ನಿಮ್ಮ ಕರುಳನ್ನು ಬಾಧಿಸುವ ಕ್ರೋನ್ಸ್ ಕಾಯಿಲೆಯ ಬಗ್ಗೆ ನಿಮಗೆ ಗೊತ್ತೇ...?

Update: 2018-09-22 11:10 GMT

ಕ್ರೋನ್ಸ್ ಕಾಯಿಲೆಯನ್ನು ಸರಳವಾಗಿ ಕರುಳಿನ ಉರಿಯೂತದ ಕಾಯಿಲೆ ಎಂದು ಹೇಳಬಹುದು. ಸಾಮಾನ್ಯವಾಗಿ ಸಣ್ಣಕರುಳಿನ ಅಂತಿಮ ಭಾಗವು ಈ ರೋಗಕ್ಕೆ ಗುರಿಯಾಗುತ್ತದೆಯಾದರೂ ಕರುಳಿನುದ್ದಕ್ಕೂ ಇತರ ಕಡೆಗಳಲ್ಲಿಯೂ ಈ ರೋಗವು ಕಾಡಬಹುದು. ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಈ ರೋಗವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದು ಕರುಳಿನ ಭಿತ್ತಿಗಳ ಒಳಭಾಗದಲ್ಲಿ ಸೋಂಕನ್ನುಂಟು ಮಾಡುತ್ತದೆ. ಜೊತೆಗೆ ಕರುಳಿನ ಒಳಭಾಗದಲ್ಲಿ ಮತ್ತು ಬಾಯಿಯಿಂದ ಗುದನಾಳದವರೆಗೆ ಹುಣ್ಣುಗಳಿಗೆ ಕಾರಣವಾಗಬಹುದು.

 ಜ್ವರ,ನಿಶ್ಶಕ್ತಿ,ಹೊಟ್ಟೆ ಕಿವಿಚುವಿಕೆ,ಗುದನಾಳದಲ್ಲಿ ರಕ್ತಸ್ರಾವ,ಕರುಳಿನ ನಿರಂತರ ಸಡಿಲತೆ ಮತ್ತು ಹಸಿವು ಕ್ಷೀಣಿಸುವಿಕೆ ಈ ರೋಗದ ಲಕ್ಷಣಗಳಲ್ಲಿ ಸೇರಿವೆ. ಹಸಿವು ಕ್ಷೀಣಿಸುವುದು ಅಂತಿಮವಾಗಿ ಶರೀರದ ತೂಕ ಇಳಿಕೆ ಮತ್ತು ಪೌಷ್ಟಿಕಾಂಶಗಳ ಕೊರತೆಗೆ ಕಾರಣವಾಗುತ್ತದೆ.

ಕ್ರೋನ್ಸ್ ಕಾಯಿಲೆಯನ್ನುಂಟು ಮಾಡುವ ಕಾರಣಗಳ ಬಗ್ಗೆ ಸಂಶೋಧಕರ ನಡುವೆ ವಾದವಿವಾದಗಳು ನಡೆಯುತ್ತಲೆ ಇವೆ. ಇದನ್ನು ನಿಖರವಾಗಿ ನಿರ್ಧರಿಸಲು ಇನ್ನಷ್ಟು ಅಧ್ಯಯನಗಳು ಅಗತ್ಯವಾಗಿವೆಯಾದರೂ ಶರೀರದ ರೋಗ ನಿರೋಧಕ ಶಕ್ತಿಯು ಗೊಂದಲಗೊಂಡು ಅಂಗಾಂಶಗಳ ಮೇಲೆ ದಾಳಿ ನಡೆಸುವುದು ಇದಕ್ಕೆ ಕಾರಣವೆಂದು ಕೆಲವರು ಹೇಳಿದರೆ ಇನ್ನು ಕೆಲವರು ಇದು ವಂಶವಾಹಿ ಸಮಸ್ಯೆ ಎಂದು ಪ್ರತಿಪಾದಿಸಿದ್ದಾರೆ. ಆಹಾರಕ್ರಮ ಮತ್ತು ಪೌಷ್ಟಿಕಾಂಶಗಳ ಕೊರತೆ ಈ ಕಾಯಿಲೆಯನ್ನುಂಟು ಮಾಡುತ್ತದೆ ಎಂದು ಇನ್ನು ಕೆಲವರು ನಂಬಿದ್ದಾರೆ. ಧೂಮ್ರಪಾನ ಸೇರಿದಂತೆ ಯಾವುದೇ ರೂಪದಲ್ಲಿ ತಂಬಾಕು ಸೇವಿಸುವವರಲ್ಲಿ ಈ ಕಾಯಿಲೆಯು ಕಾಣಿಸಿಕೊಳ್ಳುವ ಅಪಾಯ ಹೆಚ್ಚು ಎನ್ನುವುದನ್ನು ಕೆಲವು ಸಂಶೋಧನೆಗಳು ಬೆಟ್ಟು ಮಾಡಿವೆ.

 ಈ ಕಾಯಿಲೆಯನ್ನು ಹೊಂದಿರುವವರಲ್ಲಿ ತಂಬಾಕು ಸೇವನೆಯು ಕಾಯಿಲೆಯು ಮತ್ತೆ ಮರುಕಳಿಸುವ ಅಪಾಯವನ್ನುಂಟು ಮಾಡುವ ಜೊತೆಗೆ ಪುನರಪಿ ಶಸ್ತ್ರಚಿಕಿತ್ಸೆಗಳು ಮತ್ತು ರೋಗ ನಿರೋಧಕ ವ್ಯವಸ್ಥೆಯ ಚಟುವಟಿಕೆಗಳನ್ನು ತಗ್ಗಿಸುವ ಚಿಕಿತ್ಸೆಯನ್ನು ಅಗತ್ಯವಾಗಿಸುತ್ತವೆ. ಧೂಮ್ರಪಾನವು ಕರುಳನ್ನು ಬಲಗುಂದಿಸುತ್ತದೆ ಮತ್ತು ಕರುಳಿಗೆ ರಕ್ತದ ಹರಿವನ್ನು ತಗ್ಗಿಸುತ್ತದೆ ಮತ್ತು ಇದು ಕ್ರೋನ್ಸ್ ಕಾಯಿಲೆಗೆ ಹದವಾದ ವಾತಾವರಣವನ್ನು ಸೃಷ್ಟಿಸುತ್ತದೆ ಎಂದೂ ಕೆಲವು ಸಂಶೋಧಕರು ಕಂಡುಕೊಂಡಿದ್ದಾರೆ.

ಕರುಳಿನ ಉರಿಯೂತವನ್ನು ತಗ್ಗಿಸುವ ಮತ್ತು ಪೌಷ್ಟಿಕಾಂಶ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಈ ಕಾಯಿಲೆಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ. ಔಷಧಿಗಳು,ನೈಸರ್ಗಿಕ ಪೂರಕಗಳು,ಶಸ್ತ್ರಚಿಕಿತ್ಸೆಯ ಮೂಲಕ ಅಥವಾ ಈ ಮೂರನ್ನೂ ಒಳಗೊಂಡ ವಿಧಾನವನ್ನು ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.

ವಾಕರಿಕೆ,ವಾಂತಿ,ಅತಿಸಾರ,ಸೋಂಕು ತಗುಲುವ ಹೆಚ್ಚಿನ ಸಾಧ್ಯತೆ,ಬಿಳಿರಕ್ತಕಣಗಳ ಸಂಖ್ಯೆಯಲ್ಲಿ ಕುಸಿತ ಮತ್ತು ಯಕೃತ್ತಿಗೆ ಹಾನಿಯ ಸಾಧ್ಯತೆ ಈ ಕಾಯಿಲೆಗೆ ಚಿಕಿತ್ಸೆಯ ಅಡ್ಡಪರಿಣಾಮಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News