ಇಂಡೋನೇಶ್ಯ ಭೂಕಂಪ-ಸುನಾಮಿ: 1,400 ದಾಟಿದ ಸಾವಿನ ಸಂಖ್ಯೆ

Update: 2018-10-03 16:35 GMT

 ವಾನಿ (ಇಂಡೋನೇಶ್ಯ), ಅ. 3: ಇಂಡೋನೇಶ್ಯದ ಸುಲವೆಸಿ ದ್ವೀಪದಲ್ಲಿ ಸಂಭವಿಸಿದ ಭೂಕಂಪ ಮತ್ತು ಸುನಾಮಿಯಲ್ಲಿ ಮೃತಪಟ್ಟವರ ಸಂಖ್ಯೆ ಬುಧವಾರ 1,400ನ್ನು ತಲುಪಿದೆ. ಅವಶೇಷಗಳಡಿ ಬದುಕುಳಿದವರನ್ನು ರಕ್ಷಿಸುವುದಕ್ಕಾಗಿ ರಕ್ಷಣಾ ಸಿಬ್ಬಂದಿ ಸಮಯದ ವಿರುದ್ಧದ ಓಟದಲ್ಲಿ ತೊಡಗಿದ್ದಾರೆ.

ಅವಶೇಷಗಳಡಿ ಸಿಲುಕಿದವರನ್ನು ಶುಕ್ರವಾರದ ವೇಳೆಗೆ ರಕ್ಷಿಸುವ ಗಡುವನ್ನು ಅಧಿಕಾರಿಗಳು ನಿಗದಿಪಡಿಸಿದ್ದಾರೆ. ಅಂದಿಗೆ ಅವಳಿ ಪ್ರಾಕೃತಿಕ ವಿಕೋಪಗಳು ಸಂಭವಿಸಿ ಒಂದು ವಾರವಾಗುತ್ತದೆ. ಅದರ ನಂತರ ಸಂತ್ರಸ್ತರು ಬದುಕುಳಿಯುವ ಸಾಧ್ಯತೆ ಶೂನ್ಯಕ್ಕೆ ಇಳಿಯುತ್ತದೆ.

ಸಮುದ್ರ ತೀರದ ನಗರ ಪಲುವಿನ ಸುತ್ತಮುತ್ತಲಿನ ಆರು ಪ್ರಮುಖ ಸ್ಥಳಗಳಲ್ಲಿ ರಕ್ಷಣಾ ಕಾರ್ಯಾಚರಣೆಗೆ ಅಧಿಕಾರಿಗಳು ಆದ್ಯತೆ ನೀಡಿದ್ದಾರೆ. ಒಂದು ಹೊಟೇಲ್, ಒಂದು ಶಾಪಿಂಗ್ ಮಾಲ್ ಮತ್ತು ಒಂದು ರೆಸ್ಟೋರೆಂಟ್ ಸೇರಿವೆ.

ಪರಿಸ್ಥಿತಿ ನಿಯಂತ್ರಣದಲ್ಲಿರುವುದರಿಂದ ವಿದೇಶಿ ನೆರವು ತಂಡಗಳು ವಿಶ್ರಾಂತಿ ತೆಗೆದುಕೊಳ್ಳುವಂತೆ ಇಂಡೋನೇಶ್ಯ ಸರಕಾರ ಹೇಳಿದ್ದರೂ, ನಮಗೆ ಯಾವುದೇ ನೆರವು ಬಂದಿಲ್ಲ ಹಾಗೂ ನೆರವಿನ ಭರವಸೆ ನಶಿಸಿದೆ ಎಂದು ಡೊಂಗಾಲ ಪ್ರಾಂತದ ಅತ್ಯಂತ ಹಾನಿಗೊಳಗಾದ ವಾನಿ ಮುಂತಾದ ದುರ್ಗಮ ಹಳ್ಳಿಗಳ ನಿವಾಸಿಗಳು ಹೇಳಿದ್ದಾರೆ.

‘‘ಈ ಪ್ರದೇಶದಲ್ಲಿ 12 ಮಂದಿ ಈಗಲೂ ಪತ್ತೆಯಾಗಿಲ್ಲ’’ ಎಂದು ಅಲ್ಲಿನ ನಿವಾಸಿಯೊಬ್ಬರು ಹೇಳಿದ್ದಾರೆ.

ನಿಧಾನಗತಿಯ ರಕ್ಷಣಾ ಕಾರ್ಯಾಚರಣೆ: ವಿಶ್ವಸಂಸ್ಥೆ ನಿರಾಶೆ

ಸಂತ್ರಸ್ತ ಪೀಡಿತ ಪ್ರದೇಶದ ಸುಮಾರು 2 ಲಕ್ಷ ಜನರಿಗೆ ತುರ್ತು ನೆರವಿನ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ಕಚೇರಿ ಹೇಳಿದೆ.

ಸಂತ್ರಸ್ತರಲ್ಲಿ ಸಾವಿರಾರು ಮಂದಿ ಮಕ್ಕಳಿದ್ದಾರೆ ಎಂದು ಅದು ತಿಳಿಸಿದೆ.

ಕಳೆದ ಶುಕ್ರವಾರ ಸಂಭವಿಸಿದ ಪ್ರಬಲ ಭೂಕಂಪ ಮತ್ತು ಬಳಿಕ ಅಪ್ಪಳಿಸಿದ ಸುನಾಮಿಯಲ್ಲಿ ಸುಮಾರು 66,000 ಮನೆಗಳು ನಾಶವಾಗಿವೆ ಅಥವಾ ಹಾನಿಗೀಡಾಗಿವೆ.

ನಿಧಾನ ಗತಿಯ ರಕ್ಷಣಾ ಕಾರ್ಯಾಚರಣೆ ಬಗ್ಗೆ ಜಿನೇವದಲ್ಲಿ ವಿಶ್ವಸಂಸ್ಥೆ ನಿರಾಶೆ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News