ಪಾನ್ ಪೆಸಿಫಿಕ್ ಓಪನ್ ಗೆದ್ದ ಪ್ಲಿಸ್ಕೋವಾ

Update: 2018-09-23 19:00 GMT

 ಟೋಕಿಯೊ,ಸೆ.23: ಇಲ್ಲಿ ರವಿವಾರ ನಡೆದ ಪಾನ್ ಪೆಸಿಫಿಕ್ ಓಪನ್ ಟೆನಿಸ್‌ನಲ್ಲಿ ಜಪಾನ್‌ನ ನವೊಮಿ ಒಸಾಕಾರನ್ನು 6-4, 6-4ರ ನೇರ ಸೆಟ್‌ಗಳಿಂದ ಮಣಿಸುವ ಮೂಲಕ ಝೆಕ್ ಗಣರಾಜ್ಯದ ಕೆರೊಲಿನಾ ಪ್ಲಿಸ್ಕೊವಾ ಚಾಂಪಿಯನ್ ಪಟ್ಟ ಗೆದ್ದುಕೊಂಡಿದ್ದಾರೆ. ಯುಎಸ್ ಓಪನ್ ಚಾಂಪಿಯನ್ ಒಸಾಕಾರನ್ನು ಕೇವಲ 63 ನಿಮಿಷಗಳಲ್ಲಿ ಮಣಿಸಿದ ನಾಲ್ಕನೇ ಶ್ರೇಯಾಂಕಿತ ಕೆರೊಲಿನಾ ಆಮೂಲಕ ನಿರಂತರ ಹತ್ತು ಪಂದ್ಯಗಳಲ್ಲಿ ಜಯಗಳಿಸಿದ್ದ ಒಸಾಕಾರ ಗೆಲುವಿನ ಓಟಕ್ಕೆ ತಡೆಯಾದರು. ಯುಎಸ್ ಚಾಂಪಿಯನ್‌ಶಿಪ್ ಗೆದ್ದ ಹುಮ್ಮಸ್ಸಿನಿಂದ ಆಡಲಿಳಿದ ಒಸಾಕಾ ಆರಂಭದಿಂದಲೇ ಕೆರೊಲಿನಾ ವಿರುದ್ಧ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಆದರೆ ನಿಧಾನವಾಗಿ ಆಟದ ಮೇಲೆ ಹಿಡಿತ ಸಾಧಿಸಲು ಆರಂಭಿಸಿದ ಝೆಕ್ ಆಟಗಾರ್ತಿ ಅತ್ಯುತ್ತಮ ಆಟ ಪ್ರದರ್ಶಿಸಿ ಒಸಾಕಾ ಆತ್ಮವಿಶ್ವಾಸಕ್ಕೆ ಹೊಡೆತ ನೀಡಿದರು. ಜಪಾನ್‌ನ ಮೊದಲ ಗ್ರಾಂಡ್ ಸ್ಲಾಮ್ ಸಿಂಗಲ್ಸ್ ಚಾಂಪಿಯನ್ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಒಸಾಕಾ ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿರುವುದರಿಂದ ಹತಾಶರಾಗಿರುವುದು ಅವರ ನಡವಳಿಕೆಯಿಂದ ಸ್ಪಷ್ಟವಾಗಿತ್ತು. ವಿರಾಮದ ವೇಳೆ ಆಕೆ ತನ್ನ ಮುಖವನ್ನು ಟವೆಲ್ ಒಳಗೆ ಮುಚ್ಚಿಕೊಂಡಿದ್ದು ಮತ್ತು ಆಟದ ಸಮಯದಲ್ಲಿ ತನ್ನ ರ್ಯಾಕೆಟನ್ನು ತನ್ನ ಶೂಗೆ ಬಡಿಯುತ್ತಿದ್ದುದು ಆಕೆಯ ಹತಾಶೆಯನ್ನು ಪ್ರಕಟಿಸುತ್ತಿದ್ದವು. ಇದರ ಸಂಪೂರ್ಣ ಲಾಭವನ್ನು ಪಡೆದುಕೊಂಡ ಕೆರೊಲಿನಾ ಶಾಂತಚಿತ್ತದಿಂದ ಆಡಿ ಎರಡೇ ಸೆಟ್‌ಗಳಲ್ಲಿ ಮೂರನೇ ಶ್ರೇಯಾಂಕಿತ ನವೊಮಿ ಒಸಾಕಾರಿಗೆ ಸೋಲುಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News