ಸರಕಾರ ನನ್ನ ಧ್ವನಿ ಅಡಗಿಸಲು ಯತ್ನಿಸುತ್ತಿದೆ: ಸೊಹ್ರಾಬುದ್ದೀನ್ ಪ್ರಕರಣ ಬೇಧಿಸಿದ ಪೊಲೀಸ್ ಅಧಿಕಾರಿಯ ಆರೋಪ

Update: 2018-09-21 15:35 GMT

ಹದಿಮೂರು ವರ್ಷಗಳ ಹಿಂದೆ, ವಸಂತ್ ಲಾಲ್‍ ಜಿ ಭಾಯ್ ಸೋಲಂಕಿ ಎಂಬ ಗುಜರಾತ್‍ನ ನಿಷ್ಠಾವಂತ ಪೊಲೀಸ್ ಅಧಿಕಾರಿಗೆ ಸೊಹ್ರಾಬುದ್ದೀನ್ ಶೇಖ್, ಆತನ ಪತ್ನಿ ಕೌಸರ್ ಬಿ ಮತ್ತು ಸಹಚರ ತುಳಸಿ ಪ್ರಜಾಪತಿಯ ಎನ್‍ಕೌಂಟರ್ ಪ್ರಕರಣದ ತನಿಖೆಯ ಹೊಣೆ ವಹಿಸಲಾಯಿತು. ಸುದೀರ್ಘ ವಿಚಾರಣೆ ಬಳಿಕ, ಸೋಲಂಕಿ ಈ ಎನ್‍ಕೌಂಟರ್‍ಗಳು ನಕಲಿ ಎಂಬ ನಿರ್ಭೀತ ವರದಿ ನೀಡಿದರು ಹಾಗೂ ಈ ಕಾನೂನುಬಾಹಿರ ಹತ್ಯೆಗಳಿಗೆ ಕಾರಣರಾದ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಹೆಸರಿಸಿದರು. ನಕಲಿ ಎನ್‍ಕೌಂಟರ್ ಎನ್ನಲಾಗುವ ಹಲವು ಆರೋಪಗಳು ಕೇಳಿಬಂದರೂ, ಇಂತಹ ತನಿಖೆ ನಡೆಯುವುದು ವಿರಳ.

ಈ ಹತ್ಯೆ ಪ್ರಕರಣದಲ್ಲಿ ಹಲವು ಪೊಲೀಸ್ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಸೋಲಂಕಿ ಹೇಳಿದ್ದಲ್ಲದೇ, ಪ್ರಸಕ್ತ ಬಿಜೆಪಿ ಅಧ್ಯಕ್ಷರಾಗಿರುವ ಅಮಿತ್ ಶಾ ಅವರು ಕೂಡಾ ಈ ಸಂಚಿನಲ್ಲಿ ಶಾಮೀಲಾಗಿದ್ದು, ಅವರು ಕೂಡಾ ಇದಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ಸೋಲಂಕಿ ಅಂದು ಆರೋಪಿಸಿದ್ದರು.

ಈ ಹತ್ಯೆ ಪ್ರಕರಣದ ವಿಚಾರಣೆಯನ್ನು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಕೈಗೆತ್ತಿಕೊಂಡ ಬಳಿಕ, ಇಡೀ ಪ್ರಯತ್ನ ನಿಷ್ಪ್ರಯೋಜಕವಾಯಿತು. 2014ರ ಮೇ ತಿಂಗಳ ಬಳಿಕ ಸಿಬಿಐನ ಆಸಕ್ತಿ ಕೊರತೆ ಮತ್ತು ಸಾಕ್ಷಿಗಳು ವ್ಯತಿರಿಕ್ತ ಹೇಳಿಕೆ ನೀಡಿದರೂ, ಸೋಲಂಕಿ ತಮ್ಮ ನಿಲುವಿಗೆ ಬದ್ಧರಾದರು. ಪೊಲೀಸ್ ಇಲಾಖೆ ಹಾಗೂ ಆಡಳಿತಾರೂಢ ಬಿಜೆಪಿಯಿಂದ ತೀವ್ರ ಒತ್ತಡ ಮತ್ತು ಬೆದರಿಕೆ ಇದೆ ಎಂದು ಸೋಲಂಕಿ ಆರೋಪಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐ ನ್ಯಾಯಾಲಯದ ಮುಂದೆ ಸಾಕ್ಷಿ ನುಡಿಯಲು ಕಾಯುತ್ತಿರುವ ಅವರನ್ನು "ದ ವೈರ್" ಸಂದರ್ಶನ ನಡೆಸಿದ್ದು, ನ್ಯಾಯಾಲಯಕ್ಕೆ ಹಾಜರಾಗದಂತೆ ಮಾಡಲು ಸರ್ಕಾರ ಎಲ್ಲ ತಂತ್ರಗಳನ್ನೂ ಅನುಸರಿಸುತ್ತಿದೆ ಎಂದು ಸೋಲಂಕಿ ಆರೋಪಿಸಿದ್ದಾರೆ.

ಇತ್ತೀಚಿನ ಇಂತಹ ಪ್ರಯತ್ನವೆಂದರೆ, ಒಂಬತ್ತು ವರ್ಷಗಳ ಹಿಂದೆ ಸುಪ್ರೀಂಕೋರ್ಟ್ ನಿರ್ದೇಶನದ ಅನ್ವಯ ರಾಜ್ಯ ಸರ್ಕಾರ ಇವರಿಗೆ ನೀಡಿದ್ದ ಭದ್ರತೆಯನ್ನು ದಿಢೀರನೇ ವಾಪಾಸು ಪಡೆದಿರುವುದು.

ಸೋಲಂಕಿ ಈ ತಿಂಗಳ 21ರಂದು ನ್ಯಾಯಾಲಯದ ಮುಂದೆ ಸಾಕ್ಷಿ ನೀಡಲು ಹಾಜರಾಗಬೇಕಿತ್ತು. ಆದರೆ ತಮಗೆ ನೀಡಿದ ಭದ್ರತೆಯನ್ನು ಮರಳಿ ನೀಡುವವರೆಗೂ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಒಬ್ಬ ಹಾಲಿ ನ್ಯಾಯಾಧೀಶ ಹಠಾತ್ತನೇ ಸಾಯುತ್ತಾರೆ ಎಂದಾದರೆ, ನಾನೊಬ್ಬ ನಿವೃತ್ತ ಪೊಲೀಸ್ ಇನ್‍ಸ್ಪೆಕ್ಟರ್ ಮಾತ್ರ. ಸರ್ಕಾರ ಹಾಗೂ ಪೊಲೀಸರು ಈ ಪ್ರಕರಣದ ಆರೋಪಿಗಳಿಗೆ ಕ್ಲೀನ್ ಚಿಟ್ ಪಡೆಯಲು ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ. ಅವರು ಸಾಯಿಸಲೂಬಹುದು" ಎಂದು ಅವರು ಹೇಳುತ್ತಾರೆ. ನಾಗ್ಪುರದಲ್ಲಿ 2014ರ ಡಿಸೆಂಬರ್ 1ರಂದು ಸಿಬಿಐ ನ್ಯಾಯಾಧೀಶ ಬ್ರಿಜ್‍ಗೋಪಾಲ್ ಹರಿಕಷನ್ ಲೋಯಾ ದಿಢೀರನೇ ಸಾಯುವ ಕೆಲವೇ ದಿನಗಳಿಗೆ ಮುನ್ನ ಅವರ ಭದ್ರತೆಯನ್ನು ಕೂಡಾ ಹಿಂದಕ್ಕೆ ಪಡೆಯಲಾಗಿತ್ತು ಎಂದು ಸೋಲಂಕಿ ಉಲ್ಲೇಖಿಸುತ್ತಾರೆ.

ನಿಗೂಢವಾಗಿ ಭದ್ರತೆ ರದ್ದು

ಒಂದು ದಶಕದ ಹಿಂದೆ ಸೊಹ್ರಾಬುದ್ದೀನ್ ಪ್ರಕರಣದ ತನಿಖೆಗೆ ನಿಯುಕ್ತರಾದ ಬಳಿಕ ಇವರು ಮಾಧ್ಯಮಕ್ಕೆ ನೀಡುತ್ತಿರುವ ಮೊಟ್ಟಮೊದಲ ಸಂದರ್ಶನ ಇದಾಗಿದೆ. 2009ರಿಂದ ಇದುವರೆಗೂ ಸ್ವಯಂಚಾಲಿತ ರೈಫಲ್ ಹೊಂದಿದ್ದ ಇಬ್ಬರು ಪೊಲೀಸರನ್ನು ತಮ್ಮ ರಕ್ಷಣೆಗೆ ನೀಡಲಾಗಿತ್ತು. ಆದರೆ 2018ರ ಜುಲೈ 18ರಂದು, ಭದ್ರತಾ ಅಧಿಕಾರಿಗಳು ಇದ್ದಕ್ಕಿದ್ದಂತೆ ಬರುವುದನ್ನು ನಿಲ್ಲಿಸಿದರು. "ನನಗೆ ದಿನದ 24 ಗಂಟೆಯೂ ಭದ್ರತೆ ಒದಗಿಸಲಾಗಿತ್ತು. 2009ರಲ್ಲಿ ಸುಪ್ರೀಂಕೋರ್ಟ್ ನೀಡಿದ ನಿರ್ದೇಶನದ ಬಳಿಕ ಈ ವ್ಯವಸ್ಥೆ ಮಾಡಲಾಗಿತ್ತು. ಅದೇ ವರ್ಷ ನಾನು ಸೇವೆಯಿಂದ ನಿವೃತ್ತನಾದೆ. ಈ ವರ್ಷದ ಜುಲೈ 18ರಂದು, ಭದ್ರತಾ ಅಧಿಕಾರಿಗಳು ನನ್ನ ಮನೆಗೆ ಬರುವುದನ್ನು ನಿಲ್ಲಿಸಿದರು. ಈ ದಿಢೀರ್ ನಿರ್ಧಾರಕ್ಕೆ ಯಾವ ಕಾರಣವನ್ನೂ ನೀಡಿಲ್ಲ" ಎಂದು ಸೋಲಂಕಿ ಹೇಳುತ್ತಾರೆ.

ಆ ಬಳಿಕ ಸೋಲಂಕಿ ಕನಿಷ್ಠ ಎಂಟು ಪತ್ರಗಳನ್ನು ರಾಜ್ಯ ಪೊಲೀಸ್ ಇಲಾಖೆ, ಸುಪ್ರೀಂಕೋರ್ಟ್, ಗುಜರಾತ್ ಹೈಕೋರ್ಟ್ ಮತ್ತು ವಿಚಾರಣೆ ನಡೆಸುತ್ತಿರುವ ಸಿಬಿಐ ನ್ಯಾಯಾಧೀಶರಿಗೆ ಬರೆದಿದ್ದಾರೆ. ಆದರೆ ಯಾವ ಪ್ರಯೋಜನವೂ ಆಗಿಲ್ಲ.

"ನನ್ನ ಬಗ್ಗೆ ಹಾಗೂ ಕುಟುಂಬದ ಭದ್ರತೆ ಬಗ್ಗೆ ನನಗೆ ಭೀತಿ ಉಂಟಾಗಿದೆ. ಎಲ್ಲ ಇಲಾಖೆಗಳಿಗೆ ನಾನು ಪತ್ರ ಬರೆದಿದ್ದು, ಯಾವುದಾದರೂ ಮಧ್ಯಪ್ರವೇಶಿಸುತ್ತದೆ ಎಂಬ ನಿರೀಕ್ಷೆಯಲ್ಲಿದ್ದೆ. ಆದರೆ ಎಲ್ಲರೂ ಮೌನ ವಹಿಸಿದ್ದಾರೆ. ಎರಡು ತಿಂಗಳ ಬಳಿಕ ಅಂದರೆ ಸೆಪ್ಟೆಂಬರ್ 6ರಂದು, ಸಿಬಿಐ ನ್ಯಾಯಾಧೀಶ ಎಸ್.ಜೆ.ಶರ್ಮಾ ಅವರು ಇರುವ ಸಿಬಿಐ ವಿಶೇಷ ನ್ಯಾಯಾಲಯ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ. ನನ್ನ ಭದ್ರತೆಯನ್ನು ದಿಢೀರನೇ ಏಕೆ ವಾಪಾಸು ಪಡೆಯಲಾಗಿದೆ ಎನ್ನುವುದಕ್ಕೆ ಕಾರಣ ಸ್ಪಷ್ಟ" ಎಂದು ಅವರು ಹೇಳುತ್ತಾರೆ. ನ್ಯಾಯಾಲಯದ ಮುಂದೆ ಸಾಕ್ಷಿ ಹೇಳಲು ತೆರಳದಂತೆ ಮಾಡುವುದೇ ರಾಜ್ಯ ಪೊಲೀಸ್ ಇಲಾಖೆಯ ಉದ್ದೇಶ ಎಂದು ಅವರು ಆಪಾದಿಸುತ್ತಾರೆ.

ಗುಜರಾತಿ ಭಾಷೆಯಲ್ಲಿ ಸೋಲಂಕಿ ಈ ಪತ್ರವನ್ನು ಜುಲೈ 20ರಂದು ಗುಜರಾತ್‍ನ ಪೊಲೀಸ್ ಮಹಾನಿರ್ದೇಶಕರಿಗೆ ಬರೆದಿದ್ದಾರೆ. ಜತೆಗೆ ಗುಜರಾತ್ ಸಿಐಡಿಯ ಡಿಐಜಿಪಿ, ಗುಜರಾತ್ ಸರ್ಕಾರದ ಗೃಹ ಇಲಾಖೆಯ ಕಾರ್ಯದರ್ಶಿ, ಭಾರತದ ಸುಪ್ರೀಂಕೋರ್ಟ್, ಗುಜರಾತ್ ಹೈಕೋರ್ಟ್, ಡಿಐಜಿ- ಸಿಬಿಐ, ಸಿಬಿಐ ವಿಶೇಷ ನ್ಯಾಯಾಧೀಶ ಶರ್ಮಾ ಅವರಿಗೆ ಪತ್ರ ಬರೆದಿದ್ದಾರೆ.

ಈ ಪತ್ರದ ಪ್ರತಿಗಳು ‘ದ ವೈರ್‍’ಗೆ ಲಭ್ಯವಾಗಿದ್ದು, ವಿವಿಧ ಇಲಾಖೆಗಳು ಕೂಡಾ ಇದನ್ನು ದೃಢಪಡಿಸಿವೆ. ಈ ಪತ್ರದಲ್ಲಿ ಸೋಲಂಕಿ ಘಟನಾವಳಿಗಳ ಸರಣಿ, ತನಿಖೆಯಲ್ಲಿ ತಮ್ಮ ಪಾತ್ರ ಮತ್ತು ತಮಗೆ ಹಾಗೂ ಪತ್ನಿಯ ಜೀವಕ್ಕೆ ಇರುವ ಬೆದರಿಕೆಯನ್ನು ವಿವರಿಸಿದ್ದಾರೆ. "ನನ್ನ ಮೇಲೆ ಮತ್ತು ಪತ್ನಿಯ ಮೇಲೆ ಗುಂಪು ದಾಳಿ ಮಾಡುವ ಭೀತಿ ಇದೆ. ಇದು ಹೈಪ್ರೊಫೈಲ್ ಪ್ರಕರಣವಾಗಿದ್ದು, ಈ ಪ್ರಕರಣದಲ್ಲಿ ನಾನು ಪ್ರಮುಖ ಸಾಕ್ಷಿ. ಪ್ರಕರಣದ ವಿಚಾರಣೆ ನಡೆಯುತ್ತಿರುವ ಮತ್ತು ನಾನು ಸಾಕ್ಷಿ ನುಡಿಯಬೇಕಾದ ಹಂತದಲ್ಲಿ ನನ್ನ ಭದ್ರತೆ ವಾಪಾಸು ಪಡೆದಿರುವುದರಿಂದ, ನನಗೆ ಭಯವಾಗುತ್ತಿದೆ" ಎಂದು ಬರೆದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ತಾವು ನುಡಿಯುವ ಸಾಕ್ಷಿ ಅತ್ಯಂತ ಮಹತ್ವದ್ದು. ಈ ಸಾಕ್ಷಿಯೊಂದಿಗೆ, ‘ಮುಳುಗುವ ನೌಕೆ’ ಎನಿಸಿದ ಈ ಪ್ರಕರಣವನ್ನು ಉಳಿಸಿಕೊಳ್ಳಲು ಸಾಧ್ಯ. ಆದರೆ ಸೂಕ್ತ ಭದ್ರತೆ ನೀಡುವವರೆಗೆ ವಿಚಾರಣೆಗಾಗಿ ಅಹ್ಮದಾಬಾದ್ ನ್ಯಾಯಾಲಯಕ್ಕೆ ಹಾಜರಾಗುವುದು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ. "ನನ್ನ ಪ್ರತಿ ಪತ್ರದಲ್ಲೂ ಇದನ್ನು ನಾನು ಉಲ್ಲೇಖಿಸಿದ್ದೇನೆ. ಕೋರ್ಟ್‍ನಿಂದ ಬಂದ ಸಮನ್ಸ್ ಪತ್ರದಲ್ಲಿ ಕೂಡಾ ನನಗೆ ಸೂಕ್ತ ಭದ್ರತೆಯ ಖಾತ್ರಿ ನೀಡುವವರೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದೇನೆ. ನಿರ್ಭೀತಿಯಿಂದ ಸಾಕ್ಷಿ ನುಡಿಯಲು, ಸಾಕ್ಷಿಯ ಭದ್ರತೆಯ ಹೊಣೆ ಸರ್ಕಾರ ಮತ್ತು ನ್ಯಾಯಾಲಯದ್ದು" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮೇಲ್ಮಟ್ಟಕ್ಕೆ ತಲುಪಿದ ವಿಚಾರಣೆ

ಸೊಹ್ರಾಬುದ್ದೀನ್ ಎನ್‍ಕೌಂಟರ್ ಪ್ರಕರಣದ ತನಿಖೆಗೆ 2005ರಲ್ಲಿ ನಿಯೋಜಿತರಾದ ಮೊದಲ ಹಾಗೂ ವಿಶ್ವಾಸಾರ್ಹ ಅಧಿಕಾರಿ ಇವರು. ಇದುವರೆಗೂ ಹಲವು ದುರ್ಬಲ ಅಂಶಗಳನ್ನು ಹೊಂದಿರುವ ಹತ್ಯೆ ಪ್ರಕರಣದಲ್ಲಿ ಇವರ ಸಾಕ್ಷಿ ಪ್ರಮುಖವಾದದ್ದು. ಇದುವರೆಗೆ ವಿಚಾರಣೆಗೆ ಗುರಿಪಡಿಸಿದ 180 ಸಾಕ್ಷಿಗಳ ಪೈಕಿ 93 ಸಾಕ್ಷಿಗಳು ವ್ಯತಿರಿಕ್ತ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ಉಳಿದ ಆರೋಪಿಗಳ ವಿರುದ್ಧ ಸಿಬಿಐ ಆರೋಪವನ್ನು ಸಾಬೀತುಪಡಿಸುವುದು ಕಷ್ಟಸಾಧ್ಯ ಎಂದು ಕಂಡುಬರುತ್ತಿದೆ.

ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಹಾಗೂ ಘಟನೆ ನಡೆದ ವೇಳೆ ಗುಜರಾತ್‍ನ ಗೃಹಸಚಿವರಾಗಿದ್ದ ಅಮಿತ್ ಶಾ, ಹಲವು ಮಂದಿ ಐಪಿಎಸ್ ಅಧಿಕಾರಿಗಳು, ಗುಜರಾತ್ ಎಟಿಎಸ್ ಮುಖ್ಯಸ್ಥರಾಗಿದ್ದ ಡಿ.ಜಿ.ವಂಝಾರಾ, ಎಂ.ಎನ್.ದಿನೇಶ್ ಮತ್ತು ರಾಜ್‍ಕುಮಾರ್ ಪಾಂಡ್ಯನ್ ಅವರನ್ನು ಈಗಾಗಲೇ ಪ್ರಕರಣದಿಂದ ದೋಷಮುಕ್ತಗೊಳಿಸಲಾಗಿದೆ. ಇತರ ಪೊಲೀಸ್ ಅಧಿಕಾರಿಗಳಾದ ಎನ್.ಕೆ.ಅಮೀನ್, ಗುಜರಾತ್ ಕೇಡರ್‍ನ ಐಪಿಎಸ್ ಅಧಿಕಾರಿ ವಿಪುಲ್ ಅಗರ್‍ವಾಲ್, ರಾಜಸ್ಥಾನ ಪೊಲೀಸ್ ಇಲಾಖೆಯ ದಿನೇಶ್ ಎಂ.ಎನ್ ಹಾಗೂ ದಲಪತ್ ಸಿಂಗ್ ರಾಥೋಡ್ ಅವರನ್ನು ಕೂಡಾ ಈ ತಿಂಗಳ ಆರಂಭದಲ್ಲಿ ಮುಂಬೈ ಹೈಕೋರ್ಟ್ ದೋಷಮುಕ್ತಗೊಳಿಸಿದೆ.

ಅಂದರೆ ಸಿಬಿಐ ತನ್ನ ಮೂಲ ಆರೋಪಪಟ್ಟಿಯಲ್ಲಿ ಹೆಸರಿಸಿದ 38 ಆರೋಪಿಗಳ ಪೈಕಿ 22 ಮಂದಿ ಮಾತ್ರ ಇದೀಗ ವಿಚಾರಣೆ ಎದುರಿಸುತ್ತಿದ್ದಾರೆ. ಈ 22 ಮಂದಿಯಲ್ಲಿ ಇನ್ ಸ್ಪೆಕ್ಟರ್‍ಗಳು, ಸಹಾಯಕ ಇನ್ ಸ್ಪೆಕ್ಟರ್‍ಗಳು, ಸಬ್ ಇನ್ ಸ್ಪೆಕ್ಟರ್‍ಗಳು ಮತ್ತು ರಾಜಸ್ಥಾನ, ಗುಜರಾತ್ ಮತ್ತು ಆಂಧ್ರಪ್ರದೇಶದ ಪೊಲೀಸರು ಸೇರಿದ್ದಾರೆ. ಈ ಪ್ರಕರಣದ ವಿಚಾರಣೆ  ಕಳೆದ ವರ್ಷದ ನವೆಂಬರ್‍ನಲ್ಲಿ ಆರಂಭವಾಗಿದ್ದು, ಹಲವು ಮಹತ್ವದ ತಿರುವುಗಳನ್ನು ಪಡೆದಿದೆ. ಸೊಹ್ರಾಬುದ್ದೀನ್ ಅವರ ಸಹೋದರ ನಯಾಮುದ್ದೀನ್ ಕೂಡಾ ಪ್ರಕರಣದಲ್ಲಿ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ಇತರ ಇಬ್ಬರು ಸಹೋದರರಾದ ಪ್ರಕರಣದ ದೂರುದಾರ ರುಬಾಬುದ್ದೀನ್ ಶೇಖ್ ಮತ್ತು ಶಹಾನವಾಜುದ್ದೀನ್ ಶೇಖ್ ಅವರು ಸಮನ್ಸ್ ಸ್ವೀಕರಿಸಿದರೂ ನ್ಯಾಯಾಲಯದ ಮುಂದೆ ಸಾಕ್ಷಿ ನುಡಿಯಲು ಹಾಜರಾಗಿಲ್ಲ.

ಕೇವಲ ಪೊಲೀಸ್ ಇನ್‍ಸ್ಪೆಕ್ಟರ್ ಆಗಿದ್ದರೂ, ಐಪಿಎಸ್ ಅಧಿಕಾರಿ ಗೀತಾ ಜೋಹ್ರಿ ಮೇಲ್ವಿಚಾರಣೆಯಲ್ಲಿ ವಿಚಾರಣೆ ನಡೆಸಿದ ತಂಡದಲ್ಲಿದ್ದರು. ಆ ಅವಧಿಯಲ್ಲಿ ಜೋಹ್ರಿ ಅವರು ಇನ್‍ಸ್ಪೆಕ್ಟರ್ ಜನರಲ್ ಶ್ರೇಣಿಯಲ್ಲಿದ್ದರು. ಸೋಲಂಕಿ ಇಲಾಖೆಯಲ್ಲಿ ಅಗ್ರಶ್ರೇಣಿಯ ತನಿಖೆಗೆ ಹೆಸರಾಗಿದ್ದರು.

ಅಮಿತ್ ಶಾ ವಿರುದ್ಧದ ಆರೋಪ

"ತನಿಖಾ ತಂಡದಲ್ಲಿದ್ದ ನಾನು ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಪ್ರವಾಸ ಕೈಗೊಂಡಿದ್ದೆ. ವಂಝಾರಾ ಹಾಗೂ ಅವರ ಕಡೆಯವರನ್ನು ತಪ್ಪಿಸ್ಥತರೆಂದು ಸಾಬೀತುಪಡಿಸಬಹುದಾದ ಪುರಾವೆಗಳನ್ನು ಧೈರ್ಯವಾಗಿ ಸಂಗ್ರಹಿಸಿದ್ದೆ. ಮೊದಲ ಹಂತದ ವಿಚಾರಣೆಯಲ್ಲಿ ಹೆಚ್ಚಿನ ರಾಜಕೀಯ ಹಸ್ತಕ್ಷೇಪವಿಲ್ಲದೇ ನಡೆಸಲಾಗಿದೆ. ಮೊದಲ ಹಂತದ ತನಿಖೆಯಲ್ಲಿ ನಾವು ಪ್ರಮುಖ ಆರೋಪಿಯನ್ನು ಹೆಸರಿಸಿದ್ದೇವೆ. ಆಗ ಜೊಹ್ರಿ ಮೇಡಂ ನನ್ನ ಮೇಲೆ ಅತೀವ ವಿಶ್ವಾಸ ಇರಿಸಿದ್ದರು" ಎಂದು ನೆನಪಿಸಿಕೊಳ್ಳುತ್ತಾರೆ. ಆ ಬಳಿಕ ಎಲ್ಲವೂ ಬದಲಾಯಿತು. 2006ರಲ್ಲಿ ಅಮಿತ್ ಶಾ ಅವರು ಜೋಹ್ರಿಯವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದ್ದು, ವಂಝಾರಾ ಹಾಗೂ ಪಾಂಡ್ಯನ್ ಅವರಂತಹ ಅಧಿಕಾರಿಗಳ ವಿರುದ್ಧ ಕಠಿಣವಾಗಿ ಹೋಗದಂತೆ ಸೂಚಿಸಿದ್ದರು ಎಂದು ಅವರು ಆಪಾದಿಸುತ್ತಾರೆ.

"ಆ ಬಳಿಕ ಎಲ್ಲವೂ ಬದಲಾಯಿತು. ನನ್ನ ಮೇಲೆ ಅತೀವ ವಿಶ್ವಾಸ ಇರಿಸಿದ್ದ ಅಧಿಕಾರಿ ಎಷ್ಟು ತುರ್ತು ಕೆಲಸ ಇದ್ದರೂ ನನ್ನ ದೂರವಾಣಿ ಕರೆ ಸ್ವೀಕರಿಸುತ್ತಿದ್ದರು. ಆದರೆ ಆ ಬಳಿಕ ಅವರು ಲಭ್ಯರಾಗಲಿಲ್ಲ. ಮೊದಲು ಖರೀದಿಯಾದ ಅಧಿಕಾರಿಗಳಲ್ಲಿ ಜೋಹ್ರಿ ಮೇಡಂ ಸೇರಿದ್ದಾರೆ" ಎಂದು ಸೋಲಂಕಿ ಆರೋಪ ಮಾಡುತ್ತಾರೆ.

2011ರಲ್ಲಿ ಸಿಬಿಐ ಅಧಿಕಾರಿಗಳ ಮುಂದೆ ಹೇಳಿದ್ದನ್ನು ಸೋಲಂಕಿ ಪುನರುಚ್ಚರಿಸಿದರು. "ಅಧಿಕಾರಿಗಳ ವಿರುದ್ಧ ಕಠಿಣವಾಗಿ ಹೋಗದಂತೆ ಜೋಹ್ರಿ ಮೇಡಂ ಹೇಳಿದರು. ತನಿಖಾ ವರದಿಯಲ್ಲಿ ನಾನು ಉಲ್ಲೇಖಿಸಿದ್ದ ಹಲವು ಅಂಶಗಳನ್ನು ಬದಲಿಸುವಂತೆ ಸೂಚಿಸಿದರು. ಮೃತಪಟ್ಟಿರುವ ತಂದೆ ಲಾಲ್‍ ಜೀ ಭಾಯ್ ಬಗ್ಗೆ ನನಗೆ ಅಪಾರ ಗೌರವ ಇದೆ. ಆದರೆ ಅವರೇ ಬಂದು ಹೇಳಿದರೂ ತನಿಖಾ ವರದಿಯನ್ನು ನಾನು ಬದಲಿಸಲಾರೆ. ನನ್ನ ಧೈರ್ಯ, ಅವರನ್ನೂ ಸೇರಿದಂತೆ ಯಾರನ್ನೂ ಧಿಕ್ಕರಿಸಲು ನಾನು ಸಮರ್ಥ ಎಂದು ತಿಳಿದು ಜೋಹ್ರಿ ಮೇಡಂಗೆ ಆಘಾತವಾಯಿತು. ಸಿನಿಮೀಯ ಮಾದರಿಯಲ್ಲಿ ರಾಜಕಾರಣಿಗಳು ಹಾಗೂ ಪೊಲೀಸರು ಮಾಡಿದ ಯೋಜನೆಯಂತೆ ಮೂರು ಅಮಾಯಕ ಜೀವಗಳನ್ನು ಬಲಿ ಪಡೆಯಲಾಯಿತು. ಆದ್ದರಿಂದ ನನ್ನನ್ನು ಖರೀದಿಸಲು ಸಾಧ್ಯವೇ ಇರಲಿಲ್ಲ" ಎಂದವರು ಹೇಳುತ್ತಾರೆ.

ಸೋಲಂಕಿ ಪ್ರಮುಖರಾಗಿದ್ದ ಮೊದಲ ಹಂತದ ತನಿಖೆಯಲ್ಲಿ, 15 ಮಂದಿ ಶಂಕಿತರನ್ನು ವಿಚಾರಣೆಗೆ ಗುರಿಪಡಿಸಲಾಯಿತು. 13 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಯಿತು. ಆದಾಗ್ಯೂ ಸೋಲಂಕಿ ತಮ್ಮ ಹೇಳಿಕೆಯಲ್ಲಿ ಮತ್ತು 2011ರವರೆಗೆ ಸಂಗ್ರಹಿಸಿದ ಪುರಾವೆಗಳ ಆಧಾರದಲ್ಲಿ, ಸಿಬಿಐನ ಮುಖ್ಯ ತನಿಖಾಧಿಕಾರಿ, 2001ನೇ ಬ್ಯಾಚ್‍ನ ಐಪಿಎಸ್ ಅಧಿಕಾರಿ, ನಾಗಾಲ್ಯಾಂಡ್ ಮೂಲದ ಸಂದೀಪ್ ತಾಮಗಾಡ್ಗೆ ಅವರು ಪ್ರಕರಣದಲ್ಲಿ ಅಮಿತ್ ಶಾ ಅವರನ್ನೂ ಹೆಸರಿಸಿದ್ದರು.

"ಈ ಪ್ರಕರಣದ ತನಿಖೆಯಲ್ಲಿ ನಾನು 2009ರವರೆಗೂ ಇದ್ದೆ. 2007ರಲ್ಲಿ ನಾನು ಸೇವೆಯಿಂದ ನಿವೃತ್ತನಾಗಬೇಕಿತ್ತು. ಆದರೆ ಎರಡು ವರ್ಷಗಳ ಕಾಲ ಸೇವಾವಧಿ ವಿಸ್ತರಿಸಲಾಯಿತು ಹಾಗೂ ತನಿಖೆ ಮುಂದುವರಿಸುವಂತೆ ಸೂಚಿಸಲಾಯಿತು. ಆರಂಭಿಕ ತನಿಖೆಯನ್ನು ನಾನು ನಡೆಸಿದ್ದು, ಈ ಅವಧಿಯಲ್ಲಿ ಪ್ರಕರಣಕ್ಕೆ ಕಾರಣರಾದ ಐಪಿಎಸ್ ಅಧಿಕಾರಿಗಳನ್ನು ಪ್ರಕರಣದಲ್ಲಿ ಸಿಲುಕಿಸಿದ್ದು ನನ್ನ ಸಾಧನೆ. ನನ್ನ ಆರಂಭಿಕ ತನಿಖೆಯಲ್ಲಿ ಅಮಿತ್ ಶಾ ಹೆಸರನ್ನು ಉಲ್ಲೇಖಿಸದಿದ್ದರೂ, ತಾಮಗಾಡ್ಗೆ ನೇತೃತ್ವದಲ್ಲಿ ಸಿಬಿಐ ದಾಖಲಿಸಿಕೊಂಡ ನನ್ನ ಹೇಳಿಕೆ ಆಧಾರದಲ್ಲಿ ಇದನ್ನು ಸೇರಿಸಲಾಗಿತ್ತು. ನಾನು ವಿಶ್ವಾಸ ಹೊಂದಿದ್ದ, ಲಂಚ ಪಡೆಯದ ಏಕೈಕ ಅಧಿಕಾರಿ ಅವರು. ಈ ಪ್ರಕರಣದ ಬಗ್ಗೆ ಮತ್ತಷ್ಟು ಆಳವಾದ ತನಿಖೆ ಮಾಡುವಂತೆ ಹೇಳಿದ್ದರು" ಎಂದು ಸೋಲಂಕಿ ವಿವರಿಸುತ್ತಾರೆ.

2011ರಿಂದ 2014ರವರೆಗೆ, ತಾಮಗಾಡ್ಗೆ ಸಿಬಿಐನಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದರು. ಸಿಬಿಐನ ವಿಶೇಷ ಅಪರಾಧ ಶಾಖೆಯ ಅಧೀಕ್ಷಕ ಹುದ್ದೆ ಇದರಲ್ಲಿ ಪ್ರಮುಖವಾದದ್ದು. ಸಿಬಿಐನಲ್ಲಿ ಇದ್ದ ಅವಧಿಯಲ್ಲಿ ಸೊಹ್ರಾಬುದ್ದೀನ್ ಹಾಗೂ ಕೌಸರ್ ಬೀ ಮತ್ತು ಪ್ರಮುಖ ಸಾಕ್ಷಿಯ ಹತ್ಯೆಗೆ ಸಂಬಂಧಿಸಿದ ಎರಡು ಪ್ರಕರಣಗಳ ತನಿಖೆ ನಡೆಸಿದ್ದರು. ಈ ವಿಚಾರಣೆಯಲ್ಲಿ, ಕೌಸರ್‍ ಭೀಯನ್ನು ಹತ್ಯೆ ಮಾಡುವ ಮುನ್ನ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿದೆ ಮತ್ತು ದೇಹವನ್ನು ಸುಟ್ಟುಹಾಕಲಾಗಿದೆ ಎಂದು ಬಹಿರಂಗಪಡಿಸಿದ್ದರು. ಬಳಿಕ ತಾಮಗಾಡ್ಗೆಯವರು 2004ರಲ್ಲಿ ಇಶ್ರತ್ ಜಹಾನ್ ಹತ್ಯೆ ಪ್ರಕರಣವನ್ನೂ ವಿಚಾರಣೆ ನಡೆಸಿದ್ದರು.

ಈ ಹತ್ಯೆ ಪ್ರಕರಣಗಳಲ್ಲಿ ಅಮಿತ್ ಶಾ ಅವರನ್ನು ಎರಡು ಬಾರಿ ವಿಚಾರಣೆಗೆ ಗುರಿಪಡಿಸಿದ ಅಧಿಕಾರಿ ತಾಮಗಾಡ್ಗೆ. 2012ರಲ್ಲಿ ಪ್ರಜಾಪತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹಾಗೂ 2013ರ ಅಕ್ಟೋಬರ್‍ನಲ್ಲಿ ಇಶ್ರತ್ ಜಹಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಗುರಿಪಡಿಸಿದ್ದರು. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಒಂದು ತಿಂಗಳು ಮೊದಲು ಅಂದರೆ 2014ರ ಏಪ್ರಿಲ್‍ನಲ್ಲಿ ಸಿಬಿಐ ಮುಖ್ಯಸ್ಥ ರಂಜಿತ್ ಸಿನ್ಹಾ, ತಾಮಗಾಡ್ಗೆಯವರನ್ನು ವಿಚಾರಣಾ ತಂಡದಿಂದ ವರ್ಗಾಯಿಸಿದರು.

"ನನ್ನನ್ನು ಕೊಲ್ಲುವುದೂ ಸೇರಿದಂತೆ ಪೊಲೀಸರು ಏನು ಮಾಡಲೂ ಸಿದ್ಧ"

ತಮ್ಮ 35 ವರ್ಷಗಳ ಸೇವೆಯಲ್ಲಿ ಸೊಹ್ರಾಬುದ್ದೀನ್ ಹತ್ಯೆ ಪ್ರಕರಣ ಅತ್ಯಂತ ಸವಾಲಿನ ಪ್ರಕರಣವಾಗಿತ್ತು ಎಂದು ಸೋಲಂಕಿ ಹೇಳುತ್ತಾರೆ. "ಸೇವೆಯಿಂದ ನಿವೃತ್ತನಾಗಿ 10 ವರ್ಷಗಳ ಬಳಿಕವೂ, ನಾನು ನಿರಂತರ ಒತ್ತಡದಿಂದ ಬದುಕುತ್ತಿದ್ದೇನೆ. ಆದರೆ ನನ್ನನ್ನು ಮುರಿಯಲು ಸಾಧ್ಯವಿಲ್ಲ ಎಂದು ನನಗೆ ಗೊತ್ತು. ಆದರೆ, ನನ್ನ ಕುಟುಂಬದ ಇತರರನ್ನು ಅದರಲ್ಲೂ ಮುಖ್ಯವಾಗಿ ಪತ್ನಿಗೆ ಅಪಾಯವಿದೆ. ಪೊಲೀಸರು ನನ್ನ ಹತ್ಯೆ ಮಾಡುವುದೂ ಸೇರಿದಂತೆ ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ ಎಂಬ ಭಯ ಆಕೆಯದ್ದು" ಎಂದು ಸ್ಪಷ್ಟಪಡಿಸುತ್ತಾರೆ.

ಸೋಲಂಕಿ ಅಹ್ಮದಾಬಾದ್ ಮೂಲದ ದಲಿತ ಕುಟುಂಬದಲ್ಲಿ ಜನಿಸಿದರು. ಜಾಮ್‍ನಗರದ ಸೈನಿಕ ಶಾಲೆಯಲ್ಲಿ ಅಧ್ಯಯನ ನಡೆಸಿದರು. "ರಾಮ ಅಥವಾ ರಹೀಮನ ಬಗ್ಗೆ ನನಗೆ ನಂಬಿಕೆ ಇಲ್ಲ. ನನ್ನ ಏಕೈಕ ದೇವರು ಎಂದರೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್. ಅವರ ತತ್ವಗಳಲ್ಲಿ ಮತ್ತು ಅವರು ದೇಶಕ್ಕೆ ನೀಡಿದ ಸಂವಿಧಾನದ ಮೇಲೆ ನನಗೆ ನಂಬಿಕೆ ಇದೆ" ಎಂದು ಅವರು ಹೇಳಿದರು.

ಅವರ ಮೂವರು ಪುತ್ರಿಯರು ಹಾಗೂ ಒಬ್ಬ ಪುತ್ರ ಅಮೆರಿಕ ಹಾಗೂ ಕೆನಡಾದಲ್ಲಿದ್ದಾರೆ. "ನಾನು ಇಚ್ಛಿಸಿದ್ದರೆ ಆರೋಪಿಗಳ ಜತೆ ವ್ಯವಹಾರ ಕುದುರಿಸಬಹುದಿತ್ತು. ಹಣ ತೆಗೆದುಕೊಂಡು ಮಕ್ಕಳ ಬಳಿಗೆ ಹೋಗಬಹುದಿತ್ತು. ಅದು ಯಾರಿಗೂ ತಿಳಿಯುತ್ತಿರಲಿಲ್ಲ. ಆದರೆ ನನ್ನತನವನ್ನು ಆಗ ಎದುರಿಸಲು ಸಾಧ್ಯವಿತ್ತೇ?" ಎಂದು ಸೋಲಂಕಿ ಪ್ರಶ್ನಿಸುತ್ತಾರೆ. ಮೊದಲ ದಿನದಿಂದಲೂ ಮಕ್ಕಳು ಕೂಡಾ ನನಗೆ ಬೆಂಬಲವಾಗಿ ನಿಂತಿದ್ದಾರೆ. ನಾನು ಎಂದಿಗೂ ಲಂಚ ಪಡೆದಿಲ್ಲ ಎಂದು ಅವರು ಸ್ಪಷ್ಟಪಡಿಸುತ್ತಾರೆ. "ನನ್ನ ಪತ್ನಿ ಉದಯಪ್ರಭಾ ಝಾನ್ಸಿಯ ರಾಣಿ. ಮಕ್ಕಳು ಮತ್ತಷ್ಟು ಧೈರ್ಯಶಾಲಿಗಳು. ಇದೇ ನಾನು ಈ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂಬ ನಿರ್ಧಾರದಿಂದ ಹಿಂದಕ್ಕೆ ಹೋಗದಿರಲು ನನಗೆ ಬಲ" ಎಂದು ಬಣ್ಣಿಸುತ್ತಾರೆ.

2004ರಲ್ಲಿ ಇವರಿಗೆ ಭಡ್ತಿ ಸಿಗಬೇಕಿತ್ತು. ಆದರೆ ಹಿರಿಯ ಅಧಿಕಾರಿಗಳ ಬೇಡಿಕೆ ಈಡೇರಿಸಲು ನಾನು ತಿರಸ್ಕರಿಸಿದ್ದರಿಂದ ಅದನ್ನು ನಿರಾಕರಿಸಲಾಯಿತು ಎನ್ನುವುದು ಅವರ ಆರೋಪ. "ನನ್ನ ಭಡ್ತಿಯ ಶಿಫಾರಸ್ಸನ್ನು ಮುಚ್ಚಿದ ಲಕೋಟೆಯಲ್ಲಿ ಗೃಹ ಇಲಾಖೆಗೆ ಕಳುಹಿಸಲಾಗಿತ್ತು. ಅದು ಇಂದಿನವರೆಗೂ ಇಲಾಖೆಯಲ್ಲಿ ಬಿದ್ದುಕೊಂಡು ಇದೆ. ನ್ಯಾಯಕ್ಕಾಗಿ ಯಾವ ಸವಾಲು ಸ್ವೀಕರಿಸಲೂ ಸಿದ್ಧವಿದ್ದ ಅಧಿಕಾರಿಗೆ, ನ್ಯಾಯಬದ್ಧವಾಗಿ ಸಿಗಬೇಕಾದ್ದನ್ನು ನಿರಾಕರಿಸಿರುವುದು ವಿಚಿತ್ರ. ಆದರೆ ಬಂಧನಕ್ಕೆ ಒಳಗಾಗಿ ವಿಚಾರಣೆ ಎದುರಿಸಿದ ಹಂತಕರಿಗೆ ಭಡ್ತಿ ದೊರಕಿದೆ" ಎಂದು ಅವರು ಹೇಳುತ್ತಾರೆ.

ಈ ಭಡ್ತಿ ಪ್ರಕರಣವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಿದ್ಧತೆ ನಡೆಸಿರುವುದಾಗಿ ಅವರು ಹೇಳಿದ್ದಾರೆ. "ಸಮಾಜಕ್ಕಾಗಲೀ, ವೈಯಕ್ತಿಕವಾಗಲೀ. ನಾನು ಯಾವ ಅನ್ಯಾಯವನ್ನೂ ಬಯಸುವುದಿಲ್ಲ. ಹೋರಾಟದಲ್ಲಿ ನನಗೆ ನಂಬಿಕೆ ಇದೆ" ಎಂದವರು ಹೇಳುತ್ತಾರೆ.

Writer - ಸುಕನ್ಯಾ ಶಾಂತಾ, thewire.in

contributor

Editor - ಸುಕನ್ಯಾ ಶಾಂತಾ, thewire.in

contributor

Similar News