ರಫೇಲ್: ರಿಲಯನ್ಸ್ ಯುಪಿಎ ಸರಕಾರ ಅಂತಿಮಗೊಳಿಸಿದ್ದ ಒಪ್ಪಂದದ ಭಾಗವಾಗಿತ್ತು ಎಂದು ಸುಳ್ಳು ಹೇಳುತ್ತಿರುವ ಬಿಜೆಪಿ

Update: 2018-09-23 11:41 GMT

ಫ್ರಾನ್ಸ್‌ನಿಂದ 36 ರಫೇಲ್ ಯುದ್ಧವಿಮಾನಗಳ ಖರೀದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರವು ಮಾಡಿಕೊಂಡಿರುವ ಒಪ್ಪಂದವು ರಾಷ್ಟ್ರ ರಾಜಕಾರಣದಲ್ಲಿ ಭಾರೀ ವಿವಾದವೊಂದನ್ನು ಸೃಷ್ಟಿಸಿದೆ. ಮೋದಿ ಮತ್ತು ಉದ್ಯಮಿ ಅನಿಲ್ ಅಂಬಾನಿ ಸೇರಿಕೊಂಡು ಲೂಟಿಗಿಳಿದಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅರೋಪಿಸಿದ್ದಾರೆ. ಪ್ರತಿಪಕ್ಷಗಳು ಅವರೊಂದಿಗೆ ಧ್ವನಿಗೂಡಿಸಿವೆ. ಈ ಮಧ್ಯೆ ಫ್ರಾನ್ಸ್‌ನಿಂದ ರಫೇಲ್ ಯುದ್ಧವಿಮಾನಗಳ ಖರೀದಿಗಾಗಿ 2013ರಲ್ಲಿ ಅಂದಿನ ಯುಪಿಎ-2 ಸರಕಾರವು ಅಂತಿಮಗೊಳಿಸಿದ್ದ ಒಪ್ಪಂದದಲ್ಲಿಯೇ ಅನಿಲ್ ಅಂಬಾನಿಯವರ ರಿಲಯನ್ಸ್ ಡಿಫೆನ್ಸ್ ಡಸಾಲ್ಟ್ ಏವಿಯೇಷನ್‌ನ ಭಾರತೀಯ ಪಾಲುದಾರನಾಗಿತ್ತು, ಇದರಲ್ಲಿ ಸರಕಾರದ ಕೈವಾಡವೇನೂ ಇಲ್ಲ ಎಂದು ಬಿಜೆಪಿ ಸಮಜಾಯಿಷಿ ನೀಡಿದೆ. ಈ ಬಗ್ಗೆ ಸುದ್ದಿ ಜಾಲತಾಣ ಆಲ್ಟ್ ನ್ಯೂಸ್‌ನ ವರದಿಗಾರ ಅರ್ಜುನ ಸಿದ್ಧಾರ್ಥ ಅವರು ಸ್ವತಂತ್ರ ತನಿಖೆಯೊಂದನ್ನು ನಡೆಸಿ ಬಿಜೆಪಿ ಅಪ್ಪಟ ಸುಳ್ಳು ಹೇಳುವ ಮೂಲಕ ದೇಶದ ದಾರಿಯನ್ನು ತಪ್ಪಿಸುತ್ತಿದೆ ಎನ್ನುವುದನ್ನು ಸಾಬೀತುಗೊಳಿಸಿದ್ದಾರೆ. ಅವರ ತನಿಖಾ ವರದಿ ಇಲ್ಲಿದೆ, ಓದಿಕೊಳ್ಳಿ.

ಹಾಲಿ ರಫೇಲ್ ಒಪ್ಪಂದದಲ್ಲಿ ಭಾರತೀಯ ಪಾಲುದಾರನಾಗಿ ಅನಿಲ್ ಅಂಬಾನಿಯವರ ರಿಲಯನ್ಸ್ ಡಿಫೆನ್ಸ್ ಕಂಪೆನಿಯನ್ನು ಸೇರಿಸುವಂತೆ ಭಾರತ ಸರಕಾರವೇ ಸೂಚಿಸಿತ್ತು, ಹೀಗಾಗಿ ಈ ವಿಷಯದಲ್ಲಿ ಫ್ರಾನ್ಸ್ ಸರಕಾರಕ್ಕೆ ಬೇರೆ ದಾರಿಯೇ ಇರಲಿಲ್ಲ ಎಂದು ಹೇಳುವ ಮೂಲಕ ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಅವರು ರಾಜಕೀಯ ಚಂಡಮಾರುತವೊಂದನ್ನು ಸೃಷ್ಟಿಸಿದ್ದಾರೆ. ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರವು ಬೃಹತ್ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದ ಆರೋಪಗಳನ್ನು ಎದುರಿಸುತ್ತಿದೆ. ಹಿಂದಿನ ಸರಕಾರವು ಅಂತಿಮಗೊಳಿಸಿದ್ದ ಒಪ್ಪಂದದಂತೆ 126 ರಫೇಲ್ ಯುದ್ಧವಿಮಾನಗಳ ಪೈಕಿ 108 ವಿಮಾನಗಳನ್ನು ಭಾರತದಲ್ಲಿಯೇ ನಿರ್ಮಿಸಲಿದ್ದ ಸರಕಾರಿ ಸ್ವಾಮ್ಯದ ಎಚ್‌ಎಎಲ್‌ನ ಬದಲಾಗಿ ರಿಲಯನ್ಸ್ ಡಿಫೆನ್ಸ್ ಪರ ಎನ್‌ಡಿಎ ಸರಕಾರವು ಒಲವು ತೋರಿಸಿದೆ ಎಂದು ಆರೋಪಿಸಲಾಗಿದೆ.

ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಫೆಬ್ರವರಿ, 2013ರಿಂದಲೇ ರಫೇಲ್ ಯುದ್ಧವಿಮಾನಗಳ ತಯಾರಕ ಡಸಾಲ್ಟ್ ಏವಿಯೇಷನ್ ಮತ್ತು ರಿಲಯನ್ಸ್ ಡಿಫೆನ್ಸ್ ನಡುವೆ ಒಪ್ಪಂದ ಅಸ್ತಿತ್ವದಲ್ಲಿತ್ತು ಎಂಬ ನಿರಾಕರಿಸಲಾಗದ ಸಾಕ್ಷಾಧಾರವಿದೆ ಎಂದು ಶನಿವಾರ, ಸೆ.22ರಂದು ಬಿಜೆಪಿ ಟ್ವೀಟಿಸಿದೆ.

ಇದನ್ನೇ ಪುನರುಚ್ಚರಿಸಿ ಟ್ವೀಟ್ ಮಾಡಿರುವ ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರು, ಡಸಾಲ್ಟ್ ಏವಿಯೇಷನ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ನಡುವಿನ ರಕ್ಷಣಾ ಒಪ್ಪಂದವನ್ನು ವರದಿ ಮಾಡಿದ್ದ 2012, ಫೆ.13ರ ಟೈಮ್ಸ್ ಆಫ್ ಇಂಡಿಯಾದಲ್ಲಿನ ಲೇಖನವೊಂದಕ್ಕೆ ಕೊಂಡಿಯನ್ನೂ ನೀಡಿದ್ದಾರೆ. ದಿಲ್ಲಿ ಬಿಜೆಪಿಯ ವಕ್ತಾರ ತಜಿಂದರ್ ಬಗ್ಗಾ ಅವರು ಒಪ್ಪಂದದ ಕುರಿತು ಪತ್ರಿಕಾ ವರದಿಗಳ ಸರಣಿ ಸ್ಕ್ರೀನ್ ಶಾಟ್‌ಗಳನ್ನೇ ಟ್ವೀಟಿಸಿದ್ದಾರೆ.

ಅಂದ ಹಾಗೆ ಹಿಂದಿನ ಸರಕಾರವು ಮಾಡಿಕೊಂಡಿದ್ದ ಒಪ್ಪಂದದಲ್ಲಿಯೇ ರಿಲಯನ್ಸ್ ಇಂಡಸ್ಟ್ರೀಸ್(ಆರ್‌ಐಎಲ್)ದೇಶಿ ಪಾಲುದಾರನಾಗಿತ್ತು ಎಂಬ ಬಿಜೆಪಿಯ ಹೇಳಿಕೆಯ ಹಿಂದಿನ ಅಸಲಿ ಕಥೆಯೇನು?

ಆರ್‌ಐಎಲ್ ಮುಕೇಶ್ ಅಂಬಾನಿಯವರ ಕಂಪೆನಿ

2012ರಲ್ಲಿ ರಕ್ಷಣಾ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ್ದ ಆರ್‌ಐಎಲ್ ಮುಕೇಶ್ ಅಂಬಾನಿಯವರಿಗೆ ಸೇರಿದ್ದಾಗಿದೆ. ಅವರ ಸೋದರ ಅನಿಲ್ ಅಂಬಾನಿ ರಿಲಯನ್ಸ್ ಅನಿಲ್ ಧೀರುಭಾಯಿ ಅಂಬಾನಿ ಗ್ರೂಪ್(ಅಡಾಗ್)ನ ಮುಖ್ಯಸ್ಥರಾಗಿದ್ದಾರೆ. ಧೀರುಭಾಯಿ ನಿಧನದ ಬಳಿಕ ಅವರ ಉದ್ಯಮ ಸಾಮ್ರಾಜ್ಯವನ್ನು ಹಂಚಿಕೊಳ್ಳಲು ಸಹೋದರರ ನಡುವಿನ ಬಹಿರಂಗ ಕಚ್ಚಾಟದಲ್ಲಿ ತಾಯಿ ಕೋಕಿಲಾಬೆನ್ ಅಂಬಾನಿ ಮಧ್ಯೆ ಪ್ರವೇಶಿಸಿ ರಾಜಿಯನ್ನು ಮಾಡಿಸಿದ ಬಳಿಕ 2005ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಉದ್ಯಮ ಸಮೂಹವು ವಿಭಜನೆಗೊಂಡಿತ್ತು. ಈಗಿನ ಒಪ್ಪಂದವನ್ನು ಡಸಾಲ್ಟ್ ಏವಿಯೇಷನ್ ಮತ್ತು ರಿಲಯನ್ಸ್ ಡಿಫೆನ್ಸ್ ಲಿ. ನಡುವೆ ಮಾಡಿಕೊಳ್ಳಲಾಗಿದೆ.

ಚೋದ್ಯವೆಂದರೆ ರಿಲಯನ್ ಡಿಫೆನ್ಸ್ ಸ್ಥಾಪನೆಗೊಂಡಿದ್ದು 2015, ಮಾ.28ರಂದು. ಅಂದರೆ ಹಳೆಯ ಒಪ್ಪಂದವು ರದ್ದುಗೊಂಡ ಮತ್ತು 36 ರಫೇಲ್ ವಿಮಾನಗಳ ಖರೀದಿಗಾಗಿ ಎಪ್ರಿಲ್ 2015ರಲ್ಲಿ ಹೊಸ ಒಪ್ಪಂದಕ್ಕೆ ಅಂಕಿತ ಬಿದ್ದ ಕೆಲವೇ ದಿನಗಳಿಗೆ ಮೊದಲು!

ರಿಲಯನ್ಸ್ ಡಿಫೆನ್ಸ್ ಅಡಾಗ್‌ನ ಅಂಗಸಂಸ್ಥೆಯಾಗಿದೆಯೇ ಹೊರತು ಮುಕೇಶ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್‌ನದ್ದಲ್ಲ. ಈಗ ಬಿಜೆಪಿ ಪ್ರಸ್ತಾಪಿಸುತ್ತಿರುವ ಪತ್ರಿಕಾ ವರದಿಗಳು ಡಸಾಲ್ಟ್ ಏವಿಯೇಷನ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ನಡುವಿನ ಒಪ್ಪಂದಕ್ಕೆ ಸಂಬಂಧಿಸಿವೆ. ವ್ಯಂಗ್ಯವೆಂದರೆ ಮುಕೇಶ ಅಂಬಾನಿಯವರ ಚಿತ್ರದೊಂದಿಗೆ ಲೇಖನದ ಸ್ಕ್ರೀನ್ ಶಾಟ್‌ಗಳನ್ನು ಟ್ವೀಟಿಸಿರುವ ತಜಿಂದರ್ ಬಗ್ಗಾ ಅವರ ಗಮನಕ್ಕೆ ಇದು ಬಂದೇ ಇಲ್ಲ!

ಡಸಾಲ್ಟ್-ಆರ್‌ಐಎಲ್ ರಕ್ಷಣಾ ಒಪ್ಪಂದ

2012ರಲ್ಲಿ ಡಸಾಲ್ಟ್ ಏವಿಯೇಷನ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ರಕ್ಷಣಾ ಕ್ಷೇತ್ರದಲ್ಲಿ ಪಾಲುದಾರಿಕೆಗಾಗಿ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದವು. ರಕ್ಷಣಾ ಇಲಾಖೆಯು ವ್ಯಾಪಕ ಫೀಲ್ಡ್ ಟ್ರಯಲ್‌ಗಳ ಬಳಿಕ ಖರೀದಿಗಾಗಿ ರಫೇಲ್‌ನ್ನು ಆಯ್ಕೆ ಮಾಡಿಕೊಂಡ ಬೆನ್ನಲ್ಲೇ ಈ ಒಪ್ಪಂದವಾಗಿತ್ತು. ವೈಮಾನಿಕ ಕ್ಷೇತ್ರವನ್ನು ಪ್ರವೇಶಿಸಲು ಉದ್ದೇಶಿಸಿದ್ದ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್‌ನೊಂದಿಗೆ ಡಸಾಲ್ಟ್ ಮಾತುಕತೆಗಳನ್ನು ಆರಂಭಿಸಿತ್ತು. ರಿಲಯನ್ಸ್ ಏರೋಸ್ಪೇಸ್ ಟೆಕ್ನಾಲಜೀಸ್ ಲಿ.(ಆರ್‌ಎಟಿಎಲ್) ಎಂಬ ನೂತನ ಕಂಪನಿಯನ್ನು 2008,ಸೆ.4ರಂದು ಸ್ಥಾಪಿಸಲಾಗಿತ್ತು. ವಾಯುಪಡೆಯು ರಫೇಲ್ ಮತ್ತು ಯುರೋಫೈಟರ್ ಜೆಟ್ ವಿಮಾನಗಳನ್ನು ಶಾರ್ಟ್‌ಲಿಸ್ಟ್ ಮಾಡಿದ ವಾರಗಳ ಬಳಿಕ, ಮೇ 2011ರಲ್ಲಿ ಎಚ್‌ಎಎಲ್‌ನ ಪಾತ್ರದ ಕುರಿತು ಚರ್ಚೆಗಳು ಸೇರಿದಂತೆ ಪಾಲುದಾರಿಕೆ ಮಾರ್ಗಸೂಚಿಯನ್ನು ರೂಪಿಸಲು ಮುಖ್ಯ ಅಧಿಕಾರಿಗಳ ನೇಮಕಗಳನ್ನು ಆರ್‌ಎಟಿಎಲ್ ಪ್ರಾರಂಭಿಸಿತ್ತು ಎಂದು ಇಕನಾಮಿಕ್ ಟೈಮ್ಸ್ ವರದಿ ಮಾಡಿತ್ತು.

2014ರ ಬಳಿಕ ಒಪ್ಪಂದದ ಕುರಿತು ವ್ಯೂಹಾತ್ಮಕ ಪುನರ್‌ಪರಿಶೀಲನೆ ನಡೆಸಿದ ರಿಲಯನ್ಸ್ ರಕ್ಷಣಾ ಮತ್ತು ವೈಮಾನಿಕ ಕ್ಷೇತ್ರ ಉದ್ಯಮಗಳಿಂದ ಹಿಂದೆ ಸರಿದಿದ್ದರಿಂದ ಈ ಯೋಜನೆ ಮೂಲೆಗುಂಪಾಗಿದ್ದರಿಂದ ಒಪ್ಪಂದವು ಕಾರ್ಯಗತಗೊಂಡಿರಲಿಲ್ಲ ಎಂದೂ ಅದು ಲೇಖನದಲ್ಲಿ ಹೇಳಿದೆ. ರಿಲಯನ್ಸ್ ಇಂಡಸ್ಟ್ರೀಸ್ ಆಗಲೇ ಹಿಂದಿನ ಸರಕಾರವು ಸಹಿ ಹಾಕಿದ್ದ ಒಪ್ಪಂದದಲ್ಲಿ ದೇಶಿ ಪಾಲುದಾರನಾಗಿತ್ತು ಎಂಬ ಬಿಜೆಪಿಯ ಹೇಳಿಕೆ ಅಪ್ಪಟ ಸುಳ್ಳಾಗಿದೆ. ಪಕ್ಷವು ಪ್ರಸ್ತಾಪಿಸಿರುವ ಒಪ್ಪಂದವನ್ನು ಡಸಾಲ್ಟ್ ಏವಿಯೇಷನ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಮಾಡಿಕೊಂಡಿದ್ದಾಗಿದೆ. ಹಾಲಿ ಒಪ್ಪಂದ ಡಸಾಲ್ಟ್ ಮತ್ತು ರಿಲಯನ್ಸ್ ಡಿಫೆನ್ಸ್ ನಡುವಿನದಾಗಿದೆ. ರಫೇಲ್ ಒಪ್ಪಂದವನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಸರಕಾರದ ಹುನ್ನಾರಗಳು ಮುಜುಗರಕ್ಕಿಂತ ಜನರ ಕಣ್ಣಿಗೆ ಮಣ್ಣೆರಚುವ ಪ್ರಯತ್ನವಾಗಿವೆ, ಅಷ್ಟೇ.

ಕೃಪೆ: altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News