ಕೇರಳ ನೆರೆ ಪೀಡಿತರಿಗೆ ಮೂರು ತಿಂಗಳು ಉಚಿತ ರೇಷನ್

Update: 2018-09-28 11:50 GMT

ತಿರುವನಂತಪುರಂ,ಸೆ.28 : ಕೇರಳದಲ್ಲಿ ಇತ್ತೀಚಿಗಿನ ಭಾರೀ ಪ್ರವಾಹದಲ್ಲಿ ತಮ್ಮ ಮನೆ ಹಾಗೂ ಉದ್ಯೋಗವನ್ನು ಕಳೆದುಕೊಂಡವರಿಗೆ ಮೂರು ತಿಂಗಳ ರೇಷನ್ ಸಾಮಗ್ರಿಯನ್ನು ಉಚಿತವಾಗಿ ನೀಡುವುದಾಗಿ ಕೇರಳ ಸರಕಾರ ಘೋಷಿಸಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ವಯ ನೆರೆ ಪೀಡಿತರಿಗೆ ಹೆಚ್ಚು ದಿನಗಳ ಕಾಲ ಉದ್ಯೋಗ ನೀಡಲೂ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಚಿವ ಸಂಪುಟದ ಸಭೆಯ ನಂತರ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ನೆರೆಯಿಂದ ಹಾನಿಗೀಡಾದ ರಸ್ತೆ, ಸೇತುವೆ ಕಟ್ಟಡಗಳನ್ನು ದುರಸ್ತಿಗೊಳಿಸುವ ಕಾರ್ಯಕ್ಕೆ ಇನ್ನಷು ಚುರುಕು ಮುಟ್ಟಿಸುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ರಾಜ್ಯದ ಎಲ್ಲಾ ಕೃಷಿ ಹಾಗೂ ಶೈಕ್ಷಣಿಕ ಸಾಲ ಮರುಪಾವತಿಗೆ ಒಂದು ವರ್ಷ ವಿನಾಯಿತಿ ಕೂಡ ಘೋಷಿಸಲಾಗಿದೆ. ಹಾನಿಗೊಂಡ ಕಟ್ಟಡಗಳ ದುರಸ್ತಿಗೆ ಸಾಕಷ್ಟು ಪ್ರಮಾಣದ ಮರಳು ಹಾಗೂ ಕಲ್ಲುಗಳು ಬೇಕಾಗಿರುವುದರಿಂದ ಪ್ರಿ-ಫ್ಯಾಬ್ರಿಕೇಟೆಡ್ ನಿರ್ಮಾಣಗಳನ್ನು ಉಪಯೋಗಿಸುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ಹೇಳಿದ್ದಾರೆ.

ಕಾರ್ಪೊರೇಟ್ ಕಂಪೆನಿಗಳ ಸಿಎಸ್‍ಆರ್ ನಿಧಿಗಳ ಬಳಕೆ, ಕ್ರೌಡ್ ಫಂಡಿಂಗ್ ಹಾಗೂ ಯೋಜನೆಗಳಿಗೆ ಪ್ರವರ್ತಕರನ್ನು ಹೊಂದಲು ಯತ್ನಿಸಲಾಗುವುದು ಎಂದೂ ಮುಖ್ಯಮಂತ್ರಿ ಹೇಳಿದ್ದಾರೆ.

ರಾಜ್ಯದಲ್ಲಿ ಹಾನಿಗೀಡಾಗಿರುವ ವಿವಿಧ ಮೂಲಭೂತ ಸೌಕರ್ಯಗಳ ಮರು ನಿರ್ಮಾಣಕ್ಕೆ ಕಂಪೆನಿಗಳಿಂದ ಕನಿಷ್ಠ ದರದಲ್ಲಿ ಸಾಮಗ್ರಿ ಒದಗಿಸುವಂತೆ ಕೋರಲಾಗುವುದು ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News