​ಗಿರ್: ನಿಲ್ಲದ ಸಿಂಹಗಳ ಸಾವಿನ ಸರಣಿ

Update: 2018-10-03 03:15 GMT

ಅಹ್ಮದಾಬಾದ್, ಅ. 3: ದೇಶದ ಹೆಮ್ಮೆಯ ಸಿಂಹಧಾಮ ಎನಿಸಿದ ಗಿರ್ ಸಿಂಹಧಾಮದಲ್ಲಿ ಸೋಮವಾರ ಮತ್ತೆರಡು ಸಿಂಹಗಳು ಕೆನೈನ್ ಡಿಸ್ಟೆಂಪರ್ ವೈರಸ್ (ಸಿಡಿವಿ)ಗೆ ಬಲಿಯಾಗಿದ್ದು, ಅರ್ಮೇಲಿ ಜಿಲ್ಲೆಯಲ್ಲಿ ಕಳೆದ ಮೂರು ವಾರಗಳಲ್ಲಿ ಮೃತಪಟ್ಟ ಸಿಂಹಗಳ ಸಂಖ್ಯೆ 23ಕ್ಕೇರಿದೆ. ಎಲ್ಲ 26 ಸಿಂಹಗಳಿಗೆ ಸೋಂಕು ತಗುಲಿದ್ದು, ಮೂರು ಸಿಂಹಗಳು ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿವೆ.

"26 ಸಿಂಹಗಳ ಪೈಕಿ ಮತ್ತೆರಡು ಸೋಮವಾರ ಮೃತಪಟ್ಟಿವೆ. ಹಿಂದೆ ಮೃತಪಟ್ಟ 21 ಸಿಂಹಗಳ ಪೈಕಿ ನಾಲ್ಕು ಸಿಡಿವಿಯಿಂದ ಮೃತಪಟ್ಟಿರುವುದು ಖಚಿತ. ಉಳಿದ 17 ಸಿಂಹಗಳು ಉಣ್ಣಿಯಿಂದ ಹರಡುವ ಬೆಬೆಸಿಯೋಸಿಸ್ ಪ್ರೊಟೊಝೋವಾ ಸೋಂಕಿನಿಂದ ಮೃತಪಟ್ಟಿವೆ" ಎಂದು ಅರಣ್ಯ ಮತ್ತು ಪರಿಸರ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಗುಪ್ತಾ ಹೇಳಿದ್ದಾರೆ.

ಗಿರ್ ಸಿಂಹಗಳಲ್ಲಿ ಸಿಡಿವಿ ಪತ್ತೆಯಾಗಿರುವ ಬಗ್ಗೆ 2011ರಿಂದೀಚೆಗೆ ಎರಡು ಬಾರಿ ಗುಜರಾತ್ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿತ್ತು ಎಂದು ಹೇಳಲಾಗಿದೆ.

2011ರ ಸೆಪ್ಟೆಂಬರ್‌ನಲ್ಲಿ ಕೇಂದ್ರೀಯ ಪ್ರಾಣಿ ರೋಗ ಸಂಶೋಧನಾ ಮತ್ತು ರೋಗ ಪತ್ತೆ ಸಂಸ್ಥೆ ಮತ್ತು ಭಾರತೀಯ ಪಶು ಸಂಶೋಧನಾ ಸಂಸ್ಥೆ ಸಿಂಹಗಳ ಮೃತದೇಹದಲ್ಲಿ ಪೆಸ್ಟ್ ಡೆಸ್ ಪೆಟಿಟಸ್ ರುಮಿನಂಟ್ಸ್ ವೈರಸ್ (ಪಿಪಿಆರ್‌ವಿ) ಪತ್ತೆ ಹಚ್ಚಿದ ಬಳಿಕ ಎಚ್ಚರಿಕೆ ನೀಡಲಾಗಿತ್ತು.

ಇದೀಗ ಸಿಂಹಗಳ ಸುರಕ್ಷೆ ದೃಷ್ಟಿಯಿಂದ ಇವುಗಳನ್ನು ಮಧ್ಯಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂದು ವನ್ಯಜೀವಿ ತಜ್ಞರು ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News