ಬುಧವಾರ ಕೊನೆಯ ಸೂಪರ್-4 ಪಂದ್ಯ: ಪಾಕ್-ಬಾಂಗ್ಲಾ ಪಾಲಿಗೆ ‘ಸೆಮಿ ಫೈನಲ್’

Update: 2018-09-25 18:28 GMT

ಅಬುಧಾಬಿ, ಸೆ.25: ಸಾಂಪ್ರದಾಯಿಕ ಎದುರಾಳಿ ಭಾರತ ವಿರುದ್ಧ ಸತತ ಎರಡು ಪಂದ್ಯಗಳಲ್ಲಿ ಸೋಲನುಭವಿಸಿ ಹೈರಾಣಾಗಿರುವ ಪಾಕಿಸ್ತಾನ ತಂಡ ಬುಧವಾರ ನಡೆಯಲಿರುವ ಟೂರ್ನಿಯ ಕೊನೆಯ ಸೂಪರ್-4 ಪಂದ್ಯದಲ್ಲಿ ಬಾಂಗ್ಲಾದೇಶದ ಸವಾಲನ್ನು ಎದುರಿಸಲಿದೆ.

ಶೇಕ್ ಝಾಯೆದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಅಂತಿಮ ಸೂಪರ್ ಪಂದ್ಯದ ಬಳಿಕ ಅಗ್ರ-2 ತಂಡಗಳು ಫೈನಲ್‌ಗೆ ತಲುಪಲಿವೆ. ಭಾರತ ಈಗಾಗಲೇ ಫೈನಲ್‌ಗೆ ತಲುಪಿದ್ದು, ಫೈನಲ್‌ಗೆ ತಲುಪಲಿರುವ ಇನ್ನೊಂದು ತಂಡ ಯಾವುದೆನ್ನುವುದು ಬುಧವಾರ ನಿರ್ಧಾರವಾಗಲಿದೆ. ಮಾಜಿ ವಿಶ್ವ ಹಾಗೂ ಏಶ್ಯಕಪ್ ಚಾಂಪಿಯನ್ ಪಾಕಿಸ್ತಾನ ತಂಡ ಬಾಂಗ್ಲಾವನ್ನು ಸೋಲಿಸಿ ಫೈನಲ್‌ಗೆ ತಲುಪುವ ವಿಶ್ವಾಸದಲ್ಲಿದೆ.

ಪಾಕಿಸ್ತಾನ ತಂಡ ಶುಕ್ರವಾರ ನಡೆಯುವ ಫೈನಲ್‌ಗೆತೇರ್ಗಡೆಯಾಗಬೇಕಾದರೆ ಬ್ಯಾಟಿಂಗ್‌ನಲ್ಲಿ ಮತ್ತಷ್ಟು ಸುಧಾರಣೆಯಾಗಬೇಕಾಗಿದೆ.

ಪಾಕ್ ಪಾಳಯದಲ್ಲಿ ಅನುಭವಿ ದಾಂಡಿಗ ಶುಐಬ್ ಮಲಿಕ್ ಹೊರತುಪಡಿಸಿ ಬೇರೆ ದಾಂಡಿಗರು ವಿಫಲರಾಗುತ್ತಿದ್ದಾರೆ. ಎರಡು ಬಾರಿ ಏಶ್ಯಕಪ್‌ನ್ನು ಜಯಿಸಿರುವ ಪಾಕ್ ತಂಡಕ್ಕೆ ವೇಗದ ಬೌಲರ್ ಮುಹಮ್ಮದ್ ಆಮಿರ್ ಕಳಪೆ ಫಾರ್ಮ್ ಚಿಂತೆಯ ವಿಷಯವಾಗಿದೆ.ಆಮಿರ್ ವಿಕೆಟ್ ಪಡೆಯಲು ಪರದಾಡುತ್ತಿದ್ದಾರೆ. ನಾಯಕ ಸರ್ಫರಾಝ್ ಅಹ್ಮದ್ ಅವರು ಆಮಿರ್ ಹಾಗೂ ಇತರ ಬೌಲರ್‌ಗಳ ಪ್ರದರ್ಶನದ ಬಗ್ಗೆ ಬೇಸರ ಹೊರಹಾಕಿದ್ದಾರೆ.

ಭಾರತ ವಿರುದ್ಧ ಸೂಪರ್-4 ಪಂದ್ಯದಲ್ಲಿ 9 ವಿಕೆಟ್‌ಗಳಿಂದ ಹೀನಾಯವಾಗಿ ಸೋತಿರುವ ಪಾಕ್ ತಂಡದ ಕೈಯ್ಯಲ್ಲಿ ದೊಡ್ಡ ಸವಾಲಿದೆ ಎಂದು ಕೋಚ್ ಮಿಕಿ ಅರ್ಥರ್ ಹೇಳಿದ್ದಾರೆ.

‘‘ಬಾಂಗ್ಲಾದೇಶ ವಿರುದ್ಧ ಪಂದ್ಯ ನಮ್ಮ ತಂಡಕ್ಕೆ ಸೆಮಿ ಫೈನಲ್ ಎನಿಸಿಕೊಂಡಿದೆ. ಈ ಕ್ಷಣದಲ್ಲಿ ನಾವು ಹಿನ್ನಡೆಯಿಂದ ಚೇತರಿಸಿಕೊಳ್ಳಬೇಕಾಗಿದೆ. ಗೆಲ್ಲಲೇಬೇಕಾದ ಈ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ನೀಡಬೇಕಾಗಿದೆ. ನನಗೆ ನಮ್ಮ ಆಟಗಾರರ ಮೇಲೆ ಸಂಪೂರ್ಣ ನಂಬಿಕೆಯಿದೆ’’ ಎಂದು ಅರ್ಥರ್ ಹೇಳಿದ್ದಾರೆ.

ಬಾಂಗ್ಲಾದೇಶ ತಂಡ ಅಫ್ಘಾನಿಸ್ತಾನ ವಿರುದ್ಧ ಆಡಿರುವ ತನ್ನ 2ನೇ ಸೂಪರ್-4 ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ 3 ರನ್‌ಗಳಿಂದ ಪ್ರಯಾಸದ ಗೆಲುವು ದಾಖಲಿಸಿದೆ. ಭಾರತ ವಿರುದ್ಧ ಆಡಿರುವ ಮೊದಲ ಸೂಪರ್-4 ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಸೋಲುಂಡಿತ್ತು.

ಅಫ್ಘಾನ್ ವಿರುದ್ಧ ಜಯ ಸಾಧಿಸಿರುವ ಬಾಂಗ್ಲಾದೇಶ ತಂಡ ಪಾಕ್‌ನ್ನು ಸೋಲಿಸಿ ಫೈನಲ್‌ಗೆ ತಲುಪುವ ವಿಶ್ವಾಸದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News