ಈ ಅಪರೂಪದ ನಿರ್ಧಾರದ ಹಿಂದಿರುವುದೇನು?

Update: 2018-10-01 18:45 GMT

ತೆಲಂಗಾಣ ವಿಧಾನಸಭೆ ವಿಸರ್ಜನೆಯಾದ ಕ್ಷಣದಿಂದಲೇ ಆ ರಾಜ್ಯದಲ್ಲಿ ನೀತಿಸಂಹಿತೆ ಜಾರಿಯಾಗಿದ್ದು, ತೆಲಂಗಾಣದ ಉಸ್ತುವಾರಿ ಸರಕಾರವಾಗಲಿ ಅಥವಾ ಆ ರಾಜ್ಯದ ಕುರಿತಂತೆ ಕೇಂದ್ರ ಸರಕಾರವಾಗಲಿ ಯಾವುದೇ ಹೊಸ ಯೋಜನೆಗಳನ್ನು ಘೋಷಿಸಬಾರದೆಂಬ ಆದೇಶವನ್ನು ಹೊರಡಿಸಿದೆ. ಕೇಂದ್ರ ಸರಕಾರದ ಆಜ್ಞಾಪಾಲಕನಂತೆ ವರ್ತಿಸುವ ಸಾಂವಿಧಾನಿಕ ಸಂಸ್ಥೆಯೊಂದು ತೆಗೆದುಕೊಳ್ಳಬಹುದಾದ ಅವೈಜ್ಞಾನಿಕ ಮತ್ತು ಪ್ರಜಾಪ್ರಭುತ್ವವಿರೋಧಿ ನಿರ್ಧಾರವನ್ನು ನಮ್ಮ ಕೇಂದ್ರ ಚುನಾವಣಾ ಆಯೋಗ ಈಗ ತೆಗೆದುಕೊಂಡಿದೆ. ತೆಲಂಗಾಣದಲ್ಲಿ ಹಾಲಿ ಇರುವ ಕೆ.ಚಂದ್ರಶೇಖರ್ ರಾವ್ ಅವರ ಸರಕಾರವು ಉಸ್ತುವಾರಿ ಸರಕಾರವಾಗಿದ್ದು, ಜನಪರವಾದ ಯಾವುದೇ ಜನಪ್ರಿಯ ಯೋಜನೆಗಳನ್ನು ಹೊಸದಾಗಿ ಘೋಷಿಸಲು ಅದು ಅಧಿಕಾರ ಹೊಂದಿಲ್ಲವೆಂದು ಚುನಾವಣಾ ಆಯೋಗ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದೆ.

ತೆಲಂಗಾಣದ ಮುಖ್ಯಮಂತ್ರಿಗಳಾದ ಕೆ.ಚಂದ್ರಶೇಖರರಾವ್ ಇದೇ ಸೆಪ್ಟ್ಟಂಬರ್ 6ರಂದು ವಿಧಾನಸಭೆಯನ್ನು ಅವಧಿಗೆ ಮುನ್ನವೇ ವಿಸರ್ಜಿಸಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಹಾಗೆ ವಿಧಾನಸಭೆಯನ್ನು ವಿಸರ್ಜಿಸಿದಾಗ ರಾವ್ ಅವರು ‘‘ಬಹುಶ: ಅಕ್ಟೋಬರ್ ತಿಂಗಳಲ್ಲಿ ರಾಜ್ಯದಲ್ಲಿ ಚುನಾವಣೆಗಳು ಘೋಷಣೆಯಾಗಬಹುದು ಮತ್ತು ಡಿಸೆಂಬರ್ ಮಧ್ಯಭಾಗದ ಹೊತ್ತಿಗೆ ಚುನಾವಣೆಗಳು ನಡೆಯಬಹುದು. ಈ ಬಗ್ಗೆ ನಾನು ಚುನಾವಣಾ ಆಯೋಗದ ಜೊತೆ ಚರ್ಚಿಸಿದ್ದೇನೆ’’ ಎಂದೂ ಹೇಳಿದ್ದರು.

2019ರ ಲೋಕಸಭಾ ಚುನಾವಣೆಯ ಜೊತೆಗೆ ತೆಲಂಗಾಣ ವಿಧಾನಸಭೆಗೂ ಚುನಾವಣೆ ನಡೆದರೆ ಪ್ರಧಾನಮಂತ್ರಿ ನರೇಂದ್ರಮೋದಿಯವರ ಜನಪ್ರಿಯತೆಯನ್ನು ಬಂಡವಾಳವನ್ನಾಗಿಸಿಕೊಂಡು ಭಾಜಪ ತೆಲಂಗಾಣ ರಾಷ್ಟ್ರೀಯ ಸಮಿತಿಯನ್ನು ಸೋಲಿಸಬಹುದೆಂಬ ಆತಂಕ ರಾವ್ ಅವರಿಗಿತ್ತು. ಇದರ ಜೊತೆಗೆ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದ ತೆಲುಗುದೇಶಂ ಪಕ್ಷ ಕಾಂಗ್ರೆಸ್ ಜೊತೆಗೆ ಮೈತ್ರಿಮಾಡಿಕೊಂಡು ತನ್ನ ಗೆಲುವಿಗೆ ಅಡ್ಡಿಯನ್ನುಂಟು ಮಾಡಬಹುದೆಂಬ ಹೆದರಿಕೆಯೂ ರಾವ್ ಅವರಿಗೆ ಇತ್ತು. ಹೀಗಾಗಿಯೇ ಅವರು ಯಾರೂ ನಿರೀಕ್ಷಿಸದ ರೀತಿಯಲ್ಲಿ ವಿಧಾನಸಭೆಯನ್ನು ವಿಸರ್ಜಿಸಿ ಎಲ್ಲ ರಾಜಕೀಯ ಪಕ್ಷಗಳಿಗೂ ಶಾಕ್ ನೀಡಿದ್ದರು. ಕಾಂಗ್ರೆಸ್, ತೆಲುಗುದೇಶಂ ಮಾತ್ರವಲ್ಲದೆ ಭಾಜಪ ಸಹ ಚಂದ್ರಶೇಖರ್ ರಾವ್ ಅವರ ಈ ನಿರ್ಧಾರವನ್ನು ವಿರೋಧಿಸಿದ್ದವು. ಭಾಜಪದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್‌ಶಾ ಇತ್ತೀಚೆಗೆ ಹೈದರಾಬಾದಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾವ್ ಅವರ ಈ ನಡೆಯನ್ನು ಕಟುಶಬ್ದಗಳಲ್ಲಿ ಟೀಕಿಸಿದ್ದರು.

ಆದರೆ ರಾವ್ ಅವರು ಡಿಸೆಂಬರ್ ತಿಂಗಳಲ್ಲಿ ಚುನಾವಣೆ ನಡೆಯಬಹುದೆಂದು ನೀಡಿದ ಹೇಳಿಕೆಯಿಂದ ಮುಜುಗರಕ್ಕೀಡಾದ ಚುನಾವಣಾ ಆಯೋಗ ರಾವ್ ಅವರ ಹೇಳಿಕೆ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಿದೆ. ಮಾತ್ರವಲ್ಲದೆ ರಾವ್ ಅವರು ಒಬ್ಬ ಜ್ಯೋತಿಷಿಯಂತೆ ಚುನಾವಣಾ ದಿನಾಂಕಗಳನ್ನು ಊಹಿಸಿ ಹೇಳಿಕೆ ನೀಡಿದ್ದು ಸಂವಿಧಾನ ವಿರೋಧಿ ನಡವಳಿಕೆಯೆಂದು ಟೀಕಿಸಿದೆ.

ಚಂದ್ರಶೇಖರ್ ರಾವ್ ಅವರ ಈ ಅತಿಬುದ್ಧ್ದಿವಂತಿಕೆಯ ನಿರ್ಧಾರಕ್ಕೆ ಎದುರೇಟು ಎನ್ನುವಂತೆ ಕೇಂದ್ರ ಚುನಾವಣಾ ಆಯೋಗವು ತೆಲಂಗಾಣ ವಿಧಾನಸಭೆ ವಿಸರ್ಜನೆಯಾದ ಕ್ಷಣದಿಂದಲೇ ಅ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದೆ ಎಂಬ ಆದೇಶ ಹೊರಡಿಸಿದೆ. ಬಹುಶಃ ಇಂಡಿಯಾದ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೇ ಇದೇ ಮೊದಲಬಾರಿಗೆ ಚುನಾವಣೆಯ ದಿನಾಂಕಗಳು ಘೋಷಣೆಯಾಗುವ ಮೊದಲೇ ನೀತಿಸಂಹಿತೆ ಜಾರಿಗೊಳಿಸಿದ ನಿದರ್ಶನವಾಗಿದೆ. ಹೀಗೆ ಮಾಡಲು ಚುನಾವಣಾ ಆಯೋಗಕ್ಕಿರಬಹುದಾದ ಅಧಿಕಾರದ ಬಗ್ಗೆ ಚರ್ಚೆ ನಡೆಯಬೇಕಿರುವುದು ಒಂದು ಕಡೆಯಾದರೆ, ಈ ವಿಷಯದಲ್ಲಿ ಚುನಾವಣಾ ಆಯೋಗ ಕೇಂದ್ರ ಸರಕಾರಕ್ಕೆ ಗೊತ್ತಿಲ್ಲದಂತೆಯೇ ಇಂತಹದೊಂದು ಆದೇಶ ಹೊರಡಿಸಿದೆಯೇ ಎನ್ನುವುದೇ ಬಹಳ ಗಂಭೀರವಾದ ಪ್ರಶ್ನೆಯಾಗಿದೆ. ದಿನೇದಿನೇ ಬಲಿಷ್ಠವಾಗುತ್ತಿರುವ ಕೇಂದ್ರ ಸರಕಾರಗಳು ಇಂತಹ ಅಸಂವಿಧಾನಿಕ ಆದೇಶಗಳ ಮೂಲಕ ತನ್ನ ಕೈಕೆಳಗಿನ ರಾಜ್ಯಗಳ ಪರಮಾಧಿಕಾರಕ್ಕೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸುವುದು ಎಷ್ಟು ಸರಿ ಎನ್ನುವುದರ ಬಗ್ಗೆಯೂ ಸವಿವರವಾದ ಚರ್ಚೆಯಾಗಬೇಕಿದೆ. ಜೊತೆಗೆ ಜನತೆ ನೀಡಿದ ಐದು ವರ್ಷಗಳ ಕಾಲದ ಆಡಳಿತದ ಪರಮಾಧಿಕಾರವನ್ನು ತಮ್ಮ ಹಾಗೂ ತಮ್ಮ ಪಕ್ಷದ ಸ್ವಾರ್ಥಕ್ಕಾಗಿ ಹೀಗೆ ಧಿಕ್ಕರಿಸಿದ ರಾವ್ ಅವರ ರಾಜಕೀಯ ನಡೆ ಎಷ್ಟರಮಟ್ಟಿಗೆ ಅಸಂವಿಧಾನಿಕ ಮತ್ತು ಜನವಿರೋಧಿ ಎಂಬುದರ ಬಗ್ಗೆಯೂ ಚರ್ಚೆಯಾಗಬೇಕಿದೆ.

Similar News