ದರ್ಗಾ ಉಸ್ತುವಾರಿಯ ಮೊದಲ ವಿಶ್ವವಿದ್ಯಾನಿಲಯ

Update: 2018-09-23 18:39 GMT

ಸದ್ಯದಲ್ಲೇ ಖ್ವಾಜಾ ಬಂದೇ ನವಾಝ್ ಸಮೂಹ ಶಿಕ್ಷಣ ಸಂಸ್ಥೆಗಳು ಖ್ವಾಜಾ ಬಂದೇ ನವಾಝ್ ವಿಶ್ವವಿದ್ಯಾನಿಲಯದ ವ್ಯಾಪ್ತಿಯೊಳಗೆ ಬರಲಿವೆ. ಹೊಸ ವಿವಿಯ ಅಂಗೀಕಾರಕ್ಕಾಗಿ ಸಲ್ಲಿಸಲಾಗಿದ್ದ ಅರ್ಜಿಗೆ ಆಗಸ್ಟ್ 23ರಂದು ಮಂಜೂರಾತಿ ದೊರಕಿದ್ದು ಸರಕಾರದ ಗೆಜೆಟ್‌ನಲ್ಲಿ ಆ ಕುರಿತ ನೋಟಿಫಿಕೇಶನ್ ಪ್ರಕಟವಾಗಿದೆ. ದೇಶದಲ್ಲಿ ಒಂದು ದರ್ಗಾದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಮೂಹವೊಂದು ಸ್ಥಾಪಿಸಲಿರುವ ಮೊತ್ತಮೊದಲ ವಿಶ್ವವಿದ್ಯಾನಿಲಯ ಇದು.
ದರ್ಗಾ ಹಝ್ರತ್ ಖ್ವಾಜಾ ಬಂದೇ ನವಾಝ್‌ನ ಸಜ್ಜಾ ದನಾಶಿನ್(ಮುಖ್ಯಸ್ಥ) ಆಗಿರುವ ಸೈಯದ್ ಶಾ ಜೆಸುದರಾಝ್ ಖುಸ್ರೊ ಹುಸೈನಿ ಈ ವಿಷಯವನ್ನು ಪ್ರಕಟಿಸಿದ್ದಾರೆ. ಅವರೇ ವಿವಿಯ ಕುಲಪತಿ ಆಗಲಿದ್ದಾರೆ. ಅವರು ಈ ಲೇಖಕರೊಂದಿಗೆ ಹೇಳಿದಂತೆ ಕಲಬುರಗಿ ನಗರದ ಹೃದಯ ಭಾಗದಲ್ಲಿ ಹೊಸ ವಿವಿಗೆ 37 ಎಕರೆ ಕ್ಯಾಂಪಸ್ ಇದೆ. ವಿವಿಯು ಈ ವರ್ಷ ಕೆಲವು ಹೊಸ ಸ್ನಾತಕೋತ್ತರ ಕೋರ್ಸ್‌ಗಳನ್ನು ಮತ್ತು ಮುಂದಿನ ವರ್ಷಗಳಲ್ಲಿ ಪದವಿ ಮತ್ತು ಡಿಪ್ಲೊಮಾ ಕೋರ್ಸ್‌ಗಳ ಒಂದು ಸರಮಾಲೆಯನ್ನೇ ಆರಂಭಿಸಲಿದೆ. ಈ ಮೊದಲು ಧಾರವಾಡ ವಿವಿ ಮತ್ತು ಕಲಬುರಗಿಯ ಕೇಂದ್ರೀಯ ವಿವಿಯ ಉಪ ಕುಲಪತಿಯಾಗಿದ್ದ ಪ್ರೊ. ಎ.ಎಂ. ಪಠಾಣ್‌ರನ್ನು ಹೊಸವಿವಿಯ ಉಪಕುಲಪತಿಗಳಾಗಿ ನೇಮಕ ಮಾಡಲಾಗಿದೆ. ಡಾ. ವಿರೂಪಾಕ್ಷಯ್ಯ ಪ್ರೊ. ಚಾನ್ಸ್ ಲರ್ ಆಗಿರುತ್ತಾರೆ. ವಿವಿಯ ಸಲಹಾ ಸಮಿತಿಯಲ್ಲಿ ಪ್ರೊ. ಪಿ.ಎಸ್. ಶಂಕರ್, ಡಾ.ರಾಜ, ಪ್ರೊ. ಮುಸ್ತ್ತಫಾ ಷರೀಫ್ ಮತ್ತು ಮುಹಮ್ಮದ್ ಜಮಾಲ್ ಇರಲಿದ್ದಾರೆ.
 ಖ್ವಾಜಾ ಸಮೂಹ ಸಂಸ್ಥೆಗಳಲ್ಲಿ ಒಂದು ಇಂಜಿನಿಯರಿಂಗ್ ಕಾಲೇಜು, ಒಂದು ವೈದ್ಯಕೀಯ ಕಾಲೇಜು, ಒಂದು ಕಾನೂನು ಕಾಲೇಜು, ಮುಂದುವರಿದ ಒಂದು ಇಂಗ್ಲಿಷ್ ಅಧ್ಯಯನದಲ್ಲೂ ಕೇಂದ್ರ ಇವೆ. ಖ್ವಾಜಾ ಸಮೂಹವು ಒಟ್ಟು 20,000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ 34 ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಖ್ವಾಜಾ ಸಮೂಹ ಸಂಸ್ಥೆಗಳಲ್ಲಿರುವ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜು ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ವಿಶ್ವ ವಿದ್ಯಾನಿಲಯದ ಅಂಗ ಸಂಸ್ಥೆಗಳಾಗಲಿವೆ. ಈಗ ಅವು, ಅನುಕ್ರಮವಾಗಿ ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮತ್ತು ರಾಜೀವ್‌ಗಾಂಧಿ ಆರೋಗ್ಯ ವಿವಿಯ ವ್ಯಾಪ್ತಿಗೊಳಪಟ್ಟಿವೆ.
1958ರಲ್ಲಿ ದರ್ಗಾ ಹಝ್ರತ್‌ನ ಸಜ್ಜಾದನಾಶಿನ್ ಆಗಿದ್ದ ಸೈಯದ್ ಶಾ ಮುಹಮ್ಮದ್ ಅಲ್-ಹುಸೈನಿಯವರು ಖ್ವಾಜಾ ಬಂದೇ ನವಾಝ್ ಎಜುಕೇಶನ್ ಸೊಸೈಟಿಯನ್ನು ನೋಂದಣಿ ಮಾಡಿ, ಬೀಬಿ ರಝಾ ಮಾಧ್ಯಮಿಕಶಾಲೆ ಮತ್ತು ಹುಡುಗರಿಗಾಗಿ ಖ್ವಾಜಾ ಶಾಲೆಯನ್ನು ಆರಂಭಿಸಿದಾಗ ಖ್ವಾಜಾ ಸಮೂಹ ಸಂಸ್ಥೆಗಳ ಪ್ರಯಾಣ ಆರಂಭವಾಯಿತು. ಹೆಣ್ಣು ಮಕ್ಕಳ ಶಾಲೆ 1975ರಲ್ಲಿ ಪ್ರೌಢಶಾಲೆಯಾಯಿತು. 1977ರಲ್ಲಿ ಬೀಬಿ ರಝಾ ಪದವಿ ಕಾಲೇಜಿನ ಸ್ಥಾಪನೆಯಾಯಿತು. 1980ರಲ್ಲಿ ಇಂಜಿನಿಯರಿಂಗ್ ಕಾಲೇಜು ಮತ್ತು 2000ನೇ ಇಸವಿಯಲ್ಲಿ ಖ್ವಾಜಾ ಬಂದೇ ನವಾಝ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ಆರಂಭಗೊಂಡಿತು.


ಖ್ವಾಜಾ ಬಂದೇ ನವಾಝ್ 1321ರಲ್ಲಿ ದಿಲ್ಲಿಯಲ್ಲಿ ಜನಿಸಿದರು. ಅವರು ದಿಲ್ಲಿಯ ಮೆಹ್‌ರೌಲಿ ಪ್ರದೇಶದಲ್ಲಿದ್ದ ನಾಸಿರುದ್ದೀನ್ ಚಿರಾಗ್ ದೆಹ್ಲವಿಯವರ ಅನುಯಾಯಿಯಾಗಿದ್ದರು. ತಿಮೂರು ಲಾಂಗ್ ದಿಲ್ಲಿಯ ಮೇಲೆ ದಾಳಿ ನಡೆಸಿದ ಬಳಿಕ ಸುಮಾರು ಕ್ರಿ.ಶ.1400ರಲ್ಲಿ ಅವರು ದೌಲತಾಬಾದ್‌ಗೆ ವಲಸೆಹೋದರು.
ಅವರು ತನ್ನ ಶಾಂತಿ ಸಂದೇಶವನ್ನು ಸಾರಲು ಗುಲ್ಬರ್ಗಾದಲ್ಲಿ ತನ್ನ ನೆಲೆಯನ್ನು ಸ್ಥಾಪಿಸಿದರು. ಕ್ರಿ.ಶ. 1322ರಲ್ಲಿ ಅವರು ನಿಧನರಾದರು. ಎಲ್ಲ ಧರ್ಮಗಳ ಸಾವಿರಾರು ಮಂದಿ ಅವರ ಅನುಯಾಯಿಗಳಾಗಿದ್ದರು. ಸ್ಥಳೀಯ ಜನಸಮುದಾಯದ ಕಲ್ಯಾಣಕ್ಕಾಗಿ, ಅಭಿವೃದ್ಧಿಗಾಗಿ ಬಂದೇ ನವಾಝ್ ದರ್ಗಾ ಹತ್ತಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. 1988ರಲ್ಲಿ ಅದು 600 ಹಾಸಿಗೆಗಳಿರುವ ಖ್ವಾಜಾ ಬಂದೇ ನವಾಝ್ ಟೀಚಿಂಗ್ ಆ್ಯಂಡ್ ಜನರಲ್ ಹಾಸ್ಪಿಟಲನ್ನು ಸ್ಥಾಪಿಸಿತು. ತರುವಾಯ ಇದು ಖ್ವಾಜಾ ಬಂದೇ ನವಾಝ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್‌ನ ಒಂದು ಅಂಗವಾಗಿದೆ. ಅದು ಈಗ ಒಂದು ನರ್ಸಿಂಗ್ ಸ್ಕೂಲನ್ನು ಕೂಡ ನಡೆಸುತ್ತಿದೆ.
ಬೀಬಿ ರಝಾ ಪದವಿ ಕಾಲೇಜು ಕಲಬುರಗಿ ಮತ್ತು ಸುತ್ತಮುತ್ತಣ ಪ್ರದೇಶಗಳ ಪರ್ದಾ-ಬಂದಿಯಾಗಿದ್ದ ಮುಸ್ಲಿಂ ಹೆಣ್ಣುಮಕ್ಕಳ ಪಾಲಿಗೆ ಒಂದು ವರದಾನವಾಗಿದೆ. ಈ ಕಾಲೇಜು ಇಲ್ಲವಾಗಿದ್ದಲ್ಲಿ ಬಹಳಷ್ಟು ಸಂಖ್ಯೆಯ ಮುಸ್ಲಿಂ ಹೆಣ್ಣುಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಇತ್ತೀಚೆಗೆ ಖ್ವಾಜಾ ಸಮೂಹವು ಬೀಬಿ ರಝಾ ದೂರ ಶಿಕ್ಷಣ ಅಧ್ಯಯನ ಕೇಂದ್ರ, ಬೀಬಿ ರಝಾ ಮಹಿಳಾ ಇಂಗ್ಲಿಷ್ ಸ್ನಾತಕೋತ್ತರ ಕೇಂದ್ರ ಮತ್ತು ಬೀಬಿ ರಝಾಸಮೂಹ ಶಿಕ್ಷಣ ಹಾಗೂ ಪತ್ರಿಕೋದ್ಯಮ ಸ್ನಾತಕೋತ್ತರ ಕೇಂದ್ರವನ್ನು ಸ್ಥಾಪಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಖ್ವಾಜಾ ಬಂದೇ ನವಾಝ್ ದರ್ಗಾ ಸಮಿತಿಯ ಶ್ರೀ ಖುಸ್ರೊ ಹುಸೈನಿಯವರ ಅಧ್ಯಕ್ಷತೆಯಲ್ಲಿ ದರ್ಗಾದಲ್ಲಿ ಅತ್ಯಾಧುನಿಕ ವ್ಯವಸ್ಥೆಗಳನ್ನು ಅಳವಡಿಸಿದೆ. ಸ್ವಚ್ಛವಾದ ಅತಿಥಿಗೃಹಗಳು, ವಿಶಾಲವಾದ ಪಾರ್ಕಿಂಗ್ ಸ್ಥಳಗಳು, ಹವಾನಿಯಂತ್ರಿತವಾದ ಒಂದು ಮಸೀದಿ, ದರ್ಗಾದ ಸುತ್ತ ಸಿಸಿಟಿವಿ ಅಳವಡಿಸಲಾದ ಸಾರ್ವಜನಿಕ ಸ್ಥಳ, ವಿನಯಶೀಲ ಸಿಬ್ಬಂದಿ, ಮಹಿಳೆಯರಿಗಾಗಿ ಶಾಪಿಂಗ್ ಸ್ಥಳ, ಮಧ್ಯಯುಗದ ಹಸ್ತಪ್ರತಿಗಳು ಹಾಗೂ ಇತರ ಆಮೂಲ್ಯ ದಾಖಲೆಗಳಿರುವ ಡಿಜಿಟಲೀಕರಿಸಲಾಗಿರುವ ಒಂದು ಗ್ರಂಥಾಲಯವು ದರ್ಗಾದ ಹೆಮ್ಮೆಯಾಗಿದೆ.
 ಖ್ವಾಜಾ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಒಂದು ಆಧುನಿಕ ವಿಶ್ವವಿದ್ಯಾನಿಲಯವಾಗಿ ಮಾರ್ಪಡಿಸುತ್ತಿರುವುದು ಭಾರತೀಯ ಉಪಖಂಡದಾದ್ಯಂತ ಅನುಯಾಯಿಗಳನ್ನು ಹೊಂದಿರುವ ಹಾಗೂ ಸಮರ್ಥವಾದ ಆಡಳಿತಕ್ಕೊಳಪಟ್ಟಿರುವ, ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿರುವ ದರ್ಗಾದ ಪಾಲಿಗೆ ಹೆಮ್ಮೆಯ ತುರಾಯಿಯಾಗಿದೆ.

Writer - ಎಂ.ಎ. ಸಿರಾಜ್

contributor

Editor - ಎಂ.ಎ. ಸಿರಾಜ್

contributor

Similar News

ಜಗದಗಲ
ಜಗ ದಗಲ