ಕಾಶ್ಮೀರದ ಏಕೈಕ ಮಹಿಳಾ ಕ್ರಿಕೆಟ್ ಬ್ಯಾಟ್ ತಯಾರಕಿ ರಿಫಾತ್ ಮಸೂದಿ

Update: 2018-10-03 11:08 GMT

ಶ್ರೀನಗರದ ನರ್ವಾರಾ ಪ್ರದೇಶವು ಕಣಿವೆಯಲ್ಲಿನ ಅಶಾಂತಿಯ ಪ್ರಮುಖ ಸ್ಥಳವೆಂದೇ ಹೇಳಬಹುದು. ನಾಗರಿಕರಿಂದ ಕಲ್ಲುತೂರಾಟ ಮತ್ತು ಪ್ರತ್ಯೇಕತಾವಾದದ ಬೆಂಬಲಿಗರು ಹಾಗು ಭದ್ರತಾ ಪಡೆಗಳ ನಡುವೆ ಸಂಘರ್ಷಗಳಂತಹ ಘಟನೆಗಳು ಈ ಪ್ರದೇಶದಲ್ಲಿ ಸಾಮಾನ್ಯವಾಗಿವೆ.

   ಆದರೆ ಈ ಎಲ್ಲ ಕ್ಷೋಭೆಗಳ ನಡುವೆಯೇ ಧೈರ್ಯವಂತ ಮಹಿಳೆಯೋರ್ವರು ಯಾವುದೇ ಸದ್ದುಗದ್ದಲವಿಲ್ಲದೆ ತನ್ನದೇ ಆದ ಯಶೋಗಾಥೆಯನ್ನು ಸೃಷ್ಟಿಸುತ್ತಿದ್ದಾರೆ. ರಿಫಾತ್ ಮಸೂದಿ ಜಮ್ಮು-ಕಾಶ್ಮೀರದಲ್ಲಿ ಕ್ರಿಕೆಟ್ ಬ್ಯಾಟ್‌ಗಳನ್ನು ತಯಾರಿಸುವ ಘಟಕವನ್ನು ಹೊಂದಿರುವ ಏಕೈಕ ಮಹಿಳೆಯಾಗಿದ್ದಾರೆ. ಒಂದಲ್ಲ ಒಂದು ದಿನ ಭಾರತದ ಸ್ಟಾರ್ ಕ್ರಿಕೆಟಿಗರು ತಾನು ತಯಾರಿಸಿದ ಬ್ಯಾಟ್‌ಗಳನ್ನು ಬಳಸುತ್ತಾರೆ ಎಂಬ ಕನಸು ಅವರದು.

1999ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪಾಕಿಸ್ತಾನಕ್ಕೆ ಬಸ್‌ಪ್ರಯಾಣವನ್ನು ಕೈಗೊಳ್ಳುವುದರೊಂದಿಗೆ ಇಬ್ಬರು ಮಕ್ಕಳ ತಾಯಿಯಾಗಿರುವ ರಿಫಾತ್(40)ರ ಉದ್ಯಮಗಾಥೆ ಆರಂಭಗೊಂಡಿತ್ತು.

ಶಾಂತಿ ಸ್ಥಾಪನೆಯ ವಾಜಪೇಯಿಯವರ ಪ್ರಯತ್ನ ಕಾಶ್ಮೀರದಲ್ಲಿ ನೆಮ್ಮದಿ ಮತ್ತು ಸಹಜತೆಯನ್ನು ತಂದಿತ್ತು. ಗಡಿಯಾಚೆಯ ಖರೀದಿದಾರರಲ್ಲಿ ಕಾಶ್ಮೀರಿ ವಸ್ತುಗಳಲ್ಲಿ ಆಸಕ್ತಿಯು ಮತ್ತೆ ಗರಿಗೆದರಿತ್ತು ಎಂದು ರಿಫಾತ್ ನೆನಪಿಸಿಕೊಂಡಿದ್ದಾರೆ.

ಕಾಶ್ಮೀರದಲ್ಲಿ ಬೆಳೆಯುವ ಉತ್ತಮ ಮಟ್ಟದ ವಿಲೊ ಮರದ ಕಟ್ಟಿಗೆಯನ್ನು ಬಳಸಿಕೊಂಡು ಕ್ರಿಕೆಟ್ ಬ್ಯಾಟ್‌ಗಳನ್ನು ತಯಾರಿಸುವ ಉದ್ಯಮವನ್ನು ಮಸೂದಿಯವರ ಮಾವ 1970ರ ದಶಕದಲ್ಲಿ ಆರಂಭಿಸಿದ್ದರು. ಆದರೆ 1990ರ ದಶಕದಲ್ಲಿ ಬಂಡಾಯವು ತಲೆಯೆತ್ತುವುದರೊಂದಿಗೆ ಉದ್ಯಮವು ತತ್ತರಿಸಿತ್ತು ಮತ್ತು ಕ್ರಿಕೆಟ್ ಬ್ಯಾಟ್‌ಗಳ ತಯಾರಿಕೆಯ ಪ್ರಮುಖ ಕೇಂದ್ರ ಎಂಬ ಹೆಗ್ಗಳಿಕೆ ಪಂಜಾಬಿನ ಜಲಂಧರ್‌ನ ಪಾಲಾಗಿತ್ತು. 1999ರಲ್ಲಿ ಆಗ 21ರ ಹರೆಯದವರಾಗಿದ್ದ ರಿಫಾತ್ ಮಾವನ ಕ್ರಿಕೆಟ್ ಬ್ಯಾಟ್ ತಯಾರಿಕೆ ಘಟಕಕ್ಕೆ ಪುನರುಜ್ಜೀವನ ನೀಡಲು ನಿರ್ಧರಿಸಿದ್ದರು.

ಕಾಶ್ಮೀರಿ ಬ್ಯಾಟ್‌ಗಳ ಬಗ್ಗೆ ಆಸಕ್ತಿಯನ್ನು ತೋರಿಸಿದ್ದ ಪ್ರತಿಯೊಬ್ಬ ಭಾರತೀಯ ಖರೀದಿದಾರರಿಗೆ ದೂರವಾಣಿ ಕರೆಗಳನ್ನು ಮಾಡಲು ಆರಂಭಿಸಿದ ರಿಫಾತ್, ಸಗಟು ಮಾರಾಟಗಾರರು ಶ್ರೀನಗರಕ್ಕೆ ಆಗಮಿಸಿದರೆ ಮಸೂದಿ ಕುಟುಂಬದ ನಿವಾಸದಲ್ಲಿ ಉಚಿತ ವಸತಿ ಸೌಕರ್ಯ ಒದಗಿಸುವ ಕೊಡುಗೆಯನ್ನು ಮುಂದಿರಿಸಿದ್ದರು.

ಅರಣ್ಯ ಇಲಾಖೆಯ ಉದ್ಯೋಗಿಯಾದ ಪತಿ ಶೌಕತ್ ಪತ್ನಿಯ ಹೊಸ ಸಾಹಸವನ್ನು ಸಂಪೂರ್ಣವಾಗಿ ಬೆಂಬಲಿಸಿದ್ದರು. 2010ರಲ್ಲಿ ಪೂರ್ಣಾವಧಿ ಫುಟ್ಬಾಲ್ ಕೋಚ್ ಆದ ಶೌಕತ್ ಈಗ ಈ ಕ್ರೀಡೆಯಲ್ಲಿ ಎಳೆಯರಿಗೆ ತರಬೇತು ನೀಡುತ್ತಿದ್ದಾರೆ.

ಮಹಿಳಾ ಉದ್ಯಮಶೀಲರ ವಿರುದ್ಧದ ಸ್ಥಳೀಯರ ಅಭಿಪ್ರಾಯಗಳನ್ನೂ ರಿಫಾತ್ ಎದುರಿಸಬೇಕಾಗಿತ್ತು. ನರ್ವಾರಾದಲ್ಲಿ ಎನ್‌ಕೌಂಟರ್‌ಗಳು,ಸಂಚಾರ ನಿರ್ಬಂಧಗಳು ಮತ್ತು ಶೋಧ ಕಾರ್ಯಾಚರಣೆಗಳು ಸಾಮಾನ್ಯವಾಗಿದ್ದರೂ ಇವ್ಯಾವುದೂ ಅವರನ್ನು ಹಿಮ್ಮೆಟ್ಟಿಸಲಿಲ್ಲ.

 ಆರಂಭದಲ್ಲಿ ಮಹಿಳೆಯರು ಸೇರಿದಂತೆ ಸ್ಥಳೀಯ ಜನರು ನಾನು ಉದ್ಯಮ ನಡೆಸುವುದನ್ನು ಇಷ್ಟಪಟ್ಟಿರಲಿಲ್ಲ. ಆದರೆ ಕಾಶ್ಮೀರಕ್ಕೆ ಪ್ರವಾಸೋದ್ಯಮ,ಸೇಬು ಮತ್ತು ಆ್ಯಪ್ರಿಕಾಟ್ ಹಣ್ಣುಗಳ ಆಚೆಗೂ ಉದ್ಯಮದ ಅಗತ್ಯವಿದೆ ಎನ್ನುವುದು ಅವರಿಗೆ ಅರಿವಾದಾಗ ಕ್ರಿಕೆಟ್ ಬ್ಯಾಟ್‌ಗಳು ಮತ್ತು ಅವುಗಳನ್ನು ಮಹಿಳೆಯರು ತಯಾರಿಸುವುದರಲ್ಲಿ ಯಾವುದೇ ಸಮಸ್ಯೆಯಿಲ್ಲ ಎನ್ನುವುದನ್ನು ಅವರು ಒಪ್ಪಿಕೊಂಡಿದ್ದರು ಎಂದು ರಿಫಾತ್ ಹೇಳಿದರು.

ಇತ್ತಿಚಿನ ವರ್ಷಗಳಲ್ಲಿ ಯುವಜನರು ಕ್ರೀಡೆಗಳತ್ತ ಆಕರ್ಷಿತರಾಗುತ್ತಿದ್ದಾರೆ. ಇಂದು ಬದಲಾವಣೆಗಳು ಸ್ಪಷ್ಟವಾಗಿವೆ. ಈಗ ನನ್ನಿಂದ ಬ್ಯಾಟ್‌ಗಳನ್ನು ಖರೀದಿಸಲು ಹುಡುಗಿಯರೂ ಬರುತ್ತಿದ್ದಾರೆ. ಟೀಮ್ ಇಂಡಿಯಾದ ಆಟಗಾರರು ನಮ್ಮ ಬ್ಯಾಟ್‌ಗಳನ್ನು ಬಳಸುವುದನ್ನು ನೋಡಲು ನಾನು ತುಂಬ ಇಷ್ಟಪಟ್ಟಿದ್ದೇನೆ ಎಂದ ಅವರು,ಇಂದು ಚೆನ್ನೈ,ದಿಲ್ಲಿ,ಮುಂಬೈ ಮತ್ತು ಬೆಂಗಳೂರುಗಳಿಂದ ನಮಗೆ ಸಗಟು ಬೇಡಿಕೆಗಳು ಬರುತ್ತಿವೆ. ಕ್ರಿಕೆಟ್ ಬ್ಯಾಟ್‌ಗಳ ಮೇಲಿನ ಶೇ.12 ಜಿಎಸ್‌ಟಿಯನ್ನು ಸರಕಾರವು ಮನ್ನಾ ಮಾಡಿದರೆ ನಮ್ಮಂಥಹವರಿಗೆ ಅನುಕೂಲವಾಗುತ್ತದೆ ಎಂದರು.

 ಪಾಕಿಸ್ತಾನ ಮತ್ತು ಭಾರತದ ನಡುವೆ ಕ್ರಿಕೆಟ್ ಪಂದ್ಯ ನಡೆದರೆ ಕಾಶ್ಮೀರಿಗಳು ಪಾಕಿಸ್ತಾನವನ್ನೇ ಬೆಂಬಲಿಸುತ್ತಾರೆ ಎನ್ನುವುದು ಸಂಪೂರ್ಣ ಮಿಥ್ಯೆ. ನಾನು ಭಾರತೀಯ ಕ್ರಿಕೆಟಿಗರನ್ನು ಇಷ್ಟಪಡುತ್ತೇನೆ. ವಾಸ್ತವದಲ್ಲಿ 2000ರಲ್ಲಿ ನಾವು ಬ್ಯಾಟ್ ತಯಾರಿಕೆ ಆರಂಭಿಸಿದಾಗ ರಾಹುಲ್ ದ್ರಾವಿಡ್,ಸೌರವ ಗಂಗೂಲಿ ಮತ್ತು ಸಚಿನ್ ತೆಂಡುಲ್ಕರ್ ಅವರೇ ನನಗೆ ಸ್ಫೂರ್ತಿಯಾಗಿದ್ದರು. ಆದರೆ ಅದರರ್ಥ ನಾವು ಒಳ್ಳೆಯ ಪಾಕಿಸ್ತಾನಿ ವೇಗದ ಬೌಲರ್‌ನನ್ನು ಇಷ್ಟ ಪಡಬಾರದು ಎಂದಲ್ಲ ಎಂದು ರಿಫಾತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News