ನೀವೆಂದಿಗೂ ಕಡೆಗಣಿಸಬಾರದ ಪಾರ್ಶ್ವವಾಯುವಿನ ಏಳು ಲಕ್ಷಣಗಳು

Update: 2018-10-02 11:04 GMT

ಯಾವ ರೋಗ ಬಂದರೂ ಸರಿ,ಪಾರ್ಶ್ವವಾಯು ಮಾತ್ರ ಬೇಡ ಎನ್ನುವವರು ಸಾಕಷ್ಟಿದ್ದಾರೆ. ಹೌದು,ಅದು ವ್ಯಕ್ತಿಯನ್ನು ನಿಷ್ಕ್ರಿಯಗೊಳಿಸುವ ಮೂಲಕ ಆತನನು ಅಸಹಾಯಕನನ್ನಾಗಿಸುತ್ತದೆ. ಪಾರ್ಶ್ವವಾಯು ಪೀಡಿತರು ತಮ್ಮ ದೈನಂದಿನ ಕೆಲಸಕ್ಕೂ ಇತರರನ್ನು ಅವಲಂಬಿಸಬೇಕಾಗುತ್ತದೆ.

ಯಾವುದೇ ವ್ಯಕ್ತಿಗೆ ಪಾರ್ಶ್ವವಾಯು ಉಂಟಾದಾಗ ಪ್ರತಿಯೊಂದು ಕ್ಷಣವೂ ಅಮೂಲ್ಯವಾಗುತ್ತದೆ. ಅಂತಹವರನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಬೇಕಾಗುತ್ತದೆ. ಆರಂಭಿಕ ಚಿಕಿತ್ಸೆಯನ್ನು ವಿಳಂಬಿಸಿದಷ್ಟೂ ಶರೀರಕ್ಕೆ ಶಾಶ್ವತ ಹಾನಿಯುಂಟಾಗಲು ಹೆಚ್ಚಿನ ಸಮಯಾವಕಾಶ ದೊರೆಯುತ್ತದೆ. ಹೀಗಾಗಿ ಪಾರ್ಶ್ವವಾಯುವಿನ ಆರಂಭಿಕ ಎಚ್ಚರಿಕೆಯ ಗಂಟೆಗಳ ಬಗ್ಗೆ ಮಾಹಿತಿಯಿದ್ದರೆ ಅವು ಕಾಣಿಸಿಕೊಂಡ ತಕ್ಷಣವೇ ವೈದ್ಯರನ್ನು ಭೇಟಿಯಾಗುವ ಮೂಲಕ ಅಪಾಯದಿಂದ ಪಾರಾಗಬಹುದಾಗಿದೆ.

ಶರೀರದ ಒಂದು ಪಾರ್ಶ್ವದ ಮೆಲೆ ಪರಿಣಾಮವನ್ನುಂಟು ಮಾಡುವ ಯಾವುದೇ ಹೊಸ ನರವೈಜ್ಞಾನಿಕ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಕಾಣುವುದು ಅತ್ಯಂತ ಜಾಣತನವಾಗುತ್ತದೆ. ಅದು ಮೈಗ್ರೇನ್ ಆಗಿರಬಹುದು ಅಥವಾ ಹೆಚ್ಚಿನ ಉಪದ್ರವ ನೀಡದ ಸಮಸ್ಯೆಯಾಗಿರಬಹುದು,ಆದರೆ ಶರೀರದ ಒಂದೇ ಪಾರ್ಶ್ವದಲ್ಲಿ ಕಾಣಿಸಿಕೊಂಡಿದ್ದರೆ ಮತ್ತು ನೀವು ಅದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ನೀವು ಪಾರ್ಶ್ವವಾಯುವಿನ ವಿರುದ್ಧ ಮುನ್ನೆಚ್ಚರಿಕೆ ವಹಿಸುವ ಅವಕಾಶಗಳನ್ನು ಕಳೆದುಕೊಳ್ಳುತ್ತೀರಿ ಎನ್ನುತ್ತಾರೆ ತಜ್ಞರು.

► ಶರೀರದ ಒಂದು ಪಾರ್ಶ್ವದಲ್ಲಿ ನಿಶ್ಶಕ್ತಿ ಅಥವಾ ಮರಗಟ್ಟುವಿಕೆ ಅನುಭವವಾದರೆ,

 ಶರೀರದ ಒಂದು ಪಾರ್ಶ್ವವು ದಿಢೀರನೆ ಬಲವನ್ನು ಕಳೆದುಕೊಂಡರೆ ಅಥವಾ ಒಂದು ಪಾರ್ಶ್ವದ ಕೈ-ಕಾಲು ಮರಗಟ್ಟಿದಂತಾಗಿ ಚಲಿಸಲು ಅಸಾಧ್ಯ ಎಂದು ಅನ್ನಿಸುತ್ತಿದ್ದರೆ ಅದು,ವಿಶೇಷವಾಗಿ ಕೈಕಾಲುಗಳಲ್ಲಿ ಪಾರ್ಶ್ವವಾಯುವಿನ ಸಾಮಾನ್ಯ ಲಕ್ಷಣವಾಗಿದೆ.

 ನಮ್ಮ ಮಿದುಳಿನ ಪ್ರತಿಯೊಂದು ಪಾರ್ಶ್ವವು ಶರೀರದ ವಿರುದ್ಧ ದಿಕ್ಕಿನ ಪಾರ್ಶ್ವದ ಮೆಲೆ ಪರಿಣಾಮವನ್ನುಂಟು ಮಾಡುತ್ತದೆ. ಮಿದುಳಿನ ಬಲಪಾರ್ಶ್ವದಲ್ಲಿ ರಕ್ತಸ್ರಾವವುಂಟಾಗುತ್ತಿದ್ದರೆ ಶರೀರದ ಎಡಪಾರ್ಶ್ವವು ಲಕ್ಷಣಗಳನ್ನು ತೋರಿಸುತ್ತದೆ. ಇದೇ ಕಾರಣದಿಂದ ಪಾರ್ಶ್ವವಾಯು ಶರೀರದ ಒಂದು ಪಾರ್ಶ್ವಕ್ಕೆ ಉಂಟಾಗುತ್ತದೆ.

► ಮುಖದ ಒಂದು ಪಾರ್ಶ್ವ ಜೋಲು ಬಿದ್ದಿದ್ದರೆ

ಒಂದು ಪಾರ್ಶ್ವದ ಬಾಯಿಯ ಮೂಲೆ ಅಥವಾ ಕಣ್ಣು ಏಕಾಏಕಿ ಜೋಲು ಬಿದ್ದಿದ್ದರೆ ಮತ್ತು ಮುಖದ ಎರಡೂ ಪಾರ್ಶ್ವಗಳಲ್ಲಿ ಅಭಿವ್ಯಕ್ತಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದಾದರೆ ಅದು ಖಚಿತವಾಗಿ ಪಾರ್ಶ್ವವಾಯುವನ್ನು ಸೂಚಿಸುತ್ತದೆ. ಈ ಸಂದರ್ಭದಲ್ಲಿ ತಕ್ಷಣ ಆಸ್ಪತೆಯ ತುರ್ತು ಚಿಕಿತ್ಸಾ ಕೊಠಡಿಗೆ ತೆರಳಬೇಕು.

► ಓದುವಿಕೆ ಅಥವಾ ಮಾತನ್ನು ಅರ್ಥ ಮಾಡಿಕೊಳ್ಳುವಲ್ಲಿ ಕಷ್ಟವಾಗುತ್ತಿದ್ದರೆ

ನಿಮ್ಮ ಮಿದುಳಿನ ಎಡಪಾರ್ಶ್ವವು ಭಾಷೆಯನ್ನು ನಿಯಂತ್ರಿಸುತ್ತದೆ. ಹೀಗಾಗಿ ಅಲ್ಲಿ ಆಘಾತವುಂಟಾಗಿದ್ದರೆ ಮಾತನಾಡಿದ್ದನ್ನು ಅರ್ಥ ಮಾಡಿಕೊಳ್ಳುವ ಅಥವಾ ನಿಮ್ಮ ಮಾತುಗಳನ್ನು ವ್ಯಕ್ತಪಡಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಇದು ಶಬ್ದಗಳನ್ನು ಸಂಸ್ಕರಿಸುವ ಮಿದುಳಿನ ಸಾಮರ್ಥ್ಯಕ್ಕೆ ವ್ಯತ್ಯಯವನ್ನುಂಟು ಮಾಡುತ್ತದೆ. ಇದು ನಿಮ್ಮ ಮಾತುಗಳು ಹೊರಬೀಳಲು ಮತ್ತು ಇನ್ನೊಬ್ಬರು ನಿಮಗೆ ಹೇಳುತ್ತಿರುವುದನ್ನು ಅರ್ಥಮಾಡಿಕೊಳ್ಳಲು ಅಡ್ಡಿಯನ್ನುಂಟು ಮಾಡುತ್ತದೆ. ನಿಮ್ಮ ಓದುವಿಕೆ ಮತ್ತು ಬರವಣಿಗೆ ಸಾಮರ್ಥ್ಯವನ್ನೂ ಕುಂದಿಸುತ್ತದೆ.

► ಮಾತುಗಳು ತೊದಲುತ್ತಿದ್ದರೆ

 ಸ್ಪಷ್ಟವಾದ ಮಾತುಗಳನ್ನು ಉಚ್ಚರಿಸಲು ಅಗತ್ಯವಾಗಿರುವ ಸ್ನಾಯುಗಳನ್ನು ನಿಯಂತ್ರಿಸಲು ಸಾಧ್ಯವಾದಿದ್ದಾಗ ಮಾತುಗಳು ತೊದಲತೊಡಗುತ್ತವೆ. ಈ ಸ್ನಾಯುಗಳು ಪಾರ್ಶ್ವವಾಯುವಿಗೆ ತುತ್ತಾದಾಗ ಅವುಗಳನ್ನು ಬೇಕಾದಂತೆ ಚಲಿಸಲು ಸಾಧ್ಯವಾಗುವುದಿಲ್ಲ ಮತ್ತು ಇದು ನಿಮ್ಮ ಮಾತುಗಳನ್ನು ಅಸ್ಪಷ್ಟಗೊಳಿಸುತ್ತದೆ.

► ತೀವ್ರ ತಲೆನೋವು ಅನುಭವಿಸುತ್ತಿದ್ದರೆ

ಮಿದುಳಿನ ರಕ್ತಸ್ರಾವವನ್ನುಂಟು ಮಾಡುವ ಆಘಾತವುಂಟಾದಾಗ ತೀವ್ರವಾದ ತಲೆನೋವು ದಿಢೀರ್‌ನೆ ಕಾಣಿಸಿಕೊಳ್ಳುತ್ತದೆ ಮತ್ತು ಇಂತಹ ತಲೆನೋವಿಗೆ ತಕ್ಷಣದ ವೈದ್ಯಕೀಯ ಚಿಕಿತ್ಸೆಯು ಅಗತ್ಯವಾಗುತ್ತದೆ. ಸಾದಾ ತಲೆನೋವಿನ ಬಗ್ಗೆ ಚಿಂತಿಸಬೇಕಿಲ್ಲ. ಆದರೆ ಜೀವಮಾನದಲ್ಲಿಯೇ ಇಷ್ಟೊಂದು ತೀತ್ರ ತಲೆನೋವು ಅನುಭವಿಸಿರಲಿಲ್ಲ ಎಂದು ನಿಮಗನ್ನಿಸಿದರೆ ತಕ್ಷಣ ತಪಾಸಣೆ ಮಾಡಿಸಿಕೊಳ್ಳಿ.

► ಒಂದು ಪಾರ್ಶ್ವವನ್ನು ನೋಡಲು ಸಾಧ್ಯವಾಗದಿದ್ದರೆ

ಕೈಕಾಲುಗಳ ನಿಶ್ಶಕ್ತಿ ಮತ್ತು ಮರಗಟ್ಟುವಿಕೆಯಂತೆ ದೃಷ್ಟಿ ಸಮಸ್ಯೆಗಳೂ ಏಕ ಪಾರ್ಶ್ವೀಯವಾಗಿರುತ್ತವೆ. ಆದರೆ ಒಂದು ಪೂರ್ಣ ಕಣ್ಣಿನ ದೃಷ್ಟಿಯನ್ನು ಕಳೆದುಕೊಳ್ಳುವ ಬದಲಾಗಿ ಎರಡೂ ಕಣ್ಣುಗಳ ಒಂದೇ ಭಾಗದ ದೃಷ್ಟಿಯನ್ನು ಕಳೆದುಕೊಳ್ಳಬಹುದು. ಉದಾಹರಣೆಗೆ ಎರಡೂ ಕಣ್ಣುಗಳು ಎಡಭಾಗದ ನೋಟವನ್ನು ನೋಡಲು ಸಾಧ್ಯವಾಗುವುದಿಲ್ಲ ಅಥವಾ ಇದು ಬಲಭಾಗದಲ್ಲಿಯೂ ಉಂಟಾಗಬಹುದು. ನಿಮ್ಮ ಕಣ್ಣುಗುಡ್ಡೆ ಮತ್ತು ಕಣ್ಣಿನ ನರಗಳು ಸುಸ್ಥಿತಿಯಲ್ಲಿದ್ದರೂ ನೀವು ನೋಡಿದ ಮಾಹಿತಿ ಸಂಸ್ಕರಣೆಗಾಗಿ ತಲುಪುವ ಮಿದುಳಿನ ಭಾಗವು ಹಾನಿಗೀಡಾಗಿರುವುದು ಇದಕ್ಕೆ ಕಾರಣವಾಗಿರುತ್ತದೆ.

► ನಡೆದಾಡಲು ತೊಂದರೆ

ಪಾರ್ಶ್ವವಾಯು ತಲೆ ಸುತ್ತುವಿಕೆ ಮತ್ತು ಸಮನ್ವಯ ಕೊರತೆಯನ್ನುಂಟು ಮಾಡುತ್ತದೆ. ನಿಮ್ಮ ಒಂದು ಕಾಲು ಮರಗಟ್ಟಿದ್ದರೆ ಅವಾ ಬಲವನ್ನು ಕಳೆದುಕೊಂಡಿದ್ದರೆ ನಡೆದಾಡಲು ಅಥವಾ ಸುಮ್ಮನೆ ಎದ್ದು ನಿಲ್ಲುವುದೂ ಕಷ್ಟವಾಗುತ್ತದೆ. ಇದು ಎಚ್ಚರಿಕೆಯ ನರವೈಜ್ಞಾನಿಕ ಲಕ್ಷಣವಾಗಿದ್ದು,ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News