ಈ ಕಳಂಕದ ವಿರುದ್ಧ ಪರಿಹಾರ ಕಂಡುಕೊಳ್ಳಲು ಇನ್ನೂ ನಮಗೇಕೆ ಸಾಧ್ಯವಾಗುತ್ತಿಲ್ಲ?

Update: 2018-09-24 18:30 GMT

ಒಂದು ವೇಳೆ ಮಲಹೊರುವ ಪಿಡುಗಿಗೆ, ಯಾಂತ್ರೀಕರಣದ ಮೂಲಕ ಪರಿಹಾರ ಸಾಧ್ಯವಾದರೆ ಭಾರತ ಸರಕಾರ ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಿಲ್ಲವೆಂಬ ಪ್ರಶ್ನೆಗೆ, ಈ ಬಗ್ಗೆ ಅಧ್ಯಯನ ನಡೆಸಿರುವ ಸಂಶೋಧಕರಾದ ಅಂಬರೀಶ್ ಕರುಣಾನಿಧಿ ಹೀಗೆ ಉತ್ತರಿಸುತ್ತಾರೆ. ‘‘ಭಾರತ ಸರಕಾರ ನೆಮ್ಮದಿಯಿಂದಿದೆ. ಯಾಕೆಂದರೆ ಆ ಕೆಲಸವನ್ನು ಅನಿವಾರ್ಯವಾಗಿ ಮಾಡಲು ಒಂದು ದೊಡ್ಡ ಸಮೂಹವೇ ಇಲ್ಲಿದೆ. ಒಂದು ವೇಳೆ ಆ ಕೆಲಸವನ್ನು ಮಾಡಲು ಯಾರೂ ಇಲ್ಲದಿದ್ದರೆ, ಒಳಚರಂಡಿ ಘಟಕಗಳ ವಿನ್ಯಾಸಗಳಲ್ಲಿ ಮಾರ್ಪಾಡುಗಳನ್ನು ಮಾಡಲು ಆರಂಭಿಸಲು ಸಂಬಂಧಪಟ್ಟವರು ತಮ್ಮ ಮೆುಳನ್ನು ಬಳಸಿಕೊಳ್ಳಲೂ ಬಹುದು’’

 ವರ್ಷದ ಸೆಪ್ಟಂಬರ್ ತಿಂಗಳೊಂದರಲ್ಲೇ ದೇಶದ ವಿವಿಧ ಭಾಗಗಳಲ್ಲಿ ಕನಿಷ್ಠ 11 ಮಂದಿ ಕಾರ್ಮಿಕರು ಶೌಚಗುಂಡಿ ಹಾಗೂ ಚರಂಡಿ ಸ್ವಚ್ಛಗೊಳಿಸುತ್ತಿದ್ದ ಸಂದರ್ಭದಲ್ಲಿ ಮೃತಪಟ್ಟ ಘಟನೆಗಳು, ಭಾರತವು ಯಾಕೆ ಇನ್ನೂ ಕೂಡಾ ಈ ಅಮಾನವೀಯ, ಕಾನೂನುಬಾಹಿರ ಪದ್ಧತಿ ಮುಂದುವರಿಯಲು ಅವಕಾಶ ನೀಡಿದೆ ಹಾಗೂ ಅದನ್ನು ನಿವಾರಿಸಲು ಯಾವ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಸಫಾಯಿ ಕರ್ಮಚಾರಿಗಳ ರಾಷ್ಟ್ರೀಯ ಆಯೋಗವು ಪ್ರಕಟಿಸಿದ ದತ್ತಾಂಶದ ಪ್ರಕಾರ 2017ರ ಜನವರಿ ತಿಂಗಳಿನಿಂದೀಚೆಗೆ 123 ಕಾರ್ಮಿಕರು ಮಲ ಹೊರುವಿಕೆಯ ಕೆಲಸದಲ್ಲಿ ತೊಡಗಿದ್ದಾಗ ಸಾವನ್ನಪ್ಪಿದ್ದಾರೆ.
ದೇಶದಲ್ಲಿ ಅಳವಾಗಿ ಬೇರುಬಿಟ್ಟಿರುವ ಜಾತಿ ವ್ಯವಸ್ಥೆಯ ಜೊತೆಗೂ ನಂಟು ಹೊಂದಿರುವ ಈ ಗಂಭೀರ ಸಮಸ್ಯೆಯನ್ನು ನಿಭಾಯಿಸಲು ನಿಜಕ್ಕೂ ನಮ್ಮ ರಾಜಕಾರಣಿಗಳಿಗೆ ರಾಜಕೀಯ ಇಚ್ಛಾಶಕ್ತಿಯಿದೆಯೇ ಎಂಬ ಪ್ರಶ್ನೆಯೂ ಇಲ್ಲಿ ಮೂಡುತ್ತದೆ.
ಕಾರ್ಮಿಕರು ದೈಹಿಕವಾಗಿ ಮಲಗುಂಡಿ ಅಥವಾ ಒಳಚರಂಡಿಗಳನ್ನು ಪ್ರವೇಶಿಸಿ ಮಲವನ್ನು ತೆರವುಗೊಳಿಸುವುದನ್ನು ಮಲಹೊರುವಿಕೆ ಪದ್ಧತಿ ಎಂದು ಕರೆಯಲಾಗುತ್ತದೆ. ಐತಿಹಾಸಿಕವಾಗಿ ಭಾರತದ ದಲಿತ ಸಮುದಾಯಗಳ ಮೇಲೆ ಈ ಕೆಲಸವನ್ನು ಹೇರಲಾಗಿದೆ. 1990ರಲ್ಲಿ ಈ ಪದ್ಧತಿಯನ್ನು ಭಾರತ ನಿಷೇಧಿಸಿತ್ತು. ಆದಾಗ್ಯೂ, ಮಲಹೊರುವಿಕೆ ಪದ್ಧತಿ ಈಗಲೂ ದೇಶದೆಲ್ಲೆಡೆ ಅವ್ಯಾಹತವಾಗಿ ನಡೆಯುತ್ತಿದ್ದು, ಆಗಾಗ ಈ ಕೆಲಸದಲ್ಲಿ ತೊಡಗಿದವರು ಸಾವನ್ನಪ್ಪಿದ ಘಟನೆಗಳು ವರದಿಯಾಗುತ್ತಿವೆ.
 ಈ ವಿಷಯದಲ್ಲಿ ಹತ್ತಿರದ ನೆರೆರಾಷ್ಟ್ರವಾದ ಪಾಕಿಸ್ತಾನದಲ್ಲಿನ ಪರಿಸ್ಥಿತಿ ಕೂಡಾ ಭಾರತಕ್ಕಿಂತ ಭಿನ್ನವಾಗಿಲ್ಲ. ಉದಾಹರಣೆಗೆ, ಪಾಕಿಸ್ತಾನದಲ್ಲಿ ಇಂದಿಗೂ ಮಲಹೊರುವಿಕೆ ಪಿಡುಗು ಪ್ರಚಲಿತದಲ್ಲಿದೆ. 2017ರಲ್ಲಿ ಪಾಕಿಸ್ತಾನದಲ್ಲಿ ಮಲಗುಂಡಿಯನ್ನು ಸ್ವಚ್ಛಗೊಳಿಸುತ್ತಿದ್ದ ಸಂದರ್ಭದಲ್ಲಿ ಕಾರ್ಮಿಕನೊಬ್ಬ ಬಸವಳಿದುಬಿದ್ದಿದ್ದ. ಆನಂತರ ಆಸ್ಪತ್ರೆಗೆ ಆತನನ್ನು ದಾಖಲಿಸಲಾಯಿತಾದರೂ, ಆತನ ‘ಮಲಿನ ದೇಹ’ವನ್ನು ಮುಟ್ಟಲು ವೈದ್ಯರು ನಿರಾಕರಿಸಿದ್ದರಿಂದ ಚಿಕಿತ್ಸೆ ದೊರೆಯದೆ ಆತ ಕೊನೆಯುಸಿರೆಳೆದಿದ್ದ. ಪಾಕಿಸ್ತಾನ ಕೂಡಾ ನೈರ್ಮಲೀಕರಣದ ಸಮಸ್ಯೆಯಿಂದ ಬಳಲುತ್ತಿದೆ. ಮಾರ್ಚ್ ತಿಂಗಳಲ್ಲಿ ‘ಡಾನ್’ ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದರ ಪ್ರಕಾರ, ಕರಾಚಿ ನಗರವೊಂದೇ, ಪ್ರತಿದಿನ 1,703 ದಶಲಕ್ಷ ಲೀಟರ್‌ಗಳಷ್ಟು ಚರಂಡಿ ನೀರನ್ನು ಉತ್ಪಾದಿಸುತ್ತಿದೆ. ಕಳೆದ ಎಪ್ರಿಲ್‌ನಲ್ಲಿ ಪಾಕಿಸ್ತಾನದ ಸುಪ್ರೀಂಕೋರ್ಟ್ ಮುಂಗಾರಿಗೆ ಮುನ್ನ ಎಲ್ಲಾ ಒಳಚರಂಡಿಗಳನ್ನು ಸ್ವಚ್ಛಗೊಳಿಸಬೇಕೆಂದು ಆದೇಶಿಸಿತ್ತು. ಇದಕ್ಕೂ ಒಂದು ತಿಂಗಳು ಮುಂಚೆ, ಒಳಚರಂಡಿಗಳನ್ನು ಸ್ವಚ್ಛಗೊಳಿಸಲು ನಿರಾಕರಿಸಿದ್ದ ಪೌರಕಾರ್ಮಿಕರನ್ನು ಜಲ ಹಾಗೂ ನೈರ್ಮಲೀಕರಣ ಕುರಿತ ನ್ಯಾಯಾಂಗ ಆಯುಕ್ತರು ವಜಾಗೊಳಿಸಿದ್ದರು.
ಇನ್ನೊಂದು ನೆರೆಯ ರಾಷ್ಟ್ರವಾದ ಬಾಂಗ್ಲಾದೇಶ ಕೂಡಾ ಒಳಚರಂಡಿ ಹಾಗೂ ತ್ಯಾಜ್ಯ ವಿಲೇವಾರಿಯ ಸಮಸ್ಯೆಯಿಂದ ಪೇಚಾಡುತ್ತಿದೆ. ಮಲಗುಂಡಿಗಳನ್ನು ಹಾಗೂ ಒಳಚರಂಡಿಗಳನ್ನು ಸ್ವಚ್ಛಗೊಳಿಸಲು ಈಗಲೂ ಅದು ಕಾರ್ಮಿಕರ ಶಾರೀರಿಕ ಶ್ರಮವನ್ನು ಅವಲಂಬಿಸಿದೆ. ಢಾಕಾ ಜಲ ಪೂರೈಕೆ ಹಾಗೂ ಒಳಚರಂಡಿ ಪ್ರಾಧಿಕಾರದ ಪ್ರಕಾರ ನಗರದ ಶೇ.20ರಷ್ಟು ಭಾಗಕ್ಕೆ ಮಾತ್ರವೇ ಕೊಳವೆಯ ಮೂಲಕ ಒಳಚರಂಡಿ ವ್ಯವಸ್ಥೆಯಿದೆ ಹಾಗೂ ಮಲಗುಂಡಿಯಲ್ಲಿನ ತ್ಯಾಜ್ಯವನ್ನು ಮಾನವಶ್ರಮದ ಮೂಲಕ ತೆರವುಗೊಳಿಸಲು ನಗರವು ಈಗಲೂ ವ್ಯಕ್ತಿಗಳು ಹಾಗೂ ಖಾಸಗಿ ಕಂಟ್ರಾಕ್ಟರ್‌ಗಳನ್ನು ಅವಲಂಬಿಸಿದೆ.
 ಆದಾಗ್ಯೂ ಕೆಲವು ದೇಶಗಳು ಒಳಚರಂಡಿ ತ್ಯಾಜ್ಯಗಳ ವಿಲೇವಾರಿಗೆ ಸುಸ್ಥಿರವಾದ ವಿಧಾನಗಳನ್ನು ಅನುಸರಿಸುತ್ತಿದೆ ಅಥವಾ ಯಂತ್ರಗಳ ಬಳಕೆಯನ್ನು ಅಳವಡಿಸಿಕೊಂಡಿದೆ.
  ‘‘ಮೆಕ್ಸಿಕೊ ದೇಶವು ಪಾರಿಸಾರಿಕ ನೈರ್ಮಲೀಕರಣ ಮಾದರಿಯನ್ನು ಅಳವಡಿಸಿಕೊಂಡಿದ್ದು, ಒಳಚರಂಡಿ ತ್ಯಾಜ್ಯ ವಿಲೇವಾರಿಯಲ್ಲಿನ ಲೋಪದೋಷಗಳನ್ನು ನಿವಾರಿಸಿದೆ’’ ಎಂದು ಗುಜರಾತ್‌ನ ನವಸಾರ್ಜನ್ ಟ್ರಸ್ಟ್‌ನ ಸ್ಥಾಪಕ ಮಾರ್ಟಿನ್ ಮಕ್ವಾನ್ ತಿಳಿಸಿದ್ದಾರೆ. ಪಾರಿಸಾರಿಕ ನೈರ್ಮಲೀಕರಣವು ಮಾನವ ಮಲ, ಶೌಚದ ನೀರು ಹಾಗೂ ಮೂತ್ರವನ್ನು, ಸುರಕ್ಷಿತವಾಗಿ ಸಂಗ್ರಹಿಸಬಹುದಾದ, ಶೇಖರಿಸಿಡಬಹುದಾದ ಹಾಗೂ ಸಂಸ್ಕರಣೆಗೊಳಿಸಬಹುದಾದ ಕೃಷಿ ಸಂಪನ್ಮೂಲಗಳೆಂದು ಪರಿಗಣಿಸುವಂತಹ ತ್ಯಾಜ್ಯ ನಿರ್ವಹಣಾ ಮಾದರಿಯಾಗಿದೆ. ‘‘ಅಮೆರಿಕದ ಮಾನವ ತ್ಯಾಜ್ಯ ವಿಲೇವಾರಿಗೆ ಯಂತ್ರೋಪಕರಣಗಳನ್ನು ಬಳಸಲಾಗುತ್ತಿದೆ. ಅವರಲ್ಲಿ ಸಮರ್ಪಕವಾದ ಕೊಳವೆಮಾರ್ಗಗಳು ಹಾಗೂ ಸಲಕರಣೆಗಳಿವೆ. ಆದರೆ ನಮ್ಮ ಸಮಸ್ಯೆಯೇನೆಂದರೆ, ಜಾತಿ ವ್ಯವಸ್ಥೆಯಿಂದಾಗಿ ಸರಕಾರವು ಮಾನವತ್ಯಾಜ್ಯ ವಿಲೇವಾರಿಗೆ ಯಂತ್ರೋಪಕರಣಗಳ ಮೇಲೆ ಹೆಚ್ಚಿನ ಹೂಡಿಕೆಯನ್ನು ಮಾಡಲು ಬಯಸುವುದಿಲ್ಲ. ಈ ಕೆಲಸಕ್ಕಾಗಿ ದೇಶದಲ್ಲಿ ಅಗ್ಗದ ದರದಲ್ಲಿ ದೈಹಿಕ ಶ್ರಮ ಶಕ್ತಿ ಲಭ್ಯವಿರುವುದು ಅವರಿಗೆ ತಿಳಿದಿದೆ.
 ಭಾರತದ ಶೇ.70ರಷ್ಟು ಒಳಚರಂಡಿಗಳ ಹೊಲಸನ್ನು ವಿಲೇವಾರಿ ಮಾಡಲಾಗಿಲ್ಲವೆಂದು 2015ರ ಡಿಸೆಂಬರ್‌ನಲ್ಲಿ ‘ಇಂಡಿಯಾ ಸ್ಪೆಂಡ್’ ಸುದ್ದಿಸಂಸ್ಥೆ ಪ್ರಕಟಿಸಿದ ವಿಶ್ಲೇಷಣಾ ವರದಿ ತಿಳಿಸಿದೆ. 2015ರಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಒಳಚರಂಡಿ ತ್ಯಾಜ್ಯ ವಿಲೇವಾರಿ ಘಟಕಗಳ ಸಮೀಕ್ಷೆಯೊಂದನ್ನು ನಡೆಸಿದಾಗ, ದೇಶದಲ್ಲಿ 816 ಚರಂಡಿ ತ್ಯಾಜ್ಯ ವಿಲೇವಾರಿ ಘಟಕಗಳಿದ್ದು, ಅವುಗಳಲ್ಲಿ ಕೇವಲ 522 ಮಾತ್ರ ಕಾರ್ಯನಿರ್ವಹಿಸುತ್ತಿವೆಯೆಂಬುದಾಗಿ ತಿಳಿದುಬಂದಿತು. ಆದರೆ ಉಳಿದ ತ್ಯಾಜ್ಯ ವಿಲೇವಾರಿ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ ಇಲ್ಲವೇ ನಿರ್ಮಾಣಹಂತದಲ್ಲಿವೆಯೆಂಬುದು ಪತ್ತೆಯಾಯಿತು.
 ದೇಶದ ಕಳಪೆ ಮೂಲಸೌಕರ್ಯ ಹಾಗೂ ಒಳಚರಂಡಿಗಳು ಮತ್ತು ತ್ಯಾಜ್ಯ ಗುಂಡಿಗಳ ಕಳಪೆ ಇಂಜಿನಿಯರಿಂಗ್ ಗುಣಮಟ್ಟಗಳು ಅವನ್ನು ಅತ್ಯಂತ ಅಪಾಯಕಾರಿಯಾದ ಕೆಲಸದ ಸ್ಥಳಗಳಾಗಿ ಮಾಡಿವೆಯೆಂದು ನೀತಿ ಸಂಶೋಧನಾಕ್ಕಾಗಿನ ಕೇಂದ್ರದ ಸಂಶೋಧನಾ ವಿದ್ಯಾರ್ಥಿನಿ ಅರ್ಕಜಾ ಸಿಂಗ್ ಹೇಳುತ್ತಾರೆ. ‘‘ಜಾತಿ, ಕಳಪೆ ಕಾಮಗಾರಿ, ಕಾರ್ಮಿಕರ ಲಭ್ಯತೆ ಹಾಗೂ ಕಳಪೆ ಗುಣಮಟ್ಟದ ಮೂಲಸೌಕರ್ಯಗಳು ಕೂಡಾ ಇಲ್ಲಿ ಪಾತ್ರವಹಿಸಿವೆ. ನಮ್ಮ ತ್ಯಾಜ್ಯ ನಿರ್ವಹಣಾ ಸ್ಥಾವರಗಳು ಪ್ಲಾಸ್ಟಿಕ್ ಹಾಗೂ ಇತರ ಅವಶೇಷಗಳನ್ನು ಕೂಡಾ ಜೊತೆಯಾಗಿ ಸಂಸ್ಕರಿಸುತ್ತವೆ. ಇದು ಪ್ರಮಾದಕರವಾದುದಾಗಿದೆ. ಈ ಸಂಸ್ಕರಣೆಯಿಂದ ಮಾರಣಾಂತಿಕವಾದ ಅನಿಲಗಳ ಮಿಶ್ರಣವನ್ನು ಸೃಷ್ಟಿಸುತ್ತವೆ ಹಾಗೂ ಇದರಿಂದಾಗಿ ಕಾರ್ಮಿಕರು ಉಸಿರುಗಟ್ಟಿ ಸಾಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ’’ಎಂದವರು ಅಭಿಪ್ರಾಯಿಸುತ್ತಾರೆ.
ಸಾರ್ವಜನಿಕ ಮೂಲ ಸೌಕರ್ಯಗಳ ಯೋಜನೆಯನ್ನು ರೂಪಿಸುವಾಗ ಭಾರತವು ಯುರೋಪ್ ಹಾಗೂ ಅಮೆರಿಕದಂತಹ ದೇಶಗಳಿಂದ ಚಿಂತನೆಗಳನ್ನು ಎರವಲು ಪಡೆದುಕೊಳ್ಳುತ್ತದೆ. ಅದರೆ ಅದು ಸಮಗ್ರತಾ ದೃಷ್ಟಿಯನ್ನು ಹೊಂದಿರುವುದಿಲ್ಲವೆಂದು ಆಕೆ ಹೇಳುತ್ತಾರೆ. ಒಳಚರಂಡಿ ನಿರ್ವಹಣಾ ಘಟಕಗಳಲ್ಲಿನ ಹಲವಾರು ಸುರಕ್ಷತಾ ವಿಧಾನಗಳಿವೆ. ಅಪಾಯ ಕಾರಿ ಅನಿಲಗಳ ಇರುವಿಕೆಯನ್ನು ನಿರ್ಧರಿಸಬಲ್ಲಂತಹ ನಿರ್ದಿಷ್ಟ ಬಗೆಯ ದೀಪಗಳ ಅಳವಡಿಕೆ ಇದರಲ್ಲಿ ಸೇರಿವೆ. ಇಂತಹ ಸುರಕ್ಷತಾ ಕ್ರಮಗಳು ಭಾರತದಲ್ಲಿ ಕಾಣಸಿಗುವುದು ತೀರಾ ಅಪರೂಪ. ಆದರೆ ಪಾಶ್ಚಾತ್ಯ ದೇಶಗಳಲ್ಲಿ ಕೈಗಾರಿಕಾ ಸುರಕ್ಷತಾ ಮಾನದಂಡಗಳು ಸುರಕ್ಷಿತ ಹಾಗೂ ಅಸುರಕ್ಷಿತ ಕೆಲಸಗಳನ್ನು ಸ್ಪಷ್ಟವಾಗಿ ಗುರುತಿಸಲಾಗುತ್ತದೆ ಹಾಗೂ ಅವುಗಳನ್ನು ವಿಭಾಗಿಸಲಾಗುತ್ತದೆ.
ಜಪಾನ್, ಸಿಂಗಾಪುರ ಹಾಗೂ ಮಲೇಶ್ಯ ಸೇರಿದಂತೆ ಏಶ್ಯದ ಹಲವಾರು ರಾಷ್ಟ್ರಗಳು ಕೂಡಾ ಒಳಚರಂಡಿ ತ್ಯಾಜ್ಯ ನಿರ್ವಹಣೆಯ ಸಮಸೆ್ಯಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿವೆ.

ಮಲೇಶ್ಯದಲ್ಲಿ ಪರಿವರ್ತನೆ
1957ರಲ್ಲಿ ಸ್ವಾತಂತ್ರ ದೊರೆತಾಗಿನಿಂದೀಚೆಗೆ ಮಲೇಶ್ಯದಲ್ಲಿ ಒಳಚರಂಡಿ ನಿರ್ವಹಣೆಯು ಹಳೆಯ ವಿಧಾನಗಳಿಂದ ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ಹಂತಹಂತವಾಗಿ ಹೆಚ್ಚು ಯಾಂತ್ರೀಕರಣಗೊಳ್ಳುತ್ತಾ ವಿಕಸನಗೊಂಡಿದೆ. ಒಳಚರಂಡಿ ತ್ಯಾಜ್ಯ ನಿರ್ವಹಣಾ ಕೈಗಾರಿಕೆಯಲ್ಲಿ ತಂತ್ರಜ್ಞಾನಗಳ ಅಭಿವೃದ್ಧಿ ಇದಕ್ಕೆ ಮುಖ್ಯಕಾರಣವಾಗಿದೆ.
 ಒಳಚರಂಡಿ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಸಮಗ್ರವಾಗಿ ಯಾಂತ್ರೀಕರಣಗೊಳಿಸುವುದಕ್ಕೆ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆಯೆಂದು ಈ ಬಗ್ಗೆ ಅಧ್ಯಯನ ನಡೆಸಿರುವ ಸಂಶೋಧಕರಾದ ಅಂಬರೀಶ್ ಕರುಣಾನಿಧಿ ಹೇಳುತ್ತಾರೆ.
‘‘1950ರ ದಶಕದಲ್ಲಿ ಮಲೇಶ್ಯದಲ್ಲಿ ಚೀನಿ ವಲಸಿಗರಿಂದ ಮಲಹೊರುವ ಕೆಲಸ ಮಾಡಿಸಲಾಗುತ್ತಿತ್ತು. ಮಲೇಶ್ಯಾದಲ್ಲಿ ಈ ಅನಿಷ್ಟ ಪದ್ಥತಿ ಒಮ್ಮಿಂದೊಮ್ಮೆಗೆ ಕೊನೆಗೊಳ್ಳಲಿಲ್ಲ. ಭಾರತದಲ್ಲಿ ಮಲಹೊರುವ ಪದ್ಧತಿಯನ್ನು ತೊಲಗಿಸಲು ಚಳವಳಿ ತೀವ್ರ ಸ್ವರೂಪ ಪಡೆದಾಗ ಅತ್ತ ಮಲೇಶ್ಯಾ ಯಾಂತ್ರೀಕರಣದತ್ತ ಮುಖಮಾಡಿತು. ಯಾಕೆಂದರೆ ಅಲ್ಲಿನವರು ತಮ್ಮ ದೇಶವನ್ನು ಪ್ರವಾಸಿತಾಣವಾಗಿ ರೂಪುಗೊಳಿಸಲು ಬಯಸಿದ್ದರು.
ಒಳಚರಂಡಿತ್ಯಾಜ್ಯ ವಿಲೇವಾರಿಗಾಗಿ ಮಲೇಶ್ಯಾ ಸರಕಾರ ಕೈಗೊಂಡಿದ್ದ ಕ್ರಮಗಳ ಬಗ್ಗೆಯೂ ಈ ಅಧ್ಯಯನ ಗಮನಸೆಳೆದಿದೆ. ಸಬ್ಸಿಡಿ ದರದಲ್ಲಿ ಒಳಚರಂಡಿ ತ್ಯಾಜ್ಯ ವಿಲೇವಾರಿ ಘಟಕಗಳ ನಿರ್ಮಾಣ ಹಾಗೂ ನಿರ್ವಹಣೆಗೆ ಅದು ಉತ್ತೇಜನ ನೀಡಿತು. ತಮ್ಮ ತಮ್ಮ ಮನೆಗಳ ಮಲಗುಂಡಿಗಳನ್ನು ಹೇಗೆ ಸ್ವಚ್ಛಗೊಳಿಸಬೇಕೆಂಬ ಬಗ್ಗೆಯೂ ಜನರಲ್ಲಿ ಅರಿವು ಮೂಡಿಸಲು ಜಾಗೃತಿ ಕಾರ್ಯಕ್ರಮಗಳನ್ನು ಕೂಡಾ ಆಯೋಜಿಸಲಾಗಿತ್ತು. ಮಾನವತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಜಾರಿಗೆ ತರಲಾದ ಕಟ್ಟುನಿಟ್ಟಿನ ನೂತನ ನಿಯಮಾವಳಿಗಳಿಗೆ ಹೊಂದಿಕೊಳ್ಳಲು ಜನರಿಗೆ ಸಾಕಷ್ಟು ಕಾಲಾವಕಾಶವನ್ನು ಕೂಡಾ ನೀಡಲಾಗಿತ್ತೆಂದು ಕರುಣಾನಿಧಿ ಹೇಳುತ್ತಾರೆ. ‘‘ಮಲೇಶ್ಯಾದಲ್ಲಿ ಈಗ, ಮಲಗುಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಮಿಕರು ಅದರೊಳಗೆ ಪ್ರವೇಶಿಸುವಂತಿಲ್ಲ. ಒಂದು ವೇಳೆ ಮಲಗುಂಡಿಯನ್ನು ಸ್ವಚ್ಛಗೊಳಿಸಲು ಸಾಧ್ಯವಿಲ್ಲವೆಂದಾದರೆ, ಅವರು ಇನ್ನೊಂದು ಹೊಸ ಮಲಗುಂಡಿಯನ್ನು ನಿರ್ಮಿಸುತ್ತಾರೆ. ಒಂದು ವೇಳೆ ಮಲಹೊರುವ ಪಿಡುಗಿಗೆ, ಯಾಂತ್ರೀಕರಣದ ಮೂಲಕ ಪರಿಹಾರ ಸಾಧ್ಯವಾದರೆ ಭಾರತ ಸರಕಾರ ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಿಲ್ಲವೆಂಬ ಪ್ರಶ್ನೆಗೆ ಕರುಣಾನಿಧಿ ಹೀಗೆ ಉತ್ತರಿಸುತ್ತಾರೆ. ‘‘ಭಾರತ ಸರಕಾರ ನೆಮ್ಮದಿಯಿಂದಿದೆ. ಯಾಕೆಂದರೆ ಆ ಕೆಲಸವನ್ನು ಅನಿವಾರ್ಯವಾಗಿ ಮಾಡಲು ಒಂದು ದೊಡ್ಡ ಸಮೂಹವೇ ಇಲ್ಲಿದೆ. ಒಂದು ವೇಳೆ ಆ ಕೆಲಸವನ್ನು ಮಾಡಲು ಯಾರೂ ಇಲ್ಲದಿದ್ದರೆ, ಒಳಚರಂಡಿ ಘಟಕಗಳ ವಿನ್ಯಾಸಗಳಲ್ಲಿ ಮಾರ್ಪಾಡುಗಳನ್ನು ಮಾಡಲು ಆರಂಭಿಸಲು ಸಂಬಂಧಪಟ್ಟವರು ತಮ್ಮ ಮೆುಳನ್ನು ಬಳಸಿಕೊಳ್ಳಲೂ ಬಹುದು’’
 ಮಾನವಮಲ ಹೊರುವ ಪಿಡುಗಿನ ವಿಷಯಕ್ಕೆ ಬಂದಾಗ ಸರಕಾರಿ ಆಡಳಿತ ಯಂತ್ರವು ತನ್ನ ಹೊಣೆಗಾರಿಕೆಯಿಂದ ಸಂಪೂರ್ಣವಾಗಿ ತಪ್ಪಿಸಿಕೊಳ್ಳಲು ಬಯಸುತ್ತಿದೆಯೆಂದು ಹಲವಾರು ಪ್ರಕರಣಗಳಲ್ಲಿ ಸಫಾಯಿ ಕರ್ಮಾಚಾರಿ ಆಂದೋಲನ ಸಂಘಟನೆಯನ್ನು ಪ್ರತಿನಿಧಿಸಿದ್ದ ಸುಪ್ರೀಂಕೋರ್ಟ್ ನ್ಯಾಯವಾದಿ ಶೊಮೊನಾ ಖನ್ನಾ ಹೇಳುತ್ತಾರೆ.
ರಾಜ್ಯ, ಕೇಂದ್ರ ಅಥವಾ ಭಾರತೀಯ ರೈಲ್ವೆ ಕೂಡಾ, ಮಾನವಮಲ ಹೊರುವ ಕುರಿತ ವಿಷಯಗಳು ತಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದೇ ವಾದಿಸಲಾರಂಭಿಸುತ್ತವೆ.
ಸ್ವಚ್ಛತಾ ಕಾರ್ಮಿಕರು ಮಲವನ್ನು ತಮ್ಮ ತಲೆಯಲ್ಲಿ ಎತ್ತಿಕೊಂಡು ಹೋಗುವುದಿಲ್ಲವಾದ ಕಾರಣ ಅದನ್ನು ಮಲಹೊರುವ ಪದ್ಧತಿ ಎಂದು ಪರಿಗಣಿಸಲು ಸಾಧ್ಯವಿಲ್ಲವೆಂದು ಸರಕಾರ ಹಲವಾರು ಪ್ರಕರಣಗಳಲ್ಲಿ ವಾದಿಸಿದೆ. ರೈಲುಗಳಲ್ಲಿ ಫ್ಲಶ್ ಟಾಯ್ಲೆಟ್‌ಗಳನ್ನು ಸ್ಥಾಪಿಸಲಾಗಿದ್ದು, ರೈಲ್ವೆ ಹಳಿಗಳಲ್ಲಿ ಬೀಳುವ ಮಲ ಮತ್ತಿತರ ಮಾನವತ್ಯಾಜ್ಯವನ್ನು ಕಾರ್ಮಿಕರಿಂದ ಸ್ವಚ್ಛಗೊಳಿಸುವುದನ್ನು ಮಲಹೊರುವ ಪದ್ಧತಿಯೆನ್ನಲಾಗದೆಂದು ಭಾರತೀಯ ರೈಲ್ವೆ ವಾದಿಸುತ್ತದೆ.
 ದೇಶಕ್ಕೆ ಕಳಂಕವಾಗಿರುವ ಮಲಹೊರುವ ಪಿಡುಗಿಗೆ ಪರಿಹಾರ ಕಂಡುಕೊಳ್ಳಲು ಭಾರತ ಸರಕಾರಕ್ಕೆ ಈ ತನಕ ಯಾಕೆ ಸಾಧ್ಯವಾಗುತ್ತಿಲ್ಲ?. ಅದರ ನಿರ್ಲಕ್ಷಕ್ಕೆ ಯಾಕೆ ಸಮಾಜದ ಒಂದು ನಿರ್ದಿಷ್ಟ ವರ್ಗದ ಬದುಕು ಶೋಚನೀಯವಾಗಬೇಕು?.
ಕೃಪೆ: scroll.in

Writer - ವಿಜಯತಾ ಲಾಲ್ವಾನಿ

contributor

Editor - ವಿಜಯತಾ ಲಾಲ್ವಾನಿ

contributor

Similar News

ಜಗದಗಲ
ಜಗ ದಗಲ