ಪಾಕಿಸ್ತಾನದ್ದು ಒಂದಂಶದ ಕಾಶ್ಮೀರ ಕಾರ್ಯಸೂಚಿ: ಭಾರತ ಟೀಕೆ

Update: 2018-09-24 17:02 GMT

ನ್ಯೂಯಾರ್ಕ್, ಸೆ. 24: ಮಂಗಳವಾರ ಆರಂಭಗೊಳ್ಳುವ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಭಾರತ ಬಹು-ಅಂಶಗಳ ಕಾರ್ಯಸೂಚಿಯನ್ನು ಹೊಂದಿದೆ ಹಾಗೂ ಪಾಕಿಸ್ತಾನ ಬೇಕಾದರೆ ತನ್ನ ಎಂದಿನ ಒಂದಂಶದ ಕಾಶ್ಮೀರ ಕಾರ್ಯಸೂಚಿಯ ಹಿಂದೆ ಹೋಗಬಹುದು ಎಂದು ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ.

ವಿಶ್ವಸಂಸ್ಥೆಯು ಬಹುಪಕ್ಷೀಯ ಆಧಾರದಲ್ಲಿ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ಭಾಗೀದಾರಿಕೆಗಳನ್ನು ಆಧರಿಸಿದ ಭಾರತೀಯ ನಿಲುವು ಹೆಚ್ಚು ಪ್ರಭಾವ ಬೀರುತ್ತದೆ’’ ಎಂದು ಅವರು ರವಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಪಾಕಿಸ್ತಾನ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸುವ ಸಾಧ್ಯತೆ ಕುರಿತ ವರದಿಗಾರರೊಬ್ಬರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.

 ‘‘ಯಾರಾದರೂ ಒಂದೇ ವಿಷಯಕ್ಕೆ ಅವರನ್ನು ಸೀಮಿತಗೊಳಿಸಲು ಬಯಸಿದರೆ, ಅದು ಅವರಿಗೆ ಬಿಟ್ಟದ್ದು. ನಾವು ಈ ಹಿಂದೆ ಒಂದಂಕದ ನಾಟಕವನ್ನು ಹಲವು ಬಾರಿ ನೋಡಿದ್ದೇವೆ ಹಾಗೂ ನಿಭಾಯಿಸಿದ್ದೇವೆ. ಈ ಬಾರಿಯೂ ಅದನ್ನು ನಿಭಾಯಿಸುವ ವಿಶ್ವಾಸ ನಮಗಿದೆ’’ ಎಂದು ಅವರು ಹೇಳಿದರು.

‘‘ಬಹುಪಕ್ಷೀಯ ವ್ಯವಸ್ಥೆಯಲ್ಲಿ ಏಕಾಂಗಿ ಪಾತ್ರಧಾರಿಗಳಿಗೆ ಇತಿಹಾಸವೂ ಇಲ್ಲ, ಭವಿಷ್ಯವೂ ಇಲ್ಲ ಹಾಗೂ ಇಂಥ ವಿಷಯಗಳಲ್ಲಿ ಅವರಿಗೆ ಬೆಂಬಲವೂ ಇಲ್ಲ’’ ಎಂದರು.

ಕಾಶ್ಮೀರ ವಿಷಯ ಪ್ರಸ್ತಾಪ: ಕುರೇಶಿ

ಪಾಕಿಸ್ತಾನವು ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸುವುದು ಹಾಗೂ ಅದಕ್ಕೆ ಸಂಪೂರ್ಣ ಬೆಂಬಲ ನೀಡುವುದು ಎಂಬುದಾಗಿ ಪಾಕಿಸ್ತಾನದ ವಿದೇಶ ಸಚಿವ ಶಾ ಮೆಹ್ಮೂದ್ ಕುರೇಶಿ ಹೇಳಿದ್ದಾರೆ ಎಂದು ‘ರೇಡಿಯೊ ಪಾಕಿಸ್ತಾನ’ ವರದಿ ಮಾಡಿದೆ.

ವಿಶ್ವಸಂಸ್ಥೆಯ ಎಲ್ಲ ವೇದಿಕೆಗಳಲ್ಲಿ, ಚರ್ಚೆಯ ವಿಷಯ ಯಾವುದೇ ಇದ್ದರೂ ಕಾಶ್ಮೀರ ವಿಷಯವನ್ನು ಪಾಕಿಸ್ತಾನ ಪ್ರಸ್ತಾಪಿಸುತ್ತಲೇ ಬಂದಿರುವುದನ್ನು ಸ್ಮರಿಸಬಹುದಾಗಿದೆ.

ಆದರೆ, ಅದನ್ನೊಂದು ಚರ್ಚೆಯ ವಿಷಯವಾಗಿಸಲು ಇತರ ಯಾವುದೇ ದೇಶವೂ ಅದರೊಂದಿಗೆ ಕೈಜೋಡಿಸಿಲ್ಲ ಹಾಗೂ ಅದರ ಬಗ್ಗೆ ಮಾತು ಕೂಡ ಆಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News