ಮೋದಿ ಭಾರತದಲ್ಲಿ ಗಾಂಧಿ ಚಿಂತನೆಯ ಅಣಕ

Update: 2018-10-02 19:05 GMT

ಗಾಂಧೀಜಿಯ 150ನೇ ವರ್ಷಾಚರಣೆಯನ್ನು ಭಾರತ ಒಂದು ವ್ಯಂಗ್ಯವಾಗಿ ಆಚರಿಸುತ್ತಿದೆ. ನರೇಂದ್ರ ಮೋದಿಯವರು ಗಾಂಧೀಜಿಯನ್ನು ಬೀದಿ ಗುಡಿಸುವುದಕ್ಕಷ್ಟೇ ಸೀಮಿತಗೊಳಿಸಿದ್ದಾರೆ. ಅದಕ್ಕೆ ಕಾರಣ ಇಲ್ಲದಿಲ್ಲ. ಗಾಂಧೀಜಿಯ ಕೊಲೆಯ ರಕ್ತದ ಕಲೆಯನ್ನು ಮೈಗೆ ಅಂಟಿಸಿರುವ ಸಂಘಪರಿವಾರಕ್ಕೆ ಸದಾ ಆ ನೆನಪು ಅಳಿಸಲಾಗದ ಕಳಂಕ. ಸಂಘಪರಿವಾರದ ಕೂಸಾಗಿರುವ ಬಿಜೆಪಿ ಸರಕಾರ ಈ ಕಾರಣಕ್ಕೆ ಗಾಂಧೀಜಿ ಬೀದಿ ಗುಡಿಸುವುದಕ್ಕೆ ಸೀಮಿತಗೊಳಿಸಿದ್ದಾರೆ. ಅವರ ಉಳಿದೆಲ್ಲ ಚಿಂತನೆಗಳನ್ನು ಮರೆ ಮಾಚುತ್ತಿದ್ದಾರೆ. ಗಾಂಧಿ ಜಯಂತಿಯ ದಿನ ಬಿಜೆಪಿ ನಾಯಕರೆಲ್ಲ ಬೀದಿಯಲ್ಲಿ ಪೊರಕೆ ಹಿಡಿದು ನಿಲ್ಲುತ್ತಾರೆ. ಅವರು ಪ್ರತಿಪಾದಿಸಿದ ಅಹಿಂಸೆ, ಸತ್ಯ, ಸೌಹಾರ್ದ, ಜಾತ್ಯತೀತ ಭಾರತ ಇವೆಲ್ಲವನ್ನೂ ಗುಡಿಸಿ ಎಸೆಯುವುದಕ್ಕಾಗಿಯೇ ಇವರು ಪೊರಕೆ ಹಿಡಿದಿದ್ದಾರೆಯೋ ಎಂದು ಗಾಂಧಿ ಅಭಿಮಾನಿಗಳು ಭಯಪಡುವಂತಾಗಿದೆ. 

ನಿಜ. ಗಾಂಧೀಜಿ ಶುಚಿತ್ವಕ್ಕೆ ಭಾರೀ ಮಹತ್ವವನ್ನು ನೀಡಿದ್ದಾರೆ. ಒಮ್ಮೆ ದೇಶದ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಗಾಂಧೀಜಿ, ಅಲ್ಲಿನ ಮಾಲಿನ್ಯವನ್ನು ಕಂಡು ‘‘ಇಲ್ಲಿ ದೇವರು ಇರಲು ಸಾಧ್ಯವೇ ಇಲ್ಲ’’ ಎಂದಿದ್ದರು. ಮಾತ್ರವಲ್ಲ ಮುಂದೆಂದೂ ಅವರು ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಲಿಲ್ಲ. ಉಡುಪಿಗೆ ಬಂದ ಅವರನ್ನು, ಗಣ್ಯರು ಕೃಷ್ಣ ಮಠಕ್ಕೆ ಆಹ್ವಾನಿಸಿದರಂತೆ. ಆಗ ಗಾಂಧೀಜಿ ಕೇಳಿದ ಪ್ರಶ್ನೆ ‘‘ಅಲ್ಲಿ ದಲಿತರಿಗೆ ಪ್ರವೇಶವಿದೆಯೇ?’’ ಇಲ್ಲ ಎಂಬ ಉತ್ತರ ದೊರಕಿದ್ದೇ, ಕೃಷ್ಣ ಮಠಕ್ಕೆ ಭೇಟಿ ನೀಡಲು ನಿರಾಕರಿಸಿದರಂತೆ. ಗಾಂಧೀಜಿಯ ಶುಚಿತ್ವ ಕೇವಲ ಬಹಿರಂಗಕ್ಕೆ ಸಂಬಂಧಿಸಿದ್ದು ಮಾತ್ರವಾಗಿರಲಿಲ್ಲ. ಅಂತರಂಗ ಮತ್ತು ಬಹಿರಂಗ ಶುಚಿತ್ವವೆರಡಕ್ಕೂ ಅವರು ಆದ್ಯತೆಯನ್ನು ನೀಡಿದ್ದಾರೆ. ಅಂತರಂಗ ಶುಚಿಗೊಳ್ಳದೇ ಇದ್ದರೆ ಬಹಿರಂಗ ಶುದ್ಧಿಯಾಗದು ಎಂದು ನಂಬಿದವರು ಗಾಂಧೀಜಿ. ಬಹುಶಃ ನರೇಂದ್ರ ಮೋದಿ ನೇತೃತ್ವದ ಶುಚಿತ್ವ ಆಂದೋಲನದ ವೈಫಲ್ಯದ ಕಾರಣ ಅಲ್ಲಿದೆ. ಕೋಟಿ ಕೋಟಿ ಸುರಿದರೂ ಗಂಗಾನದಿ ಯಾಕೆ ಶುಚಿಯಾಗುತ್ತಿಲ್ಲ ಎನ್ನುವುದಕ್ಕೆ ಉತ್ತರವೂ ಗಾಂಧೀಜಿಯಲ್ಲಿದೆ. ಎಲ್ಲಿಯವರೆಗೆ ದೇಶದಲ್ಲಿರುವ ಅಸ್ಪಶ್ಯತೆ, ಜಾತೀಯತೆ, ಬಡತನ ನಿವಾರಣೆಯಾಗುವುದಿಲ್ಲವೋ ಅಥವಾ ಅವುಗಳು ನಿವಾರಣೆಯಾಗುವುದು ಸರಕಾರಕ್ಕೆ ಇಷ್ಟವಿಲ್ಲವೋ, ಅಲ್ಲಿಯವರೆಗೆ ಸರಕಾರ ನಡೆಸುವ ಶುಚಿತ್ವ ಆಂದೋಲನ ಒಂದು ಪ್ರಹಸನ ಮಾತ್ರವಾಗಿರುತ್ತದೆ.

  ಗಾಂಧೀಜಿ ಪ್ರಬಲವಾಗಿ ಪ್ರತಿಪಾದಿಸಿದ್ದು ಅಹಿಂಸೆಯನ್ನು. ಸ್ವಾತಂತ್ರವನ್ನು ಅಹಿಂಸೆಯ ಮೂಲಕವೇ ಪಡೆಯಬೇಕು ಎನ್ನುವ ಹಟವನ್ನು ಅವರು ಹೊಂದಿದ್ದರು. ಅಸಹಕಾರ ಚಳವಳಿ ದೇಶಾದ್ಯಂತ ಯಶಸ್ವಿಯಾಗುತ್ತಿದ್ದ ಹೊತ್ತಿನಲ್ಲಿ ಸ್ವಾತಂತ್ರ ಹೋರಾಟಗಾರರು ಪೊಲೀಸ್ ಠಾಣೆಯೊಂದಕ್ಕೆ ಬೆಂಕಿ ಕೊಟ್ಟು ಪೊಲೀಸರನ್ನು ಜೀವಂತ ದಹಿಸಿದ ಘಟನೆ ವರದಿಯಾಗುತ್ತಿದ್ದಂತೆಯೇ ತಮ್ಮ ಚಳವಳಿಯಿಂದ ಹಿಂದೆ ಸರಿದರು. ಸ್ವಾತಂತ್ರಕ್ಕೆ ದೇಶ ಇನ್ನೂ ಸಿದ್ಧವಾಗಿಲ್ಲ ಎಂದು ಅಭಿಪ್ರಾಯ ಪಟ್ಟರು. ಆ ಹಿಂಸೆಗಾಗಿ ಪಶ್ಚಾತ್ತಾಪ ಪಟ್ಟರು. ಗಾಂಧೀಜಿಯ 150ನೇ ವರ್ಷಾಚರಣೆಗೆ ಸರಕಾರ ಹೊರಟಿರುವ ಈ ಸಂದರ್ಭದಲ್ಲಿ ದೇಶದಲ್ಲಿ ಹಿಂಸೆ ವಿಜೃಂಭಿಸುತ್ತಾ ಇದೆ. ಒಂದು ಕಾಲದಲ್ಲಿ ಗೋವುಗಳನ್ನು ಸಾಕುವವರನ್ನು ಗೋರಕ್ಷಕರು ಎಂದು ದೇಶ ಕರೆಯುತ್ತಿತ್ತು. ಆದರೆ ಇಂದು, ಬೀದಿಯಲ್ಲಿ ಗಾಂಜಾ, ಮದ್ಯ ಸೇವಿಸುತ್ತಾ ಕೈಯಲ್ಲಿ ಕತ್ತಿ, ದೊಣ್ಣೆ ಹಿಡಿದು, ಹೆಗಲಿಗೆ ಕೇಸರಿ ಶಾಲುಗಳನ್ನು ಹಾಕಿ ಓಡಾಡುವವರನ್ನು ಗೋರಕ್ಷಕರು ಎಂದು ಗುರುತಿಸಲಾಗುತ್ತಿದೆ. ಗಾಂಧೀಜಿಯ ಹಳ್ಳಿಯಲ್ಲಿ ಹೈನೋದ್ಯಮ ಮಹತ್ವದ ಸ್ಥಾನವನ್ನು ಪಡೆದಿದ್ದರೆ, ಮೋದಿಯ ರಾಜ್ಯದಲ್ಲಿ ಗೋವು ಸಾಕುವ ರೈತರು ಬದಿಗೆ ಸರಿದು, ಈ ನಕಲಿ ಗೋರಕ್ಷಕರು ಮುನ್ನ್ನೆಲೆಗೆ ಬಂದಿದ್ದಾರೆ. ಜಾನುವಾರು ವ್ಯಾಪಾರಿಗಳನ್ನು, ರೈತರನ್ನು ಈ ದುಷ್ಕರ್ಮಿಗಳ ಗುಂಪು ಗೋರಕ್ಷಣೆಯ ಹೆಸರಲ್ಲಿ ಬರ್ಬರವಾಗಿ ಕೊಂದು ಹಾಕುತ್ತಿದೆ. ಪೊಲೀಸರು ಎನ್‌ಕೌಂಟರ್ ಹೆಸರಲ್ಲಿ ಕಗ್ಗೊಲೆಗೆ ಇಳಿದಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಗಾಂಧಿ ಜಯಂತಿಯ ದಿನವೇ, ಹಕ್ಕುಗಳಿಗಾಗಿ ಬೀದಿಗಿಳಿದಿದ್ದ ರೈತರ ಮೇಲೆ ಸರಕಾರ ಬರ್ಬರ ದಾಳಿ ಮಾಡಿದೆ. ಗಾಂಧೀಜಿ ಹಳ್ಳಿಗಳಲ್ಲಿ ಭಾರತವಿದೆ ಎಂದು ನಂಬಿದ್ದರು. ಅದೇ ಹಳ್ಳಿಗಳಿಂದ ಬೇಡಿಕೆಗಳನ್ನು ಮುಂದಿಟ್ಟು ದಿಲ್ಲಿಗೆ ಬರುತ್ತಿದ್ದ ರೈತರನ್ನು ಪೊಲೀಸರ ಲಾಠಿ, ಅಶ್ರುವಾಯುಗಳನ್ನು ಬಳಸಿ ಸರಕಾರ ತಡೆದಿದೆ. ಈ ಘಟನೆಯಲ್ಲಿ ನೂರಾರು ರೈತರು ಗಾಯಗೊಂಡಿದ್ದಾರೆ. ಮೋದಿ ಭಾರತ ಗಾಂಧಿಜಯಂತಿಯನ್ನು ಆಚರಿಸಿದ ಬಗೆ ಇದು. ವಿಪರ್ಯಾಸವೆಂದರೆ, ದೇಶದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಹಿಂಸಾಚಾರ ಭುಗಿಲೆದ್ದಿರುವ ಹೊತ್ತಿನಲ್ಲಿ, ಸರಕಾರ ಗಾಂಧಿ ಜಯಂತಿಯ ದಿನ ಮಾಂಸಾಹಾರವನ್ನು ನಿಷೇಧಿಸಿ ಗಾಂಧಿಗೆ ತನ್ನ ನಮನಗಳನ್ನು ಸಲ್ಲಿಸುತ್ತದೆ.

ಶುಚಿತ್ವ ಆಂದೋಲನದ ಹೆಸರಲ್ಲಿ ಸರಕಾರ ಗಾಂಧಿಯನ್ನು ಹೇಗೆ ಅಣಕಿಸುತ್ತಿದೆಯೋ, ಗಾಂಧಿ ಜಯಂತಿಯ ದಿನ ಮಾಂಸ ಮಾರಾಟ ನಿಷೇಧವೂ ಗಾಂಧಿಯ ಅತಿ ದೊಡ್ಡ ಅಣಕವಾಗಿದೆ. ಮಾಂಸ ಈ ದೇಶದ ಬಹುಸಂಖ್ಯಾತರ ಆಹಾರ. ತಲೆ ತಲಾಂತರದಿಂದ ಅದು ಈ ದೇಶದ ಜನರನ್ನು ಪೋಷಿಸುತ್ತಾ ಬಂದಿದೆ. ಮಾಂಸ ಮತ್ತು ಮದ್ಯ ಯಾವತ್ತೂ ಒಂದೇ ಅಲ್ಲ. ಮದ್ಯ ಆಹಾರ ಅಲ್ಲ. ಜೊತೆಗೆ ಮದ್ಯದಿಂದ ಮನುಷ್ಯ ಸಾರ್ವಜನಿಕವಾಗಿ ವಿವೇಕವನ್ನು ಕಳೆದುಕೊಳ್ಳುತ್ತಾನೆ. ಕೆಲವು ನಿರ್ದಿಷ್ಟ ಸಂದರ್ಭದಲ್ಲಿ ಮದ್ಯವನ್ನು ಸರಕಾರ ನಿಷೇಧಿಸುವುದು ಅತ್ಯಗತ್ಯ. ಗಾಂಧೀಜಿ ಪಾನನಿರೋಧ ಚಳವಳಿಯನ್ನೇ ನಡೆಸಿದ್ದರು. ಆದರೆ ಅವರು ಯಾವತ್ತೂ ಮಾಂಸಾಹಾರದ ವಿರುದ್ಧ ಚಳವಳಿ ನಡೆಸಿರಲಿಲ್ಲ. ಅವರ ಜೊತೆಗಿದ್ದ ಬಹುತೇಕ ಸ್ವಾತಂತ್ರ ಹೋರಾಟಗಾರರು ಮಾಂಸಾಹಾರಿಗಳಾಗಿದ್ದರು ಮತ್ತು ಅದನ್ನು ತೊರೆಯುವಂತೆ ಅವರು ಯಾವತ್ತೂ ಒತ್ತಾಯ ಮಾಡಿರಲಿಲ್ಲ. ಹೀಗಿರುವಾಗ, ಗಾಂಧಿ ಜಯಂತಿಯ ದಿನ ಮಾಂಸ ವ್ಯಾಪಾರವನ್ನು ನಿಷೇಧಿಸಿ ಸರಕಾರ ಯಾಕೆ ಆದೇಶ ಹೊರಡಿಸಬೇಕು? ಭಾರತದಲ್ಲಿ ಶೇ. 50ಕ್ಕೂ ಅಧಿಕ ಮಂದಿ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸುತ್ತಿದೆ. ಇಂತಹ ಸಂದರ್ಭದಲ್ಲಿ, ಮದ್ಯದ ಸಾಲಿನಲ್ಲಿ ಮಾಂಸವನ್ನು ಇಟ್ಟು ಸರಕಾರ ಜನರಿಗೆ ಯಾವ ಸಂದೇಶವನ್ನು ನೀಡಲು ಹೊರಟಿದೆ? ಈ ಮೂಲಕ ದೇಶದ ಬಹುಸಂಖ್ಯಾತರ ಆಹಾರ ಪದ್ಧತಿಯನ್ನೇ ಕೀಳುದರ್ಜೆಗೆ ಇಳಿಸಲು ಯತ್ನಿಸುತ್ತಿದೆ. ಜನರಲ್ಲಿ ಮಾಂಸಾಹಾರದ ಕುರಿತಂತೆ ಕೀಳರಿಮೆ ಹುಟ್ಟಿಸಲು ನೋಡುತ್ತಿದೆ. ಇಷ್ಟಕ್ಕೂ ಸಸ್ಯಾಹಾರಿಗಳು ಅಹಿಂಸೆಯನ್ನು ಪಾಲಿಸಿದ ಇತಿಹಾಸ ಎಲ್ಲಿದೆ? ಹಿಟ್ಲರ್ ಸಸ್ಯಾಹಾರಿಯಾಗಿದ್ದ. ಈ ದೇಶದ ದಲಿತರನ್ನು ತಲೆತಲಾಂತರದಿಂದ ಬರ್ಬರವಾಗಿ ಶೋಷಿಸುತ್ತಾ ಬಂದವರು ಸಸ್ಯಾಹಾರಿಗಳೇ ಆಗಿದ್ದಾರೆ. ಹೀಗಿರುವಾಗ ಮಾಂಸಾಹಾರವನ್ನು ಯಾವ ಆಧಾರದಿಂದ ಅದು ಹಿಂಸೆಗೆ ಪ್ರೋತ್ಸಾಹ ನೀಡುತ್ತದೆ ಎಂದು ಸರಕಾರ ಹೇಳುತ್ತದೆ? ರೈತರ ಕೈಯಿಂದ ಅವರು ಸಾಕುವ ಜಾನುವಾರುಗಳನ್ನು ಮಾರಾಟ ಮಾಡುವ ಹಕ್ಕನ್ನು ಕಿತ್ತು ಕೊಳ್ಳುವುದು ಹಿಂಸೆ. ಆಧಾರ್‌ಕಾರ್ಡ್ ಇಲ್ಲದ ನೆಪದಲ್ಲಿ ಜನರಿಗೆ ರೇಷನ್ ನೀಡುವುದನ್ನು ನಿಲ್ಲಿಸಿ ಅವರನ್ನು ಹಸಿವಿನಿಂದ ಸಾಯಿಸುವುದು ಹಿಂಸೆ. ಈ ದೇಶದಲ್ಲಿ ಸರಿಯಾದ ಆಹಾರವಿಲ್ಲದೆ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿರುವುದು ಹಿಂಸೆ. ಜೊತೆಗೆ ಇಂತಹ ದೇಶದಲ್ಲಿ ಗಾಂಧೀಜಿ ಜಯಂತಿಯ ದಿನವೇ, ಜನರ ಕೈಯಿಂದ ಅಹಿಂಸೆಯ ಹೆಸರಲ್ಲಿ ಅವರ ಆಹಾರದ ಹಕ್ಕನ್ನು ಕಿತ್ತುಕೊಳ್ಳುವುದು ಬಹುದೊಡ್ಡ ಹಿಂಸೆ.

 ಮಹಾವೀರ ಜಯಂತಿಯಿಂದ ಹಿಡಿದು ಗಾಂಧಿ ಜಯಂತಿಯವರೆಗೆ ಆ ದಿನ ನಾವು ಯಾವ ಆಹಾರ ಸೇವಿಸಬೇಕು ಎನ್ನುವುದನ್ನು ಸರಕಾರ ನಿರ್ಧರಿಸುವುದೇ ಪ್ರಜಾಸತ್ತೆಯ ಬಹುದೊಡ್ಡ ವಿಪರ್ಯಾಸವಾಗಿದೆ. ಗಾಂಧಿ ಇದನ್ನು ಖಂಡಿತವಾಗಿಯೂ ಒಪ್ಪುತ್ತಿರಲಿಲ್ಲ. ಮದ್ಯವನ್ನು ಮಾಂಸದ ಜೊತೆಗಿಟ್ಟು ಸರಕಾರ ನೋಡಬಾರದು. ಮಹತ್ವದ ದಿನಗಳಂದು ಜನರು ಯಾವ ಆಹಾರವನ್ನು ಸೇವಿಸಬೇಕು ಎನ್ನುವ ಆದೇಶ ನೀಡುವ ಅಧಿಕಾರ ಯಾವುದೇ ಸರಕಾರಿ ಸಂಸ್ಥೆಗಿಲ್ಲ. ಇನ್ನು ಮುಂದೆಯಾದರೂ ಸರಕಾರ ಇಂತಹ ಜನವಿರೋಧಿ ಆದೇಶಗಳನ್ನು ನೀಡುವುದರ ಕುರಿತಂತೆ ಜಿಲ್ಲಾಡಳಿತಗಳಿಗೆ ಸ್ಪಷ್ಟ ಸೂಚನೆಯನ್ನು ನೀಡಬೇಕು. ಇಲ್ಲವಾದರೆ ತಮ್ಮ ಆಹಾರದ ಹಕ್ಕಿಗಾಗಿ ಜನರೇ ಬೀದಿಗೆ ಇಳಿಯುವಂತಹ ದಿನ ಬರಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News