×
Ad

‘ಮಾನವೀಯ’ ವಸ್ತುಗಳ ಮೇಲಿನ ದಿಗ್ಬಂಧನ ತೆರವು: ಅಮೆರಿಕಕ್ಕೆ ಅಂತರ್‌ರಾಷ್ಟ್ರೀಯ ನ್ಯಾಯಾಲಯ ಆದೇಶ

Update: 2018-10-03 22:14 IST

ಹೇಗ್ (ನೆದರ್‌ಲ್ಯಾಂಡ್ಸ್), ಅ. 3: ಇರಾನ್‌ಗೆ ಕಳುಹಿಸಲಾಗುವ ‘ಮಾನವೀಯ’ ವಸ್ತುಗಳ ಮೇಲಿನ ದಿಗ್ಬಂಧನವನ್ನು ತೆರವುಗೊಳಿಸುವಂತೆ ವಿಶ್ವಸಂಸ್ಥೆಯ ಅತ್ಯುನ್ನತ ನ್ಯಾಯಾಲಯವು ಬುಧವಾರ ಅಮೆರಿಕಕ್ಕೆ ಆದೇಶ ನೀಡಿದೆ.

ಇರಾನ್ ಪರಮಾಣು ಒಪ್ಪಂದದಿಂದ ಈ ವರ್ಷದ ಮೇ ತಿಂಗಳಲ್ಲಿ ಹೊರಬಂದ ಬಳಿಕ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ಹಲವು ಸುತ್ತುಗಳ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿರುವುದನ್ನು ಸ್ಮರಿಸಬಹುದಾಗಿದೆ.

‘‘ಮೇ 8ರಂದು ಇರಾನ್ ವಿರುದ್ಧ ಅಮೆರಿಕ ಘೋಷಿಸಿದ ಆರ್ಥಿಕ ದಿಗ್ಬಂಧನದ ಪಟ್ಟಿಯಿಂದ ಔಷಧಗಳು, ವೈದ್ಯಕೀಯ ಉಪಕರಣಗಳು, ಆಹಾರ ಮತ್ತು ಕೃಷಿ ಉತ್ಪನ್ನಗಳು ಹಾಗೂ ವಿಮಾನ ಬಿಡಿಭಾಗಗಳನ್ನು ಹೊರತುಪಡಿಸಬೇಕು’’ ಎಂದು ಅಂತರ್‌ರಾಷ್ಟ್ರೀಯ ನ್ಯಾಯಾಲಯ ವಾಶಿಂಗ್ಟನ್‌ಗೆ ಆದೇಶ ನೀಡಿದೆ.

‘‘ಮಾನವೀಯ ಅಗತ್ಯಗಳಿಗೆ ಬೇಕಾದ ವಸ್ತುಗಳ ಮೇಲೆ ದಿಗ್ಬಂಧನ ವಿಧಿಸುವುದರಿಂದ ಇರಾನ್ ಜನರ ಆರೋಗ್ಯ ಮತ್ತು ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದಾಗಿದೆ’’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ವಿಮಾನ ಬಿಡಿಭಾಗಗಳ ಮೇಲಿನ ನಿಷೇಧವು ಇರಾನ್‌ನಲ್ಲಿನ ನಾಗರಿಕ ವಾಯುಯಾನದ ಸುರಕ್ಷತೆಯನ್ನು ಮತ್ತು ಪ್ರಯಾಣಿಕರ ಪ್ರಾಣಗಳನ್ನು ಅಪಾಯಕ್ಕೆ ಗುರಿಪಡಿಸಬಹುದು ಎಂಬುದಾಗಿಯೂ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.

ಅಮೆರಿಕವು ಇರಾನ್ ವಿರುದ್ಧ ಮೊದಲ ಸುತ್ತಿನ ದಿಗ್ಬಂಧನಗಳನ್ನು ಆಗಸ್ಟ್‌ನಲ್ಲಿ ವಿಧಿಸಿದೆ. ಅದರ ಎರಡನೇ ಸುತ್ತಿನ ದಿಗ್ಬಂಧನಗಳು ನವೆಂಬರ್ 4ರಿಂದ ಜಾರಿಗೆ ಬರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News