ವ್ಯಾಪಂ ಹಗರಣ: ಕಾಂಗ್ರೆಸ್ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಲು ನ್ಯಾಯಾಲಯ ಸೂಚನೆ
ಭೋಪಾಲ, ಸೆ. 27: ವ್ಯಾಪಂ ಹಗರಣಕ್ಕೆ ಸಂಬಂಧಿಸಿ ತಪ್ಪು ಸಾಕ್ಷಿಗಳನ್ನು ನೀಡಿದ ಆರೋಪದಲ್ಲಿ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್, ಕಮಲ್ ನಾಥ್, ಜ್ಯೋತಿರಾದಿತ್ಯ ಸಿಂಧ್ಯ ಹಾಗೂ ಆರ್‌ಟಿಐ ಕಾರ್ಯಕರ್ತನ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸುವಂತೆ ಭೋಪಾಲದ ನ್ಯಾಯಾಲಯ ನಿರ್ದೇಶಿಸಿದೆ. ವಕೀಲ ಸಂತೋಷ್ ಶರ್ಮಾ ಖಾಸಗಿ ದೂರಿಗೆ ಪ್ರತಿಕ್ರಿಯಿಸಿ ಅಡಿಷನಲ್ ಡಿಸ್ಟ್ರಿಕ್ಟ್‌ನ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಸುರೇಶ್ ಸಿಂಗ್ ಮಧ್ಯಪ್ರದೇಶ ಸರಕಾರಕ್ಕೆ ಬುಧವಾರ ನೋಟಿಸು ಜಾರಿ ಮಾಡಿದ್ದಾರೆ. ಕೂಡಲೇ ಪ್ರಥಮ ಮಾಹಿತಿ ವರದಿ ದಾಖಲಿಸುವಂತೆ, ಅದರ ಪ್ರತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ನ್ಯಾಯಮೂರ್ತಿ ಪೊಲೀಸರಿಗೆ ನಿರ್ದೇಶಿಸಿದ್ದಾರೆ ಹಾಗೂ ತನಿಖಾ ವರದಿಯನ್ನು ನವೆಂಬರ್ 13ರ ಒಳಗೆ ಸಲ್ಲಿಸುವಂತೆ ಸೂಚಿಸಿದ್ದಾರೆ. ಮಧ್ಯಪ್ರದೇಶದ ವೃತ್ತಿ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಪರೀಕ್ಷೆಗಳಲ್ಲಿ ನಡೆದ ಭ್ರಷ್ಟಾಚಾರವನ್ನು ವ್ಯಾಪಂ ಹಗರಣ ಎಂದು ಕರೆಯಲಾಗುತ್ತಿದೆ. ಕಾಂಗ್ರೆಸ್ ನಾಯಕರು ಹಾಗೂ ವ್ಯಾಪಂ ಪ್ರಕರಣದಲ್ಲಿ ‘ಎಚ್ಚರಿಸಿದ’ ಪ್ರಶಾಂತ್ ಪಾಂಡೆ ಅವರು ತಪ್ಪು ಸಾಕ್ಷಿ ನೀಡಿ ನ್ಯಾಯಾಲಯವನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿ ಶರ್ಮಾ ಅವರು ಸೋಮವಾರ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.