ಭಾರತಕ್ಕೆ ಅಗ್ರಸ್ಥಾನ ಕಾಯ್ದುಕೊಳ್ಳುವ ಗುರಿ

Update: 2018-10-02 19:16 GMT

ದುಬೈ, ಅ.2: ಇಂಗ್ಲೆಂಡ್ ವಿರುದ್ಧ 1-4 ಅಂತರದಿಂದ ಸೋತ ಹೊರತಾಗಿಯೂ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿದಿರುವ ಭಾರತಕ್ಕೆ ನಂ.1 ಸ್ಥಾನ ಕಾಯ್ದುಕೊಳ್ಳುವುದೇ ಒಂದು ಗುರಿಯಾಗಿದೆ.

ಭಾರತ ಗುರುವಾರದಿಂದ ವೆಸ್ಟ್‌ಇಂಡೀಸ್ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಅಗ್ರ ಸ್ಥಾನವನ್ನು ಉಳಿಸಿಕೊಳ್ಳಲು ಒಂದೂ ಅಂಕವನ್ನು ಕಳೆದುಕೊಳ್ಳದೇ ಇರುವತ್ತ ಭಾರತ ಚಿತ್ತವಿರಿಸಿದೆ.

ಭಾರತ ಒಟ್ಟು 115 ಅಂಕ ಗಳಿಸಿ ನಂ.1 ಸ್ಥಾನದಲ್ಲಿದೆ. ವಿಂಡೀಸ್ ವಿರುದ್ಧ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡರೂ ಕೇವಲ 1 ಅಂಕ ಪಡೆದುಕೊಳ್ಳುತ್ತದೆ.

ಒಂದು ವೇಳೆ, ಭಾರತ 0-2 ಅಂತರದಿಂದ ಸರಣಿ ಸೋತರೆ 108 ಅಂಕಕ್ಕೆ ಕುಸಿಯುತ್ತದೆ. ಮತ್ತೊಂದೆಡೆ, ಆಸ್ಟ್ರೇಲಿಯ ತಂಡ ಪಾಕ್ ವಿರುದ್ಧ 2-0 ಅಂತರದಿಂದ ಜಯ ಸಾಧಿಸಿದರೆ ಭಾರತವನ್ನು ಹಿಂದಿಕ್ಕುತ್ತದೆ.

ಪಾಕಿಸ್ತಾನ ಯುಎಇಯಲ್ಲಿ ಆಸ್ಟ್ರೇಲಿಯ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯ ಆತಿಥ್ಯವಹಿಸಿಕೊಂಡಿದ್ದು, ಸರಣಿಯು ರವಿವಾರ ಆರಂಭವಾಗಲಿದೆ. ಈ ಸರಣಿಯು ಉಭಯ ತಂಡಗಳಿಗೆ ಟೆಸ್ಟ್ ಟೀಮ್ ರ್ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಲು ಇರುವ ಉತ್ತಮ ಅವಕಾಶವಾಗಿದೆ.

ಪಾಕಿಸ್ತಾನ 2-0 ಅಂತರದಿಂದ ಸರಣಿ ಜಯಿಸಿದರೆ 6ನೇ ಸ್ಥಾನದಲ್ಲಿರುವ ಶ್ರೀಲಂಕಾವನ್ನು ಹಿಂದಿಕ್ಕುವ ಸಾಧ್ಯತೆಯಿದೆ. ಆಸ್ಟ್ರೇಲಿಯ 1-0 ಅಂತರದಿಂದ ಸರಣಿಯನ್ನು ಜಯಿಸಿದರೂ ದಕ್ಷಿಣ ಆಫ್ರಿಕವನ್ನು ಹಿಂದಕ್ಕೆ ತಳ್ಳಿ 2ನೇ ಸ್ಥಾನಕ್ಕೇರಬಹುದು.

ಭಾರತ ನಾಯಕ ವಿರಾಟ್ ಕೊಹ್ಲಿ ನಂ.1 ಬ್ಯಾಟ್ಸ್ ಮನ್ ಸ್ಥಾನ ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಆಸ್ಟ್ರೇಲಿಯದ ರನ್ ಮೆಶಿನ್ ಸ್ಟೀವನ್ ಸ್ಮಿತ್‌ಗಿಂತ ಕೊಹ್ಲಿ ಒಂದು ಅಂಕದಿಂದ ಮುಂದಿದ್ದಾರೆ.

 ಚೇತೇಶ್ವರ ಪೂಜಾರ(6ನೇ) ಹಾಗೂ ಲೋಕೇಶ್ ರಾಹುಲ್(19ನೇ)ವಿಂಡೀಸ್ ವಿರುದ್ಧ ಸರಣಿ ಆಡಲಿರುವ ಭಾರತದ ಪ್ರಮುಖ ಆಟಗಾರರಾಗಿದ್ದಾರೆ. ಸ್ಪಿನ್‌ದ್ವಯರಾದ ರವೀಂದ್ರ ಜಡೇಜ(4ನೇ) ಹಾಗೂ ಆರ್.ಅಶ್ವಿನ್(8ನೇ) ತವರು ವಾತಾವರಣದ ಲಾಭ ಎತ್ತಲು ಎದುರು ನೋಡುತ್ತಿದ್ದಾರೆ. 20ನೇ ಸ್ಥಾನದಲ್ಲಿರುವ ಉಸ್ಮಾನ್ ಖ್ವಾಜಾ ಅವರು ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯ ಬ್ಯಾಟ್ಸ್‌ಮನ್‌ಗಳ ನೇತೃತ್ವವಹಿಸಲಿದ್ದಾರೆ. ಆರಂಭಿಕ ಆಟಗಾರ ಅಝರ್ ಅಲಿ ಗರಿಷ್ಠ ರ್ಯಾಂಕಿನಲ್ಲಿರುವ(15ನೇ) ಪಾಕಿಸ್ತಾನದ ಆಟಗಾರನಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News