ಕಾಶ್ಮೀರ: ಯೋಧ ಸೇರಿ ಮೂವರ ಸಾವು
ಶ್ರೀನಗರ, ಸೆ.27: ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಉಗ್ರನೊಬ್ಬನನ್ನು ಹತ್ಯೆ ಮಾಡಲಾಗಿದ್ದು ಓರ್ವ ಯೋಧನೂ ಸಾವನ್ನಪಿದ್ದಾನೆ. ಇನ್ನೊಂದು ಘಟನೆಯಲ್ಲಿ ಉಗ್ರರ ಶೋಧ ಕಾರ್ಯಾಚರಣೆ ಸಂದರ್ಭ ನಡೆದ ಗುಂಡಿನ ದಾಳಿಯಲ್ಲಿ ನಾಗರಿಕನೊಬ್ಬ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇಂದ್ರ ಕಾಶ್ಮೀರದ ಪಂದನ್ ಚದೂರ ಎಂಬಲ್ಲಿ ಉಗ್ರರು ಮನೆಯೊಂದರಲ್ಲಿ ಇರುವ ಬಗ್ಗೆ ಮಾಹಿತಿ ಪಡೆದ ಭದ್ರತಾ ಪಡೆಗಳು ಈ ಪ್ರದೇಶಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ಆರಂಭಿಸಿದಾಗ ಉಗ್ರರು ಸಮೀಪದಲ್ಲಿದ್ದ ಮಸೀದಿಯೊಳಗೆ ಓಡಿ ಅವಿತುಕೊಂಡರು. ಶರಣಾಗುವಂತೆ ಮನವೊಲಿಸಲು ಉಗ್ರರೊಂದಿಗೆ ಮಸೀದಿಯ ಆಡಳಿತ ವರ್ಗದವರು ಮಾತುಕತೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶ್ರೀನಗರ ಸೇರಿದಂತೆ ದಕ್ಷಿಣ ಮತ್ತು ಕೇಂದ್ರ ಕಾಶ್ಮೀರದಲ್ಲಿ ಅಧಿಕಾರಿಗಳು ಮೊಬೈಲ್ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ್ದಾರೆ. ಪ್ರತಿಭಟನೆ ನಡೆಯದಂತೆ ಹಾಗೂ ಉಗ್ರರನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಶ್ರೀನಗರದ ಹಲವೆಡೆ ನಿರ್ಬಂಧ ಹೇರಲಾಗಿದೆ.
ಅನಂತ್‌ನಾಗ್ ಜಿಲ್ಲೆಯ ಗಾಸಿಗುಂಡ್ ಎಂಬಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ. ಓರ್ವ ಯೋಧನೂ ಸಾವನ್ನಪ್ಪಿದ್ದಾನೆ. ಶ್ರೀನಗರದ ನೂರ್‌ಬಾಗ್ ಎಂಬಲ್ಲಿ ಉಗ್ರರು ಹಾಗೂ ಭದ್ರತಾ ಪಡೆಗಳ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಸಲೀಮ್ ಮಲಿಕ್ ಎಂಬ ನಾಗರಿಕ ಸಾವನ್ನಪ್ಪಿದ್ದಾನೆ. ಉಗ್ರರು ತಪ್ಪಿಸಿಕೊಂಡಿದ್ದಾರೆ. ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.