ಛತ್ತೀಸ್‌ಗಢ ಸಚಿವರ ತಿರುಚಿದ ಅಶ್ಲೀಲ ಸಿಡಿ ತಯಾರಿಸಿದ್ದು ಬಿಜೆಪಿ ನಾಯಕ: ಸಿಬಿಐ

Update: 2018-09-25 17:19 GMT

ರಾಂಚಿ, ಸೆ. 25: ಬಿಜೆಪಿ ನಾಯಕ ಕೈಲಾಸ್ ಮುರಕಾ ಅವರು ಚತ್ತೀಸ್‌ಗಢದ ಲೋಕೋಪಯೋಗಿ ಖಾತೆ ಸಚಿವ ರಾಜೇಶ್ ಮುನಾತ್ ಅವರ ತಿರುಚಿದ ಸಿಡಿ ತಯಾರಿಸಿದ್ದು, ಅನಂತರ ಅದನ್ನು ಕಾಂಗ್ರೆಸ್‌ಗೆ ನೀಡಿದ್ದರು ಎಂದು ಛತ್ತೀಸ್‌ಗಢ ನ್ಯಾಯಾಲಯಕ್ಕೆ ಸಿಬಿಐ ಸೋಮವಾರ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ. ಛತ್ತೀಸ್‌ಗಢದ ಕಾಂಗ್ರೆಸ್ ವರಿಷ್ಠ ಭೂಪೇಶ್ ಭಾಘೆಲ್ ಆರೋಪಿಯಾಗಿರುವುದು ಹಾಗೂ ನ್ಯಾಯಾಲಯ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿರುವ ಹಿನ್ನೆಲೆಯಲ್ಲಿ ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ.

 2017 ಅಕ್ಟೋಬರ್ 27ರಂದು ರಾಯಪುರ ಪೊಲೀಸರು ಎರಡು ಪ್ರಕರಣ ದಾಖಲಿಸಿದ್ದಾರೆ. ಒಂದು ಸುಲಿಗೆ ಮಾಡಿದ ಕಾಂಗ್ರೆಸ್ ತಂತ್ರಗಾರ ವಿನೋದ್ ವರ್ಮಾನ ವಿರುದ್ಧ ಹಾಗೂ ಇನ್ನೊಂದು ತಿರುಚಿದ ಸಿಡಿ ಪ್ರಸಾರ ಮಾಡಿದ ಬಾಘೆಲ್ ವಿರುದ್ಧ. ಕೆಲವು ದಿನಗಳ ಬಳಿಕ ಅಂದರೆ 2017 ಅಕ್ಟೋಬರ್‌ನಲ್ಲಿ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು.

ಆರೋಪ ಪಟ್ಟಿಯಲ್ಲಿ ಕಾಂಗ್ರೆಸ್ ಸಿಡಿ ಪಡೆದುಕೊಳ್ಳಲು ನಡೆದ ಘಟನೆಗಳ ಕಾಲಾನುಕ್ರಮಣಿಕೆ ನೀಡಿರುವ ಸಿಬಿಎ, ಮುಂಬೈಯಲ್ಲಿ ತಯಾರಿಸಲಾದ ಸಚಿವರ ತಿರುಚಿದ ಸಿಡಿ ಪಡೆಯಲು ವಿನಯ ಪಾಂಡ್ಯ ಹಾಗೂ ರಿಂಕು ಖನುಜಾ ಅವರಿಗೆ ರಾಯಪುರ ಮೂಲದ ಬಿಜೆಪಿ ನಾಯಕ ಮುರಾಕಾ 75 ಲಕ್ಷ ರೂ. ನೀಡಿದ್ದ ಎಂದು ಹೇಳಿದೆ. ತಲೆ ಮರೆಸಿಕೊಂಡಿರುವ ಮುರಾಕಾ ಅವರಿಗಾಗಿ ಸಿಬಿಎ ಈಗಲೂ ಶೋಧ ನಡೆಸುತ್ತಿದೆ.

 ಕ್ರಿಮಿನಲ್ ಪಿತೂರಿ ಮುಂದುವರಿಸಿದ್ದ ಪಾಂಡ್ಯ ಹಾಗೂ ಖನುಜಾ ಮುಂಬೈಯ ಮಾನಸ್ ಸಾಹೂ ಅವರನ್ನು ಭೇಟಿಯಾಗಿದ್ದರು. ತಿರುಚಿದ ಅಶ್ಲೀಲ ಸಿಡಿ ಸಿದ್ಧಪಡಿಸಿ ನೀಡುವಂತೆ ಪುಸಲಾಯಿಸಿದ್ದರು ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.

 ತಾನು ಮಾಡುತ್ತಿರುವ ಸಿಡಿಯಲ್ಲಿರುವ ವ್ಯಕ್ತಿಯ ಪರಿಚಯವಿಲ್ಲದ ಸಾಹೂ ಅವರು ಖನುಜಾ ಹಾಗೂ ಪಾಂಡ್ಯಾ ನೀಡಿದ್ದ ಅಶ್ಲೀಲ ವೀಡಿಯೊ ಹಾಗೂ ಭಾವಚಿತ್ರಗಳನ್ನು ಬಳಸಿಕೊಂಡು ಮುನಾತ್‌ನ ತಿರುಚಿದ ಅಶ್ಲೀಲ ವೀಡಿಯೊ ಸಿದ್ಧಪಡಿಸಿದ್ದರು ಎಂದು ಸಿಬಿಐ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News