ವಿದೇಶಿ ತಳಿ ದನಗಳ ಹಾಲು ಹಾನಿಕರ, ದೇಸಿ ಗೋವುಗಳ ಹಾಲನ್ನೇ ಸೇವಿಸಿ ಎಂದ ಹಿಮಾಚಲ ರಾಜ್ಯಪಾಲ !
ಗೋರಖಪುರ್, ಸೆ.27: ವಿದೇಶಿ ತಳಿಯ ದನಗಳಾದ ಹೋಲ್‍ಸ್ಟೀನ್ ಫ್ರೀಸಿಯನ್ ಹಾಗೂ ಜೆರ್ಸಿ ಇವುಗಳ ಹಾಲು ಮನುಷ್ಯರಿಗೆ ಹಾನಿಕರ ಹಾಗೂ ಅವುಗಳ ಸೇವನೆಯಿಂದ ಜನರು ಆಕ್ರಮಣಕಾರಿಯಾಗುತ್ತಾರಲ್ಲದೆ ರಕ್ತದೊತ್ತಡವೂ ಏರುತ್ತದೆ ಎಂದು ಹಿಮಾಚಲ ಪ್ರದೇಶ ರಾಜ್ಯಪಾಲ ಆಚಾರ್ಯ ದೇವ ವೃತ ಹೇಳಿ ಅಚ್ಚರಿ ಮೂಡಿಸಿದ್ದಾರೆ.
'ಸನಾತನ ಹಿಂದು ಧರ್ಮದಲ್ಲಿ ಗೋವುಗಳ ಮಹತ್ವ' ಎಂಬ ಬಗ್ಗೆ ಗೋರಖನಾಥ ದೇವಳದಲ್ಲಿ ಮಾತನಾಡಿದ ರಾಜ್ಯಪಾಲರು ದೇಸಿ ಗೋವುಗಳ ಹಾಲನ್ನು ಉತ್ತಮ ಆರೋಗ್ಯಕ್ಕಾಗಿ ಸೇವಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಗೋರಖನಾಥ ದೇವಾಲಯದ ಮಾಜಿ ಮುಖ್ಯ ಅರ್ಚಕರಾದ ಮಹಂತ್ ದಿಗ್ವಿಜಯನಾಥ್ ಹಾಗೂ ಮಹಂತ್ ಅವೈದ್ಯನಾಥ್ ಅವರ ವರ್ಧಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ದೇವಳದ ಮುಖ್ಯ ಅರ್ಚಕರಾಗಿರುವ ಮುಖ್ಯಮಂತ್ರಿ ಆದಿತ್ಯನಾಥ್ ಕೂಡ ಈ ಸಂದರ್ಭ ಉಪಸ್ಥಿತರಿದ್ದರು.
ತಮ್ಮ ಹುಟ್ಟೂರಾದ ಹರ್ಯಾಣದ ಕುರುಕ್ಷೇತ್ರದ ಗ್ರಾಮದಲ್ಲಿನ ತಮ್ಮ 200 ಎಕರೆ ತೋಟದಲ್ಲಿ 300ಕ್ಕೂ ಅಧಿಕ ದನಗಳನ್ನು ಹೊಂದಿರುವ ರಾಜ್ಯಪಾಲರು, ಗೋಮೂತ್ರ ಹಾಗೂ ಸೆಗಣಿಯಿಂದ ತಯಾರಿಸಲು ಸಾಧ್ಯವಿರುವ ಸಾವಯವ ರಸಗೊಬ್ಬರ 'ಜೀವ್ ಅಮೃತ್' ಬಗ್ಗೆ ಮಾತನಾಡಿದರು. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚುವುದು ಎಂದು ಅವರು ಹೇಳಿದರು.
ಒಂದು ದೇಸಿ ದನದಿಂದ 30 ಎಕರೆ ಪ್ರದೇಶಕ್ಕೆ ಸಾಕಾಗುವಷ್ಟ ಜೀವ ಅಮೃತ್ ತಯಾರಿಸಬಹುದಾದರೆ, ಒಂದು ಎಕರೆ ಭೂಮಿಗೆ ಅಗತ್ಯವಿರು ರಸಗೊಬ್ಬರ ತಯಾರಿಸಲು 20 ವಿದೇಶಿ ತಳಿ ದನಗಳು ಅಗತ್ಯವಿದೆ ಎಂದು ಅವರು ಹೇಳಿದರು. ದೇಸಿ ದನದ ಸೆಗಣಿಯ ಒಂದು ಗ್ರಾಂ ಅಂಶದಲ್ಲಿ ಎರಡು ಲಕ್ಷ ಕೋಟಿಯಿಂದ ಮೂರು ಲಕ್ಷ ಕೋಟಿ ಸೂಕ್ಷ್ಮಾಣು ಜೀವಿಗಳಿದ್ದು ಇವುಗಳು ಮಣ್ಣಿನ ಫಲವತ್ತತೆ ಹೆಚ್ಚಿಸುವ ಸಾಮಥ್ರ್ಯ ಹೊಂದಿವೆ. ಆದರೆ ವಿದೇಶಿ ತಳಿ ದನಗಳ ಒಂದು ಗ್ರಾಂ ಸೆಗಣಿಯಲ್ಲಿ ಕೇವಲ 60 ಲಕ್ಷದಿಂದ 70 ಲಕ್ಷ ಸೂಕ್ಷ್ಮಾಣು ಜೀವಿಗಳಿರುತ್ತವೆ ಎಂದು ಅವರು ಹೇಳಿದರು.