ಧೂಮ್ರಪಾನ ನಿಮ್ಮ ಹೃದಯಕ್ಕೇನು ಮಾಡುತ್ತದೆ....?

Update: 2018-09-28 09:48 GMT

ವಿಶ್ವದಲ್ಲಿ ಪ್ರತಿ ಮೂರರಲ್ಲಿ ಒಂದು ಸಾವು ಹೃದಯ ರಕ್ತನಾಳ ರೋಗ(ಸಿವಿಡಿ)ಗಳಿಂದ ಸಂಭವಿಸುತ್ತದೆ ಮತ್ತು ಧೂಮ್ರಪಾನ ಈ ರೋಗಗಳಿಗೆ ಪ್ರಮುಖ ಕಾರಣಗಳಲ್ಲೊಂದಾಗಿದೆ. ಧೂಮ್ರಪಾನವು ಶ್ವಾಸಕೋಶಗಳು, ಯಕೃತ್ತು, ಹೃದಯದಿಂದ ಹಿಡಿದು ಮೂಳೆಗಳು ಮತ್ತು ಸಂತಾನೋತ್ಪತ್ತಿ ಅಂಗಗಳವರೆಗೆ ಶರೀರದ ಪ್ರತಿಯೊಂದು ಅಂಗಕ್ಕೂ ಹಾನಿಯನ್ನುಂಟು ಮಾಡುತ್ತದೆ.

ಧೂಮ್ರಪಾನ ಶ್ವಾಸಕೋಶಗಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು,ಆದರೆ ಅದು ಹೃದಯಾಘಾತಕ್ಕೂ ಕಾರಣವಾಗುತ್ತದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ. ಇತರರಿಗೆ ಹೋಲಿಸಿದರೆ ಧೂಮ್ರಪಾನಿಗಳು ಹೃದಯರೋಗದಿಂದ ಬಳಲುವ ಸಾಧ್ಯತೆ ಸುಮಾರು 2ರಿಂದ 4 ಪಟ್ಟು ಹೆಚ್ಚಾಗಿರುತ್ತದೆ. ದುರಂತವೆಂದರೆ ಧೂಮ್ರಪಾನಿಗಳಲ್ಲದವರು ಇತರರು ಸೇದುವ ಬೀಡಿ ಅಥವಾ ಸಿಗರೇಟ್ ಹೊಗೆಯನ್ನು ಸೇವಿಸಿದರೆ ಅವರಲ್ಲಿಯೂ ಹೃದಯ ರೋಗಗಳು,ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ತುತ್ತಾಗುವ ಅಪಾಯವು ಹೆಚ್ಚಾಗುತ್ತದೆ.

ವ್ಯಕ್ತಿಯೋರ್ವ ದಿನವೊಂದಕ್ಕೆ ಸೇದುವ ಸಿಗರೇಟ್‌ಗಳ ಸಂಖ್ಯೆ ಹೆಚ್ಚಾದಂತೆ ಹೃದಯರೋಗಗಳ ಅಪಾಯವೂ ಹೆಚ್ಚುತ್ತದೆ. ದಿನಕ್ಕೆ ಐದು ಸಿಗರೇಟ್‌ಗಿಂತ ಕಡಿಮೆ ಸೇದುವವರೂ ಸಹ ಹೃದಯ ರೋಗಗಳಿಗೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ.

ಸಿಗರೇಟ್‌ನಲ್ಲಿರುವ ನಿಕೋಟಿನ್ ಹೃದಯಕ್ಕೆ ಆಮ್ಲಜನಕದ ಪೂರೈಕೆಯ ಕೊರತೆ, ರಕ್ತದೊತ್ತಡ ಏರಿಕೆ,ರಕ್ತನಾಳಗಳ ಉಬ್ಬುವಿಕೆ ಮತ್ತು ಉರಿಯೂತ,ರಕ್ತನಾಳಗಳ ಸಂಕುಚನ,ರಕ್ತ ಹೆಪ್ಪುಗಟ್ಟುವಿಕೆಇತ್ಯಾದಿಗಳಿಗೆ ಕಾರಣವಾಗುವ ಮೂಲಕ ಹೃದಯಕ್ಕೆ ಹಾನಿಯನ್ನುಂಟು ಮಾಡುತ್ತದೆ. ಅದು ಶರೀರದಲ್ಲಿ ಟ್ರೈಗ್ಲಿಸರೈಡ್‌ಗಳನ್ನು ಹೆಚ್ಚಿಸುತ್ತದೆ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವು ಕುಸಿಯುವಂತೆ ಮಾಡುತ್ತದೆ. ಅಲ್ಲದೆ ಧೂಮ್ರಪಾನಿಗಳಲ್ಲಿ ಹೃದಯಕ್ಕೆ ಶ್ರಮವುಂಟಾಗುವುದರಿಂದ ಹೆಚ್ಚಿನ ವ್ಯಾಯಾಮ ಮಾಡುವುದೂ ಸಾಧ್ಯವಾಗುವುದಿಲ್ಲ.

ಧೂಮ್ರಪಾನವು ಉಂಟುಮಾಡುವ ಹೃದಯ ರೋಗಗಳು

ಅಪಧಮನಿ ಕಾಠಿಣ್ಯ: ವ್ಯಕ್ತಿಯೋರ್ವ ಈ ಕಾಯಿಲೆಗೆ ಗುರಿಯಾದಾಗ ಆತನ ರಕ್ತನಾಳಗಳಲ್ಲಿ ಕೊಬ್ಬು ಶೇಖರಗೊಂಡು ಅವು ಸಂಕುಚಿತಗೊಳ್ಳುತ್ತವೆ. ಇದರಿಂದಾಗಿ ರಕ್ತನಾಳಗಳ ನಮ್ಯತೆಯು ಕಡಿಮೆಯಾಗುತ್ತದೆ ಮತ್ತು ಶರೀರದ ವಿವಿಧ ಅಂಗಗಳಿಗೆ ರಕ್ತದ ಪೂರೈಕೆಯಲ್ಲಿ ವ್ಯತ್ಯಯವುಂಟಾಗುತ್ತದೆ. ತಂಬಾಕಿನ ಹೊಗೆಯು ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗಲು ಕಾರಣವಾಗುವ ಮೂಲಕ ಅಪಧಮನಿ ಕಾಠಿಣ್ಯದ ಅಪಾಯವನ್ನು ಹೆಚ್ಚಿಸುತ್ತದೆ.

ಪರಿಧಮನಿಯ ಅಪಧಮನಿ ರೋಗ: ಹೃದಯದ ಸ್ನಾಯುಗಳಿಗೆ ರಕ್ತವನ್ನು ಸಾಗಿಸುವ ಅಪಧಮನಿಗಳಲ್ಲಿ ಕೊಬ್ಬು ಶೇಖರಗೊಂಡಿದ್ದರೆ ಅಥವಾ ರಕ್ತವು ಕರಣೆಗಟ್ಟಿದ್ದರೆ ಅವು ಸಂಕುಚಿತಗೊಳ್ಳುವುದು ಈ ರೋಗಕ್ಕೆ ಕಾರಣವಾಗುತ್ತದೆ. ಸಿಗರೇಟ್ ಸೇದುವಾಗ ಅದರಲ್ಲಿಯ ರಾಸಾಯನಿಕಗಳು ರಕ್ತವನ್ನು ದಪ್ಪವಾಗಿಸುತ್ತವೆ ಮತ್ತು ಅಪಧಮನಿಗಳು ಹಾಗೂ ಅಭಿಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟಲು ಕಾರಣವಾಗುತ್ತವೆ. ಇದು ರಕ್ತನಾಳಗಳಲ್ಲಿ ತಡೆಗಳನ್ನುಂಟು ಮಾಡುತ್ತದೆ ಮತ್ತು ಹೃದಯಾಘಾತಕ್ಕೆ ಕಾರಣವಾಗುತ್ತದೆ.

ಪಾರ್ಶ್ವವಾಯು: ಧೂಮ್ರಪಾನವು ಮಿದುಳಿನ ಮೇಲೂ ದುಷ್ಪರಿಣಾಮವನ್ನುಂಟು ಮಾಡುತ್ತದೆ ಮತ್ತು ವ್ಯಕ್ತಿಯು ಪಾರ್ಶ್ವವಾಯುವಿಗೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಮಿದುಳಿಗೆ ರಕ್ತದ ಪೂರೈಕೆಯಲ್ಲಿ ವ್ಯತ್ಯಯವುಂಟಾಗಿ ಅದಕ್ಕೆ ಶಾಶ್ವತ ಹಾನಿಯುಂಟಾಗಿ ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಂಡಾಗ ಪಾರ್ಶ್ವವಾಯು ಉಂಟಾಗುತ್ತದೆ. ಧೂಮ್ರಪಾನವನ್ನು ಮಾಡುವ ಮತ್ತು ಹೃದೋಗಗಳ ಇತಿಹಾಸವನ್ನು ಹೊಂದಿರುವ ವ್ಯಕ್ತಿಗಳು ಧೂಮ್ರಪಾನಿಗಳಲ್ಲದವರು ಮತ್ತು ಧೂಮ್ರಪಾನವನ್ನು ವರ್ಜಿಸಿದವರಿಗೆ ಹೋಲಿಸಿದರೆ ಪಾರ್ಶ್ವವಾಯುವಿಗೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ.

  ಧೂಮ್ರಪಾನವು ಹೃದಯ ರಕ್ತನಾಳ ರೋಗಗಳನ್ನು ಮತ್ತು ಸಾವನ್ನುಂಟು ಮಾಡುವ,ತಡೆಯಬಹುದಾದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಭಾರತದಲ್ಲಿ ಹೃದಯ ರಕ್ತನಾಳ ರೋಗಗಳಿಂದ ಸಂಭವಿಸುವ ಸಾವುಗಳ ಪೈಕಿ ಶೇ.50ರಷ್ಟು ರೋಗಿಗಳು 50 ವರ್ಷ ಪ್ರಾಯವಾಗುವ ಮುನ್ನವೇ ಮರಣವನ್ನಪ್ಪುತ್ತಾರೆ. ಧೂಮ್ರಪಾನ ಮಾಡುವವವರಲ್ಲಿ ಈ ಅಪಾಯ ಇನ್ನಷ್ಟು ಹೆಚ್ಚಾಗಿರುತ್ತದೆ. ಆದರೆ ಧೂಮ್ರಪಾನವನ್ನು ವರ್ಜಿಸಿದರೆ ಹೃದಯದ ಮೇಲೆ ಅದರ ದುಷ್ಪರಿಣಾಮಗಳನ್ನು ಕಡಿಮೆ ಮಾಡಬಹುದಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ ಧೂಮ್ರಪಾನ ವರ್ಜನೆಯ ತಕ್ಷಣದ ಪರಿಣಾಮಗಳು ಹೀಗಿವೆ:

►ಹೃದಯ ಬಡಿತ ಮತ್ತು ರಕ್ತದೊತ್ತಡ ಪ್ರಮಾಣ 20 ನಿಮಿಷಗಳಲ್ಲಿ ಕಡಿಮೆಯಾಗುತ್ತದೆ.

►ಒಂದು ಗಂಟೆಯ ಬಳಿಕ ರಕ್ತದಲ್ಲಿಯ ಕಾರ್ಬನ್ ಮಾನೊಕ್ಸೈಡ್ ಮಟ್ಟವು ಸಹಜಗೊಳ್ಳುತ್ತದೆ.

►2ರಿಂದ 12 ವಾರಗಳಲ್ಲಿ ರಕ್ತ ಪರಿಚಲನೆಯು ಉತ್ತಮಗೊಳ್ಳುತ್ತದೆ.

ಧೂಮ್ರಪಾನ ವರ್ಜನೆಯ ದೀರ್ಘಾವಧಿಯ ಲಾಭಗಳು

►ಧೂಮ್ರಪಾನಿಗಳಿಗೆ ಹೋಲಿಸಿದರೆ ಪರಿಧಮನಿ ಅಪಧಮನಿ ರೋಗದ ಅಪಾಯವು ಶೇ.50ರಷ್ಟು ಕಡಿಮೆಯಾಗುತ್ತದೆ.

►ಧೂಮ್ರಪಾನವನ್ನು ವರ್ಜಿಸಿದ 5ರಿಂದ 15 ವರ್ಷಗಳಲ್ಲಿಪಾರ್ಶ್ವವಾಯುವಿಗೆ ಗುರಿಯಾಗುವ ಅಪಾಯವು ಧೂಮ್ರಪಾನಿಗಳಲ್ಲದವರಲ್ಲಿ ಇರುವಷ್ಟೇ ಇರುತ್ತದೆ.

►15 ವರ್ಷಗಳ ಬಳಿಕ ಪರಿಧಮನಿ ಅಪಧಮನಿ ರೋಗಕ್ಕೆ ಗುರಿಯಾಗುವ ಅಪಾಯವು ಧೂಮ್ರಪಾನಿಗಳಲ್ಲದವರಲ್ಲಿ ಇರುವ ಅಪಾಯದ ಮಟ್ಟಕ್ಕೆ ತಗ್ಗುತ್ತದೆ.

►ಈಗಾಗಲೇ ಹೃದಯಾಘಾತಕ್ಕೊಳಗಾಗಿ ಧೂಮ್ರಪಾನವನ್ನು ವರ್ಜಿಸಿದವರಲ್ಲಿ ಮತ್ತೆ ಹೃದಯಾಘಾತಕ್ಕೆ ಗುರಿಯಾಗುವ ಅಪಾಯವು ಶೇ.50ರಷ್ಟು ಕಡಿಮೆಯಾಗುತ್ತದೆ.

ಅಲ್ಲದೆ ವ್ಯಕ್ತಿಯು 30,40,50 ಮತ್ತು 60 ವರ್ಷ ಪ್ರಾಯದಲ್ಲಿ ಧೂಮ್ರಪಾನವನ್ನು ನಿಲ್ಲಿಸಿದರೆ ಆಯಸ್ಸು ಅನುಕ್ರಮವಾಗಿ 10,9,6 ಮತ್ತು 3 ವರ್ಷಗಳಷ್ಟು ಹೆಚ್ಚಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News