ಆಧಾರ್ ನ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್

Update: 2018-09-26 14:14 GMT

ಹೊಸದಿಲ್ಲಿ, ಸೆ.26: ರಾಷ್ಟ್ರೀಯ ಗುರುತು ಪತ್ರವಾದ ಆಧಾರ್ ಸಮಾಜದ ದುರ್ಬಲ ವರ್ಗಗಳಿಗೆ ನೆರವಾಗುತ್ತದೆ ಹಾಗು ಅವುಗಳಿಗೆ ಗುರುತನ್ನು ನೀಡುತ್ತದೆ ಎಂದಿರುವ ಸುಪ್ರೀಂ ಕೋರ್ಟ್ ಆಧಾರ್ ಸಿಂಧುತ್ವವನ್ನು ಎತ್ತಿಹಿಡಿದಿದೆ. ಆಧಾರ್ 'ಸಾಂವಿಧಾನಿಕ ಮಾನ್ಯತೆ' ಹೊಂದಿದೆ ಎಂದು ಕೋರ್ಟ್ ಇದೇ ಸಂದರ್ಭ ಹೇಳಿದೆ. 

 ದೇಶದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ಆಧಾರ್ ಕಾರ್ಡ್ ಕುರಿತು ಬುಧವಾರ ಮಹತ್ವದ ತೀರ್ಪು ನೀಡಿದ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ಸದಸ್ಯರ ನ್ಯಾಯಪೀಠ ಕೆಲವೊಂದು ನಿರ್ಬಂಧ ವಿಧಿಸಿ ಆಧಾರ್‌ನ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿ ಹಿಡಿದಿದೆ. ಆದರೆ, ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಹಾಗೂ ಮೊಬೈಲ್ ಸಂಖ್ಯೆಗಳಿಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯವಲ್ಲ ಎಂದು ಹೇಳಿದೆ.

ಸುಪ್ರೀಂಕೋರ್ಟ್ ತೀರ್ಪಿನ ಮುಖ್ಯಾಂಶಗಳು:

*40 ಪುಟಗಳ ತೀರ್ಪಿನ ಸಾರಾಂಶ ಓದಿದ ಸು.ಕೋರ್ಟ್‌ನ ನ್ಯಾ.ಎ.ಕೆ.ಸಿಕ್ರಿ

*ಯೋಜನೆಗಳ ಫಲಾನುಭವಿಗಳಿಗೆ ಆಧಾರ್‌ನಿಂದ ಅನುಕೂಲ

*ಸಮಾಜದ ಹಿತದೃಷ್ಟಿಯಿಂದ ಕೆಲ ನಿರ್ಬಂಧನೆಗಳು ಅಗತ್ಯ

*ಮೊಬೈಲ್ ಸಿಮ್ ಪಡೆಯಲು, ಬ್ಯಾಂಕ್ ಖಾತೆ ತೆರೆಯಲು ಆಧಾರ್ ಅಗತ್ಯವಿಲ್ಲ. ಪ್ಯಾನ್ ಕಾರ್ಡ್ ಪಡೆಯಲು ಆಧಾರ್ ಕಡ್ಡಾಯ.

*ಶಾಲಾ-ಕಾಲೇಜುಗಳಲ್ಲಿ ಆಧಾರ್ ಕಡ್ಡಾಯವಲ್ಲ ಹಾಗೂ ಬ್ಯಾಂಕ್ ಖಾತೆಗಳಲ್ಲಿ ಆಧಾರ್ ಜೋಡಣೆ ಕಡ್ಡಾಯವಲ್ಲ. ಇದು ಅಸಂವಿಧಾನಿಕ.

* ಐಟಿ ರಿಟರ್ನ್ಸ್ ಸಲ್ಲಿಕೆಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯ

*ಸಿಬಿಎಸ್‌ಇ, ನೀಟ್, ಯುಜಿಸಿ ಪರೀಕ್ಷೆಗೆ ಆಧಾರ್ ಕಡ್ಡಾಯವಲ್ಲ.

*ಕನಿಷ್ಠ ಅಂಕಿ-ಅಂಶಗಳನ್ನು ಅಳವಡಿಸಿಕೊಳ್ಳಬಹುದು

*ನಕಲಿ ಆಧಾರ್ ಕಾರ್ಡ್ ಸೃಷ್ಟಿ ಮಾಡಲು ಅವಕಾಶವಿದ್ದರೆ ಅದನ್ನು ತಡೆಗಟ್ಟಿ

*ಆಧಾರ್ ಕಾರ್ಡಿನಲ್ಲಿರುವ ಮಾಹಿತಿ ತಿರುಚಲು ಸಾಧ್ಯವಿಲ್ಲ, ಆಧಾರ್ ಸಂಪೂರ್ಣ ಸುರಕ್ಷಿತವಾಗಿದೆ.

*ಆಧಾರ್ ವಿರುದ್ಧ ದಾಳಿ ಸಂವಿಧಾನ ವಿರೋಧಿ.

*ಆಧಾರ್ ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆಯಾಗಬಾರದು.

*ಖಾಸಗಿ ಸಂಸ್ಥೆಗಳು ಆಧಾರ್ ಮಾಹಿತಿಯನ್ನು ಸಂಗ್ರಹಿಸುವಂತಿಲ್ಲ.

*ಆಧಾರ್ ದತ್ತಾಂಶ ಸೋರಿಕೆಗೆ ನಿರ್ಬಂಧ

 *ಸರಕಾರದ ಯೋಜನೆಗೆ ಮಾತ್ರ ಆಧಾರ್ ಕಡ್ಡಾಯ

*ಆಧಾರ್ ಕಾಯ್ದೆ ಸೆಕ್ಷನ್ 33(2), ಸೆಕ್ಷನ್ 57ನ್ನು ರದ್ದುಪಡಿಸಿದ ಸುಪ್ರೀಂ

*ಅಕ್ರಮ ವಲಸಿಗರು ಆಧಾರ್ ಪಡೆಯುವಂತಿಲ್ಲ

*ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಆಧಾರ್ ಮಾಹಿತಿ ಬಹಿರಂಗಪಡಿಸುವಂತಿಲ್ಲ

ಆಧಾರ್ ಹೆಚ್ಚಿನ ಸಾರ್ವಜನಿಕ ಹಿತಾಸಕ್ತಿಯ ಉದ್ದೇಶವನ್ನು ಪೂರ್ಣಗೊಳಿಸುತ್ತದೆ. ಪ್ರತಿಬಾರಿ ಅತ್ಯುತ್ತಮವಾಗಿರುವುದಕ್ಕಿಂತ ವಿಶಿಷ್ಟವಾಗಿರುವುದು ಉತ್ತಮ ಎಂದು ನ್ಯಾಯಪೀಠ ತಿಳಿಸಿದೆ. ಮೊಬೈಲ್ ಫೋನ್‌ಗಳಿಗೆ ಮತ್ತು ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಕಡ್ಡಾಯವಲ್ಲ ಎಂದಿರುವ ನ್ಯಾಯಾಲಯ, ಮೊಬೈಲ್ ಫೋನ್‌ಗಳಿಗೆ ಆಧಾರ್ ಜೋಡಣೆ ಅಸಾಂವಿಧಾನಿಕ. ಯಾವುದೇ ಮೊಬೈಲ್ ಕಂಪೆನಿ ಆಧಾರ್ ಕಾರ್ಡ್ ಕೇಳುವ ಹಾಗಿಲ್ಲ ಎಂದು ತೀರ್ಪು ನೀಡಿದೆ. ಜೊತೆಗೆ ಬ್ಯಾಂಕ್ ಸೇವೆ ಪಡೆಯಲೂ ಆಧಾರ್ ಕಡ್ಡಾಯವಲ್ಲ ಎಂದಿದೆ. ಆದರೆ ಪಾನ್ ಕಾರ್ಡ್ ಪಡೆಯಲು ಮಾತ್ರ ಆಧಾರ್ ಕಡ್ಡಾಯ ಎಂದು ಹೇಳಿದೆ. ಪ್ರತಿ ಮಗುವಿಗೂ ಶಿಕ್ಷಣದ ಹಕ್ಕಿದೆ ಎಂದು ತಿಳಿಸಿರುವ ಘನ ನ್ಯಾಯಾಲಯ, ಶಾಲೆಗಳು ಆಧಾರನ್ನು ಕಡ್ಡಾಯಗೊಳಿಸುವಂತಿಲ್ಲ ಎಂದು ತೀರ್ಪಿತ್ತಿದೆ. ಆಧಾರ್ ದೃಢೀಕರಣ ದತ್ತಾಂಶವನ್ನು ಆರು ತಿಂಗಳಿಗೂ ಹೆಚ್ಚು ಕಾಲ ಶೇಖರಿಸಿಡುವಂತಿಲ್ಲ ಎಂದು ಆದೇಶ ನೀಡಿರುವ ನ್ಯಾಯಪೀಠ, ಅಕ್ರಮ ವಲಸಿಗರಿಗೆ ಆಧಾರ್ ನೀಡದಂತೆ ಸರಕಾರಕ್ಕೆ ಸೂಚಿಸಿದೆ. ಲೋಕಸಭೆಯಲ್ಲಿ ಆಧಾರ್ ಮಸೂದೆಯನ್ನು ಹಣಕಾಸು ಮಸೂದೆಯಾಗಿ ಅಂಗೀಕರಿಸಿರುವುದನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.

ಆಧಾರ್ ಕಾಯ್ದೆಯಲ್ಲಿ ವ್ಯಕ್ತಿಯ ಖಾಸಗಿತನವನ್ನು ಉಲ್ಲಂಘಿಸುವಂತದ್ದು ಏನೂ ಇಲ್ಲ ಎಂದು ಶ್ರೇಷ್ಠ ನ್ಯಾಯಾಲಯ ತಿಳಿಸಿದೆ. ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ನೇತ್ತೃತ್ವದ ಪಂಚ ಸದಸ್ಯ ನ್ಯಾಯಪೀಠದಲ್ಲಿ ನ್ಯಾಯಾಧೀಶರಾದ ಎ.ಕೆ.ಸಿಕ್ರಿ, ಎ.ಎಂ.ಖಾನ್ವಿಲ್ಕರ್, ಡಿ.ವೈ.ಚಂದ್ರಚೂಡ್ ಮತ್ತು ಅಶೋಕ್ ಭೂಷಣ್ ಸದಸ್ಯರಾಗಿದ್ದರು. ಕಳೆದ ಆಧಾರ್ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಜನವರಿ 17ರಂದು ಕೈಗೆತ್ತಿಕೊಂಡ ಪೀಠ 38 ದಿನಗಳ ವಿಚಾರಣೆಯ ನಂತರ ಮೇ 10ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News