ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಪತ್ನಿಯ ಅಪೀಲನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್

Update: 2018-10-04 10:17 GMT

ಹೊಸದಿಲ್ಲಿ, ಅ.4: ರಾಜಸ್ಥಾನ ಮೂಲದ ವಕೀಲರೊಬ್ಬರನ್ನು 22 ವರ್ಷಗಳ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸಿದ ಆರೋಪ ಹೊತ್ತ  ತನ್ನ ಪತಿ, ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ವಿರುದ್ಧದ ತನಿಖೆಯನ್ನು ಪ್ರಶ್ನಿಸಿ ಅವರ ಪತ್ನಿ ಶ್ವೇತಾ ಸಲ್ಲಿಸಿದ್ದ ಅಪೀಲನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಹಾಗೂ ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಹಾಗೂ  ಕೆ.ಎಂ. ಜೋಸೆಫ್ ಅವರನ್ನೊಳಗೊಂಡ ನ್ಯಾಯಪೀಠ ಶ್ವೇತಾ ಅವರಿಗೆ ತಮ್ಮ ಅಪೀಲನ್ನು ಗುಜರಾತ್ ಹೈಕೋರ್ಟಿನ ಮುಂದೆ ಸಲ್ಲಿಸಬಹುದು ಎಂದು ಹೇಳಿದೆ.

2015ರಲ್ಲಿ ಸೇವೆಯಿಂದ ಅಮಾನತುಗೊಂಡಿದ್ದ ಸಂಜೀವ್ ಭಟ್ ಅವರನ್ನು ಕಳೆದ ತಿಂಗಳು ನಿವೃತ್ತ ಇನ್‍ಸ್ಪೆಕ್ಟರ್ ಐ.ಬಿ. ವ್ಯಾಸ್ ಜತೆ ಬಂಧಿಸಲಾಗಿತ್ತು. ವಕೀಲ ಸುಮೇರ್ ಸಿಂಗ್ ರಾಜಪುರೋಹಿತ್ ಅವರು ಬಾನಸ್ಕಂತ ಜಿಲ್ಲೆಯ ಪಾಲನ್ಪುರ ಎಂಬಲ್ಲಿ ತಂಗಿದ್ದ ಹೋಟೆಲ್ ಕೊಠಡಿಯಲ್ಲಿ 1996ರಲ್ಲಿ 1.25 ಕೆಜಿ ಅಫೀಮು ಇರಿಸಿ ನಂತರ ಅವರನ್ನು ಬಂಧಿಸಿದ ಆರೋಪ ಇಬ್ಬರ ಮೇಲೂ ಇದೆ. ಮಾಜಿ ಹೈಕೋರ್ಟ್ ನ್ಯಾಯಾಧೀಶ ಆರ್.ಆರ್. ಜೈನ್  ಅವರ ಆಸ್ತಿ ತಕರಾರೊಂದರ ಸಂಬಂಧ ಅವರ ಕೋರಿಕೆಯಂತೆ ಭಟ್ ಕೃತ್ಯವೆಸಗಿದ್ದರೆಂದು ರಾಜಪುರೋಹಿತ್ ಆರೋಪಿಸಿದ್ದರು.

ಕೆಲ ದಿನಗಳ ಹಿಂದೆ ಸುಪ್ರೀಂ ಕೋರ್ಟ್ ಕದ ತಟ್ಟಿದ್ದ ಸಂಜೀವ್ ಭಟ್ ಪತ್ನಿ ಶ್ವೇತಾ ತಮ್ಮ ಪತಿಯನ್ನು ನಿರಂಕುಶ ರೀತಿಯಲ್ಲಿ ಕಸ್ಟಡಿಗೆ ಪಡೆದುಕೊಳ್ಳಲಾಗಿತ್ತು, ಅವರನ್ನು ಪೊಲೀಸ್ ಕಸ್ಟಡಿ ರಿಮಾಂಡಿನಲ್ಲಿರಸಲಾಗಿದೆ ಹಾಗೂ ಮೇಲ್ಮನವಿ ಅರ್ಜಿ ಸಲ್ಲಿಸಲು ಅಗತ್ಯವಿರುವ ವಕಾಲತ್ ನಾಮ ಹಾಗೂ  ಮತ್ತಿರ ದಾಖಲೆಗಳನ್ನು ಸಲ್ಲಿಸಲು ಅವರಿಗೆ ಅನುಮತಿಸಲಾಗುತ್ತಿಲ್ಲ ಎಂದು ದೂರಿದ್ದರು.

ಈ ಹಿಂದೆ ಈ ಪ್ರಕರಣದ  ವಿಚಾರಣೆ ನಡೆಸಿದ್ದ  ಜಸ್ಟಿಸ್ ರಂಜನ್ ಗೊಗೋಯಿ ನೇತೃತ್ವದ ನ್ಯಾಯಪೀಠ  ಆರೋಪಗಳನ್ನು ಗಂಭೀರ ಎಂದಿತ್ತಲ್ಲದೆ ಗುಜರಾತ್ ಸರಕಾರಕ್ಕೆ ಸೆಪ್ಟೆಂಬರ್ 28ರೊಳಗೆ ಉತ್ತರಿಸುವಂತೆ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News