಎಂದ ಗೃಹ ಸಚಿವಾಲಯ

Update: 2018-09-21 11:40 GMT

ಹೊಸದಿಲ್ಲಿ,ಸೆ.21 : ಹಿಜ್ಬುಲ್ ಉಗ್ರರಿಂದ ಮೂವರು ಪೊಲೀಸ್ ಸಿಬ್ಬಂದಿಗಳ ಅಪಹರಣ ಮತ್ತು ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರ ಪೊಲೀಸರು ರಾಜೀನಾಮೆ ನೀಡಿದ್ದಾರೆಂಬ ವರದಿಗಳನ್ನು ಕೇಂದ್ರ ನಿರಾಕರಿಸಿದೆಯಲ್ಲದೆ ಇಂತಹ ವರದಿಗಳು 'ಸುಳ್ಳು ಸುದ್ದಿಗಳು' ಎಂದು ಹೇಳಿದೆ.

ಗೃಹ ವ್ಯವಹಾರಗಳ ಸಚಿವಾಲಯ ಹೇಳಿಕೆ ನೀಡಿ ಜಮ್ಮು ಕಾಶ್ಮೀರದ ಸ್ಪೆಶಲ್ ಪೊಲೀಸ್ ಅಧಿಕಾರಿಗಳ್ಯಾರೂ ರಾಜೀನಾಮೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.

"ಸುಮಾರು 30,000ಕ್ಕಿಂತಲೂ ಅಧಿಕ ವಿಶೇಷ ಪೊಲೀಸ್ ಅಧಿಕಾರಿಗಳಿದ್ದಾರೆ. ಅವರ ಸೇವೆಗಳನ್ನು ಆಗಾಗ ಪರಿಶೀಲಿಸಲಾಗುತ್ತದೆ. ಆದರೆ ಯಾರ ಸೇವೆಗಳನ್ನು ಆಡಳಿತಾತ್ಮಕ ಕಾರಣಗಳಿಗಾಗಿ ನವೀಕರಿಸಲಾಗಿಲ್ಲವೋ ಅವರು ರಾಜೀನಾಮೆ ನೀಡಿದ್ದಾರೆಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ,'' ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.

ಜಮ್ಮು ಕಾಶ್ಮಿರದಲ್ಲಿ ವೃತ್ತಿಪರ ಮತ್ತು  ಬದ್ಧತೆಯುಳ್ಳ ಪೊಲೀಸ್ ಪಡೆಯಿದ್ದು ಯಾವುದೇ ಭದ್ರತಾ ಸವಾಲನ್ನು ಎದುರಿಸಲೂ ಅವರು ಸನ್ನದ್ಧರಾಗಿದ್ದಾರೆ ಎಂದು ಸಚಿವಾಲಯ ಹೇಳಿದೆ.

ಉಗ್ರರಿಂದ ಶೊಪಿಯನ್ ಜಿಲ್ಲೆಯಿಂದ ಅಪಹರಿಸಲ್ಪಟ್ಟ ಕೆಲವೇ ಗಂಟೆಗಳಲ್ಲಿ ಮೂವರು ಪೊಲೀಸ್ ಸಿಬ್ಬಂದಿಗಳ  ಮೃತದೇಹ ತೋಟವೊಂದರಲ್ಲಿ ಪತ್ತೆಯಾಗಿತ್ತು. ಈ ಘಟನೆ ಪೊಲೀಸ್ ಇಲಾಖೆಯಲ್ಲಿ ಆತಂಕ ಸೃಷ್ಟಿಸಿತ್ತಲ್ಲದೆ ಕನಿಷ್ಠ ಇಬ್ಬರು ಪೊಲೀಸ್ ಸಿಬ್ಬಂದಿಗಳು ವೀಡಿಯೋ ಸಂದೇಶದಲ್ಲಿ ತಾವು  ಪೊಲಿಸ್ ಇಲಾಖೆಯಿಂದ ಹೊರ ಬಂದಿದ್ದಾಗಿ ಹೇಳಿಕೊಂಡಿದ್ದರೆಂದು ಕೆಲ ವರದಿಗಳು ತಿಳಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News