ಇಂಡೋನೇಶ್ಯಾ: ಭೂಕಂಪ ಪೀಡಿತ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟ

Update: 2018-10-03 16:38 GMT

ಜಕಾರ್ತ (ಇಂಡೋನೇಶ್ಯ), ಅ. 3: ಇಂಡೋನೇಶ್ಯದ ಸುಲವೆಸಿ ದ್ವೀಪದ ಜನರು ಸಂಕಷ್ಟಗಳ ಸರಮಾಲೆಯನ್ನೇ ಎದುರಿಸುತ್ತಿದ್ದಾರೆ. ಕಳೆದ ಶುಕ್ರವಾರ ಸಂಭವಿಸಿದ ಪ್ರಬಲ ಭೂಕಂಪ ಮತ್ತು ಸುನಾಮಿಯಲ್ಲಿ ಈವರೆಗೆ 1,200ಕ್ಕೂ ಅಧಿಕ ಮಂದಿ ಮೃತಪಟ್ಟರೆ, ಸೋಮವಾರ ಇದೇ ದ್ವೀಪದಲ್ಲಿ ಇನ್ನೆರಡು ಪ್ರಬಲ ಭೂಕಂಪಗಳು ಸಂಭವಿಸಿ ಜನರ ಬದುಕನ್ನು ಇನ್ನಷ್ಟು ದುರ್ಭರಗೊಳಿಸಿದವು.

ಅಷ್ಟಕ್ಕೇ ಮುಗಿದಿಲ್ಲ. ಬುಧವಾರ ಉತ್ತರ ಸುಲವೆಸಿ ಪ್ರಾಂತದ ಮೌಂಟ್ ಸೊಪುಟನ್ ಜ್ವಾಲಾಮುಖಿ ಪರ್ವತವು ಬೂದಿಯುಗುಳಲು ಆರಂಭಿಸಿದೆ. ಆಕಾಶದಲ್ಲಿ ನಾಲ್ಕು ಕಿಲೋಮೀಟರ್ ಎತ್ತರದವರೆಗೂ ಬೂದಿ ಚಿಮ್ಮಿದೆ ಹಾಗೂ ಲಾವಾರಸ ಹೊರಹೊಮ್ಮುವ ಭೀತಿ ವ್ಯಕ್ತವಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.

ಪರ್ವತದಿಂದ 4 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಜನರು ಸುರಕ್ಷಿತ ಸ್ಥಳಗಳಿಗೆ ಹೋಗಬೇಕೆಂದು ಅಧಿಕಾರಿಗಳು ಆದೇಶ ನೀಡಿದ್ದಾರೆ.

ಆದಾಗ್ಯೂ, ಉತ್ತರ ಸುಲವೆಸಿ ರಾಜಧಾನಿ ಮನಡೊದಲ್ಲಿರುವ ಸಾಮ್ ರಟುಲಂಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಾಮಾನ್ಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಮೌಂಟ್ ಸೊಪುಟನ್ ಪರ್ವತವು ಭೂಕಂಪ ಪೀಡಿತ ವಲಯದಿಂದ ಈಶಾನ್ಯಕ್ಕೆ 900 ಕಿ.ಮೀ. ದೂರದಲ್ಲಿದೆ.

ಭೂಕಂಪ ಮತ್ತು ಜ್ವಾಲಾಮುಖಿ ಇಂಡೋನೇಶ್ಯದ ಅತ್ಯಂತ ಮಹತ್ವದ ಪ್ರವಾಸೋದ್ಯಮದ ಮೇಲೆ ದುಷ್ಪರಿಣಾಮ ಬೀರಬಹುದೆಂದು ಭಾವಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News