ಉದ್ಯೋಗವಿಲ್ಲದ ದಿನಗಳಲ್ಲಿ ವಂಚನೆಯೂ ಒಂದು ಉದ್ಯೋಗ!

Update: 2018-09-28 04:08 GMT

ನೋಟು ನಿಷೇಧದ ಬಳಿಕ ದೇಶಾದ್ಯಂತ ನಿರುದ್ಯೋಗಿಗಳ ಸಂಖ್ಯೆ ಏರಿಕೆಯಾದುದು ಮತ್ತು ಅದು ಸಮಾಜದ ಮೇಲೆ ಬೇರೆ ಬೇರೆ ರೀತಿಯಲ್ಲಿ ತನ್ನ ದುಷ್ಪರಿಣಾಮಗಳನ್ನು ಬೀರತೊಡಗಿದ್ದು ಸಾಕಷ್ಟು ಚರ್ಚೆಯಾಗುತ್ತಿದೆ. ನಿರುದ್ಯೋಗಿ ಯುವಕರ ಸಂಖ್ಯೆ ಜಾಸ್ತಿಯಾಗುತ್ತಿರುವುದು ದೇಶದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಮುಖ್ಯ ಕಾರಣವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಈಗಾಗಲೇ ಹೇಳಿದ್ದಾರೆ. ಕೋಮುವಾದಿ ಮತ್ತು ಮತಾಂಧ ಶಕ್ತಿಗಳೂ ಈ ನಿರುದ್ಯೋಗಿ ಯುವಕರನ್ನು ಸುಲಭದಲ್ಲಿ ಬಲಿಪಶು ಮಾಡತೊಡಗಿದ್ದಾರೆ. ‘ನಕಲಿ ಗೋರಕ್ಷಕ’ ಪಡೆಗಳಂತಹ ಕ್ರಿಮಿನಲ್ ಗುಂಪುಗಳಿಗೆ ಯುವಕರು ಸುಲಭದಲ್ಲಿ ಆಕರ್ಷಿತರಾಗುತ್ತಾರೆ. ಇಂತಹ ಪಡೆಗಳಿಂದ ನಿರುದ್ಯೋಗಿಗಳಿಗೆ ಹಲವು ಲಾಭಗಳಿವೆ. ಒಂದು, ತಕ್ಷಣಕ್ಕೆ ಒಂದು ಉದ್ಯೋಗ ಸಿಕ್ಕಿದಂತಾಯಿತು. ಇಂತಹ ಪಡೆಗಳ ಜೊತೆಗೆ ಸೇರಿ ಕ್ರಿಮಿನಲ್ ಕೆಲಸ ಮಾಡಿದರೆ ಸಂಸ್ಕೃತಿ ರಕ್ಷಕ ಎಂಬ ಮುಖವಾಡದಲ್ಲಿ ರಕ್ಷಣೆ ಪಡೆಯಬಹುದಾಗಿದೆ. ಹಾಗೆಯೇ ತಮ್ಮನ್ನು ನೋಡಿ ಸಮಾಜ ಹೆದರುವಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಇಷ್ಟೇ ಅಲ್ಲ, ಜಮ್ಮು ಕಾಶ್ಮೀರದಂತಹ ರಾಜ್ಯಗಳಲ್ಲಿ ಉಗ್ರವಾದಿಗಳ ಆಮಿಷಕ್ಕೆ ಬಲಿಯಾಗುವುದರಲ್ಲಿ ನಿರುದ್ಯೋಗಿಗಳೇ ಮುಂದಿದ್ದಾರೆ. ಇನ್ನೊಂದೆಡೆ ಸರಕಾರದ ಮಾತುಗಳನ್ನು ನಂಬಿ ಉದ್ಯೋಗಗಳಿಗಾಗಿ ಅಲೆದಾಡುತ್ತಾ ವಂಚನೆಗೊಳಗಾಗುತ್ತಿರುವ ಗುಂಪುಗಳಿವೆ. ಮುಖ್ಯವಾಗಿ ಇವರಿಗೆ ವೈಯಕ್ತಿಕವಾಗಿ ಉದ್ಯೋಗ ಮಾಡುವಂತಹ ಕೌಶಲ್ಯಗಳಿಲ್ಲ. ಆದರೆ ಪದವಿ ಪ್ರಮಾಣ ಪತ್ರಗಳಿವೆ. ಇಂತಹ ನಿರುದ್ಯೋಗಿಗಳ ಸಂಖ್ಯೆಯೇ ಅಧಿಕವಿರುವುದರಿಂದ, ಇವರನ್ನು ವಂಚಿಸುವುದು ಸುಲಭವಾಗಿದೆ. ಇವರನ್ನು ವಂಚಿಸಿ ಲಾಭ ಪಡೆಯುವುದನ್ನೇ ಇನ್ನು ಕೆಲವು ನಿರುದ್ಯೋಗಿಗಳು ತಮ್ಮ ಉದ್ಯೋಗವನ್ನಾಗಿ ಮಾಡಿಕೊಂಡಿದ್ದಾರೆ. ಕಳೆದ ಎರಡು ತಿಂಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಆರು ಉದ್ಯೋಗಜಾಲಗಳನ್ನು ದಿಲ್ಲಿ ಪೊಲೀಸ್ ಕ್ರೈಂ ಬ್ರಾಂಚ್ ವಿಭಾಗ ಭೇದಿಸಿದೆ. ಇದು ದೇಶದಲ್ಲಿ ಉದ್ಯೋಗ ಕ್ಷೇತ್ರದ ಸದ್ಯದ ಸ್ಥಿತಿ ಮತ್ತು ಸರಕಾರಿ ಕೆಲಸಗಳ ಕುರಿತಂತೆ ಜನರ ಭ್ರಮೆಗಳನ್ನು ಎತ್ತಿ ತೋರಿಸುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸುತ್ತಾರೆ. ಈ ಜಾಲದ ಹಿಂದಿರುವ ಜನರು ನಿರುದ್ಯೋಗಿಗಳಾಗಿದ್ದು ಇವರಿಂದ ವಂಚನೆಗೊಳಗಾಗುವವರೂ ನಿರುದ್ಯೋಗಿಗಳೇ ಆಗಿದ್ದಾರೆ. ಇವರೆಲ್ಲ ಉದ್ಯೋಗ ಭದ್ರತೆ ಮತ್ತು ಪಿಂಚಣಿ ಹೊಂದಿರುವ ಸರಕಾರಿ ಉದ್ಯೋಗವನ್ನೇ ಬಯಸುತ್ತಾರೆ ಎನ್ನುವುದು ಅಧಿಕಾರಿಗಳ ಅಂಬೋಣ.

ಕಳೆದ ಎರಡು ತಿಂಗಳಲ್ಲೇ ಕ್ರೈಂ ಬ್ರಾಂಚ್ ತಂಡ ದಿಲ್ಲಿಯಲ್ಲಿ ಕನಿಷ್ಠ ಆರು ಉದ್ಯೋಗಜಾಲಗಳನ್ನು ಪತ್ತೆ ಮಾಡಿದೆ. ಇತ್ತೀಚೆಗೆ ಕ್ರೈಂ ಬ್ರಾಂಚ್ ಬಯಲು ಮಾಡಿದ ಉದ್ಯೋಗಜಾಲದಲ್ಲಿ, ಒಎನ್‌ಜಿಸಿಯಲ್ಲಿ ಸಹಾಯಕ ಮ್ಯಾನೇಜರ್ ಹುದ್ದೆ ಕೊಡಿಸುವ ನೆಪದಲ್ಲಿ ನಿರುದ್ಯೋಗಿಗಳನ್ನು ಮೋಸಗೊಳಿಸಲಾಗುತ್ತಿತ್ತು. ರೈಲ್ವೆ ಮತ್ತು ಸೇನೆಯಲ್ಲಿ ಗುಂಪಿನಲ್ಲಿ ಜನರನ್ನು ನೇಮಕ ಮಾಡುವ ಮತ್ತು ಉದ್ಯೋಗದ ಬಗ್ಗೆ ಪತ್ರಿಕೆಗಳಲ್ಲಿ ಜಾಹೀರಾತನ್ನು ನೀಡುವ ಪರಿಪಾಠ ಇರುವುದರಿಂದ ಉದ್ಯೋಗವಂಚನೆ ಜಾಲಗಳು ಹೆಚ್ಚಾಗಿ ಈ ಇಲಾಖೆಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಜನರನ್ನು ವಂಚಿಸುತ್ತವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸುತ್ತಾರೆ. ನಾವು ಭೇದಿಸಿರುವ ಕೆಲವು ಉದ್ಯೋಗಜಾಲಗಳು ಭಾರತೀಯ ರೈಲ್ವೆಯಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ಜನರನ್ನು ವಂಚಿಸುತ್ತಿದ್ದವು. ರೈಲ್ವೆ ಇಲಾಖೆ ಆನ್‌ಲೈನ್‌ನಲ್ಲಿ ಮತ್ತು ಪತ್ರಿಕೆಗಳಲ್ಲಿ ಉದ್ಯೋಗ ಜಾಹೀರಾತುಗಳನ್ನು ಪ್ರಕಟಿಸುವ ಕಾರಣ ಜನರು ಕೂಡಾ ಸುಲಭವಾಗಿ ನಂಬುತ್ತಾರೆ ಎಂದು ಅಧಿಕಾರಿ ತಿಳಿಸುತ್ತಾರೆ. ಈ ವರ್ಷ ಮೇಯಲ್ಲಿ ನಕಲಿ ಪ್ರಾದೇಶಿಕ ಸೇನಾ ನೇಮಕಾತಿ ಜಾಲವನ್ನು ಭೇದಿಸುವ ಮೂಲಕ ಪೊಲೀಸರು ಮೂವರನ್ನು ಬಂಧಿಸಿದ್ದರು. ಆರೋಪಿಗಳು ಆಗಲೇ ಮೂವರು ಅಮಾಯಕರಿಂದ ದೊಡ್ಡ ಮೊತ್ತವನ್ನು ಪಡೆದು ವಂಚಿಸಿದ್ದರು. ಇತ್ತೀಚಿನ ದಿನಗಳಲ್ಲಿ ಉದ್ಯೋಗವಂಚನೆ ಜಾಲ ಎಂಬುದು ಒಂದು ಬಾರಿಯ ವ್ಯವಹಾರವಾಗಿ ಉಳಿದಿಲ್ಲ. ಅದೊಂದು ಸಂಘಟಿತ ವ್ಯವಸ್ಥಿತ ಉದ್ದಿಮೆಯಾಗಿ ಬದಲಾಗಿದೆ. ಉದಾಹರಣೆಗೆ, ಇತ್ತೀಚೆಗೆ ನಡೆದ ಒಎನ್‌ಜಿಸಿ ಉದ್ಯೋಗಜಾಲದಲ್ಲಿ ಆರೋಪಿಗಳು ಸಂತ್ರಸ್ತರನ್ನು ಅತ್ಯಂತ ಹೆಚ್ಚಿನ ಭದ್ರತೆಯನ್ನು ಹೊಂದಿರುವ ಕೃಷಿ ಭವನದ ಒಳಗೆ ಪ್ರವೇಶ ಪಡೆಯುವಂತೆ ಮಾಡಿದ್ದರು.

ಕೆಲವೊಂದು ಉದ್ಯೋಗಜಾಲಗಳಲ್ಲಂತೂ ಅಭ್ಯರ್ಥಿಗಳಿಗೆ ನೇಮಕ ಪತ್ರ ಮತ್ತು ಕೆಲವು ತಿಂಗಳ ಸಂಬಳ ಕೂಡಾ ನೀಡಲಾಗುತ್ತಿತ್ತು. ಇದರೊಂದಿಗೆ ಈ ಅಭ್ಯರ್ಥಿಗಳಿಗೆ ಉದ್ಯೋಗಕ್ಕೆ ಸೇರುವ ಮೊದಲು ಕೆಲವೊಂದು ತರಬೇತಿಗಳನ್ನೂ ನೀಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಒಮ್ಮೆ ವಂಚಕರು ಒಬ್ಬ ವ್ಯಕ್ತಿಯನ್ನು ಒಪ್ಪಿಸಲು ಸಫಲವಾದರೆ ಮುಂದೆ ಆತನೇ ತನ್ನ ನಿರುದ್ಯೋಗಿ ಸ್ನೇಹಿತರು ಮತ್ತು ಕುಟುಂಬಸ್ಥರ ಹೆಸರುಗಳನ್ನು ಅವರಿಗೆ ನೀಡುತ್ತಾನೆ. ಹಾಗಾಗಿ ಈ ವಂಚಕರಿಗೆ ತನ್ನ ಬೇಟೆಯನ್ನು ಹುಡುಕಲು ಬೆವರು ಸುರಿಸುವ ಅಗತ್ಯ ಬೀಳುವುದಿಲ್ಲ. ಕೇವಲ ಬಾಯಿಯಿಂದ ಬಾಯಿಗೆ ಹರಡುವ ಮಾತುಗಳೇ ಇವರಿಗೆ ಪ್ರಚಾರ ನೀಡುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಗಳು ಸುಶಿಕ್ಷಿತರಾಗಿರುತ್ತಾರೆ ಮತ್ತು ಉತ್ತಮ ಕಂಪ್ಯೂಟರ್ ಜ್ಞಾನ ಹೊಂದಿರುತ್ತಾರೆ. ಕೆಲವು ಪ್ರಕರಣಗಳಲ್ಲಿ ಆರೋಪಿಗಳು ಸಾರ್ವಜನಿಕ ಕ್ಷೇತ್ರದ ಅಥವಾ ಭದ್ರತಾ ಕ್ಷೇತ್ರದ ಮಾಜಿ ಉದ್ಯೋಗಿಗಳಾಗಿರುತ್ತಾರೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಉದ್ಯೋಗ ಕೊಡುತ್ತೇವೆ ಎಂದು ಭರವಸೆ ನೀಡಿ ವಂಚಿಸುವ ಜಾಲವನ್ನು ಟೀಕಿಸುವ ಮೊದಲು ನಾವು ನಮ್ಮ ಪ್ರಧಾನಿ ನೀಡಿರುವ ಭರವಸೆಯನ್ನು ನೆನಪಿಸಿಕೊಳ್ಳಬೇಕಾಗಿದೆ. ಅಧಿಕಾರಕ್ಕೆ ಬಂದರೆ ಒಂದು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ 2013ರಲ್ಲಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಆದರೆ ಅವರು ಮಾಡಿರುವುದೇನು? ಇರುವ ಉದ್ಯೋಗಗಳನ್ನೇ ಯುವ ಸಮೂಹದಿಂದ ಕಿತ್ತುಕೊಂಡರು. ದನಗಳನ್ನು ಸಾಕುತ್ತಾ ಹೈನೋದ್ಯಮ ಮಾಡುತ್ತಿರುವ ಗ್ರಾಮೀಣ ಯುವಕರನ್ನೂ ಅತಂತ್ರಗೊಳಿಸಿದರು. ಉದ್ಯೋಗ ಕೊಡುತ್ತೇನೆ ಎಂದು ಹೇಳಿ ಪ್ರಧಾನಿಯೇ ವಂಚಿಸಬಹುದಾದರೆ, ನಾವೇಕೆ ವಂಚಿಸಬಾರದು ಎಂದು ವಂಚಕರ ಜಾಲ ನಾಳೆ ಸಾರ್ವಜನಿಕವಾಗಿ ಪ್ರಶ್ನಿಸಿದರೆ, ಪ್ರಧಾನಿಯ ಬಳಿ ಏನಿದೆ ಉತ್ತರ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News