ರಫೇಲ್ ಒಪ್ಪಂದಕ್ಕೆ ರಿಲಾಯನ್ಸನ್ನು ಆಯ್ಕೆ ಮಾಡಿದ್ದರ ಹಿಂದಿನ ಕಾರಣ ತಿಳಿಸಿದ ಡಸಾಲ್ಟ್

Update: 2018-09-25 17:54 GMT

ಹೊಸದಿಲ್ಲಿ, ಸೆ.25: ಅನಿಲ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ವೈಮಾನಿಕ ಸಂಸ್ಥೆ ಕೊರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ನೋಂದಣಿಯಾಗಿತ್ತು ಮತ್ತು ಸಂಸ್ಥೆಗೆ ನಾಗ್ಪುರದಲ್ಲಿ ಜಮೀನಿದ್ದು, ಅದು ರನ್‌ವೇಯಾಗಿ ಬಳಸಬಹುದಾಗಿದ್ದ ಕಾರಣ ರಫೇಲ್ ಯುದ್ಧ ವಿಮಾನ ಒಪ್ಪಂದದಲ್ಲಿ ಡಸಾಲ್ಟ್ ಕಂಪೆನಿ ರಿಲಾಯನ್ಸನ್ನು ತನ್ನ ಭಾರತೀಯ ಜೊತೆಗಾರನಾಗಿ ಆಯ್ಕೆ ಮಾಡಿಕೊಂಡಿತ್ತು ಎಂದು ಹೆಸರು ಹೇಳಲು ಬಯಸದ ಡಸಾಲ್ಟ್‌ನ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಆಂಗ್ಲ ಸುದ್ದಿವಾಹಿನಿ ವರದಿ ಮಾಡಿದೆ.

 ಈ ಒಪ್ಪಂದದಲ್ಲಿ ಕೇಂದ್ರ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಮೊತ್ತಕ್ಕೆ ಒಪ್ಪಿಕೊಂಡಿದೆ ಮತ್ತು ಈ ಒಪ್ಪಂದದಲ್ಲಿ ಪಾರದರ್ಶಕತೆಯಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ. ಇದಕ್ಕೆ ಪ್ರತಿಯಾಗಿ, ಕಾಂಗ್ರೆಸ್ ಯಾವುದೇ ಸಾಕ್ಷಿಯಿಲ್ಲದೆ ಆರೋಪಗಳನ್ನು ಮಾಡುತ್ತಿದೆ ಎಂದು ಕೇಂದ್ರ ಸರಕಾರ ದೂರಿದೆ. ಪ್ರಧಾನಿ ಮೋದಿ ಜೊತೆ ರಫೇಲ್ ಒಪ್ಪಂದವನ್ನು ಚರ್ಚಿಸಿದ್ದ ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್, ರಿಲಾಯನ್ಸನ್ನು ಜೊತೆಗಾರನನ್ನಾಗಿ ಆಯ್ಕೆ ಮಾಡುವಂತೆ ಭಾರತೀಯ ಸರಕಾರ ಸಲಹೆ ನೀಡಿತ್ತು. ನಮ್ಮ ಬಳಿ ಬೇರೆ ಆಯ್ಕೆಯಿರಲಿಲ್ಲ ಎಂದು ಕಳೆದ ವಾರ ಸಂದರ್ಶನದಲ್ಲಿ ತಿಳಿಸಿದ್ದರು.

 ಆದರೆ ನಂತರ, ಅಂಬಾನಿಯ ಕಂಪೆನಿಯನ್ನು ಜೊತೆಗಾರನನ್ನಾಗಿ ಆಯ್ಕೆಮಾಡಲು ಒತ್ತಡವಿತ್ತೇ ಎಂಬುದಕ್ಕೆ ಡಸಾಲ್ಟ್ ಉತ್ತರಿಸಬೇಕಷ್ಟೇ ಎಂದು ಅವರು ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಡಸಾಲ್ಟ್, ತನ್ನ ಮೇಲೆ ಯಾವುದೇ ರೀತಿಯ ಒತ್ತಡವಿರಲಿಲ್ಲ ಎಂದು ತಿಳಿಸಿತ್ತು. ರಫೇಲ್ ಯುದ್ಧವಿಮಾನಗಳನ್ನು ಖರೀದಿಸುವ ಯೋಜನೆಯನ್ನು ಮನಮೋಹನ್ ಸಿಂಗ್ ಸರಕಾರ ರೂಪಿಸಿತ್ತು. ಆಗ ಈ 108 ವಿಮಾನಗಳ ತಯಾರಿಕೆಯಲ್ಲಿ ಎಚ್‌ಎಎಲ್ ನೆರವು ಕೋರಲಾಗಿತ್ತು. ಈ ಒಪ್ಪಂದದ ಕುರಿತು ಮುಕೇಶ್ ಅಂಬಾನಿಯ ವೈಮಾನಿಕ ಸಂಸ್ಥೆಯ ಜೊತೆ 2012ರಲ್ಲಿ ಮಾತುಕತೆ ಆರಂಭಿಸಿದ್ದುದಾಗಿ ಡಸಾಲ್ಟ್ ತಿಳಿಸಿದೆ. ಆದರೆ ನಂತರ ಮುಕೇಶ್ ಅಂಬಾನಿ ಮಾಲಕತ್ವದ ಸಂಸ್ಥೆಯನ್ನು ಅನಿಲ್ ಅಂಬಾನಿ ಪಡೆದುಕೊಂಡ ಕಾರಣ ಅವರ ಜೊತೆ ಮಾತುಕತೆಯನ್ನು ಮುಂದುವರಿಸಲಾಯಿತು ಎಂದು ಡಸಾಲ್ಟ್ ಮೂಲಗಳು ತಿಳಿಸಿರುವುದಾಗಿ ಸುದ್ದಿ ವಾಹಿನಿ ತನ್ನ ವರದಿಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News