ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ 9,000 ಭಾರತೀಯರ ಬಂಧನ

Update: 2018-09-29 16:56 GMT

ವಾಶಿಂಗ್ಟನ್, ಸೆ. 29: ಕಳೆದ ವರ್ಷಕ್ಕೆ ಹೋಲಿಸಿದರೆ, 2018ರಲ್ಲಿ ಅಕ್ರಮವಾಗಿ ಅಮೆರಿಕ ಪ್ರವೇಶಿಸಿ ಬಂಧನಕ್ಕೊಳಗಾದ ಭಾರತೀಯರ ಸಂಖ್ಯೆ ಈವರೆಗೆ ಮೂರು ಪಟ್ಟು ಆಗಿದೆ ಎಂದು ಅಮೆರಿಕ ಸುಂಕ ಮತ್ತು ಗಡಿ ರಕ್ಷಣೆ (ಸಿಬಿಪಿ) ಇಲಾಖೆ ಶುಕ್ರವಾರ ಹೇಳಿದೆ.

ಈ ಕಾರಣಕ್ಕಾಗಿ ಬಂಧನಕ್ಕೊಳಗಾದ ಅತ್ಯಂತ ದೊಡ್ಡ ಗುಂಪು ಇದಾಗಿದೆ.

ಕಳ್ಳಸಾಗಣೆ ಗುಂಪುಗಳಿಗೆ 25,000 (ಸುಮಾರು 18 ಲಕ್ಷ ರೂಪಾಯಿ) ದಿಂದ 50,000 ಡಾಲರ್ (ಸುಮಾರು 36 ಲಕ್ಷ ರೂಪಾಯಿ) ಪಾವತಿಸಿ, ಅಮೆರಿಕ-ಮೆಕ್ಸಿಕೊ ಗಡಿಯ ಮೂಲಕ ಅಮೆರಿಕ ಪ್ರವೇಶಿಸಿ ಅಮೆರಿಕದಲ್ಲಿ ಆಶ್ರಯ ಕೋರುವ ಭಾರತೀಯರ ಸಂಖ್ಯೆ ಗಣನೀಯವಾಗಿ ಏರಿದೆ ಎಂದು ಸಿಬಿಪಿ ವಕ್ತಾರ ಸಾಲ್ವಡೋರ್ ಝಮೋರ ಹೇಳಿದರು.

ಸ್ವದೇಶದಲ್ಲಿ ತಮ್ಮ ವಿರುದ್ಧ ಹಿಂಸಾಚಾರ ನಡೆಸಲಾಗುತ್ತಿದೆ ಎನ್ನುವುದು ಈ ಅಕ್ರಮ ವಲಸಿಗರು ಅಮೆರಿಕದಲ್ಲಿ ಆಶ್ರಯ ಕೋರಲು ನೀಡುವ ಕಾರಣ.

ಹಲವರು ಅವರ ಹೇಳಿಕೆಗಳಿಗೆ ಪುರಾವೆಗಳನ್ನು ನೀಡುತ್ತಾರಾದರೂ, ಹೆಚ್ಚಿನವರು ಸುಳ್ಳು ದಾಖಲೆಗಳೊಂದಿಗೆ ಬರುವ ಆರ್ಥಿಕ ವಲಸೆಗಾರರು ಎಂದು ಝಮೋರ ಹೇಳುತ್ತಾರೆ.

ಈ ಭಾರೀ ಪ್ರಮಾಣದ ವಂಚನೆಯಲ್ಲಿ ಆಶ್ರಯದ ಅಗತ್ಯವಿರುವ ನೈಜ ಪ್ರಕರಣಗಳೂ ಕೊಚ್ಚಿಹೋಗುತ್ತವೆ ಎಂದು ಅವರು ಅಭಿಪ್ರಾಯಪಡುತ್ತಾರೆ.

2017ರಲ್ಲಿ 3,162 ಭಾರತೀಯನ್ನು ಬಂಧಿಸಲಾಗಿದ್ದರೆ, ಈ ಬಾರಿ ಈ ಸಂಖ್ಯೆ ಸುಮಾರು 9,000 ಆಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News