ಎರಡನೇ ಹಂತದಲ್ಲಿ 55,000 ಶೆಲ್ ಕಂಪನಿಗಳ ರದ್ದತಿ: ಚೌಧರಿ

Update: 2018-09-21 15:57 GMT

 ಮುಂಬೈ,ಸೆ.21: ಅಕ್ರಮ ಹಣದ ಹರಿವಿಗೆ ಕಡಿವಾಣ ಹಾಕುವ ತನ್ನ ಪ್ರಯತ್ನಗಳ ಎರಡನೇ ಹಂತದಲ್ಲಿ ಸರಕಾರವು ಸುಮಾರು 55,000 ಶೆಲ್ ಕಂಪನಿಗಳ(ಕೇವಲ ದಾಖಲೆಗಳಲ್ಲಿ ಮಾತ್ರ ಇರುವ ಕಂಪನಿಗಳು) ನೋಂದಣಿಯನ್ನು ರದ್ದುಗೊಳಿಸಿದೆ. ಕೆಲವು ಕಂಪನಿಗಳಿಗೆ ನೋಟಿಸ್‌ಗಳನ್ನು ಜಾರಿಗೊಳಿಸಿದ್ದು,ಸರಕಾರದ ನಿಗರಾಣಿಯಲ್ಲಿವೆ ಎಂದು ಕೇಂದ್ರ ಸಹಾಯಕ ಕಾರ್ಪೊರೇಟ್ ವ್ಯವಹಾರಗಳ ಸಚಿವ ಪಿ.ಪಿ.ಚೌಧರಿ ಅವರು ಶುಕ್ರವಾರ ಇಲ್ಲಿ ತಿಳಿಸಿದರು.

ಮೊದಲ ಹಂತದಲ್ಲಿ ಸರಕಾರವು ಈಗಾಗಲೇ ಎರಡು ವರ್ಷ ಮತ್ತು ಅದಕ್ಕೂ ಹೆಚ್ಚಿನ ಅವಧಿಗೆ ಹಣಕಾಸು ವರದಿಗಳನ್ನು ಅಥವಾ ವಾರ್ಷಿಕ ರಿಟನ್‌ಗಳನ್ನು ಸಲ್ಲಿಸದಿದ್ದ 2.26 ಲಕ್ಷಕ್ಕೂ ಅಧಿಕ ಕಂಪನಿಗಳನ್ನು ರದ್ದುಗೊಳಿಸಿದೆ. ಈ ಪೈಕಿ ಹೆಚ್ಚಿನವು ಬೋಗಸ್ ಕಂಪನಿಗಳಾಗಿದ್ದವು. ಒಂದೇ ಕೋಣೆಯಿಂದ 400ಕ್ಕೂ ಅಧಿಕ ಕಂಪನಿಗಳು ಕಾರ್ಯಾಚರಿಸುತ್ತಿದ್ದೂ ಇದೆ ಎಂದು ಇಲ್ಲಿ ಇಂಡೋ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್‌ನ ನಾಲ್ಕನೇ ವಾರ್ಷಿಕ ಸಮ್ಮೇಳನದ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಚೌಧರಿ ಹೇಳಿದರು.

ಅಕ್ರಮ ಹಣ ವಹಿವಾಟು,ಮಾದಕ ದ್ರವ್ಯಗಳ ದಂಧೆಗೆ ಹಣಕಾಸು ಪೂರೈಕೆ ಅಥವಾ ಇತರ ಯಾವುದೇ ಅಕ್ರಮ ಚಟುವಟಿಕೆಗಳ ಮೂಲಕ ಕಾರ್ಪೊರೇಟ್ ಕ್ಷೇತ್ರದ ದುರುಪಯೋಗವನ್ನು ಸರಕಾರವು ಬಯಸುವುದಿಲ್ಲ ಎಂದು ಹೇಳಿದ ಅವರು, ತನಿಖಾ ಸಂಸ್ಥೆಗಳು ಶೆಲ್ ಕಂಪನಿಗಳ ವಿಷಯದಲ್ಲಿ ತನಿಖೆಯನ್ನು ನಡೆಸುತ್ತಿವೆ ಮತ್ತು ಅಗತ್ಯವಾದಾಗ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News