ಇರಾನ್‌ನಲ್ಲಿ ಸೇನಾ ಕವಾಯತು ಮೇಲಿನ ದಾಳಿಗೆ ಖಂಡನೆ

Update: 2018-09-24 17:06 GMT

ನ್ಯೂಯಾರ್ಕ್, ಸೆ. 24: ಇರಾನ್‌ನಲ್ಲಿ ಸೇನಾ ಕವಾಯತಿನ ಮೇಲೆ ನಡೆದ ಬರ್ಬರ ದಾಳಿಯನ್ನು ಅಮೆರಿಕ ರವಿವಾರ ಖಂಡಿಸಿದೆ, ಆದರೆ ಅಶಾಂತಿಗೆ ಏನು ಕಾರಣ ಎಂಬುದನ್ನು ದೇಶದ ಪುರೋಹಿತಶಾಹಿ ಆಡಳಿತಗಾರರು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ ಎಂದು ಅಮೆರಿಕ ರವಿವಾರ ಹೇಳಿದೆ.

‘‘ಯಾವುದೇ ಭಯೋತ್ಪಾದಕ ದಾಳಿ ಎಲ್ಲೇ ನಡೆದರೂ ಅಮೆರಿಕ ಖಂಡಿಸುತ್ತದೆ. ಈ ನೀತಿಗೆ ನಾವು ಯಾವತ್ತೂ ಬದ್ಧರಾಗಿದ್ದೇವೆ’’ ಎಂದು ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿ ನಿಕ್ಕಿ ಹೇಲಿ ಸಿಎನ್‌ಎನ್ ಸುದ್ದಿ ಸಂಸ್ಥೆಗೆ ತಿಳಿಸಿದರು.

‘‘ಆದರೆ, ಇರಾನ್ ಅಧ್ಯಕ್ಷ ಹಸನ್ ರೂಹಾನಿ ಸುದೀರ್ಘ ಸಮಯದಿಂದ ಅವರ ಜನರನ್ನು ದಮನಿಸಿದ್ದಾರೆ’’ ಎಂದು ಅವರು ಅಭಿಪ್ರಾಯಪಟ್ಟರು.

 ‘‘ಭಯೋತ್ಪಾದನೆ ಎಲ್ಲಿಂದ ಬರುತ್ತದೆ ಎಂಬುದನ್ನು ಪತ್ತೆಹಚ್ಚಲು ಅವರು ಅವರದೇ ಮೂಲವನ್ನು ನೋಡಿಕೊಳ್ಳಬೇಕು. ಇರಾನ್ ಜನತೆಗೆ ಸಾಕಾಗಿ ಹೋಗಿದೆ. ಹಾಗಾಗಿಯೇ, ಇಂಥ ಘಟನೆಗಳು ನಡೆಯುತ್ತಿವೆ’’ ಎಂದು ಅವರು ನುಡಿದರು.

ಸೌದಿ ಅರೇಬಿಯದತ್ತ ಇರಾನ್ ಸಂಶಯದ ಬೆರಳು

ನೈರುತ್ಯ ಇರಾನ್‌ನಲ್ಲಿ ಶನಿವಾರ 1980-1988ರ ನಡುವಿನ ಯುದ್ಧಾರಂಭದ ವಾರ್ಷಿಕ ದಿನಾಚರಣೆ ಸಂದರ್ಭದಲ್ಲಿ ನಡೆದ ಸೇನಾ ಕವಾಯತಿನ ಮೇಲೆ ಶಂಕಿತ ಅರಬ್ ಪ್ರತ್ಯೇಕತಾವಾದಿಗಳು ನಡೆಸಿದ ದಾಳಿಯಲ್ಲಿ ಕನಿಷ್ಠ 29 ಮಂದಿ ಮೃತಪಟ್ಟಿದ್ದಾರೆ.

ಅಮೆರಿಕ ಬೆಂಬಲಿತ ಕೊಲ್ಲಿ ದೇಶವೊಂದು ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದೆ ಎಂಬುದಾಗಿ ಇರಾನ್ ಆರೋಪಿಸಿದೆ. ಆದರೆ, ಆ ದೇಶ ಯಾವುದೆಂದು ಇರಾನ್ ಹೆಸರಿಸಿಲ್ಲವಾದರೂ, ಅದು ಸೌದಿ ಅರೇಬಿಯದತ್ತ ತನ್ನ ಸಂಶಯದ ಬೆರಳನ್ನು ತೋರಿಸಿದೆ ಎಂದು ಭಾವಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News