×
Ad

ಹಿಂದೂ ಮಹಾಸಾಗರದಲ್ಲಿ ಗಾಯಗೊಂಡಿದ್ದ ನೌಕಾಪಡೆ ಅಧಿಕಾರಿ ಮರಳಿ ಮನೆಗೆ

Update: 2018-10-01 22:09 IST

ಸಿಡ್ನಿ, ಅ. 1: ಪ್ರಪಂಚ ಸುತ್ತುವ ‘ಗೋಲ್ಡನ್ ಗ್ಲೋಬ್’ ದೋಣಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವೇಳೆ ಹಿಂದೂ ಮಹಾಸಾಗರದ ದುರ್ಗಮ ಸ್ಥಳದಲ್ಲಿ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನೌಕಾಪಡೆ ಅಧಿಕಾರಿ ಅಭಿಲಾಶ್ ಟಾಮಿ ಸ್ವದೇಶಕ್ಕೆ ಮರಳಲು ಸಜ್ಜಾಗುತ್ತಿದ್ದಾರೆ ಎಂದು ಆಸ್ಟ್ರೇಲಿಯ ನೌಕಾಪಡೆ ಸೋಮವಾರ ತಿಳಿಸಿದೆ.

  ತನ್ನ ಹಾಯಿ ದೋಣಿಯನ್ನು ನಡೆಸುತ್ತಿದ್ದ ವೇಳೆ ಪರ್ವತ ಗಾತ್ರದ ಅಲೆಗಳಿಗೆ ಸಿಲುಕಿ ಏಕಾಂಗಿ ಯಾಟ್ಸ್‌ಮನ್ ಅಭಿಲಾಶ್ ಗಂಭೀರವಾಗಿ ಗಾಯಗೊಂಡಿದ್ದರು. ಅಂತಾರಾಷ್ಟ್ರೀಯ ರಕ್ಷಣಾ ಕಾರ್ಯಾಚರಣೆಯಲ್ಲಿ ಅವರನ್ನು ರಕ್ಷಿಸಲಾಗಿತ್ತು.

 ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಕಮಾಂಡರ್ ಟಾಮಿ ಮತ್ತು ಇನ್ನೋರ್ವ ಸ್ಪರ್ಧಿ ಐರ್‌ಲ್ಯಾಂಡ್‌ನ ಗ್ರೆಗರ್ ಮೆಕ್‌ಗಕಿನ್ ಒಂದು ವಾರಕ್ಕೂ ಅಧಿಕ ಸಮಯದ ಹಿಂದೆ ಹಿಂದೂ ಮಹಾಸಾಗರದಲ್ಲಿ ಬೀಸಿದ ಬಿರುಗಾಳಿಗೆ ಸಿಲುಕಿದ್ದರು. ಇದರಿಂದಾಗಿ ಅವರ ದೋಣಿಗಳಿಗೆ ಹಾನಿಯಾಗಿತ್ತು. ದೋಣಿಗಳು ಆಸ್ಟ್ರೇಲಿಯದ ನಗರ ಪರ್ತ್‌ನಿಂದ ಸುಮಾರು 1,900 ನಾಟಿಕಲ್ ಮೈಲಿ ದೂರದ ಸಾಗರದಲ್ಲಿ ಸಿಲುಕಿಕೊಂಡಿದ್ದವು.

ಅವರನ್ನು ಕಳೆದ ಸೋಮವಾರ ಫ್ರಾನ್ಸ್‌ನ ಮೀನುಗಾರಿಕಾ ಗಸ್ತು ದೋಣಿ ‘ಎಫ್‌ಪಿವಿ ಒಸಿರಿಸ್’ ಪ್ರಕ್ಷುಬ್ಧ ಸಮುದ್ರದಿಂದ ರಕ್ಷಿಸಿತ್ತು. ಅಲ್ಲಿಂದ ಅವರನ್ನು ಸಮೀಪದ ಹಿಂದೂ ಮಹಾಸಾಗರದ ದ್ವೀಪ ಐಲ್ ಆ್ಯಮ್‌ಸ್ಟರ್‌ಡಾಂಗೆ ಕರೆದುಕೊಂಡು ಹೋಗಲಾಗಿತ್ತು.

ತೀವ್ರವಾಗಿ ಬೆನ್ನಿನಲ್ಲಿ ಗಾಯಗೊಂಡಿರುವ 39 ವರ್ಷದ ಟಾಮಿಯನ್ನು ಭಾರತೀಯ ನೌಕಾಪಡೆಯ ನೌಕೆ ಐಎನ್‌ಎಸ್ ಸತ್ಪುರ ಭಾರತಕ್ಕೆ ಕರೆತರಲಿದೆ ಎಂದು ‘ಆಸ್ಟ್ರೇಲಿಯನ್ ಡಿಫೆನ್ಸ್ ಫೋರ್ಸ್’ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News