ಧರ್ಮಾತೀತ ಕಾಮ, ಮುಗ್ಧರ ಮಾರಣಹೋಮ

Update: 2018-09-21 18:37 GMT

ಮೋಕ್ಷದ, ಅಲೌಕಿಕದ, ಸ್ವರ್ಗದ ಮಾತನಾಡುತ್ತಲೇ ಅಮಾಯಕರ ಪಾಲಿಗೆ ಲೌಕಿಕ ನರಕವನ್ನು ಸೃಷ್ಟಿಸುವ ಸಕಲ ಧರ್ಮಗಳ ಕಾಮಾಂಧರನ್ನು ಹದ್ದು ಬಸ್ತಿನಲ್ಲಿಡುವುದು ಹೇಗೆ? ಮುಗ್ಧರ ಲೈಂಗಿಕ ಮಾರಣಹೋಮವನ್ನು ತಡೆಯುವುದು ಹೇಗೆ? ಎಂಬುದೇ ಜಾಗತಿಕ ಪ್ರಜ್ಞಾವಂತ ನಾಗರಿಕ ಸಮಾಜದ ಒಂದು ದೊಡ್ಡ ಸಮಸ್ಯೆಯಾಗಿದೆ.

ಕೇರಳದಲ್ಲಿ ನಡೆದ ಕ್ರೈಸ್ತ ಸನ್ಯಾಸಿನಿಯ ಅತ್ಯಾಚಾರ ಮತ್ತು ಈಗ ಪೊಲೀಸರ ಅತಿಥಿಯಾಗಿ ಏಳು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆಗೆ ಬಿಷಪ್‌ರೊಬ್ಬರು ಗುರಿಯಾಗಿರುವ ಪ್ರಕರಣವು, ಕಾಮ ಎಂಬುದು ಧರ್ಮಾತೀತ; ಮಾನವನ ಮೂಲ ಪ್ರವೃತ್ತಿಯ ಮುಂದೆ ಯಾವ ಧರ್ಮದ ಒಣ ಉಪದೇಶವೂ ಬಹಳ ಸಮಯದವರೆಗೆ ಮನುಷ್ಯನನ್ನು ನಿಯಂತ್ರಿಸಲಾರದು ಎಂಬುದು ಮತ್ತಷ್ಟು ಸ್ಪಷ್ಟವಾಗುತ್ತಿದೆ. ‘ಕಾಮಾತುರಾಣಾಂ ನ ಭಯಮ್ ನ ಲಜ್ಜಾ’’(ಕಾಮಾಸಕ್ತರಾದವರಿಗೆ ಹೆದರಿಕೆಯೂ ಇಲ್ಲ; ನಾಚಿಕೆಯೂ ಇಲ್ಲ) ಎಂಬ ಮಾತು ಜಗತ್ತಿನ ಎಲ್ಲ ಧರ್ಮಗಳ ಚಪಲ ಚೆನ್ನಿಗರಾಯರಿಗೆ ಅನ್ವಯಿಸಿ ಬರೆದ ಭಾಷ್ಯದಂತಿದೆ.

 ಈಚೆಗೆ ಜಾಗತಿಕ ಕೆಥೋಲಿಕ್ ಸಮುದಾಯವನ್ನು ಬೆಚ್ಚಿಬೀಳಿಸುವಂತಹ ಸಂಗತಿಗಳು ಬೆಳಕಿಗೆ ಬಂದವು. ಇಂದಿಗೂ ಬಡ(ಅಥವಾ ‘ಬಡ’ ಎನ್ನಲು ಮುಜುಗರ ಪಟ್ಟುಕೊಳ್ಳುವ) ಅಭಿವೃದ್ಧಿಶೀಲ ದೇಶಗಳಿಗೆ ಔದ್ಯೋಗಿಕ ಅವಕಾಶಗಳ ಸ್ವರ್ಗವಾಗಿಯೆ ಉಳಿದಿರುವ, 50 ಡಾಲರ್ ಗಳಿಸಿದರೆ ಒಂದು ಗ್ರಾಂ ಚಿನ್ನ ದೊರಕುವ ಅಮೆರಿಕದಲ್ಲಿ ಕಳೆದ ಎಪ್ಪತ್ತು ವರ್ಷಗಳಲ್ಲಿ ಬಚ್ಚಿ ಇಡಲಾಗಿದ್ದ ಪಾದ್ರಿಗಳ ನೂರಾರು ಲೈಂಗಿಕ ಹಗರಣಗಳ ವಿವರಗಳನ್ನು ಓದುತ್ತಿದಂತೆಯೇ ಪಾದ್ರಿಗಳಿಂದ ಲೈಂಗಿಕ ಕಿರುಕುಳಕ್ಕೊಳಗಾಗಿದ್ದವರು ಕಣ್ಣೀರು ಸುರಿಸಿದರು.
ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದಲ್ಲಿ ಬಿಷಪರು ಮತ್ತು ರೋಮನ್ ಕೆಥೋಲಿಕ್ ಚರ್ಚ್‌ನ ಇತರ ನಾಯಕರು ಏಳು ದಶಕಗಳ ಕಾಲ ಮುನ್ನೂರಕ್ಕೂ ಹೆಚ್ಚು ಮಂದಿ ಪಾದ್ರಿಗಳು ನಡೆಸಿದ್ದ ಮಕ್ಕಳ ಲೈಂಗಿಕ ಕಿರುಕುಳ, ಲೈಂಗಿಕ ದುರ್ಬಳಕೆ ಪ್ರಕರಣಗಳನ್ನು ಮುಚ್ಚಿ ಇಟ್ಟಿದ್ದರು. ಲೈಂಗಿಕ ಕಿರುಕುಳ ಸಂತ್ರಸ್ತರಿಗೆ ವಿಷಯವನ್ನು ಯಾರಿಗೂ ಹೇಳದಂತೆ ಮತ್ತು ಪ್ರಕರಣಗಳ ಬಗ್ಗೆ ಪೊಲೀಸರು ವಿಚಾರಣೆ ನಡೆಸದಂತೆ ಒತ್ತಾಯಿಸಲಾಗಿತ್ತು.
ನ್ಯಾಯಾಧೀಶರೊಬ್ಬರು ನೀಡಿದ ವರದಿಯೊಂದು ಪೆನ್ಸಿಲ್ವೇನಿಯಾ ರಾಜ್ಯದ ಎಂಟು ಕೆಥೋಲಿಕ್ ಡಯೊಸಿಸ್‌ಗಳಲ್ಲಿ ನಡೆದಿದ್ದ ಲೈಂಗಿಕ ದೌರ್ಜನ್ಯಗಳಲ್ಲಿ ಸಂತ್ರಸ್ತರಾಗಿದ್ದ ಒಂದು ಸಾವಿರಕ್ಕೂ ಹೆಚ್ಚು ಮಂದಿಯನ್ನು ಗುರುತಿತು. ಅಮೆರಿಕದ ಸರಕಾರಿ ಏಜನ್ಸಿಯೊಂದು ಮಕ್ಕಳ ಲೈಂಗಿಕ ಶೋಷಣೆಯ ಬಗ್ಗೆ ನಡೆಸಿದ ಅತ್ಯಂತ ವಿಸ್ತೃತವಾದ ವರದಿ ಅದು. ಹಾಗಾಗಿ ಇನ್ನೂ ಸಾವಿರಾರು ಮಂದಿ ಲೈಂಗಿಕ ಬಲಿಪಶುಗಳು, ಸಂತ್ರಸ್ತರು ಇರಬಹುದು. ಅವರ ದಾಖಲೆಗಳು ಕಳೆದು ಹೋಗಿರಬಹುದು ಅಥವಾ ಮುಂದೆ ಬಂದು ತಮಗಾದ ಅನ್ಯಾಯವನ್ನು ಹೇಳಿಕೊಳ್ಳಲು ಅವರು ವಿಪರೀತ ಹೆದರಿರಬಹುದು ಎಂದು ವರದಿ ಹೇಳಿದೆ.
ಅದು ಪಟ್ಟಿ ಮಾಡಿರುವ ಲೈಂಗಿಕ ದಾಳಿಗಳ ಯಾದಿ ಯಾವುದೇ ಹಾರರ್ ಸಿನೆಮಾದ ಭಯಾನಕ, ಬೀಭತ್ಸ ದೃಶ್ಯಗಳನ್ನು ಹೋಲುತ್ತದೆ. ಚಿಕ್ಕ ಹುಡುಗಿಯೊಬ್ಬಳಿಗೆ ಟಾನ್ಸಿಲ್ಸ್ ಆಪರೇಶನ್ ಆದ ಬಳಿಕ ಆಸ್ಪತ್ರೆಯಲ್ಲೇ ಅವಳ ಮೇಲೆ ಅತ್ಯಾಚಾರ ಎಸಗಿದ್ದ ಒಬ್ಬ ಪಾದ್ರಿ; ಕೈಕಾಲುಗಳನ್ನು ಬಿಗಿದು ಚರ್ಮದ ಪಟ್ಟಿಗಳಿಂದ ಬಲಿಪಶುವನ್ನು ಥಳಿಸುತ್ತಿರುವ ಒಬ್ಬ ಪಾದ್ರಿ ಮತ್ತು ಹುಡುಗಿಯೊಬ್ಬಳು ಗರ್ಭ ಧರಿಸುವಂತೆ ಮಾಡಿ, ನಂತರ ಆಕೆಗೆ ಗರ್ಭಪಾತ ಮಾಡಿಸಲುಬೇಕಾದ ವ್ಯವಸ್ಥೆ ಮಾಡಿದ ಬಳಿಕವೂ ಚರ್ಚ್‌ನ ನಿವಾಸದಲ್ಲೇ ಉಳಿದುಕೊಳ್ಳಲು ಅವಕಾಶ ಪಡೆದ ಇನ್ನೊಬ್ಬ ಪಾದ್ರಿ.
ವರದಿಯನ್ನು ಬರೆದಿರುವ ಗ್ರಾಂಡ್‌ಜ್ಯೂರಿಯ ಈ ಮಾತುಗಳನ್ನು ಗಮನಿಸಿ: ‘‘ಪಾದ್ರಿಗಳು ಎಳೆಹರೆಯದ ಹುಡುಗರ ಮತ್ತು ಹುಡುಗಿಯರ ಮೇಲೆ ಅತ್ಯಾಚಾರವೆಸಗುತ್ತಿದ್ದರು ಮತ್ತು ಅವರಿಗೆ ಜವಾಬ್ದಾರರಾದ ಬಿಷಪರು ಏನನ್ನೂ ಮಾಡಲಿಲ್ಲ. ಬದಲಾಗಿ ಅದನ್ನೆಲ್ಲ ಮುಚ್ಚಿಟ್ಟರು ದಶಕಗಳವರೆಗೆ.’’
ಆಪಾದಿತರಾದ ಕೆಲವು ಪಾದ್ರಿಗಳನ್ನು ಅವರ ಹುದ್ದೆಗಳಿಂದ ತೆಗೆಯಲಾಯಿತಾದರೂ, ಅವರನ್ನು ರಕ್ಷಿಸಿದ ಚರ್ಚ್‌ನ ಅಧಿಕಾರಿಗಳು ತಮ್ಮ ಹುದ್ದೆಯಲ್ಲೇ ಮುಂದುವರಿದರು ಅಥವಾ ಭಡ್ತಿಯನ್ನೂ ಪಡೆದರು.
ಹಲವರು ಬಿಷಪರು ಅತ್ಯಾಚಾರ ಪ್ರಕರಣಗಳನ್ನು ಮುಚ್ಚಿಡಲಾಗಿತ್ತು ಎಂಬುದನ್ನು ನಿರಾಕರಿಸಿದ್ದಾರೆ. ಆದರೆ ವರದಿ ಹೇಳುವ ಪ್ರಕಾರ ‘‘ಸತ್ಯವನ್ನು ಮುಚ್ಚಿಡಲು ಚರ್ಚ್ ಅಧಿಕಾರಿಗಳು ಒಂದು ‘ಆಟದ ಪುಸ್ತಕ’ವನ್ನು ಬಳಸಿದ್ದಾರೆ. ಅಂದರೆ ‘ಅತ್ಯಾಚಾರ’ ಎಂಬ ಶಬ್ದದ ಬದಲು ‘ಅಷ್ಟೊಂದು ಸರಿಯಿಲ್ಲದ ಸ್ಪರ್ಶ’ ಎಂಬ ಶಬ್ದಗಳನ್ನು ಬಳಸಿ ದೌರ್ಜನ್ಯದ ತೀವ್ರತೆಯನ್ನು ಕನಿಷ್ಠಗೊಳಿಸಿದ್ದಾರೆ. ಲೈಂಗಿಕ ದೌರ್ಜನ್ಯದ ಪ್ರಕರಣಗಳ ವಿಚಾರಣೆಯಲ್ಲಿ ಯಾವುದೇ ತರಬೇತಿ ಇಲ್ಲದ ಪಾದ್ರಿಗಳಿಗೆ ತಮ್ಮ ಸಹೋದ್ಯೋಗಿಗಳು ನಡೆಸಿದ ಅಪರಾಧಗಳ ವಿಚಾರಣೆ ನಡೆಸುವ ಜವಾಬ್ದಾರಿ ನೀಡಿದ್ದಾರೆ.’’ ಅಪಾದಿತ ಪಾದ್ರಿಯೊಬ್ಬನನ್ನು ಆತನ ಹುದ್ದೆಯಿಂದ ತೆಗೆದಾಗ ಯಾಕೆ ಆತನನ್ನು ವಜಾಗೊಳಿಸಲಾಯಿತೆಂದು ಸಮುದಾಯದ ಸದಸ್ಯರಿಗೆ ನಿಜವಾದ ಕಾರಣಗಳನ್ನು ತಿಳಿಸುತ್ತಿರಲಿಲ್ಲ. ಬದಲಾಗಿ ಆತ ‘ಅಸ್ವಾಸ್ಥದ ಮೇಲೆ ರಜೆ’ ಹೋಗಿದ್ದಾನೆ ಅಥವಾ ‘ನರಸಂಬಂಧಿ ಆಯಾಸ’ ದಿಂದ ಬಳಲುತ್ತಿದ್ದಾನೆ ಎನ್ನಲಾಗುತ್ತಿತ್ತಂತೆ.
ಇಡೀ ಪ್ರಕರಣದ ಗಂಭೀರತೆಯನ್ನು ಈ ಕೆಳಗಿನ ಒಂದು ಉದಾಹರಣೆ ಸ್ಪಷ್ಟಪಡಿಸುತ್ತದೆ. ಫ್ರಾನ್ಸಿಸ್ ಸ್ಯಾಂಬರ್‌ನ ಸಹೋದರ ಮೈಕಲ್, ಪಿಟ್ಸ್ ಬರ್ಗ್‌ನಲ್ಲಿ ಪಾದ್ರಿಯೊಬ್ಬನಿಂದ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿದ್ದ. 2010ರಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡ. ಈಗ ಸ್ಯಾಂಬರ್ ಹೇಳುವ ಮಾತುಗಳಿವು;
‘‘ಸಾರ್ವಜನಿಕರಿಗೆ ಇದೆಲ್ಲ ತಿಳಿದಿರುವುದು ಒಳ್ಳೆಯದೇ, ಆದರೆ ನ್ಯಾಯ ಎಲ್ಲಿದೆ? ಇದರ ಬಗ್ಗೆ ನೀವೇನು ಮಾಡುತ್ತೀರಿ? ಈ ಮಂದಿ ಯಾಕೆ ಇನ್ನೂ ಜೈಲಿನಲ್ಲಿಲ್ಲಾ?’’
ಅದಕ್ಕೆ ವ್ಯತಿರಿಕ್ತವಾಗಿ ಭವ್ಯ ಭಾರತದಲ್ಲಿ ಕೆಲವಾದರೂ ಸ್ವಯಂ ಘೋಷಿತ ಗುರುಗಳು, ಬಾಬಾಗಳು ತಾವು ಮಹಿಳೆಯರಿಗೆ ಮಾಡಿದ ಘನಕಾರ್ಯಕ್ಕಾಗಿ ಜೈಲಿನಲ್ಲಿದ್ದಾರೆ. ಗುರ್ಮೀತ್ ಸಿಂಗ್, ಅಸಾರಾಂ ಬಾಪು ಮೊದಲಾದ ಸಂಘಟಿತ ಧರ್ಮದ ‘ಹೀರೋ’ಗಳು ತಮ್ಮ ಕಾಮ ಚಾಪಲ್ಯಕ್ಕೊಳಗಾದಾಗ ಹೇಗೆ ಕುಸಿದು ಸಮಾಜದ ಮುಂದೆ ‘ವಿಲನ್’ ಗಳಾಗುತ್ತಾರೆ ಎಂಬುದಕ್ಕೆ ಉದಾಹರಣೆಯಾಗಿ ನಮ್ಮ ಮುಂದೆ ಇದ್ದಾರೆ. ಧಾರ್ಮಿಕ, ಆಧ್ಯಾತ್ಮಿಕ ದಾರಿ ತೋರುವವರು ತಾವೆಂದು ಹೇಳಿಕೊಳ್ಳುತ್ತ ಅಮಾಯಕ ಭಕ್ತರ ಕೋಟಿಗಟ್ಟಲೆ ಹಣವನ್ನು ತಮ್ಮ ಥೈಲಿಗಳಿಗೆ ಸೇರಿಸಿಕೊಳ್ಳುತ್ತ ಮೆರೆಯುವವರನ್ನು ನಮ್ಮ ಸಮಾಜವು ಅವರ ಬಣ್ಣ ಬಯಲಾಗಿ ಅವರು ಜೈಲು ಸೇರುವವರೆಗೂ, ‘ಗುರೂಜಿ’ ಎಂದೇ ಗೌರವಿಸುತ್ತದೆ. ಇಂತಹ ಹಲವು ಗುರೂಜಿಗಳು ದೇಶವನ್ನಾಳುವ ದೊರೆಗಳಿಗೆ ಆಪ್ತ ಸಲಹೆಗಾರರೂ ಆಗಿರುತ್ತಾರೆ.
  ಆದರೆ ಇದೆಲ್ಲ ಈ ದೇಶದ ಒಂದು ಧರ್ಮಕ್ಕೆ ಮಾತ್ರ ಸೀಮಿತವೆಂಬ ಭಾವನೆಯನ್ನು ತೊಡೆದು ಹಾಕುವಂತಹ ಬೆಳವಣಿಗೆಗಳು ಭಾರತದಲ್ಲಿ ಆಗಿ, ಜಗತ್ತು ‘‘ಅರೆ! ಇದೇನು? ಅವರದ್ದೂ ಇದೇ ಕತೆಯೆ?’’ ಎಂದು ಪ್ರಶ್ನಿಸಲಾರಂಭಿಸಿದೆ. ಎಷ್ಟರ ಮಟ್ಟಿಗೆ ಎಂದರೆ ಆಗಸ್ಟ್ ಕೊನೆಯ ವಾರದಲ್ಲಿ ಐರ್ಲೆಂಡ್‌ಗೆ ಭೇಟಿ ನೀಡಿದ ವಿಶ್ವ ಕೆಥೋಲಿಕ್ ಸಮುದಾಯದ ಪರಮ ಗುರು ಪೋಪ್ ಫ್ರಾನ್ಸಿಸ್ ಚರ್ಚ್ ಲೈಂಗಿಕ ದುರ್ಬಳಕೆಯ ‘ವಿಶ್ವಾಸಘಾತಕತನ’ಕ್ಕಾಗಿ ವಿಶ್ವದ ಮುಂದೆ ಕ್ಷಮೆಯಾಚಿಸಿದರು. ಅಲ್ಲದೆ ಪಾದ್ರಿಗಳಿಂದ ಲೈಂಗಿಕ ಕಿರುಕುಳ, ಅತ್ಯಾಚಾರಕ್ಕೊಳಗಾದ ಎಂಟು ಮಂದಿ ಬಲಿಪಶು(ವಿಕ್ಟಿಮ್ಸ್)ಗಳನ್ನು ಖಾಸಗಿಯಾಗಿ ಭೇಟಿಯಾಗಿ, ಈ ‘ಪಿಡುಗಿನ’ ನಿರ್ಮೂಲನಕ್ಕಾಗಿ ಚರ್ಚ್ ಇನ್ನಷ್ಟು ಹೆಚ್ಚಿನ ಬದ್ಧತೆ ತೋರುವಂತೆ ತಾನು ಪ್ರಯತ್ನಿಸುವುದಾಗಿ ಹೇಳಿದರು. ದಶಕಗಳ ಕಾಲ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಗಳು ಐರ್ಲೆಂಡ್‌ನಲ್ಲಿ ಚರ್ಚ್ ಈ ಹಿಂದೆ ಹೊಂದಿದ್ದ ಪ್ರಬಲ ಪಾತ್ರವನ್ನು ಚಿಂದಿಚೂರಾಗಿಸಿದೆ ಎನ್ನುವುದೂ ಗಮನಾರ್ಹ.
  ಭಾರತೀಯ ಪರಂಪರೆಯಲ್ಲಿ ಮನುಷ್ಯನ ಜೀವನದ ಮುಖ್ಯ ಸಾಧ್ಯಗಳನ್ನು ಧರ್ಮ, ಅರ್ಥ, ಕಾಮ, ಮೋಕ್ಷ ಎಂದು ಚರ್ತುವಿಧ ಪುರುಷಾರ್ಥಗಳಾಗಿ ವರ್ಗೀಕರಿಸಲಾಗಿದೆ. ವರ್ಗೀಕರಣದ ಅನುಕ್ರಮಣಿಕೆಯಲ್ಲೇ ಪ್ರತಿಯೊಂದು ವಿಷಯಕ್ಕೆ ನೀಡುವ ಪ್ರಧಾನ್ಯವನ್ನು ಸೂಚಿಸಲಾಗುತ್ತದೆ. ಮೊದಲ ಸ್ಥಾನ ಸನ್ನಡತೆಗೆ (ಧರ್ಮ), ಬಳಿಕ ಸಂಪಾದನೆಗೆ(ಅರ್ಥ), ನಂತರ ಸಂಗಮಕ್ಕೆ(ಕಾಮ), ಹಾಗೂ ಕೊನೆಯದಾಗಿ ಅತ್ಯಂತ ಅಮೂರ್ತವಾದ ಮೋಕ್ಷಕ್ಕೆ(ಬಿಡುಗಡೆಗೆ), ಅಂದರೆ ನೈತಿಕವಾಗಿ ಸಂಪಾದಿಸಿ ಸಂಸಾರ ಹೂಡಿ ಅಂತಿಮವಾಗಿ ನಿಧನವೋ ನಿರ್ಯಾಣವೋ ಯಾವುದೋ ಒಂದರಲ್ಲಿ ಬದುಕು ಕೊನೆಗೊಳ್ಳುವ ಒಂದು ಸುಂದರ ಕಲ್ಪನೆ ಇದು. ಆದರೆ ಇದೀಗ ಬದಲಾಗಿ ಅರ್ಥಗಳಿಕೆ ಅಧಿಕಾರದ ಗಳಿಕೆಯಾಗಿ ಅಧಿಕಾರದ ಮದ ಕಾಮಕೇಳಿಗೆ, ಲೈಂಗಿಕ ದೌರ್ಜನ್ಯಕ್ಕೆ ದೊರಕುವ ರಹದಾರಿಯಾಗಿದೆ. ಮೋಕ್ಷದ, ಅಲೌಕಿಕದ, ಸ್ವರ್ಗದ ಮಾತನಾಡುತ್ತಲೇ ಅಮಾಯಕರ ಪಾಲಿಗೆ ಲೌಕಿಕ ನರಕವನ್ನು ಸೃಷ್ಟಿಸುವ ಸಕಲ ಧರ್ಮಗಳ ಕಾಮಾಂಧರನ್ನು ಹದ್ದು ಬಸ್ತಿನಲ್ಲಿಡುವುದು ಹೇಗೆ? ಮುಗ್ಧರ ಲೈಂಗಿಕ ಮಾರಣಹೋಮವನ್ನು ತಡೆಯುವುದು ಹೇಗೆ? ಎಂಬುದೇ ಜಾಗತಿಕ ಪ್ರಜ್ಞಾವಂತ ನಾಗರಿಕ ಸಮಾಜದ ಒಂದು ದೊಡ್ಡ ಸಮಸ್ಯೆಯಾಗಿದೆ.

ಕೃಪೆ: (bhaskarrao599@gmail.com) 

Writer - ಡಾ. ಬಿ. ಭಾಸ್ಕರ ರಾವ್

contributor

Editor - ಡಾ. ಬಿ. ಭಾಸ್ಕರ ರಾವ್

contributor

Similar News

ಜಗದಗಲ
ಜಗ ದಗಲ