ವೆಸ್ಟ್‌ಇಂಡೀಸ್ ಕೋಚ್ ಹುದ್ದೆ ತ್ಯಜಿಸಿದ ಸ್ಟುವರ್ಟ್ ಲಾ

Update: 2018-09-25 18:25 GMT

ಸೈಂಟ್ ಜಾನ್ಸ್, ಸೆ.25: ಭಾರತ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ಪ್ರವಾಸದ ಬಳಿಕ ಡಿಸೆಂಬರ್‌ನಲ್ಲಿ ವೆಸ್ಟ್‌ಇಂಡೀಸ್ ಕೋಚ್ ಹುದ್ದೆಯಿಂದ ಕೆಳಗಿಳಿಯಲು ಸ್ಟುವರ್ಟ್ ಲಾ ನಿರ್ಧರಿಸಿದ್ದಾರೆ.

ತಾನು ವಿಂಡೀಸ್ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ ಶುಕ್ರವಾರ ಬಹಿರಂಗಪಡಿಸಿದ ಸ್ಟುವರ್ಟ್ ಲಾ,‘‘ಮುಂದಿನ ವರ್ಷದ ಜನವರಿಯಿಂದ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡ್‌ನ ಕೌಂಟಿ ತಂಡದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದೇನೆ. ತನ್ನ ಕುಟುಂಬದೊಂದಿಗೆ ಹೆಚ್ಚು ಹತ್ತಿರವಾಗಲು ಬಯಸಿದ್ದೇನೆ’’ ಎಂದು ಹೇಳಿದ್ದಾರೆ.

ಆಸ್ಟ್ರೇಲಿಯದ ಮಾಜಿ ದಾಂಡಿಗ ಲಾ 2017ರ ಫೆಬ್ರವರಿಯಲ್ಲಿ ವೆಸ್ಟ್‌ಇಂಡೀಸ್ ತಂಡದ ಕೋಚ್ ಆಗಿ ನೇಮಕಗೊಂಡಿದ್ದರು. ಇದಕ್ಕೂ ಮೊದಲು ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳಿಗೆ ಕೋಚ್ ಆಗಿದ್ದರು.

ಲಾ ಮಾರ್ಗದರ್ಶನದಲ್ಲಿ ವಿಂಡೀಸ್ ತಂಡ ಝಿಂಬಾಬ್ವೆ ಹಾಗೂ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತ್ತು. ಹೆಡ್ಡಿಂಗ್ಲೆಯಲ್ಲಿ ವಿಂಡೀಸ್ ತಂಡ ಇಂಗ್ಲೆಂಡ್ ವಿರುದ್ಧ 322 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತ್ತು. ಇಂಗ್ಲೆಂಡ್ ನೆಲದಲ್ಲಿ 17 ವರ್ಷಗಳ ಬಳಿಕ ಜಯ ದಾಖಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News