“ಅತ್ಯಾಚಾರ ಪ್ರಕರಣ ದಾಖಲಿಸಿ, ಬಿಡುಗಡೆಯಾಗಿ”

Update: 2018-09-29 04:39 GMT

ಲಕ್ನೋ, ಸೆ. 27: ಬಿಡುಗಡೆ ಮಾಡಬೇಕಾದರೆ, ತನ್ನ ಗೆಳೆಯನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವಂತೆ ಪೊಲೀಸ್ ಅಧಿಕಾರಿಗಳು ಹೇಳಿದ್ದರು ಎಂದು ಮುಸ್ಲಿಂ ಯುವಕನೊಬ್ಬನ ಗೆಳೆತನ ಮಾಡಿರುವ ಆರೋಪದಲ್ಲಿ ವಿಎಚ್‌ಪಿ ಕಾರ್ಯಕರ್ತರು ಹಾಗೂ ಮೀರತ್ ಪೊಲೀಸ್‌ನಿಂದ ದೌರ್ಜನ್ಯಕ್ಕೆ ಒಳಗಾದ ಹಿಂದೂ ಮಹಿಳೆ ಆರೋಪಿಸಿದ್ದಾರೆ. ‘‘ನನ್ನ ಕುಟುಂಬಕ್ಕಾಗಿ ನಾನು ಪೊಲೀಸ್ ಠಾಣೆಯ ಹೊರಗೆ ಕಾಯುತ್ತಿದ್ದಾಗ, ನನ್ನ ಗೆಳೆಯನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವಂತೆ ಪೊಲೀಸ್ ಅಧಿಕಾರಿಗಳು ಒತ್ತಾಯಿಸಿದರು. ಅವರ ಮಾತನ್ನು ಕೇಳಿದರೆ ಮಾತ್ರ ಬಿಡುಗಡೆ ಮಾಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದರು. ಪೊಲೀಸ್ ಅಧಿಕಾರಿಗಳು ನನ್ನ ಕುಟುಂಬದವರಿಗೆ ಕೂಡ ಇದೇ ಸಲಹೆ ನೀಡಿದ್ದರು’’ ಎಂದು ಅವರು ತಿಳಿಸಿದ್ದಾರೆ.

ಮುಸ್ಲಿಂ ಯುವಕ ಹಾಗೂ ಯುವತಿಯ ಮೇಲೆ ಈ ವಾರದ ಆರಂಭದಲ್ಲಿ ವಿಎಚ್‌ಪಿ ಕಾರ್ಯಕರ್ತರು ದಾಳಿ ನಡೆಸಿದ್ದರು. ಮುಸ್ಲಿಂ ಯುವಕನನ್ನು ಆತನ ಮನೆಯಿಂದ ಹೊರಗೆ ಎಳೆದು ಕೊಂಡು ಬಂದು ತೀವ್ರವಾಗಿ ಪ್ರಶ್ನಿಸಿದ್ದರು. ಅನಂತರ ಪೊಲೀಸರು ಸ್ಥಳಕ್ಕೆ ತಲುಪಿದ್ದರು. ಅವರು ಯುವಕ ಹಾಗೂ ಯುವತಿಯನ್ನು ಪ್ರತ್ಯೇಕ ವ್ಯಾನ್‌ಗಳಲ್ಲಿ ಕರೆದೊಯ್ದಿದ್ದರು. ಪೊಲೀಸ್ ವ್ಯಾನ್ ಒಳಗೆ ಯುವತಿಗೆ ಪೊಲೀಸರು ನಿಂದಿಸುತ್ತಿರುವುದು ಹಾಗೂ ಥಳಿಸುತ್ತಿರುವ ದೃಶ್ಯವುಳ್ಳ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

‘‘ನಾವು ಪೊಲೀಸ್ ಠಾಣೆಗೆ ತೆರಳುತ್ತಿದ್ದಾಗ, ಮಹಿಳಾ ಪೊಲೀಸ್ ಒಬ್ಬರು ನನಗೆ ಥಳಿಸಿದರು. ಇದನ್ನು ಇನ್ನೋರ್ವ ಪೊಲೀಸ್ ಅಧಿಕಾರಿ ವೀಡಿಯೋ ಮಾಡಿದರು. ಅವರು ನನ್ನ ಬಗ್ಗೆ ಕೊಳಕಾದ ಭಾಷೆ ಬಳಸಿದರು.’’ ಎಂದು ಯುವತಿ ಹೇಳಿದ್ದಾರೆ. ‘‘ಆರಂಭದಲ್ಲಿ ಹೊರಗೆ ಏನು ಕೇಳಿಸಿಕೊಂಡಿದ್ದಾರೊ ಅದೆಲ್ಲವನ್ನು ನನ್ನ ಹೆತ್ತವರು ನಂಬಿದ್ದರು. ಅನಂತರ, ನಾನು ನಡೆದಿರುವುದನ್ನು ತಿಳಿಸಿದೆ. ಅವರು ನನ್ನನ್ನು ಬೆಂಬಲಿಸಿದರು. ನಾನು ಹಾಗೂ ನನ್ನ ಗೆಳೆಯನ ವಿರುದ್ಧ ಪೊಲೀಸರು ಕೆಟ್ಟದಾಗಿ ಯಾಕೆ ವರ್ತಿಸಿದರು ಎಂದು ನನಗೆ ಗೊತ್ತಿಲ್ಲ.’’ ಎಂದು ಯುವತಿ ಹೇಳಿದ್ದಾರೆ.

ಇನ್ನೊಂದು ಘಟನೆಯ ವೀಡಿಯೊ ಕೂಡ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಪೊಲೀಸರ ಎದುರು ವಿಎಚ್‌ಪಿ ಕಾರ್ಯಕರ್ತರು ಮಸ್ಲಿಂ ಯುವಕನಿಗೆ ಥಳಿಸುತ್ತಿರುವುದು ಹಾಗೂ ಹಿಂದೂ ಯುವತಿಯೊಂದಿಗಿನ ಸಂಬಂಧ ಕಡಿದುಕೊಳ್ಳದೇ ಇದ್ದರೆ ಪರಿಣಾಮ ಎದುರಿಸಬೇಕಾಗಬಹುದು ಎಂದು ಎಚ್ಚರಿಸಿರುವುದು ದಾಖಲಾಗಿದೆ. ಕರ್ತವ್ಯದ ಸಂದರ್ಭ ತಪ್ಪೆಸಗಿದ ಪೊಲೀಸರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಉತ್ತರಪ್ರದೇಶದ ಪೊಲೀಸ್ ವರಿಷ್ಠರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News